
ಬೆಂಗಳೂರು: ದಿನಾಂಕ:20-04-2025(ಹಾಯ್ ಉಡುಪಿ ನ್ಯೂಸ್ ) ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಬರ್ಬರವಾಗಿ ಹತ್ಯೆಯಾಗಿದ್ದು ಇಡೀ ಬೆಂಗಳೂರು ನಗರವನ್ನೇ ಬೆಚ್ಚಿಬೀಳಿಸಿದೆ. ಓಂ ಪ್ರಕಾಶ್ ಅವರನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಓಂ ಪ್ರಕಾಶ್ ಅವರನ್ನು ಅವರ ಧರ್ಮಪತ್ನಿ ಪಲ್ಲವಿ ಅವರೇ ಹತ್ಯೆ ಮಾಡಿದ್ದಾರೆ ಎಂಬ ವಿಚಾರ ಇದೀಗ ಬಯಲಾಗಿದೆ. ಈ ಕೊಲೆಗೆ ನಿಖರ ಕಾರಣ ಏನೆಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
68 ವರ್ಷದ ಓಂ ಪ್ರಕಾಶ್ ಅವರು ನಿವೃತ್ತಿಯ ಬಳಿಕ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಮನೆಯಲ್ಲಿ ವಾಸವಾಗಿದ್ದರು. ಪತ್ನಿಯ ಜತೆ ನೆಲೆಸಿದ್ದರು. ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಪತ್ನಿ ಭಾನುವಾರ ಸಂಜೆ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯ ಕುರಿತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್‌ಜಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿವೃತ್ತ ಅಧಿಕಾರಿಯನ್ನು ಕಂಡು ಶಾಕ್ ಆಗಿದ್ದಾರೆ. ಇನ್ನು ಮನೆಯಲ್ಲೇ ಇದ್ದ ಅವರ ಪತ್ನಿ ಹಾಗೂ ಮಗಳನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕೊಲೆಗೆ ಕೌಟುಂಬಿಕ ಕಲಹವೇ ಕಾರಣವಿರಬಹುದು ಎಂದುತಿಳಿದುಬಂದಿದೆ. ಓಂ ಪ್ರಕಾಶ್ ಹಾಗೂ ಅವರ ಪತ್ನಿ ಜಗಳ ನೆರೆ ಹೊರೆ, ಸಂಬಂಧಿಕರು ಹಾಗೂ ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ತಿಳಿದಿತ್ತು. ಕೆಲ ದಿನಗಳಿಂದ ಜಗಳ ತಾರಕಕ್ಕೇರಿ ಪತ್ನಿ ಮನೆಯಲ್ಲಿ ದೊಡ್ಡ ರಾದ್ಧಾಂತವನ್ನೇ ಮಾಡಿದ್ದರು ಎನ್ನಲಾಗಿದೆ. ಇನ್ನು ಓಂ ಪ್ರಕಾಶ್ ಅವರು ತಮ್ಮ ಸಹೋದರಿ ಹೆಸರಲ್ಲಿ ಜಮೀನು ಮಾಡಿದ್ದು ಅದನ್ನು ಹಿಂಪಡೆಯುವಂತೆ ಗಂಡನ ಮೇಲೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.
1993ರಲ್ಲಿ ಭಟ್ಕಳ ಕೋಮು ಗಲಭೆಗಳನ್ನು ನಿರ್ವಹಿಸಲು ಅವರನ್ನು ಆಯ್ಕೆ ಮಾಡಲಾಗಿತ್ತು. 1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಓಂ ಪ್ರಕಾಶ್, 38ನೇ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ನಾಗರಿಕ ರಕ್ಷಣಾ ನಿರ್ದೇಶಕ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.