
ಕಾಪು: ದಿನಾಂಕ:22-01-2025 (ಹಾಯ್ ಉಡುಪಿ ನ್ಯೂಸ್) ಮೂಳೂರು ಗ್ರಾಮದ ಸಮುದ್ರ ಬದಿಯಲ್ಲಿ ಮರಳನ್ನು ಕಳ್ಳತನ ನಡೆಸುತ್ತಿದ್ದ 4 ಜನರನ್ನು ಕಾಪು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಹೆಚ್.ಸಿ ಅರುಣ್ ಯು ಅವರಿಗೆ ದಿನಾಂಕ: 22-01-2025 ರಂದು ಬೆಳಿಗ್ಗೆ 6:50 ಗಂಟೆಯ ಸುಮಾರಿಗೆ ಕಾಪು ತಾಲೂಕು, ಮೂಳೂರು ಗ್ರಾಮದ, ಎಸ್.ಎಸ್ ರಸ್ತೆಯ ಬಳಿ ಸಮುದ್ರದ ಬದಿಯಲ್ಲಿ, ಯಾವುದೇ ಪರವಾನಗಿ ಇಲ್ಲದೇ ಸಮುದ್ರಕ್ಕೆ ಸಂಬಂಧಪಟ್ಟ ಮರಳನ್ನು ಯಾರೋ ಕೆಲವು ವ್ಯಕ್ತಿಗಳು ಸೇರಿಕೊಂಡು ಕಳವು ಮಾಡಿ ಹಿಟಾಚಿ ಮೂಲಕ ಒಂದು ಲಾರಿಗೆ ಲೋಡ್ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಬೆಳಿಗ್ಗೆ 7:30 ಗಂಟೆಯ ಸುಮಾರಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋದಾಗ ಮಾಹಿತಿ ಬಂದ ಸ್ಥಳದಲ್ಲಿ ಒಂದು ಹಿಟಾಚಿ ಹಾಗೂ ಒಂದು ಲಾರಿ ನಿಂತುಕೊಂಡಿದ್ದು, ಆಗಲೇ ಹಿಟಾಚಿ ಮುಖಾಂತರ ಅಲ್ಲಿದ್ದ ಲಾರಿಗೆ ಮರಳನ್ನು ತುಂಬಿಸಿ ಲಾರಿಯ ಮೇಲ್ಭಾಗವನ್ನು ಮರಳು ಕಾಣದಂತೆ ಮರೆಮಾಚಲು 5 ಜನ ಸೇರಿಕೊಂಡು ಮರಳನ್ನು ತರ್ಪಾಲ್ ನಿಂದ ಮುಚ್ಚುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರಳಿನ ಬಗ್ಗೆ ಅವರಲ್ಲಿ ವಿಚಾರಿಸಲು ಪೊಲೀಸರು ಲಾರಿಯ ಹತ್ತಿರಕ್ಕೆ ಹೋಗುತ್ತಿರುವ ಸಮಯಕ್ಕೆ ತರ್ಪಾಲ್ ಕಟ್ಟುತ್ತಿದ್ದ ಓರ್ವ ವ್ಯಕ್ತಿ ಅಲ್ಲಿಂದ ಓಡಿ ಹೋಗಿರುತ್ತಾನೆ. ಉಳಿದ 4 ಜನರಲ್ಲಿ ಈ ಸ್ಥಳದಲ್ಲಿ ಮರಳನ್ನು ತೆಗೆದು, ಲಾರಿಯಲ್ಲಿ ಸಾಗಾಟ ಮಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು ಪೊಲೀಸರು ಕೇಳಿದಾಗ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ ಎನ್ನಲಾಗಿದೆ . ಹಿಟಾಚಿ ಮಾಲಕರು ಹಾಗೂ ಲಾರಿಯ ಮಾಲಕರಾದ ದೇವರಾಜ್ ಎಂಬವರು ತಿಳಿಸಿದಂತೆ ಈ ಸ್ಥಳದಲ್ಲಿ ಮರಳನ್ನು ಲೋಡ್ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ ಎಂದು ದೂರಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸಿದಾಗ ಅವರ ಹೆಸರುಗಳು ಸುದೀಪ, ಅಕ್ಷಯ್, ಗುರುರಾಜ್ ಹಾಗೂ ಬಾಲಕೃಷ್ಣ ಜೆ ಆಗಿದ್ದು, ಸ್ಥಳದಿಂದ ಓಡಿ ಹೋದವನ ಹೆಸರು ಸಚಿನ್ ಎಂದು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಲಾರಿಯ ನಂಬ್ರ KA 42 A 2174 ನೇ ನೊಂದಣಿಯ ಅಶೋಕ ಲೈಲ್ಯಾಂಡ್ 6 ವೀಲ್ ಲಾರಿಯಾಗಿದ್ದು, ಅದರಲ್ಲಿ ಸುಮಾರು 12 ಟನ್ ನಷ್ಟು ಮರಳು ಇರುವುದು ಕಂಡು ಬಂದಿರುತ್ತದೆ. ಹಿಟಾಚಿಯು SY80c-9 ಕಂಪನಿಯ/ಸಿರಿಯಲ್ ನದ್ದಾಗಿರುತ್ತದೆ. ಈ ಮೇಲ್ಕಾಣಿಸಿದ ಆರೋಪಿಗಳು ತಮ್ಮ ಸ್ವಂತ ಲಾಭದ ಉದ್ದೇಶಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಾ ವ್ಯವಸ್ಥಿತ ಅಪರಾಧ ಎಸಗಿರುವುದು ಕಂಡು ಬಂದಿದ್ದರಿಂದ, ಮರಳು ತುಂಬಿಸಿದ್ದ KA 42 A 2174 ನೇ ನೊಂದಣಿಯ ಅಶೋಕ ಲೈಲ್ಯಾಂಡ್ 6 ವೀಲ್ ಲಾರಿಯನ್ನು, ಅದರಲ್ಲಿದ್ದ ಸುಮಾರು 30,000 ರೂಪಾಯಿ ಬೆಲೆಬಾಳುವ 12 ಟನ್ ಮರಳನ್ನು, ಮರಳನ್ನು ಲಾರಿಗೆ ತುಂಬಿಸಿದ ಹಿಟಾಚಿಯನ್ನು ಹಾಗೂ 4 ಜನ ಆಪಾದಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2025 ಕಲಂ: 112, 303(2) BNS & ಕಲಂ 4, 4(1A), 21 MMRD ಕಾಯ್ದೆರಂತೆ ಪ್ರಕರಣ ದಾಖಲಾಗಿದೆ.