
ಉಡುಪಿ: ದಿನಾಂಕ 24-02-2025 (ಹಾಯ್ ಉಡುಪಿ ನ್ಯೂಸ್) ಹಣದ ವಿಚಾರದಲ್ಲಿ ಪರಿಚಯಸ್ದರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ ಎಂದು ಅರುಣ್ ಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ,ಕೀರ್ತಿ ನಗರ ನಿವಾಸಿ ಅರುಣ್ ಕುಮಾರ್ ಎಂಬವರು ಹಾಗೂ ಆಪಾದಿತ ರಿತಿಕ್ ಪರಿಚಯಸ್ಥರಾಗಿದ್ದಾರೆ ಎಂದು ಅರಣ್ ಕುಮಾರ್ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅರುಣ್ ಕುಮಾರ್ ರವರಿಗೆ ಮತ್ತು ರಿತಿಕ್‌ಗೆ ಹಣದ ವಿಚಾರದಲ್ಲಿ ಫೋನಿನಲ್ಲಿ ಗಲಾಟೆಯಾಗಿದ್ದು, ದಿನಾಂಕ 22/02/2025 ರಂದು ಸಂಜೆ 7:30 ಸಮಯಕ್ಕೆ ರಿತಿಕ್ ಫೋನ್ ಕರೆ ಮಾಡಿ ಸಿಗುವಂತೆ ಹೇಳಿದ್ದು, ಅರುಣ್ ಕುಮಾರ್ ರವರು ರಾತ್ರಿ 8:30 ಗಂಟೆಗೆ ಕಡಿಯಾಳಿಯಲ್ಲಿ ಆಪಾದಿತ ರಿತಿಕ್ ಮತ್ತು ಇನ್ನೋರ್ವ ಆರೋಪಿ ಪವನ ಎಂಬವರನ್ನು ಬೇಟಿಯಾಗಿದ್ದು, ನಂತರ ಆಪಾದಿತರು ಈರ್ವರು ಅರುಣ್ ಕುಮಾರ್ ರವರೊಂದಿಗೆ ಕಾರಿನಲ್ಲಿ ಬೀಡಿನಗುಡ್ಡೆ ಕಡೆಗೆ ಹೋಗುವ ಎಂದು ತಿಳಿಸಿದ್ದು ಅದರಂತೆ ಅರುಣ್ ಕುಮಾರ್ ರವರು ಆಪಾದಿತ ಈರ್ವರನ್ನು ಬೀಡಿನಗುಡ್ಡೆ ಮೈದಾನದಲ್ಲಿ ರಾತ್ರಿ 11:45 ಗಂಟೆಗೆ ಕಾರಿನಿಂದ ಇಳಿಸುತ್ತಿರುವಾಗ ರಿತಿಕ್ ನು ಏಕಾಏಕಿಯಾಗಿ ಕೈಯಿಂದ ಹೊಡೆದಿದ್ದು ಅಲ್ಲದೇ ಪವನನು ಅರುಣ್ ಕುಮಾರ್ ರವರನ್ನು ಓಡದಂತೆ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಬಲವಾಗಿ ದೂಡಿದಾಗ ಅರುಣ್ ಕುಮಾರ್ ಕೆಳಗೆ ಬಿದ್ದು, ತಲೆಗೆ ಗಾಯವಾಗಿ ರಕ್ತ ಬಂದಿದ್ದು ಇಬ್ಬರು ಆಪಾದಿತರುಗಳು ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಅರುಣ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 126, 115, 3(5) BNS ರಂತೆ ಪ್ರಕರಣ ದಾಖಲಾಗಿದೆ.