
ಕಾಪು: ದಿನಾಂಕ:16-04-2025( ಹಾಯ್ ಉಡುಪಿ ನ್ಯೂಸ್) ಉಚ್ಚಿಲದ ವಯೋವೃದ್ಧ ಮಹಿಳೆಯೋರ್ವರಿಗೆ ನೆರೆಮನೆಯ ವ್ಯಕ್ತಿಯೋರ್ವ ನಂಬಿಸಿ ಹಣಕಾಸಿನ ವಿಚಾರದಲ್ಲಿ ವಂಚನೆ ನಡೆಸಿದ್ದಾನೆ ಎಂದು ಮಹಿಳೆಯ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಪು , ಉಚ್ಚಿಲ ನಿವಾಸಿ ರೀಮಾ (49) ಎಂಬವರು ದುಬೈನಲ್ಲಿ ವಾಸವಾಗಿದ್ದು ಅವರ ತಾಯಿ ರೇವತಿ (72) ಹಾಗೂ ತಂದೆ ಸದಾನಂದ (82) ರವರುಗಳು ಕಾಪು ,ಮೂಳೂರು, ಉಚ್ಚಿಲ ಎಂಬಲ್ಲಿ ವಾಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 26/03/2025 ರಂದು ರೀಮಾರವರ ತಾಯಿ ದೂರವಾಣಿ ಕರೆ ಮಾಡಿ ಮೂಳೂರು ಶಾಖೆಯಲ್ಲಿರುವ ಯೂನಿಯನ್ ಬ್ಯಾಂಕ್ NRO ಖಾತೆಗೆ ಐದು ಲಕ್ಷ ರೂಪಾಯಿಗಳನ್ನು ಕಳುಹಿಸುವಂತೆ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರಂತೆ . ಆ ಕೂಡಲೇ ರೀಮಾರವರು ಎರಡು ಲಕ್ಷ ರೂಪಾಯಿಗಳನ್ನು ಯೂನಿಯನ್ ಬ್ಯಾಂಕ್ NRO ಮತ್ತು ಮೂಳೂರು ಶಾಖೆಯಲ್ಲಿ NRE ಖಾತೆಗೆ ವರ್ಗಾಯಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ತನ್ನ ತಾಯಿಗೆ ಐದು ಲಕ್ಷ ರೂಪಾಯಿ ಏಕೆ ಬೇಕು ಎಂದು ತಿಳಿಯಲು ತನ್ನ ತಾಯಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಅವರು ಯಾವುದೇ ಉತ್ತರವನ್ನು ನೀಡದೆ ಅಳುತ್ತಿದ್ದರು ಎನ್ನಲಾಗಿದೆ, ಬಳಿಕ ರೀಮಾ ರವರು ದುಬೈನಿಂದ ಊರಿಗೆ ಬಂದು ತನ್ನ ತಾಯಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಒಟ್ಟು ಐವತ್ತಾರು ಲಕ್ಷದ ನಲವತ್ತು ಸಾವಿರದ ಮುನ್ನೂರ ತೊಂಬತ್ತೆರಡು (56,40,392/-) ರೂಪಾಯಿಗಳ ವಹಿವಾಟುಗಳಿವೆ ಎಂದು ರೀಮಾ ರವರಿಗೆ ತಿಳಿಯುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ತನ್ನ ತಾಯಿ ಸ್ವಲ್ಪ ಚೇತರಿಸಿಕೊಂಡ ನಂತರ ಅವರಲ್ಲಿ ವಿಚಾರಿಸಿದಾಗ ತಮ್ಮ ನೆರೆಹೊರೆಯಲ್ಲಿ, ಸರಿ ಸುಮಾರು ಎರಡು ವರ್ಷಗಳ ಹಿಂದೆ, ಒಂದು ಕುಟುಂಬವು ಬಂದು ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದು, ಆ ವ್ಯಕ್ತಿಯ ಹೆಸರು ಬಾನುಚಂದ್ರ ಪೆದ್ದಪಲ್ಲಿ ಆತನ ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಆತನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿಸಿದ್ದು , ಅವರು ತನ್ನ ತಾಯಿಯನ್ನು “ಅಮ್ಮಾ” ಎಂದು ಕರೆಯುತ್ತಿದ್ದು, ತನ್ನ ತಾಯಿಯಲ್ಲಿ ಹಣದ ಅವಶ್ಯಕತೆ ಇದೆ ಎಂದು ನಟಿಸಿ ಅಲ್ಲದೇ ತನಗೆ ಬ್ಯಾಂಕ್ ಖಾತೆ ಕೂಡಾ ಇಲ್ಲ ಆದ್ದರಿಂದ ತನ್ನ ವ್ಯವಹಾರಗಳಿಗೆ ತಾಯಿಯ ಬ್ಯಾಂಕ್ ಖಾತೆಯನ್ನು ಬಳಸಲು ಅವಕಾಶ ನೀಡುವಂತೆ ವಿನಂತಿಸಿದಂತೆ ತನ್ನ ತಾಯಿ ಒಪ್ಪಿಕೊಂಡಂತೆ ತಾಯಿಯ ಬ್ಯಾಂಕ್ ಖಾತೆ ಬಳಸುತ್ತಿದ್ದ ಬಾನುಚಂದ್ರ ಪಡಪಲ್ಲಿ ಎಂಬಾತ ತನ್ನ ಹೆಂಡತಿಯೊಂದಿಗೆ ಸೇರಿ ರೀಮಾ ರವರ ತಾಯಿಗೆ ಒಟ್ಟು 56,40,392/- ರೂಪಾಯಿ ವಂಚಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ರೀಮಾರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 316, 318 BNS ರಂತೆ ಪ್ರಕರಣ ದಾಖಲಾಗಿದೆ.