Spread the love

ಇಂಫಾಲ: ದಿನಾಂಕ: 09-03-2025 (ಹಾಯ್ ಉಡುಪಿ ನ್ಯೂಸ್) ಗಲಭೆ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ನಂತರ ಮತ್ತೆ ಘರ್ಷಣೆ ನಡೆದಿದೆ. ಶನಿವಾರ ಕಾಂಗ್‌ಪೊಕ್ಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕುಕಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಒಬ್ಬ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ . ಮಹಿಳೆಯರು ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು 30 ವರ್ಷದ ಲಾಲ್‌ಗೌತಾಂಗ್ ಸಿಂಗ್ಸಿಟ್ ಎಂದು ಗುರುತಿಸಲಾಗಿದೆ. ಕೀಥೆಲ್‌ಮಂಬಿಯಲ್ಲಿ ನಡೆದ ಘರ್ಷಣೆಯ ವೇಳೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಗಮ್ಗಿಫೈ, ಮೋಟ್‌ಬಂಗ್ ಮತ್ತು ಕೀಥೆಲ್‌ಮಂಬಿಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ 25 ಪ್ರತಿಭಟನಾಕಾರರು ವಿವಿಧ ರೀತಿಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಸಾರ್ವಜನಿಕ ಸಂಚಾರವನ್ನು ಮುಕ್ತಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನ ವಿರೋಧಿಸಿ ಕುಕಿ ಪ್ರಾಬಲ್ಯದ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ನಂತರ ಪ್ರತಿಭಟನೆ ತೀವ್ರಗೊಂಡಿದೆ.

ಪ್ರತಿಭಟನಾಕಾರರು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಇಂಫಾಲ್‌ನಿಂದ ಸೇನಾಪತಿ ಜಿಲ್ಲೆಗೆ ಪ್ರಯಾಣಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಹದಗೆಟ್ಟಿತು ಎಂದು ಪೊಲೀಸರು ತಿಳಿಸಿದರು.

error: No Copying!