Spread the love

ಮಲ್ಪೆ: ದಿನಾಂಕ:26-03-2025 (ಹಾಯ್ ಉಡುಪಿ ನ್ಯೂಸ್) ಅಪರಾಧ ಪ್ರಕರಣವೊಂದರ ಆರೋಪಿಯನ್ನು  ಬಂಧಿಸಲು ತೆರಳಿದಾಗ ಆತನನ್ನು ತಪ್ಪಿಸಿಕೊಳ್ಳಲು ಆತನ ತಂದೆ ಸಹಕರಿಸಿದರೆಂದು  ತಂದೆಯ ಮೇಲೆ ಮಲ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗಂಗಪ್ಪ ಎಸ್ ಅವರು ದೂರು ದಾಖಲಿಸಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗಂಗಪ್ಪ ಎಸ್ ಅವರು ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧ  ಪ್ರಕರಣವೊಂದರಲ್ಲಿ ತನಿಖಾಧಿಕಾರಿಯಾಗಿದ್ದು ಪ್ರಕರಣದ  ಆರೋಪಿ  ಪತ್ತೆಯ ಬಗ್ಗೆ ಸ್ಥಳೀಯ  ಕೆಲವು  ಸಿ.ಸಿ  ಟಿವಿ. ಪೂಟೇಜನ್ನು  ಪರಿಶೀಲನೆ  ಮಾಡಲಾಗಿದ್ದು  ಸ್ಥಳೀಯವಾಗಿ  ಮಾಹಿತಿ  ಸಂಗ್ರಹಿಸಿದಾಗ  ಬಡಾನಿಡಿಯೂರು  ಗ್ರಾಮದ  ನಾರಾಯಣ  ಬಂಗೇರಾ ಎಂಬವರ ಮಗ  ದರ್ಶನ್ ಕುಮಾರ್ ಎಂಬುವವನು  KA-20-EZ- 1502  ಮೋಟಾರು ಸೈಕಲಿನಲ್ಲಿ  ಬಂದು  ಸುಲಿಗೆ  ಮಾಡಿರುವುದಾಗಿ  ಖಚಿತ ಮಾಹಿತಿ  ತಿಳಿದುಬಂದಿರುತ್ತದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ನಾರಾಯಣ  ಬಂಗೇರಾ ರವರಲ್ಲಿ ದರ್ಶನ್ ಬಗ್ಗೆ ವಿಚಾರಿಸಿದಾಗ 3 ದಿನಗಳಿಂದ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ. ಪೊಲೀಸ್ ಇಲಾಖೆಯ ಜೀಪಿನಲ್ಲಿ ಠಾಣೆಯ ಸಿಬ್ಬಂದಿಯವರೊಂದಿಗೆ ಆರೋಪಿ ದರ್ಶನ್ ಕುಮಾರ್ ಮನೆಯ  ಬಳಿ  ತೆರಳಿದಾಗ   ನಾರಾಯಣ  ರವರು ಮನೆಯಿಂದ ಹೊರಗೆ  ಬಂದು  ಇನ್ನೂ ದರ್ಶನ್  ಮನೆಗೆ  ಬಂದಿರುವುದಿಲ್ಲ ಎಂದು  ಮಾಹಿತಿ  ನೀಡಿದ್ದು , ಪೊಲೀಸರಿಗೆ ಕಂಪೌಂಡಿನ  ಒಳಗೆ   ಹೋಗಲು   ಅವಕಾಶವನ್ನು  ನೀಡಿರುವುದಿಲ್ಲ ಹಾಗೂ  ಮಾತನಾಡುತ್ತಾ  ಒಂದು  ನಿಮಿಷ ನೀವು  ಇಲ್ಲೇ  ಇರಿ  ಬರುತ್ತೇನೆ  ಎಂದು  ಹೇಳಿ  ಮನೆಯ  ಒಳಗೆ  ಹೋದ ನಾರಾಯಣ  ರವರು ಹಿಂಬದಿಯ  ಬಾಗಿಲಿನಿಂದ  ದರ್ಶನ್ ನನ್ನು ಕರೆದುಕೊಂಡು  ಬಂದು  ಅವನ  ದ್ವಿಚಕ್ರ ವಾಹನದಲ್ಲಿ  ಅವನನ್ನು  ಅಲ್ಲಿಂದ  ತಪ್ಪಿಸಿಕೊಂಡು  ಹೋಗಲು ಅವಕಾಶ ಮಾಡಿಕೊಟ್ಟಿರುತ್ತಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ನೋಡಿ  ಕಂಪೌಂಡ್  ಬಳಿ ಹೋಗುವಷ್ಟರಲ್ಲಿ   ಆತನು  ದ್ವಿಚಕ್ರ ವಾಹನದಲ್ಲಿ  ಅಲ್ಲಿಂದ  ಪರಾರಿಯಾಗಿರುತ್ತಾನೆ ಎನ್ನಲಾಗಿದೆ . ಪ್ರಕರಣದ  ಆರೋಪಿ ದರ್ಶನ್  ಕುಮಾರ್ ಈತನು  ಆರೋಪಿ ಎಂದು ತಿಳಿದಿದ್ದರೂ  ಅವನನ್ನು  ಮರೆ ಮಾಡುವ  ಉದ್ದೇಶದಿಂದ  ಪೊಲೀಸರಿಗೆ  ಸುಳ್ಳು ಮಾಹಿತಿ  ನೀಡಿ, ಆಶ್ರಯ ನೀಡಿ  ಆತನನ್ನು  ಅಲ್ಲಿಂದ  ತಪ್ಪಿಸಿಕೊಂಡು ಹೋಗಲು ನಾರಾಯಣರವರು  ಸಹಾಯ ಮಾಡಿ ಅಪರಾಧವೆಸಗಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:249(b),212 BNS ರಂತೆ ಪ್ರಕರಣ ದಾಖಲಾಗಿದೆ. 

error: No Copying!