
ಇತ್ತೀಚಿನ ಕೆಲವು ವರ್ಷಗಳಲ್ಲಿ ಮಹಾನ್ ವ್ಯಕ್ತಿಗಳ ಜಯಂತಿ ಯಾಕೋ ಅತಿರೇಕಕ್ಕೆ ತಲುಪಿ ಹಾಸ್ಯಸ್ಪದವಾಗುತ್ತಿರುವಂತೆ ಭಾಸವಾಗುತ್ತಿದೆ. ಅದೇ ಹಾಡು, ಅದೇ ಕುಣಿತ, ಅದೇ ಭಾಷಣ, ಅದೇ ಜನರು, ಅದೇ ಉನ್ಮಾದ, ಅದೇ ಭಕ್ತಿಯ ಪರಾಕಾಷ್ಠೆ, ಅದೇ ವ್ಯಕ್ತಿಯ ವಿಜೃಂಭಣೆ ಕೆಲವೊಮ್ಮೆ ತುಂಬಾ ವಿಚಿತ್ರವೆನಿಸುತ್ತಿದೆ.
ಗಾಂಧಿ ಜಯಂತಿಗೂ, ಹನುಮ ಜಯಂತಿಗೂ, ಅಂಬೇಡ್ಕರ್ ಜಯಂತಿಗೂ, ರಾಮ ಜಯಂತಿಗೂ, ಬಸವ ಜಯಂತಿಗೂ, ಮಹಾವೀರ ಜಯಂತಿಗೂ, ವಾಲ್ಮೀಕಿ ಜಯಂತಿಗೂ, ಕೆಂಪೇಗೌಡ ಜಯಂತಿಗೂ, ಬುದ್ದ ಜಯಂತಿಗೂ, ಕಬ್ಬಾಳಮ್ಮ ಜಯಂತಿಗೂ, ರಾಘವೇಂದ್ರ ಸ್ವಾಮಿ ಜಯಂತಿಗೂ, ಶಿರಡಿ ಸಾಯಿಬಾಬಾ ಜಯಂತಿಗೂ, ಮಂಜುನಾಥನ ರಥೋತ್ಸವಕ್ಕೂ, ವೆಂಕಟೇಶ್ವರನ ಮಹೋತ್ಸವಕ್ಕೂ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ.
ಅವರವರಿಗೆ ಇಷ್ಟ ಬಂದಂತೆ ಅವರವರನ್ನು ವಿಜೃಂಭಿಸುತ್ತಾ ಹಾಸ್ಯಾಸ್ಪದವಾಗಿರುವುದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ.
ಮೊದಲನೆಯದಾಗಿ ಪೌರಾಣಿಕ ಪಾತ್ರಗಳ ಜಯಂತಿಯೇ ಬೇರೆ, ಐತಿಹಾಸಿಕ ವ್ಯಕ್ತಿಗಳ ಜಯಂತಿಯೇ ಬೇರೆ, ಹೋರಾಟಗಾರರ ಜಯಂತಿಯೆ ಬೇರೆ, ಚಿಂತಕರು ದಾರ್ಶನಿಕರ ಜಯಂತಿಯೇ ಬೇರೆ. ಈ ಎಲ್ಲವೂ ಒಟ್ಟಾರೆ ವಿಭಿನ್ನವಾದದ್ದು, ಜೊತೆಗೆ ಜಯಂತಿ ಎಂದರೆ ಹಾಡು, ಕುಣಿತ, ಮೆರವಣಿಗೆ, ಉತ್ಸವಗಳು ಮಾತ್ರವಲ್ಲ ಅದನ್ನು ಮೀರಿದ ತುಂಬಾ ಕ್ರಿಯಾಶೀಲ ಚಟುವಟಿಕೆಗಳು ಆ ಜನುಮದಿನದ ಸಂದರ್ಭದಲ್ಲಿ ಹಮ್ಮಿಕೊಳ್ಳಬೇಕಾಗಿದೆ.
ಆ ವಿಚಾರ ಚಿಂತನೆಗಳನ್ನು ಎಲ್ಲಾ ಜನಮನದಲ್ಲಿ ಮೂಡಿಸಬೇಕಾಗಿದೆ.
ಅದಕ್ಕಾಗಿ ಜಯಂತಿಗಳ ಆಚರಣೆಯೇ ಹೊರತು ಸುಮ್ಮನೆ ಸಂಘಟನೆಗಾಗಿ, ರಾಜಕೀಯಕ್ಕಾಗಿ, ಮನರಂಜನೆಗಾಗಿ ಜಯಂತಿಗಳನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ.
ಅದರಲ್ಲೂ ಗಾಂಧಿ, ಅಂಬೇಡ್ಕರ್, ಬಸವ ಜಯಂತಿಗಳಲ್ಲಿ ಅವರ ಅನುಯಾಯಿಗಳ, ಬೆಂಬಲಿಗರ, ಅಭಿಮಾನಿಗಳ ಜವಾಬ್ದಾರಿ ತುಂಬಾ ಹೆಚ್ಚಾಗಿರುತ್ತದೆ. ಇವರು ಮನರಂಜನೆಯ ಸರಕುಗಳಲ್ಲ. ಈ ಸಮಾಜದ ಎಲ್ಲಾ ನಾಗರಿಕ ಧರ್ಮದ, ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳು. ಅವರನ್ನು ಅವರ ಜನುಮದಿನದ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಕ್ರಿಯೆ ಅತ್ಯಂತ ಪ್ರಬುದ್ಧವಾಗಿರಬೇಕು, ಕ್ರಿಯಾತ್ಮಕವಾಗಿರಬೇಕು, ಅದೆಲ್ಲವನ್ನು ಮೀರಿ ನಮ್ಮ ಮನಸ್ಸಿನ ಪರಿವರ್ತನೆಯ, ಸಮಾಜದ ಮನಸ್ಥಿತಿಯ ಪರಿವರ್ತನೆಯ ಹಾದಿಯ ದ್ವಾರಗಳು ಮುಕ್ತವಾಗುವಂತಿರಬೇಕು.
ಆಗ ಮಾತ್ರ ಜಯಂತಿಗಳಿಗೆ ಅರ್ಥವಿರುತ್ತದೆ. ಹೆಸರುಬೇಳೆ ಪಾನಕ, ಕೋಸಂಬರಿ, ಚಿತ್ರಾನ್ನ, ಮೊಸರನ್ನ, ಬಿರ್ಯಾನಿ ಹಂಚುವಿಕೆಯಾಗಲಿ ಅಥವಾ ಬಣ್ಣ ಬಣ್ಣದ ಬಾವುಟಗಳ ಮೆರವಣಿಗೆಯಾಗಲಿ, ಘೋಷಣೆಗಳಾಗಲಿ ಸಾಂಕೇತಿಕ ಮಾತ್ರ.
ಜಯಂತಿಗಳ ಆಚರಣೆ ತಪ್ಪಲ್ಲ. ಅದು ಇಂದಿನ ಕಾಲಕ್ಕೆ ಅತ್ಯಂತ ಅನಿವಾರ್ಯವೂ, ಮಹತ್ವವು ಹೌದು. ಆದರೆ ಆಚರಣೆಯ ರೀತಿಯ ಬಗ್ಗೆ ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ. ಅವರ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸುವ, ಮನವರಿಕೆ ಮಾಡಿಕೊಳ್ಳುವ, ನಡವಳಿಕೆಯಾಗಿ ರೂಪಿಸುವ ಕೆಲಸವಾಗಬೇಕಾಗಿದೆ.
ದಿನನಿತ್ಯದ ಚಟುವಟಿಕೆಗಳಲ್ಲಿ, ನಮ್ಮ ನಡವಳಿಕೆಗಳಲ್ಲಿ, ಸಮಾಜದ ಭಾಗವಹಿಸುವಿಕೆಯ ನಮ್ಮ ಪಾತ್ರಗಳಲ್ಲಿ ಅತ್ಯಂತ ಪ್ರಗತಿಪರ ಮನೋಭಾವವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಜಯಂತಿಗಳು ಪೂರಕವಾಗಿ ಕೆಲಸ ಮಾಡುವಂತೆ ಮಾಡಬೇಕಾಗಿದೆ.
ಇಲ್ಲದಿದ್ದರೆ ಇದು ಯಾವುದೋ ಉತ್ಸವದಂತೆ ಕಾಟಾಚಾರದ ಕಾರ್ಯಕ್ರಮವಾಗಬಹುದು ಯೋಚಿಸಿ ನೋಡಿ. ಅಯ್ಯಪ್ಪ ಸ್ವಾಮಿಯನ್ನು ವಿವಿಧ ಆಧುನಿಕ ಹಾಡುಗಳಲ್ಲಿ, ರ್ಯಾಪ್ ಸಂಗೀತದಲ್ಲಿ ವರ್ಣಿಸುವಂತೆ, ಆಂಜನೇಯ ಸ್ವಾಮಿಯನ್ನು ಚಲನಚಿತ್ರ ಗೀತೆಯಲ್ಲಿ ವರ್ಣಿಸುವಂತೆ, ಅಂಬೇಡ್ಕರ್ ರವರನ್ನು, ಗಾಂಧಿಯವರನ್ನು, ಬಸವಣ್ಣನವರನ್ನು ವರ್ಣಿಸುತ್ತಾ, ನೃತ್ಯ ಮಾಡುತ್ತಾ ಸಾಗಿದರೆ, ಅವರುಗಳಿಗೆ ದೀರ್ಘದಂಡ ನಮಸ್ಕಾರ ಹಾಕಿ, ಹಣ್ಣು, ಕಾಯಿ ಅರ್ಪಿಸಿ, ನೈವೇದ್ಯ ಮಾಡಿದರೆ ವಿಚಾರಗಳು ಮೌಢ್ಯವಾಗಿ, ನಿಧಾನವಾಗಿ ಸಾಯುವ ಸಾಧ್ಯತೆಯೂ ಇದೆ, ಎಚ್ಚರ……..
ಜಯಂತಿಗಳು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ, ಅಭಿವೃದ್ಧಿ ಹೊಂದಿದ ನಾಗರಿಕ ಸಮಾಜ ನಿರ್ಮಾಣವಾಗುವ ಆಶಯದ ರೀತಿಯಲ್ಲಿದ್ದರೆ ಉತ್ತಮವಲ್ಲವೇ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….