Spread the love

ದಿನಾಂಕ:17-04-2025(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ನ್ಯಾಯದಾನ ನೀಡಿಕೆಯಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಅಗ್ರಸ್ಥಾನದಲ್ಲಿದ್ದಾರೆ ಎಂದು ಟಾಟಾ ಟ್ರಸ್ಟ್ ವರದಿ ಹೇಳಿದೆ. ಮಂಗಳವಾರ ಬಿಡುಗಡೆಯಾದ IJR 2025 ನಾಲ್ಕನೇ ಆವೃತ್ತಿಯಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿನ ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನ ಅಂಶಗಳನ್ನು ಪರಿಗಣಿಸಿ ಈ ವರದಿ ತಯಾರಿಸಲಾಗಿದೆ.

ಕರ್ನಾಟಕವು 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ಆವೃತ್ತಿಯಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಪೊಲೀಸ್ ಮತ್ತು ನ್ಯಾಯಾಂಗ ಎರಡರಲ್ಲೂ SC, ST ಮತ್ತು OBC ಗಳಿಗೆ ಮೀಸಲಾತಿ ಕೋಟಾ ಪೂರೈಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಎಲ್ಲಾ ದೊಡ್ಡ ರಾಜ್ಯಗಳಲ್ಲಿ ಶೇ. 1.2 ರಷ್ಟು ಕಡಿಮೆ ಅಧಿಕಾರಿ ಮಟ್ಟದ ಖಾಲಿ ಹುದ್ದೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ.

ಕರ್ನಾಟಕದ ನಂತರ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿವೆ. ಅಗ್ರ ಶ್ರೇಯಾಂಕದ ರಾಜ್ಯವಾಗಿದ್ದರೂ, ಜೈಲುಗಳು, ಕಾನೂನು ನೆರವು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ನೇಮಕ ವಿಚಾರದಲ್ಲಿ ಕರ್ನಾಟಕದ ಸಾಧನೆ ಹಿಂದುಳಿದಿದೆ.

IJR 2025 ರ ಪ್ರಕಾರ, “ಕರ್ನಾಟಕ ಜೈಲುಗಳಲ್ಲಿ ಶೇ. 80 ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ. ಇದು 2015 ರಿಂದ ಅತ್ಯಧಿಕವಾಗಿದೆ. ಗ್ರಾಮ ಮಟ್ಟದಲ್ಲಿ ಕಾನೂನು ನೆರವಿನ ಕೊರತೆ ಇದಕ್ಕೆ ಕಾರಣವಿರಬಹುದು.

ಗ್ರಾಮ ಮಟ್ಟದಲ್ಲಿ ಕಾನೂನು ಸೇವಾ ಕೇಂದ್ರಗಳ ಸಂಖ್ಯೆಯು 157 ರಿಂದ ಈಗ 32 ಕ್ಕೆ ಇಳಿದಿದೆ” ಎಂದು ವರದಿ ಹೇಳುತ್ತದೆ. ರಾಜ್ಯದಲ್ಲಿ ಪೊಲೀಸರ ನೇಮಕಾತಿಯಲ್ಲಿ ಮಹಿಳೆಯರ ಪಾಲನ್ನು ಶೇ. 25 ಇದೆ. ಆದರೆ ವಾಸ್ತವದಲ್ಲಿ ಕರ್ನಾಟಕ ಪೊಲೀಸರಲ್ಲಿ ಪುರುಷ ಪ್ರಾಬಲ್ಯವಿದೆ. ಪೊಲೀಸರಲ್ಲಿ ಶೇ, 9 ರಷ್ಟು ಮತ್ತು ಅಧಿಕಾರಿ ಮಟ್ಟದಲ್ಲಿ ಶೇ. 6 ರಷ್ಟು ಮಹಿಳೆಯರಿದ್ದಾರೆ ಎಂದು ವರದಿ ಹೇಳಿದೆ.

ವಿಪರ್ಯಾಸವೆಂದರೆ, ಒಂದೇ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಮೀಸಲಾದ ಕೋಟಾವನ್ನು ಭರ್ತಿ ಮಾಡಿಲ್ಲ. ವರದಿಯ ಪ್ರಕಾರ, 2.4 ಲಕ್ಷ ಮಹಿಳಾ ಪೊಲೀಸರ ಪೈಕಿ 960 ಮಂದಿ ಮಾತ್ರ ಐಪಿಎಸ್‌ನಲ್ಲಿದ್ದರೆ, 24,322 ಐಪಿಎಸ್ ಅಧಿಕಾರಿಯೇತರ ಹುದ್ದೆಗಳಾದ ಸಬ್‌ಇನ್ಸ್‌ಪೆಕ್ಟರ್, ಇನ್‌ಸ್ಪೆಕ್ಟರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿದ್ದಾರೆ.

ಈ ವರದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಪೊಲೀಸ್‌ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನಲ್ಲಿ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

error: No Copying!