Spread the love

ದಿನಾಂಕ: 19-04-2025(ಹಾಯ್ ಉಡುಪಿ ನ್ಯೂಸ್)

ರಿಕ್ಕಿ ರೈ ಸಂಚರಿಸುತ್ತಿದ್ದ ಕಾರಿನ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕೂದಳೆಲೆ ಅಂತರದಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮ್ಯಾನ್ ರಿಕ್ಕಿ ರೈ ಬಚಾವ್ ಆಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿಗೆ ಚಿಕಿತ್ಸೆ ಮುಂದುವರೆದಿದೆ. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ರಾಮನಗರ ತಾಲೂಕಿನ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಘಟನೆ ವೇಳೆ ಬಸವರಾಜ್ ಎಂಬವರು ಕಾರು ಚಾಲನೆ ಮಾಡುತ್ತಿದ್ದರು. ಹೀಗಾಗಿ ಫೈರಿಂಗ್ ಆಗುತ್ತಿದ್ದಂತೆ ಅವರು ಮುಂದೆ ಬಾಗಿದ್ದಾರೆ. ಹಾಗಾಗಿ ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಬಸವರಾಜ್ ಅವರ ದೂರು ಆಧರಿಸಿ 1. ರಾಕೇಶ್ ಮಲ್ಲಿ, 2 ಅನುರಾಧಾ, 3 ನಿತೇಶ್ ಶೆಟ್ಟಿ ಹಾಗೂ 4 ವೈದ್ಯನಾಥನ್ ಎಂಬವರ ವಿರುದ್ಧ ಬಿಎನ್ಎಸ್ 109,3(5) ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದೆ.

ರಿಯಲ್ ಎಸ್ಟೇಟ್ ವಿಚಾರವಾಗಿ ಈ ಹಿಂದೆಯೂ ವಿವಾದವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಸವರಾಜುವನ್ನು ವಿಚಾರಣೆ ಮಾಡಿದ ಪೊಲೀಸರಿಗೆ , ಒಂದು ಬಾರಿ ದೊಡ್ಡ ಸದ್ದು ಕೇಳಿ ಬಂತು ಎಂದಿದ್ದಾರೆ. ಹಾಗಾಗಿ ಕಾರಿಗೆ ತಗುಲಿರುವ ಗುಂಡಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ.

ಭದ್ರಕೋಟೆಯಂತೆ ಇರುವ ಮುತ್ತಪ್ಪ ರೈ ಅವರ ಮನೆಯಿಂದ ಹೊರ ಬರುತ್ತಿದ್ದಂತೆ ರಸ್ತೆಯಲ್ಲಿ ಕಾರಿನ ಮೇಲೆ ಅಟ್ಯಾಕ್ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಫೈರಿಂಗ್ ಹಿಂದೆ ಭೂಗತ ಲೋಕದ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ತಂದೆಯ ಮೇಲಿನ ದ್ವೇಷ, ರಿಕ್ಕಿಯ ವೈಯಕ್ತಿಕ ದ್ವೇಷಕ್ಕೆ ಫೈರಿಂಗ್ ನಡೆದಿರುವ ಅನುಮಾನಗಳು ಹುಟ್ಟಿಕೊಂಡಿವೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿರುವ  ಪೊಲೀಸರು, ಮನೆ ಸಿಬ್ಬಂದಿ, ಆಪ್ತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ರಿಕ್ಕಿ ರೈ ವಿದೇಶದಿಂದ ಬಂದಿದ್ದು ಯಾವಾಗ, ವ್ಯವಹಾರಗಳೇನು? ಇತ್ತೀಚೆಗೆ ಯಾವುದಾದರೂ ವ್ಯವಹಾರದಲ್ಲಿ ಗಲಾಟೆ ಆಗಿತ್ತಾ? ರಾಮನಗರ ತಾಲೂಕಿನ ಬಿಡದಿ ಮನೆಯಲ್ಲಿ ಯಾರ್ಯಾರು ಇದ್ದಾರೆ? ರಿಕ್ಕಿ ಮನೆಗೆ ಹೊಸದಾಗಿ ಯಾರಾದರೂ ಕೆಲಸಕ್ಕೆ ಸೇರಿಕೊಂಡಿದ್ದಾರೆಯ? ಹಳೇ ದ್ವೇಷ, ಅಸ್ತಿ ವಿವಾದ, ವ್ಯವಹಾರ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮಾಜಿ ಡಾನ್ ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವಿಚಾರ ವ್ಯಾಜ್ಯವಿತ್ತು. ಮೊದಲ ಪತ್ನಿ, 2ನೇ ಪತ್ನಿ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ವ್ಯಾಜ್ಯವಿತ್ತು. ಹೀಗಾಗಿ ಆಸ್ತಿ ಭಾಗದ ವಿಚಾರವಾಗಿ ಕುಟುಂಬ ಕೋರ್ಟ್ ‌ಮೆಟ್ಟಿಲೇರಿತ್ತು. ಮುತ್ತಪ್ಪ ರೈ ಸಾವಿಗೂ ಮುನ್ನ, ಇಬ್ಬರು ಮಕ್ಕಳು, ಸಹೋದರನ ಮಗ, 2ನೇ ಪತ್ನಿ, ಮನೆ ಕೆಲಸಗಾರರು ಸೇರಿ ಎಲ್ಲರಿಗೂ ಆಸ್ತಿ ಭಾಗ ಮಾಡಿ ವಿಲ್​ ಬರೆಸಲಾಗಿತ್ತು. ಸದ್ಯ ಎಲ್ಲಾ ಆಯಾಮಗಳಲ್ಲೂ ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: No Copying!