
ಕೋಟ: ದಿನಾಂಕ: 15-02-2025(ಹಾಯ್ ಉಡುಪಿ ನ್ಯೂಸ್) ಕೋಟತಟ್ಟು ಗ್ರಾಮದ ಪಡುಕೆರೆಯ ಅಂಗಡಿಯೊಂದರಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವಲ್ಲಿಗೆ ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ವಿ ವಸಂತ ಕುಮಾರ್ (48) ಅವರು ದಾಳಿ ನಡೆಸಿ ಅಕ್ಕಿ ಯನ್ನು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ವಿ ವಸಂತ ಕುಮಾರ್ (48) ಅವರಿಗೆ ದಿನಾಂಕ 14/02/2025 ರ ಅಪರಾಹ್ನ ಬಂದ ಸಾರ್ವಜನಿಕ ದೂರಿನ ಮೇರೆಗೆ ಕೋಟ ಹೋಬಳಿಯ ಕೋಟತಟ್ಟು ಗ್ರಾಮದ ಪಡುಕೆರೆಯ ಶ್ರೀ ಸಾಯಿರಾಮ್ ಜನರಲ್ ಸ್ಟೋರ್ ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಂಜೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಅಂಗಡಿಯಲ್ಲಿ ಸಂಗ್ರಹಿಸಿ ಇಟ್ಟಿರುವ ಅನ್ನಭಾಗ್ಯ ಯೋಜನೆಯಡಿ ಆದ್ಯಾತಾ ಪಡಿತರ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಸಿಗುವ ಪಡಿತರ ಅಕ್ಕಿಯ ಮಾದರಿಯನ್ನು ಕೋಟಾ CA ಬ್ಯಾಂಕಿನ ಸೊಸೈಟಿಯಿಂದ ದೊರೆಯುವ ಅಕ್ಕಿಯನ್ನು ಪರಿಶೀಲಿಸಿದಾಗ ಇದು ಅಕ್ರಮವಾಗಿ ದಾಸ್ತಾನು ಇರಿಸಿದ ಅಕ್ಕಿಯೆಂದು ದೃಢಪಟ್ಟಿರುವುದರಿಂದ ಒಟ್ಟು 31 ಚಿಲದಲ್ಲಿ ಸಂಗ್ರಹಿಸಿ ಇಡಲಾದ 1,503.55 Kg ಅಕ್ಕಿಯನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 3,5,6(A), 7 EC Act 1955 and ಕಲಂ: 3(2), 18(1) Karnataka EC Act public Control Order ರಂತೆ ಪ್ರಕರಣ ದಾಖಲಾಗಿದೆ.