Spread the love

ಬ್ರಹ್ಮಾವರ: ದಿನಾಂಕ: 17-01-2025 (ಹಾಯ್ ಉಡುಪಿ ನ್ಯೂಸ್) ಉಪ್ಪೂರು ಗ್ರಾಮದ ರೈಸ್ ಮಿಲ್ ಒಂದರಲ್ಲಿ ಅಕ್ರಮವಾಗಿ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ದಾಸ್ತಾನು ಇರಿಸಿದ್ದು ,ಈ ಬಗ್ಗೆ ಮಾಹಿತಿ ಬಂದಂತೆ ಉಡುಪಿ ತಾಲೂಕು ಆಹಾರ ನಿರೀಕ್ಷಕರು ದಾಳಿ ನಡೆಸಿ ಅಕ್ರಮ ನಡೆಸಿರುವ ರೈಸ್ ಮಿಲ್ ನ ಮಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ತಾಲೂಕು ಆಹಾರ ನಿರೀಕ್ಷಕರಾದ ಪ್ರವೇಶ್ ಕುಮಾರ್ ಅವರು ಉಡುಪಿ ತಾಲೂಕಿನ ಆಹಾರ ನಿರೀಕ್ಷಕರಾಗಿದ್ದು, ದಿನಾಂಕ 16/01/2025 ರಂದು ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಡುಪಿ ರವರ ಸೂಚನೆ ಮೇರೆಗೆ, ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಶ್ರೀ ಗಣೇಶ್ ರೈಸ್ ಮಿಲ್ಲಿನಲ್ಲಿ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಿನಾಂಕ 16/01/2025 ರಂದು  ಆಹಾರ ಶಿರಸ್ತೆದಾರರೊಂದಿಗೆ ಶ್ರೀ ಗಣೇಶ್ ರೈಸ್ ಮಿಲ್ಲಿಗೆ ತೆರಳಿ ನೋಡಿದಾಗ ಅಲ್ಲಿ ಸರ್ಕಾರದಿಂದ ಉಚಿತವಾಗಿ ವಿತರಣೆ ಮಾಡುವ ಪಡಿತರ ಅಕ್ಕಿಯ ಮಾದರಿಯನ್ನು ಹೋಲುವ 62 ಚೀಲ ಗಳಲ್ಲಿ 18.18 ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.

ಇಷ್ಟೂ ಪಡಿತರ ಅಕ್ಕಿಯನ್ನು ಆಪಾದಿತ ಮಿಲ್ಲಿನವನು ಯಾರಿಂದಲೋ ಖರೀದಿಸಿ ಮಾರಾಟ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿದ್ದಾನೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 3,5,6 (A) 7 ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಕಲಂ:3 (2) 18 (1) ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕಾ ವಿತರಣಾ ಪದ್ದತಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!