Spread the love

ಹಿರಿಯಡ್ಕ: ದಿನಾಂಕ:13-03-2025(ಹಾಯ್ ಉಡುಪಿ ನ್ಯೂಸ್) ಬೆಂಗಳೂರಿನ ನೆಲಮಂಗಲ ಠಾಣೆಯಲ್ಲಿ ದಾಖಲಾಗಿರುವ ದರೋಡೆ ಪ್ರಕರಣವೊಂದರ ಆರೋಪಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಎಂಬವ ಮಣಿಪಾಲದಲ್ಲಿ ಸರಣಿ ಅಪಘಾತ ನಡೆಸಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದವ ನಿನ್ನೆ ಪೊಲೀಸ್‌ ನಿರೀಕ್ಷಕರಾದ ದೇವರಾಜ್ ತಂಡದವರಿಂದ ಗೌಡಗೆರೆ ಎಂಬಲ್ಲಿಂದ ಬಂಧಿಸಲ್ಪಟ್ಟು ಮಣಿಪಾಲಕ್ಕೆ ಬರುವ ಹಾದಿಯಲ್ಲಿ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದ್ದಾನೆಂದು  ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ರವರು ದೂರು ದಾಖಲಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆ , ಪೊಲೀಸ್ ನಿರೀಕ್ಷಕರಾದ ದೇವರಾಜ್ ಅವರು ಠಾಣೆಯ ಅಪರಾಧ ಪ್ರಕರಣವೊಂದರಲ್ಲಿ ಪ್ರಕರಣದ ಪ್ರಮುಖ ಆರೋಪಿ ಇಸಾಕ್ ನ ಪತ್ತೆಯ ಬಗ್ಗೆ ವಿವಿಧ ತಂಡಗಳೊಂದಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 12/03/2025 ರಂದು ಆರೋಪಿತರುಗಳಾದ 1) ಇಸಾಕ್, 2)ರಾಹಿದ್, 3)ಸಾವೆಲ್,4)ನಿಜಾಮುದ್ದೀನ್ ರವರನ್ನು ಗೌಡಗೆರೆ ಎಂಬಲ್ಲಿಂದ ವಶಕ್ಕೆ ಪಡೆದು ಇಸಾಕ್ ನನ್ನು ಖಾಸಗಿ ವಾಹನದಲ್ಲಿ ಕೂರಿಸಿಕೊಂಡು ಇತರರನ್ನು ಜೊತೆಯಲ್ಲಿ ತಂದಿದ್ದ ವಿವಿಧ ವಾಹನಗಳಲ್ಲಿ ಕೂರಿಸಿಕೊಂಡು ಮಧ್ಯಾಹ್ನ 01:30 ಗಂಟೆಗೆ ಹೊರಟು ಮಣಿಪಾಲಕ್ಕೆ ಬರುತ್ತಿರುವಾಗ ಬೈಲೂರು ದಾಟಿ ಕಣಜಾರು ಕ್ರಾಸ್ ಹತ್ತಿರ ಇರುವಾಗ ಸಂಜೆ ವಾಹನದಲ್ಲಿದ್ದ ಆರೋಪಿ ಇಸಾಕ್ ನು ತನಗೆ ಮೂತ್ರ ಬರುತ್ತಿದೆ ಎಂದು ಹೇಳಿದ್ದು ಉಡುಪಿ ನಗರ ಠಾಣಾ ಸಿಬ್ಬಂದಿ ಹೇಮಂತ ಎಂಬವರು ಆರೋಪಿ ಇಸಾಕ್ ನ ಒಂದು ಕೈಗೆ ಹ್ಯಾಂಡ್ಕಪ್ ಮತ್ತು ಲೀಡಿಂಗ್ ಚೈನ್ ಅಳವಡಿಸಿ ಆತನೊಂದಿಗೆ ಕಾರಿನಿಂದ ಕೆಳಗೆ ಇಳಿದಾಗ ಇಸಾಕ್ ನು ಹೇಮಂತ್ ರವರನ್ನು ತಳ್ಳಿ ಆತನ ಕೈಯಲ್ಲಿ ಇದ್ದ ಲೀಡಿಂಗ್ ಚೈನ್ ನ್ನು ಕಾರಿನ ಮೇಲೆ ಮತ್ತು ಹೇಮಂತ್ ರವರ ಮೇಲೆ ಬೀಸುತ್ತಾ ಕಣಜಾರು ಕಾಡಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರಿನ ಹಿಂಬದಿ ಬಲಭಾಗದಲ್ಲಿ ಕುಳಿತಿದ್ದ ಪಿ.ಎಸ್.ಐ ವಿನಯ್ ಮತ್ತು ಚಾಲಕನ ಸೀಟಿನಲ್ಲಿ ಕುಳಿತಿದ್ದ ಹಿರಿಯಡ್ಕ ಪಿ.ಎಸ್.ಐ ಮಂಜುನಾಥ್ ಮರಬದರವರು ಕಾರಿನಿಂದ ಇಳಿದು ಆರೋಪಿ ಇಸಾಕ್ ನನ್ನು ಹಿಡಿಯಲು ಪ್ರಯುತ್ನಿಸಿದಾಗ ಆತನು ಅವರ ಮೇಲೂ ಕೂಡಾ ಲೀಡಿಂಗ್ ಚೈನ್ ಅನ್ನು ಬೀಸುತ್ತಾ ನಿಮ್ಮೆಲ್ಲರನ್ನು ಕೊಂದುಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ವೇಳೆ ದೇವರಾಜ್ ರವರು ಮತ್ತು ಜೊತೆಗಿದ್ದ ಅಧಿಕಾರಿ ಸಿಬ್ಬಂದಿಯವರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿ ಇಸಾಕ್ ನು ಪುನಃ ಲೀಡಿಂಗ್ ಚೈನ್ ಅನ್ನು ಬೀಸುತ್ತಾ ಬೆದರಿಕೆ ಹಾಕಿ ಒಂದು ಕಲ್ಲನ್ನು ತೆಗೆದುಕೊಂಡು ಕಾರಿನ ಮುಂಭಾಗಕ್ಕೆ ಹೊಡೆದು ಜಖಂಗೊಳಿಸಿ ಪುನಃ ದೇವರಾಜ್ ರವರ ಮೇಲೆ ದಾಳಿ ಮಾಡಲು ಬಂದಾಗ ದೇವರಾಜ್ ರವರು ಪಿಸ್ತೂಲಿನಿಂದ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದು ಈ ವೇಳೆ ಆರೋಪಿ ಇಸಾಕ್ ನು ದೇವರಾಜ್ ರವರ ಕೈಯಲ್ಲಿ ಇದ್ದ ಪಿಸ್ತೂಲನ್ನು ಕಿತ್ತುಕೊಳ್ಳಲು ಮುನ್ನುಗ್ಗಿದಾಗ ಆತನ ಕಡೆ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಅವನ ಎಡಗಾಲಿಗೆ ತಾಗಿ ಆತನು ಅಲ್ಲಿಯೇ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ.

ಈ ವೇಳೆಗೆ ಅಲ್ಲಿಗೆ ಬಂದ ಸಿಪಿಐ ಮಂಜುನಾಥ ಮಲ್ಪೆ ವೃತ್ತ ಹಾಗೂ ಪಿಎಸ್ ಐ ರವರಾದ ಪ್ರಸನ್ನ.ಎಂ.ಎಸ್, ಅನಿಲ್ ಕುಮಾರ.ಡಿ ರವರು ಆರೋಪಿ ಇಸಾಕ್ ನನ್ನು ಮತ್ತು  ದೇವರಾಜ್ ರವರನ್ನು  ಹಾಗೂ ಇನ್ನುಳಿದ ಅಧಿಕಾರಿ ಸಿಬ್ಬಂದಿಯವರನ್ನು ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ:132,127(2),351(2)(3),109 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!