
ಬ್ರಹ್ಮಾವರ: ದಿನಾಂಕ:30-01-2025(ಹಾಯ್ ಉಡುಪಿ ನ್ಯೂಸ್) ಗರಿಕೆ ಮಠದಲ್ಲಿರುವ ಅಕ್ರಮ ಕಲ್ಲು ಕೋರೆ ಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಸ್ಫೋಟ ಗೊಂಡು ಓರ್ವ ಗಂಭೀರ ಗಾಯಗೊಂಡ ಘಟನೆಗೆ ಕಾರಣರಾದ ಕಲ್ಲು ಕೋರೆಯ ಇಬ್ಬರನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಬಾಗಿ ಅವರು ಬಂಧಿಸಿದ್ದಾರೆ.
ದಿನಾಂಕ 29-01-2025 ರಂದು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ಸೆಂಥಿಲ್ ಎಂಬುವವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬ್ರಹ್ಮಾವರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ನೋಡಿದಾಗ ಹೇಳಿಕೆ ನೀಡಲಾಗದ ಸ್ಥಿತಿಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದು , ಆತನ ಜೊತೆಯಲ್ಲಿದ್ದ ರಾಜು ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ದಿನಾಂಕ 29-01-2025 ರಂದು ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಗರಿಕೆ ಮಠ ದಲ್ಲಿರುವ ಮಹಮ್ಮದ್ ಬಶೀರ್ ಎಂಬುವವನ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿರುವಾಗ ಸಂಜೆ ವೇಳೆ ಕೋರೆಯಲ್ಲಿ ಕಲ್ಲು ಒಡೆಯಲು ಸ್ಪೋಟಕ್ಕೆ ಬಳಸುವ ಮದ್ದುಗಳನ್ನು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಕೋರೆಯಲ್ಲಿ ಬಳಸುತ್ತಿದ್ದುದರಿಂದ ಅದು ಒಮ್ಮೆಲೇ ಸ್ಪೋಟಗೊಂಡು ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಸೆಂಥಿಲ್ ನ ಮುಖ, ಕೈ ಕಾಲಿಗೆ ಸ್ಪೋಟಕ ತಾಗಿ ಗಾಯಗೊಂಡಿರುವುದಾಗಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಮಾಳಾಬಗಿ ಅವರಿಗೆ ಮಾಹಿತಿ ದಾರರಿಂದ ಹಾಗೂ ಸಿಬ್ಬಂದಿಯವರಿಂದ ಬಂದ ಮಾಹಿತಿಯಂತೆ ಶರತ್ ಹಾಗೂ ಮಹಮ್ಮದ್ ಬಶೀರ್ ಎಂಬುವವರು ಯಡ್ತಾಡಿ ಗ್ರಾಮದ ಸರ್ವೇ ನಂ 145/P̆1 ರಲ್ಲಿ 1.00 ಎಕರೆ ವಿಸ್ತೀರ್ಣದಲ್ಲಿ ಕಟ್ಟಡಕಲ್ಲು ಉಪಖನಿಜ ಗಣಿಗಾರಿಕೆ ಮಾಡಿಕೊಂಡಿದ್ದು , ಕಲ್ಲುಕೋರೆಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸ್ಫೋಟಕಗಳನ್ನು ಎಲ್ಲಿಂದಲೋ ಅಕ್ರಮವಾಗಿ ತಂದು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸ್ಫೋಟ ಮಾಡಿರುವುದರಿಂದ, ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸೆಂಥಿಲ್ ಎಂಬುವವನು ಗಾಯಗೊಂಡಿರುತ್ತಾನೆ ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 288 BNS, 3,5,6 Explosive Substances Act 1908 And U/S 9 B Explosive Act 1884, U/S 4 (I-A) , 21 (4) MMRD Act ರಂತೆ ಪ್ರಕರಣ ದಾಖಲಾಗಿದೆ.