
ಬೆಂಗಳೂರು: ದಿನಾಂಕ:04-03-2025(ಹಾಯ್ ಉಡುಪಿ ನ್ಯೂಸ್) ವಿರೋಧ ಪಕ್ಷದ ಶಾಸಕರು ಮಾತನಾಡುವಾಗಲೆಲ್ಲಾ ಕ್ಯಾಮೆರಾಗಳು ಸ್ಪೀಕರ್ ಮೇಲೆ ಕೇಂದ್ರೀಕರಿಸುತ್ತಿವೆ. ಆದರೆ ಆಡಳಿತ ಪಕ್ಷದ ಶಾಸಕರು ಅಥವಾ ಸಚಿವರು ಮಾತನಾಡುವಾಗ ಹೀಗೆ ಆಗುವುದಿಲ್ಲ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ವಿಧಾನ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಕಲಾಪ ವರದಿಯ ಸಮಯದಲ್ಲಿ, ವಿರೋಧ ಪಕ್ಷದ ಶಾಸಕರು ಮಾತನಾಡುವಾಗಲೆಲ್ಲಾ ಕ್ಯಾಮೆರಾಗಳು ಸ್ಪೀಕರ್ ಮೇಲೆ ಕೇಂದ್ರೀಕರಿಸುತ್ತಿವೆ. ಆದರೆ ಆಡಳಿತ ಪಕ್ಷದ ಶಾಸಕರು ಅಥವಾ ಸಚಿವರು ಮಾತನಾಡುವಾಗ ಹೀಗೆ ಆಗುವುದಿಲ್ಲ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಕ್ಷೇಪ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚರ್ಚೆಗೆ ಒತ್ತಾಯಿಸಿದಾಗ, ಅರವಿಂದ್ ಬೆಲ್ಲದ್ ಅವರು, ಅಶೋಕ್ ಅವರನ್ನು ಟಿವಿಯಲ್ಲಿ ತೋರಿಸುತ್ತಿಲ್ಲ ಎಂದು ಸ್ಪೀಕರ್‌ಗೆ ತಿಳಿಸಿದರು.
ವಿರೋಧ ಪಕ್ಷದ ಸದಸ್ಯರನ್ನು ತೋರಿಸದಂತೆ ಸೂಚನೆ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ ಬೆಲ್ಲದ್, “ಇಡೀ ಸದನವನ್ನು ತೋರಿಸಲಾಗಿದೆ, ಆಡಳಿತ ಪಕ್ಷ ಮತ್ತು ಮಂತ್ರಿಗಳನ್ನು ತೋರಿಸಲಾಗಿದೆ, ಅಧ್ಯಕ್ಷರು ಮತ್ತು ಸ್ಪೀಕರ್ ಅವರನ್ನು ಸಹ ತೋರಿಸಲಾಗಿದೆ. ಆದರೆ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರನ್ನು ತೋರಿಸುತ್ತಿಲ್ಲ ಎಂದರು.
ಈ ವೇಳೆ ಬೆಲ್ಲದ್ ಅವರಿಗೆ ಸಾಥ್ ನೀಡಿದ ಆರ್ ಅಶೋಕ್, ನಾವು ಮಾತನಾಡುವಾಗ ಟಿವಿಯಲ್ಲಿ ನಮ್ಮನ್ನು ತೋರಿಸೋದೆ ಇಲ್ಲ. ಪ್ರತಿಭಟನೆ ಮಾಡುವಾಗಲೂ ನಮ್ಮನ್ನು ತೋರಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು.ಟಿ ಖಾದರ್ ಅವರು, ಯಾರೂ ನಿಮ್ಮನ್ನು ತೋರಿಸಬಾರದು ಎಂದು ಸೂಚಿಸಿಲ್ಲ. ತಾಂತ್ರಿಕ ಸಮಸ್ಯೆ ಇರಬಹುದು. ಅದನ್ನು ಸರಿಪಡಿಸಲಾಗುವುದು ಎಂದರು. ಅಲ್ಲದೆ, ಕಾರ್ಯದರ್ಶಿಯನ್ಮು ಕರೆದು ಪರಿಶೀಲನೆ ನಡೆಸಲು ಸೂಚನೆ ನೀಡಿದರು.
ಎಚ್ ಕೆ ಪಾಟೀಲ್ ಮಾತನಾಡುವಾಗ ಟಿವಿಯಲ್ಲಿ ತೋರಿಸಲಾಗ್ತಿದೆ. ಆದರೆ ವಿರೋಧ ಪಕ್ಷದ ಸದಸ್ಯರು ಮಾತನಾಡುವಾಗ ತೋರಿಸುತ್ತಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಮೊದಲು ಬೋಲ್ಟ್ ನೆಟ್ಟು ಸರಿ ಮಾಡಿ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಟಾಂಗ್ ಕೊಟ್ಟರು.
ಕೆಲವು ಸದಸ್ಯರು ಘೋಷಣೆ ಕೂಗಿ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ಆರೋಪವನ್ನು ನಿರಾಕರಿಸಿದ ಕಾನೂನು ಸಚಿವ ಎಚ್ ಕೆ ಪಾಟೀಲ್ “ನಮ್ಮ ಅಧ್ಯಕ್ಷರು ಇಂತಹ ಸೂಚನೆ ಕೊಡಲು ಸಾಧ್ಯವಿಲ್ಲ. ಅದನ್ನು ಸರಿ ಮಾಡಿ ಎಂದು ಸೂಚನೆ ಕೊಡುತ್ತೇವೆ” ಎಂದರು.
ಇದು ತಾಂತ್ರಿಕ ಸಮಸ್ಯೆ ಅಲ್ಲ, ಬದಲಾಗಿ ಸೂಚನೆ ಕೊಟ್ಟ ಕಾರಣದಿಂದ ಹೀಗಾಗಿದೆ ಎಂದು ಆರ್ ಅಶೋಕ್ ಕಿಡಿಕಾರಿದರು.
ವಿಪಕ್ಷ ಸದಸ್ಯರನ್ನು ತೋರಿಸುವುದರ ಮೇಲೆ ಉದ್ದೇಶಪೂರ್ವಕವಾಗಿ ನಿಷೇಧವಿದೆಯೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
ಈ ಹಂತದಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ವಿರೋಧ ಪಕ್ಷದ ಭಾಷಣಕಾರರನ್ನು ತೋರಿಸದಿರುವ ಅಭ್ಯಾಸವನ್ನು ಮೊದಲು ಬಿಜೆಪಿ ಆಳ್ವಿಕೆಯಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ನಂತರ ಮಾಜಿ ಸ್ಪೀಕರ್ ಕಾಗೇರಿ ಅವರು ಬಿಜೆಪಿ ಅಧಿಕಾರಾವಧಿಯಲ್ಲಿ ವಿಧಾನಸಭೆಯಲ್ಲಿ ಅದನ್ನು ಜಾರಿಗೆ ತಂದರು ಎಂದು ಆರೋಪಿಸಿದರು.
ಇದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಅಂತಿಮವಾಗಿ ಸ್ವೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಕಲಾಪ ಪುನರಾರಂಭವಾದಾಗ, ಸ್ಪೀಕರ್ ಖಾದರ್ ಅವರು, ಈ ಸಮಸ್ಯೆಗೆ ತಾಂತ್ರಿಕ ಕಾರಣ ಎಂದು ಹೇಳಿದರು ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸದಸ್ಯರಿಗೆ ಭರವಸೆ ನೀಡಿದರು.