
ಬೆಂಗಳೂರು: ದಿನಾಂಕ:14-03-2025 (ಹಾಯ್ ಉಡುಪಿ ನ್ಯೂಸ್) ಮಕ್ಕಳು ಪೋಷಕರ ಆರೈಕೆ ಮಾಡದಿದ್ದರೆ ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ವಿಲ್ ಅಥವಾ ದಾನಪತ್ರ ರದ್ದು ಮಾಡುವ ಅವಕಾಶ ಸಂತ್ರಸ್ಥ ಪೋಷಕರಿಗೆ ಇದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ 2007ರಲ್ಲಿ ಜಾರಿಗೆ ತಂದಿರುವ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆʼಯಲ್ಲಿ ಈ ಅಂಶವಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ’ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ‘ಈ ಕಾಯ್ದೆ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ತಿಂಗಳ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅಥವಾ ಆರೈಕೆ ಮಾಡಲು ನಿರ್ಲಕ್ಷಿಸಿದರೆ ಹಿರಿಯ ನಾಗರಿಕರು ಕಾಯ್ದೆಯ ಸೆಕ್ಷನ್ 09ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದರು.
ಅಂತೆಯೇ ‘ತಂದೆ– ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ, ಸೆಕ್ಷನ್ 23ರಂತೆ ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮತ್ತೆ ಪೋಷಕರ ಹೆಸರಿಗೇ ಮರು ಸ್ಥಾಪಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ಸಚಿವರು ಹೇಳಿದರು.
ಅಲ್ಲದೆ ‘ಉಪ ವಿಭಾಗಾಧಿಕಾರಿಗಳ ಮುಂದೆ ಸಾವಿರಾರು ಪ್ರಕರಣಗಳಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ಉಪ ವಿಭಾಗಾಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಕೂಡಾ ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಒಂದು ವರ್ಷದೊಳಗೆ ಇ- ಜಮಾಬಂದಿ ತಂತ್ರಾಂಶ
ಇದೇ ವೇಳೆ ‘ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶವನ್ನು ಒಂದು ವರ್ಷದೊಳಗೆ ಅಭಿವೃದ್ಧಿಪಡಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಇ- ಜಮಾಬಂದಿ ಘೋಷಿಸಿದ್ದಾರೆ. ಇದರಿಂದ ಗ್ರಾಮ ಲೆಕ್ಕಿಗರ ಮೇಲಿನ ಕೆಲಸದ ಒತ್ತಡ ಕಡಿಮೆ ಆಗಲಿದೆ. ಇ-ಜಮಾಬಂದಿ ಎಂದರೆ ಜಮಾಬಂದಿಯ ಆನ್‌ಲೈನ್ ಆವೃತ್ತಿ. ಇದು ಹಕ್ಕುಗಳ ದಾಖಲೆ ಅಥವಾ ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣ ನೀಡುತ್ತದೆ. ಹರಿಯಾಣ ಸೇರಿದಂತೆ ಇತರ ರಾಜ್ಯಗಳು ಈಗಾಗಲೇ ಜಮಾಬಂದಿಯ ವಿದ್ಯುನ್ಮಾನ ಆವೃತ್ತಿಯನ್ನು ಅಭಿವೃದ್ಧಿಪಡಿಸಿ ಯಶಸ್ವಿ ಆಗಿವೆ’ ಎಂದರು.