
ಬೆಂಗಳೂರು: ದಿನಾಂಕ:18-01-2025(ಹಾಯ್ ಉಡುಪಿ ನ್ಯೂಸ್) ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆ ಮತ್ತಷ್ಟು ಬಿಗಿಯಾಗುತ್ತಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣದ ಸಂಬಂಧ ಒಟ್ಟು 300 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ED ಟ್ವೀಟ್ ಮೂಲಕ ತಿಳಿಸಿದೆ. ಇಡಿ ಮಾಹಿತಿಯ ಪ್ರಕಾರ, ತನಿಖಾ ಸಂಸ್ಥೆ ವಶಕ್ಕೆ ಪಡೆದಿರುವ 142 ಸ್ಥಿರಾಸ್ತಿಯ ಒಟ್ಟು ಮೌಲ್ಯ 300 ಕೋಟಿ ರೂಪಾಯಿಗಳಾಗಿವೆ. ಈ ಬಗ್ಗೆ ಟ್ವೀಟ್ ನಲ್ಲಿ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಜಾರಿ ನಿರ್ದೇಶನಾಲಯ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ರೂ. 300 ಕೋಟಿ (ಅಂದಾಜು) ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಇಡಿ ಹೇಳಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಇಡಿ ಯೂ ತನಿಖೆ ಆರಂಭಿಸಿದೆ. ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿರುವ 14 ನಿವೇಶನಗಳ ಪರಿಹಾರವನ್ನು ಪಡೆಯಲು ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.