
ಕುಂದಾಪುರ: ದಿನಾಂಕ:12-03-2025(ಹಾಯ್ ಉಡುಪಿ ನ್ಯೂಸ್) ಕುಂದಾಪುರದ ಫೈನಾನ್ಸ್ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಫೈನಾನ್ಸ್ ಸಂಸ್ಥೆಗೆ 5ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಸಂಸ್ಥೆಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದಾರವಾಡ ಜಿಲ್ಲೆಯ ಅಕ್ಷಯ (27) ಎಂಬವರು ಕುಂದಾಪುರದ ಸ್ಪಂದನ ಪೂರ್ತಿ ಫೈನಾನ್ಸ್ ಲಿ. ಎಂಬ ಹಣಕಾಸಿನ ಸಂಸ್ಥೆಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಗುಂಪು ಸಾಲ ಕೊಡುವುದು ಮತ್ತು ಸಾಲವನ್ನು ಕಂತಿನ ಮೂಲಕ ವಸೂಲಾತಿ ಮಾಡುವ ಜವಾಬ್ದಾರಿಯು ಲೋನ್ ಆಫೀಸರ್ ಗೆ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.ಸಂಸ್ಥೆಯಲ್ಲಿ ಈ ಹಿಂದೆ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಆನಂದ ಮತ್ತು ಲೋನ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿರುವ ಸಂತೋಷ ಎಂಬುವವರಿಗೆ ಗ್ರಾಹಕರ ಸಾಲದ ಕಂತನ್ನು ವಸೂಲಿ ಮಾಡುವ ಜವಾಬ್ದಾರಿ ಇದ್ದು ಅದರಲ್ಲಿ ಒಟ್ಟು 41 ಗ್ರಾಹಕರಿಂದ ಸಾಲದ ಮರುಪಾವತಿಯ ಒಟ್ಟು ಹಣ 4,88,541/- ರೂಪಾಯಿಯನ್ನು ದಿನಾಂಕ 06/09/2022 ರಿಂದ ದಿನಾಂಕ 05/12/2024 ರ ಅವಧಿಯಲ್ಲಿ ಆಪಾದಿತ ಆನಂದನು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ ಹಾಗೂ ಲೋನ್ ಆಫೀಸರ್ ಆದ ಸಂತೋಷ್ ನು ದಿನಾಂಕ 04/08/2023 ರಿಂದ ದಿನಾಂಕ 10/08/2024 ರ ಅವಧಿಯಲ್ಲಿ ಎರಡು ಗ್ರಾಹಕರಿಂದ ಸಂಗ್ರಹಿಸಿದ 12,600/- ರೂಪಾಯಿಯನ್ನು ತನ್ನ ಸ್ವಂತಕ್ಕೆ ಬಳಸಿ ಕೊಂಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಪಾದಿತರು ಈರ್ವರು ಹಣವನ್ನು ಸಂಸ್ಥೆಗೆ ನೀಡದೇ ಉದ್ದೇಶಪೂರ್ವಕವಾಗಿ ವೈಯಕ್ತಿಕ ಲಾಭ ಹೊಂದುವ ದುರುದ್ದೇಶದಿಂದ ಸಂಸ್ಥೆಯ ಒಟ್ಟು 5,01,141/- ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ಸಂಸ್ಥೆಗೆ ವಂಚನೆ ಮಾಡುವ ಉದ್ದೇಶದಿಂದ ಸಂಸ್ಥೆಯ ಹಣವನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ದೂರಿದ್ದಾರೆ.
ಈ ವಿಚಾರವು ದಿನಾಂಕ 10/12/2024 ರಂದು ಅಡಿಟ್ ವರದಿಯಿಂದ ಸಂಸ್ಥೆಯ ಗಮನಕ್ಕೆ ಬಂದಿದ್ದು ಸಂಸ್ಥೆಯ ಮೇಲಾಧಿಕಾರಿಯವರಲ್ಲಿ ಚರ್ಚಿಸಿ ದೂರು ನೀಡಲು ವಿಳಂಬವಾಗಿರುವುದಾಗಿ ಮ್ಯಾನೇಜರ್ ಅಕ್ಷಯ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 316(2), 316(5), 318(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.