ಕಾಪು: ದಿನಾಂಕ 14-01-2025 (ಹಾಯ್ ಉಡುಪಿ ನ್ಯೂಸ್) ಹಳೆಯ ಬಸ್ಸ್ ಒಂದರ ಮಾರಾಟದ ವಿಷಯವಾಗಿ ಮುಂಗಡ ಹಣ ಪಡೆದು ಆ ನಂತರ ಬಸ್ಸನ್ನು ನೀಡದೆ ಹಣವನ್ನೂ ವಾಪಸ್ ನೀಡದೆ ಬಸ್ಸಿನ ಮಾಲಕರು ವಂಚನೆ ನಡೆಸಿದ್ದಾರೆ ಎಂದು ತುಮಕೂರು ಮೂಲದ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ತುಮಕೂರು ,ಕೊರಟಗೆರೆ ತಾಲೂಕು ನಿವಾಸಿ ಸೈಯದ್ ಗೌಸ್ ಹೆಚ್ ಎಸ್ (59) ಎಂಬವರು ತನ್ನ ಊರಿನಲ್ಲಿ ಬಸ್ ಹಾಕಬೇಕೆಂದು ತೀರ್ಮಾನಿಸಿ ತನ್ನ ಕೆಲವು ಪರಿಚಿತರ ಬಳಿ ಸೆಕೆಂಡ್ ಹ್ಯಾಂಡ್ ಬಸ್ಸು ಇದ್ದರೆ ತಿಳಿಸುವಂತೆ ಹೇಳಿ ಕೊಂಡಿದ್ದರು ಎಂದೂ ಆ ಸಮಯದಲ್ಲಿ ಅವರ ಪರಿಚಿತರಾದ ಹನುಮಂತರಾಯಪ್ಪ ಎಂಬವರು ಹಳೆಯ ಬಸ್ಸು ಮಾರಾಟಕ್ಕೆ ಇರುವ ಬಗ್ಗೆ ಓಎಲ್‌ಎಕ್ಸ್ ನಲ್ಲಿ ನೋಡಿ ಮೊಬೈಲ್ ನಂಬ್ರ ತೆಗೆದಿಟ್ಟಿರುವುದಾಗಿ ಹೇಳಿದನು. ತಾನು ಆ ನಂಬ್ರಕ್ಕೆ ಕರೆ ಮಾಡಿ ಮಾತನಾಡಿದಾಗ ಉಡುಪಿ ಜಿಲ್ಲೆ ಕಾಪುವಿನ ಸಮೀರ್ ಎಂದು ಪರಿಚಯ ಮಾಡಿಕೊಂಡು ಮಾರಾಟಕ್ಕೆ ಹಳೆ ಬಸ್ಸು ಇದೆ, ಬಂದು ನೋಡಿ ಎಂದು ಹೇಳಿರುತ್ತಾನೆ ಎಂದು ಕಾಪು ಪೊಲೀಸರಿಗೆ ನೀಡಿದ ದೂರಿನಲ್ಲಿ ಸೈಯದ್ ಗೌಸ್ ಹೆಚ್ ಎಸ್ ತಿಳಿಸಿದ್ದಾರೆ.
ಅದಾಗಿ ಒಂದೆರಡು ದಿನಕ್ಕೆ ಸೈಯದ್ ಗೌಸ್ ಹೆಚ್ ಎಸ್ ಅವರು ತನ್ನ ಮಗ ಸೈಯದ್ ಸಿದ್ದಿಕ್ ಬಾಷಾ ಮತ್ತು ಮಗನ ಸ್ನೇಹಿತ ಜಾವೇದ್ ಎಂಬವರ ಜೊತೆ ಕಾಪುವಿನ ಮಲ್ಲಾರು ಎಂಬಲ್ಲಿರುವ ಸಮೀರ್ ರವರ ಮನೆಗೆ ಬಂದಿದ್ದು, ಮನೆಯಲ್ಲಿ ಸಮೀರ್, ಅವನ ತಂದೆ ಅಬ್ದುಲ್ ಖಾದರ್ ಮತ್ತಿತರರು ಇದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವರ ಮನೆಯ ಕಂಪೌಂಡ್ ನಲ್ಲಿ KA 20 AA 3039 ನಂಬ್ರದ ಬಸ್ಸು ಇದ್ದು, ಅದು 2017 ನೇ ಮಾಡೆಲ್ ನ ಬಸ್ಸು ಎಂದು ಹೇಳಿರುತ್ತಾರೆ. ಆ ಬಸ್ಸನ್ನು ಅವರು ನೋಡಿದ್ದು, ಬಸ್ಸು ಅವರಿಗೆ ಒಪ್ಪಿಗೆಯಾಗಿ ಆ ಬಗ್ಗೆ ಸಮೀರ್, ಅವನ ತಂದೆ ಅಬ್ದುಲ್ ಖಾದರ್ ರವರು ಸೈಯದ್ ಗೌಸ್ ಹೆಚ್ ಎಸ್ ಅವರ ಜೊತೆ ಮಾತುಕತೆ ನಡೆಸಿ ಕೊನೆಗೆ 9,50,000 ರೂಪಾಯಿಗೆ ಬಸ್ಸನ್ನು ಮಾರಾಟಕ್ಕೆ ಮಾತುಕತೆ ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೈಯದ್ ಗೌಸ್ ಹೆಚ್ ಎಸ್ ಅವರು ಬಸ್ಸಿನ ದಾಖಲಾತಿ ಕೇಳಿದ್ದು, ಅದಕ್ಕೆ ಅಬ್ದುಲ್ ಖಾದರ್ ಅವರು ನಂತರ ತೋರಿಸುತ್ತೇವೆ ಎಂದು ಹೇಳಿ ನಂಬಿಸಿ ರುತ್ತಾರೆ ಎಂದು ದೂರಿದ್ದಾರೆ.ಸೈಯದ್ ಗೌಸ್ ಹೆಚ್ ಎಸ್ ಬಸ್ಸಿಗೆ 2,00,000 ರೂಪಾಯಿ ಮುಂಗಡ ಹಣ ಕೊಟ್ಟಿದ್ದು, ಉಳಿದ ಹಣ 15 ದಿನಗಳ ಒಳಗಾಗಿ ಕೊಡಬೇಕು ಎಂದು ಹೇಳಿ ಸೈಯದ್ ಗೌಸ್ ಅವರಿಂದ ಒಂದು ಖಾಲಿ ಚೆಕ್ ಪಡೆದುಕೊಂಡು ಬಸ್ಸನ್ನು ಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೈಯದ್ ಗೌಸ್ ಹೆಚ್ ಎಸ್ ಅವರು ಬಸ್ಸನ್ನು ತುಮಕೂರಿಗೆ ತೆಗೆದುಕೊಂಡು ಹೋಗಿದ್ದು ತದ ನಂತರ ಸೈಯದ್ ಗೌಸ್ ಅವರು ರೂ. 2,80,000 ಹಣವನ್ನು ಪೋನ್ ಪೇ ಮೂಲಕ ಹಾಗೂ ನಗದು ರೂಪದಲ್ಲಿ ರೂ. 6,20,000 ಹಣವನ್ನು ಒಟ್ಟು 9,00,000 ರೂಪಾಯಿಯನ್ನು ಬಸ್ಸಿನ ಆರ್,ಸಿ, ಟ್ರಾನ್ಸ್ ಫರ್ ಮಾಡಲು ಹಾಗೂ ಹಣಕಾಸಿನ ಸಮಸ್ಯೆ ಇದೆ ಎಂದು ಹೇಳಿ ಆರೋಪಿಗಳು ಪಡದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿತರಾದ ಸಮೀರ್ ಮತ್ತು ಅವನ ತಂದೆ ಅಬ್ದುಲ್ ಖಾದರ್ ಅವರು ಮೋಸ ಮಾಡುವ ಉದ್ದೇಶದಿಂದಲೇ ಬಸ್ಸನ್ನು ತನಗೆ ಮಾರಾಟ ಮಾಡುತ್ತೇನೆಂದು ತನ್ನನ್ನು ನಂಬಿಸಿ ಹಣ ಪಡೆದು ಬಸ್ಸನ್ನು ತನಗೆ ಕೊಟ್ಟು ನಂತರ ಆ ಬಸ್ಸನ್ನು ನಾನು ನಿಲ್ಲಿಸಿದ್ದ ಸ್ಥಳದಿಂದ ಕಳವು ಮಾಡಿಸಿ ವಾಪಾಸ್ಸು ತರಿಸಿಕೊಂಡು ಈಗ ಬಸ್ಸನ್ನು ತನಗೆ ಕೊಡದೆ ಮಾರಾಟ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂದು ಸೈಯದ್ ಗೌಸ್ ಹೆಚ್ ಎಸ್ ಅವರು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ : 316(2), 318(2), 318(4), 323, 112 R/w 3(5) BNS ರಂತೆ ಪ್ರಕರಣ ದಾಖಲಾಗಿದೆ.