
ಬೆಂಗಳೂರು: ದಿನಾಂಕ:07-04-2025(ಹಾಯ್ ಉಡುಪಿ ನ್ಯೂಸ್) ಬೆಲೆ ಏರಿಕೆ, ಎಸ್‌ಸಿಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಸೇರಿದಂತೆ ಸರ್ಕಾರದ ವಿವಿಧ ವೈಫಲ್ಯಗಳನ್ನು ಖಂಡಿಸಿ ಸೋಮವಾರದಿಂದ ಮೇ.3ರವರೆಗೆ ಬಿಜೆಪಿ ಭಾರೀ ಪ್ರತಿಭಟನೆ ನಡೆಸಲು ಮುಂದಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಹಾಗೂ ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಸೋಮವಾರ ಮೈಸೂರಿನಲ್ಲಿ ಪ್ರತಿಭಟನೆ ಆರಂಭವಾಗಿ ಮೇ 3ರಂದು ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಪ್ರತಿ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ, ದುರಾಡಳಿತ ಮತ್ತು ಬೆಲೆ ಏರಿಕೆಯ ಮೂಲಕ ಜನರನ್ನು ಲೂಟಿ ಮಾಡುತ್ತಿದೆ. ಕಳೆದ 21 ತಿಂಗಳ ಕಾಂಗ್ರೆಸ್ ಸರಕಾರದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿದೆ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಮತ್ತು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧವೂ ನಾವು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಮೈಸೂರು, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶಗಳಲ್ಲಿ ನಾಲ್ಕು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸೋಮವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ 1 ಕಿ.ಮೀ ಪಾದಯಾತ್ರೆ ನಡೆಸಿ ನಂತರ ಸಾರ್ವಜನಿಕರಿಗೆ ಈ ಸಮಸ್ಯೆಗಳ ಕುರಿತು ತಿಳಿಸುತ್ತೇವೆ. ರಾಜ್ಯದ ಮೂಲೆ ಮೂಲೆಗೂ ಸಮಸ್ಯೆಯನ್ನು ತಿಳಿಸುತ್ತೇವೆ. ಬೆಲೆ ಏರಿಕೆಯಿಂದಾಗಿ, ತರಕಾರಿಗಳು, ಧಾನ್ಯಗಳು ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಹಾಲಿನ ದರ ಏರಿಕೆ ಮಾಡಿದರೂ ರೈತರಿಗೆ ಪ್ರಯೋಜನ ತಲುಪಿಲ್ಲ. ಸರ್ಕಾರವು ಆಸ್ತಿ ಮಾರ್ಗಸೂಚಿ ಮೌಲ್ಯ, ವಿದ್ಯುತ್ ದರ, ಬಸ್ ಮತ್ತು ಮೆಟ್ರೋ ದರಗಳು, ಸರ್ಕಾರಿ ಕಾಲೇಜು ಶುಲ್ಕಗಳನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಮುಸ್ಲಿಮರ ಪರವಾಗಿ ನಿಲ್ಲುತ್ತದೆ. ಆದರೆ, ಜಾತ್ಯತೀತ ಎಂದು ಹೇಳಿಕೊಳ್ಳುತ್ತದೆ. ಹಿಂದೂಗಳ ಬಗ್ಗೆ ಮಾತನಾಡಿದರೆ ನಮ್ಮನ್ನು ಕೋಮುವಾದಿ ಎನ್ನುತ್ತಾರೆಂದು ಕಿಡಿಕಾರಿದರು.
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕುರಿತು ಮಾತನಾಡಿ, ಧರ್ಮಾಧಾರಿತ ಮೀಸಲಾತಿಯ ಅಗತ್ಯವೇನಿದೆ? ಮುಸ್ಲಿಮರು ಈಗ ಸಾಮಾನ್ಯ ವರ್ಗದ ಅಡಿಯಲ್ಲಿ ಗುತ್ತಿಗೆ ಪಡೆಯುತ್ತಿದ್ದಾರೆಂದು ಕಿಡಿಕಾರಿದರು.
ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ವಿಚಾರ ಕುರಿತು ಮಾತನಾಡಿ, ಡೆತ್ ನೋಟ್‌ಗಿಂತ ದೃಢವಾದ ಸಾಕ್ಷಿ ಬೇರೆ ಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದ್ದರು. ಆದರೆ, ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ಅವರ ಡೆತ್ ನೋಟ್ ಅನ್ನು ಪರಿಗಣಿಸುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ, ಡೆತ್ ನೋಟ್‌ನಲ್ಲಿ ಈಶ್ವರಪ್ಪ ಎಂದು ಹೆಸರಿಸಿರುವ ಗುತ್ತಿಗೆದಾರನ ಆತ್ಮಹತ್ಯೆಯನ್ನು ವಿರೋಧಿಸಿ ಸಿದ್ದರಾಮಯ್ಯ ಮತ್ತು ಅವರ ಪಕ್ಷದವರು ಪ್ರತಿಭಟನೆ ನಡೆಸಿದ್ದರು, ಆದರೆ, ಈಗ ವಿನಯ್ ಪ್ರಕರಣದಲ್ಲಿ ಅದನ್ನು ವಿರೋಧಿಸುತ್ತಿದ್ದಾರೆಂದು ಕಿಡಿಕಾರಿದರು.