Spread the love

ಮಂಗಳೂರು: ದಿನಾಂಕ:01-02-2025 (ಹಾಯ್ ಉಡುಪಿ ನ್ಯೂಸ್) ಉಳ್ಳಾಲ ಕೋಟೆಕಾರ್ ನ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿ ಮೇಲೆ ಮಂಗಳೂರು ಪೊಲೀಸರು ಶನಿವಾರ ಗುಂಡಿನ ದಾಳಿ ನಡೆಸಿದ್ದಾರೆ. ಈ ಹಿಂದೆ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗೆ ಪೊಲೀಸರ ಗುಂಡೇಟಿನಿಂದಾಗಿ ಆತನ ಪರಾರಿ ಯತ್ನ ವಿಫಲವಾಗಿತ್ತು.

ಇಂದು ಮಂಗಳೂರು ನಗರದ ಹೊರವಲಯದ ಉಳ್ಳಾಲ ಬಳಿಯ ಅಜ್ಜಿನಡ್ಕದಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಇನ್ನೋರ್ವ  ಆರೋಪಿ ಮುರುಗನ್ ತೇವರ್ ಮೇಲೆ ಮಂಗಳೂರು ನಗರ ಪೊಲೀಸರು ಗುಂಡು ಹಾರಿಸಿದ್ದಾರೆ.

ಬ್ಯಾಂಕ್ ದರೋಡೆ ಕ್ರತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ಆರೋಪಿ ಬಚ್ಚಿಟ್ಟಿದ್ದ. ಅದನ್ನು ರಿಕವರಿ ಮಾಡಲು ಆತನನ್ನು ಪೊಲೀಸರು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ .ಆರೋಪಿ ಮುರುಗನ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳಾದ ಮುರುಗನ್ ತೇವರ್ ಮತ್ತು ಯೋಸುವ ರಾಜೇಂದ್ರನ್ ನನ್ನು ಹೆಚ್ಚಿನ ತನಿಖೆಗಾಗಿ ಫೆಬ್ರವರಿ 3 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಘಟನೆಯ ನಂತರ, ಗಾಯಗೊಂಡ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಆರೋಪಿ ಮುರುಗನ್ ತೇವರ್ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: No Copying!