
ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು. ಆದರೆ ಸಮಗ್ರವಾಗಿ, ಸಮಾಜದ ಒಟ್ಟು ಹಿತಾಸಕ್ತಿ, ವ್ಯವಸ್ಥೆಯ ವಾಸ್ತವತೆ, ದೇಶದ ದೂರದೃಷ್ಟಿಯ ಅನುಕೂಲತೆ ಎಲ್ಲವನ್ನೂ ನೋಡಿಕೊಂಡು ಇದು ಹೀಗೆ ಇರಬೇಕು ಎಂದು ತೀರ್ಮಾನ ಕೈಗೊಳ್ಳುವುದು ಒಂದು ಸಂಕುಚಿತ ಮನೋಭಾವಕ್ಕೆ ಸಾಕ್ಷಿಯಾಗುತ್ತದೆ.
ಏಕೆಂದರೆ ಖಚಿತತೆ ನಮ್ಮ ಅಭಿಪ್ರಾಯದಲ್ಲಿ ಇದ್ದರೂ ವಿಷಯವೇ ಸ್ಪಷ್ಟವಾಗಿರುವುದಿಲ್ಲ. ಅದು ಅನೇಕ ಆಯಾಮಗಳನ್ನು ಹೊಂದಿರುತ್ತದೆ.
ಉದಾಹರಣೆಗೆ, ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪುಟ್ಟ ಮಗುವಿನ ಕೊಲೆ ಮತ್ತು ಅತ್ಯಾಚಾರದಂತ ವಿಷಯದಲ್ಲಿ ನಡೆದ ಎನ್ಕೌಂಟರ್ ಬಗ್ಗೆ ಸಾಕಷ್ಟು ಜನ ಮೆಚ್ಚುಗೆ, ಖುಷಿ ಮತ್ತು ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಐದು ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ರಕ್ಕಸ ನಿಜಕ್ಕೂ ಬದುಕುವ ಯಾವ ಅರ್ಹತೆಯನ್ನು ಹೊಂದಿರುವುದಿಲ್ಲ. ಅವನನ್ನು ಕೊಂದಿದ್ದು ಖಂಡಿತವಾಗಲೂ ಸರಿ ಎಂದು ಈ ಕ್ಷಣಕ್ಕೆ ಬಹುತೇಕ ಎಲ್ಲರಿಗೂ ಅನಿಸುತ್ತದೆ.
ಎರಡನೆಯದಾಗಿ, ಹಾಗೆ ಪೊಲೀಸರೇ ತಕ್ಷಣ ಶಿಕ್ಷೆ ಕೊಡುವುದಾದರೆ ನಾವು ನಿರ್ಮಿಸಿಕೊಂಡಿರುವ ಈ ವ್ಯವಸ್ಥೆ, ಕಾನೂನು, ನ್ಯಾಯಾಲಯ, ವಕೀಲರುಗಳಿಗೆ ಅರ್ಥವಿದೆಯೇ, ಇದೇ ಶಿಕ್ಷೆಯನ್ನು ಶೀಘ್ರವಾಗಿ ಕಾನೂನಿನ ವ್ಯಾಪ್ತಿಗೆ ಒಳಪಡಿಸಿ ಆತನನ್ನು ಗಲ್ಲಿಗೇರಿಸಿದ್ದರೆ ಅಥವಾ ಆ ರೀತಿಯ ವ್ಯವಸ್ಥೆಯನ್ನು ರೂಪಿಸಿಕೊಂಡರೆ ಉತ್ತಮವಲ್ಲವೇ. ಹೀಗೆ ಕಾನೂನಿನ ವ್ಯಾಪ್ತಿಗೆ ಒಳಪಡಿಸದೆ ನೇರ ಪೊಲೀಸರೊಬ್ಬರು ಶೂಟ್ ಮಾಡುವುದು ಅಷ್ಟೊಂದು ಉತ್ತಮ ನಡೆಯಲ್ಲ ಎಂದು ಒಂದಷ್ಟು ಚಿಂತನಶೀಲ ವರ್ಗ ಹೇಳುತ್ತದೆ. ಅದರಲ್ಲಿಯೂ ಸ್ವಲ್ಪ ಸತ್ಯ ಅಡಗಿದೆ.
ಮೂರನೇಯ ವರ್ಗ ಈ ರೀತಿಯ ಅನೇಕ ಅತ್ಯಾಚಾರ, ಕೊಲೆಯಂತ ಘಟನೆಗಳು ನಡೆದಿದೆ. ಅದನ್ನು ದೊಡ್ಡ ವ್ಯಕ್ತಿಗಳು, ಶ್ರೀಮಂತ ವ್ಯಕ್ತಿಗಳು, ಜನಪ್ರಿಯ ವ್ಯಕ್ತಿಗಳು ಅಥವಾ ಒಂದು ಜಾತಿ, ಕೋಮಿನ ವ್ಯಕ್ತಿಗಳು ಮಾಡಿದಾಗ ಅವರಿಗೆ ನೀಡದ ಶಿಕ್ಷೆಯನ್ನು ಈ ರೀತಿ ಒಬ್ಬ ಸಾಮಾನ್ಯ ವ್ಯಕ್ತಿಗೆ ನೀಡುವುದು ಅನ್ಯಾಯವಲ್ಲವೇ. ಹಾಸನದ ಮಾಜಿ ಸಂಸದರು ಎರಡು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಲ್ಲದೆ ಅವರ ವಿರುದ್ಧ ಒಂದಿಬ್ಬರು ಅತ್ಯಾಚಾರದ ದೂರನ್ನು ನೀಡಿದ್ದಾರೆ. ರಾಮಚಂದ್ರಪುರದ ಮಠದ ಸ್ವಾಮಿಗಳ ಮೇಲೆ ಅತ್ಯಾಚಾರದ ಆರೋಪವಿತ್ತು. ದರ್ಶನ್ ಎಂಬ ಸಿನಿಮಾ ನಟ ಬಹುತೇಕ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ಬಹಿರಂಗ ಸತ್ಯ. ಅದೇ ಹುಬ್ಬಳ್ಳಿಯ ನೇಹಾ ಎಂಬ ಹೆಣ್ಣು ಮಗಳನ್ನು ವ್ಯಕ್ತಿಯೊಬ್ಬ ಕಾಲೇಜು ಆವರಣದಲ್ಲಿಯೇ ಬಹಿರಂಗವಾಗಿ ಚುಚ್ಚಿ ಕೊಂದ. ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಪಾಪದ ಹೆಣ್ಣು ಮಗುವನ್ನು ಕೊಂದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇವರುಗಳಿಗೆ ತಮ್ಮ ಪರವಾಗಿ ವಾದಿಸಲು ನ್ಯಾಯಾಂಗ ಅವಕಾಶ ನೀಡಿರುವಾಗ ಈ ವ್ಯಕ್ತಿಗೂ ಸಹಜವಾಗಿಯೇ ಒಂದು ಅವಕಾಶ ನೀಡಬೇಕಾಗಿತ್ತು ಎಂದು ಕೆಲವರು ಅಥವಾ ಅವರ ಕುಟುಂಬದವರು ಕೇಳಬಹುದಲ್ಲವೇ.
ಇಷ್ಟೆಲ್ಲಾ ಆಯಾಮಗಳಿರುವಾಗ ಈ ಬಗ್ಗೆ ನಾವು ತಕ್ಷಣ ಪ್ರತಿಕ್ರಿಯಿಸುವಾಗ ಸಮಗ್ರ ಚಿಂತನೆ ನಮಗಿರಲೇಬೇಕಾಗುತ್ತದೆ.
ಮತ್ತೊಂದು ಅಂತಹುದೇ ವಿಷಯ ಜಾತಿ ಜನಗಣತಿ. ಭಾರತದ ಸಾಮಾಜಿಕ ವ್ಯವಸ್ಥೆ ರೂಪಗೊಂಡಿರುವುದೇ ಜಾತಿ ಆಧಾರದ ಮೇಲೆ. ಆ ಜಾತಿಯ ವ್ಯವಸ್ಥೆಯಲ್ಲಿ ಮೇಲು-ಕೀಳು ಮಾತ್ರವಲ್ಲ ಅಸ್ಪೃಶ್ಯತೆ ಎಂಬ ಅಮಾನವೀಯ ಆಚರಣೆ ಜಾರಿಯಲ್ಲಿದೆ. ಈಗ ಕೆಲವು ಅತಿ ಹಿಂದುಳಿದ ಜಾತಿಗಳನ್ನು ಮೇಲೆತ್ತಲು ಜಾತಿ ಜನಗಣತಿಯನ್ನು ಮಾಡಿ ಕೆಳಹಂತದ ಸಮುದಾಯಗಳಿಗೆ ಒಂದಷ್ಟು ಪ್ರೋತ್ಸಾಹದಾಯಕ ವ್ಯವಸ್ಥೆ ಕಲ್ಪಿಸಬೇಕು. ಅದು ಸರ್ಕಾರಗಳ ಜವಾಬ್ದಾರಿ. ಆದ್ದರಿಂದ ಜಾತಿ ಜನಗಣತಿ ಈ ದೇಶಕ್ಕೆ ತೀರಾ ಅನಿವಾರ್ಯ ಎಂಬ ಒಂದು ವಾದ.
ಈ ಜಾತಿ ಜನಗಣತಿ ವ್ಯವಸ್ಥೆ ಭಾರತದಲ್ಲಿ ಈಗಾಗಲೇ ಇರುವ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಆಳವಾಗಿ ಬೇರೂರಲು, ಅದರಿಂದ ಆಗುತ್ತಿರುವ ದುಷ್ಪರಿಣಾಮಗಳು ಮತ್ತಷ್ಟು ಹೆಚ್ಚಾಗಲು, ದೇಶದ ಸರ್ವತೋಮುಖ ಅಭಿವೃದ್ಧಿ ಗೆ ಹಿನ್ನಡೆಯಾಗಿ ಭ್ರಷ್ಟಾಚಾರ ತಾಂಡವವಾಡಲು ಜಾತಿ ಗಣತಿ ನಿಜಕ್ಕೂ ಕಾರಣವಾಗುತ್ತದೆ. ಆದ್ದರಿಂದ ಅದನ್ನು ತಿರಸ್ಕರಿಸಬೇಕು ಎನ್ನುವ ಮತ್ತೊಂದು ವಾದ.
ಹಾಗೆಯೇ ಕೋಮುವಾದಕ್ಕೆ ವಿರುದ್ಧವಾಗಿ ಜಾತಿವಾದ ಚುನಾವಣಾ ರಾಜಕೀಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಮೂಲಾಧಾರವಾಗಿದೆ. ಇವರಿಗೆ ಅಭಿವೃದ್ಧಿಗಿಂತ ಹೆಚ್ಚಾಗಿ ಒಂದು ಕೋಮುವಾದದ ಧೃವೀಕರಣ ಅಥವಾ ಜಾತಿವಾದದ ವಿಭಜನೀಕರಣ ಬಹಳ ಮುಖ್ಯವಾಗುತ್ತದೆ. ಎರಡು ಕೂಡ ಅತ್ಯಂತ ಅಪಾಯಕಾರಿ ಎಂಬ ಮತ್ತೊಂದು ವಾದವೂ ಇದೆ.
ಇಂತಹ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನವನ್ನು ನಾವು ಕೈಗೊಳ್ಳಬೇಕು. ಖಂಡಿತವಾಗಲೂ ಸ್ವಚ್ಛ ಮನಸ್ಸಿನಿಂದ ಯೋಚಿಸಿದರೆ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಎಲ್ಲದರಲ್ಲೂ ಸತ್ಯವೂ ಇದೆ, ಅಪಾಯವು ಇದೆ.
ಮೂರನೇಯದಾಗಿ ಇತ್ತೀಚೆಗೆ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ.
ಶ್ರೀಮಂತ ಮುಸ್ಲಿಮರು ದೇವರ ಹೆಸರಿನಲ್ಲಿ ಬಡ ಮುಸ್ಲಿಮರಿಗಾಗಿ ತಮ್ಮ ಆಸ್ತಿಯನ್ನು ಆ ಸಂಸ್ಥೆಗೆ ನೀಡಿ ಆ ಮುಖಾಂತರ ಅದು ಬಡವರಿಗೆ ಹಂಚಿಕೆಯಾಗಿ, ಸಮ ಸಮಾಜ ನಿರ್ಮಾಣದ ಆಶಯದೊಂದಿಗೆ ಸ್ಥಾಪಿಸಲಾಗಿತ್ತು. ಆದರೆ ವಕ್ಫ್ ಬೋರ್ಡ್ ವಾಸ್ತವದಲ್ಲಿ ತನ್ನ ಆಶಯಕ್ಕೆ ವಿರುದ್ಧವಾಗಿ ರಿಯಲ್ ಎಸ್ಟೇಟ್ ಏಜೆಂಟ್ ನಂತೆ ಕೆಲಸ ಮಾಡುತ್ತಾ ಬಡ ಮುಸ್ಲಿಮರ ಸೇವೆಯಲ್ಲಿ ಬಹುತೇಕ ವಿಫಲವಾಗಿದ್ದು ಅಲ್ಲದೆ ಕೆಲವು ಅನಾವಶ್ಯಕವಾಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಉದ್ದೇಶವೇ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಕಾಣಬಹುದು.
ಇದಕ್ಕೆ ತಿದ್ದುಪಡಿಯ ಅವಶ್ಯಕತೆ ಏನೋ ಇತ್ತು. ಆದರೆ ಅದನ್ನು ಸಹಜವಾಗಿ, ಸರ್ವಾನುಮತದಿಂದ ಮತ್ತು ನ್ಯಾಯಯುತವಾಗಿ ಮಾಡದೆ ಸರ್ಕಾರ ಆಕ್ರಮಣಕಾರಿಯಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಅಭದ್ರತೆ ಮತ್ತು ದ್ವೇಷ ಭಾವನೆ ಉಂಟಾಗುವಂತೆ, ಜೊತೆಗೆ ಸಹಾನುಭೂತಿಯ ತಿದ್ದುಪಡಿಗಿಂತ ಶಿಕ್ಷಿಸುವ ತಿದ್ದುಪಡಿಯ ರೀತಿಯಲ್ಲಿ ಒಂದಷ್ಟು ಬದಲಾವಣೆ ಮಾಡಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೊಂದು ಉತ್ತಮ ನಡೆಯಲ್ಲ.
ಇಲ್ಲಿ ನಮಗೆ ಪ್ರಶ್ನೆ ಎದುರಾಗುವುದು ತಿದ್ದುಪಡಿಯ ಅವಶ್ಯಕತೆ ಏನೋ ಇದೆ, ಆದರೆ ತಿದ್ದುಪಡಿ ಮಾಡುತ್ತಿರುವ ರೀತಿ ಅಷ್ಟೊಂದು ಉತ್ತಮವಲ್ಲ. ಇಲ್ಲಿ ಸಮಗ್ರತೆಯ ಪ್ರಶ್ನೆ ಬರುತ್ತದೆ. ಕೇವಲ ಈ ಕ್ಷಣದ ನ್ಯಾಯ ಅನ್ಯಾಯಗಳನ್ನು ಮಾತ್ರ ವಿವೇಚನೆ ಮಾಡದೆ ಒಟ್ಟು ಹಿತಾಸಕ್ತಿ ನಮ್ಮ ಗಮನದಲ್ಲಿರಬೇಕು. ವಕ್ಫ್ ಬೋರ್ಡ್ ನಿಯಂತ್ರಿಸಲು ಇನ್ನೊಂದಿಷ್ಟು ಪರ್ಯಾಯ ಮಾರ್ಗಗಳು ಮತ್ತು ವಿಶ್ವಾಸಾರ್ಹ ನಡೆಗಳು ಖಂಡಿತವಾಗಲೂ ಇದ್ದವು. ಆದರೆ ರಾಜಕೀಯದ ಮೇಲಾಟದಲ್ಲಿ ಒಂದು ಪಕ್ಷ ಅನಾವಶ್ಯಕವಾಗಿ ವಕ್ಫ್ ತಿದ್ದುಪಡಿಯನ್ನು ವಿರೋಧಿಸಿದರೆ ಮತ್ತೊಂದು ಸಮರ್ಥಿಸುತ್ತದೆ. ಈ ವಿಷಯದಲ್ಲಿ ಸಹ ನಾವು ಸ್ಪಷ್ಟವಾಗಿ ತೀರ್ಮಾನ ಕೈಗೊಳ್ಳುವುದು ಕಷ್ಟವಾಗುತ್ತದೆ.
ಇಲ್ಲಿ ಅಸ್ಪಷ್ಟತೆ ಏಕೆಂದರೆ, ಒಂದು ಸಾರ್ವಜನಿಕ, ಸಾಮೂಹಿಕ ವಿಷಯಗಳಿಗೆ ಹಲವಾರು ಆಯಾಮಗಳಿರುತ್ತವೆ. ಕೆಲವರಿಗೆ ಅನುಕೂಲ ಮತ್ತು ಕೆಲವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾನವೀಯ ಮನಸ್ಸುಗಳು, ಪ್ರಬುದ್ಧ ಮನಸ್ಸುಗಳು, ದೇಶಾಭಿಮಾನದ ಮನಸ್ಸುಗಳು, ಅಹಿಂಸಾತ್ಮಕ ಮನಸ್ಸುಗಳು ಒಂದಷ್ಟು ಗೊಂದಲಕ್ಕೆ ಒಳಗಾಗುವುದು ಸಹಜ.
ಆದ್ದರಿಂದ ವಿಷಯಗಳನ್ನು ನೋಡುವ ದೃಷ್ಟಿಕೋನ ಮತ್ತು ಪ್ರತಿಕ್ರಿಯಿಸುವ ರೀತಿಯಲ್ಲಿ ಒಂದಷ್ಟು ಬದಲಾವಣೆಗಳಾಗಿ ಎಲ್ಲವೂ ವ್ಯವಸ್ಥೆಯ ಸುಧಾರಣೆ ಮತ್ತು ಜೀವ ಪರವಾಗಿದ್ದರೆ ಆ ಸಮಾಜ ಹೆಚ್ಚು ನೆಮ್ಮದಿಯಿಂದ ಇರುತ್ತದೆ ಎಂಬುದು ನಮ್ಮ ಭಾವನೆ. ಶಿಕ್ಷೆಗಿಂತ ಶಿಕ್ಷಣ ಮತ್ತು ದ್ವೇಷಕ್ಕಿಂತ ಪ್ರೀತಿಯ ಮನೋಭಾವ ಹೆಚ್ಚು ಸಹನೀಯ. ಹಾಗೆಯೇ ಆಡಳಿತದಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ರಕ್ಷಣಾತ್ಮಕ ಕಾಠಿಣ್ಯ ಸಹ ಅಷ್ಟೇ ಮುಖ್ಯ,
ಧನ್ಯವಾದಗಳು,
ಶುಭೋದಯ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..