ಧರ್ಮಸ್ಥಳಕ್ಕೆ ಹೋಗಿ ಬಂದರೆ ವಯಸ್ಸಾಗುತ್ತಿರುವ ಮಗಳಿಗೆ ಮದುವೆಯಾಗುತ್ತದೆ,….
ತಿರುಪತಿಗೆ ಹೋಗಿ ಬಂದರೆ ನಿರುದ್ಯೋಗಿ ಮಗನಿಗೆ ಕೆಲಸ ಸಿಗುತ್ತದೆ,…….
ಶಬರಿಮಲೆಗೆ ಹೋಗಿ ಬಂದರೆ ಅಪ್ಪ ಅಮ್ಮನ ಆರೋಗ್ಯ ಸುಧಾರಿಸುತ್ತದೆ,…..
ಸುಬ್ರಮಣ್ಯಕ್ಕೆ ಹೋಗಿ ಬಂದರೆ ನಷ್ಟದ ವ್ಯವಹಾರ ಲಾಭಗಳಿಸುತ್ತದೆ,…..
ಶಿರಡಿಗೆ ಹೋಗಿ ಬಂದರೆ ಮಗಳು ಫಸ್ಟ್‌ಕ್ಲಾಸ್ ನಲ್ಲಿ ಪಾಸಾಗುತ್ತಾಳೆ,…..
ಮಂತ್ರಾಲಯಕ್ಕೆ ಹೋಗಿ ಬಂದರೆ ವೃತ್ತಿಯಲ್ಲಿ ಬಡ್ತಿ ಸಿಗುವುದು ಖಚಿತ……..
ತಿರುನಲ್ಲಾರ್ ಶನಿದೇವರ ದರ್ಶನ ಮಾಡಿದರೆ ಓಡಿ ಹೋಗಿರುವ ಗಂಡ ಮರಳಿ ಮನೆಗೆ ಬರುತ್ತಾನೆ,….
ವ್ಯೆಷ್ಣವೀ ದೇವಿಯ ದರ್ಶನ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ,…..
ಕಾಶಿಗೆ ಹೋಗಿ ಬಂದರೆ ಎಲ್ಲಾ ಪುಣ್ಯ ಫಲಗಳೂ ಸಿಗುತ್ತವೆ,….
ಸೋಮವಾರ ಉಪವಾಸ ಮಾಡಿ ಅರಳಿಮರ ಸುತ್ತಿದರೆ ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ,…..
ಮೆಕ್ಕಾ ಯಾತ್ರೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ,…..
ವ್ಯಾಟಿಕನ್ ಸಿಟಿ ನೋಡಿ ಬಂದರೆ ಜೀವನ
ಪಾವನವಾಗುತ್ತದೆ,……..
ಅಮೃತಸರದ ಸ್ವರ್ಣ ದೇಗುಲಕ್ಕೆ ಭೇಟಿ ನೀಡಿದರೆ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಸಿಗುತ್ತದೆ…..
ಹೌದೇ, ಇದು ನಿಜವೇ ?….
ಹಾಗೇನಾದರೂ ಆಗುವುದಾದರೆ ನಮಗೂ ಸಂತೋಷವೇ,
ವಿಧಾನಸೌಧವನ್ನು, ಸಂಸತ್ತನ್ನು ಕಿತ್ತೊಗೆದು ಮೇಲಿನ ಸ್ಥಳಗಳನ್ನೇ ಆಡಳಿತ ಕೇಂದ್ರಗಳಾಗಿ ಘೋಷಿಸಬಹುದಿತ್ತು,…..
ಈ ಮಂತ್ರಿಮಂಡಲವನ್ನು ವಿಸರ್ಜಿಸಿ ಆ ದೇವರುಗಳನ್ನೇ ಆಡಳಿತ ನಡೆಸಲು ನೇಮಿಸಬಹುದಿತ್ತು,…..
ಆಸ್ಪತ್ರೆಗಳನ್ನು ಹೊಡೆದುಹಾಕಿ ದೇವಮಂದಿರಗಳನ್ನೇ ಕಟ್ಟಬಹುದಿತ್ತು……..
ಆದರೆ ವಾಸ್ತವ…..
ದೇವರನ್ನು ಕಾಣುವ ಪ್ರಯತ್ನ……
ನಮ್ಮ ನಂಬಿಕೆ ಭಾವನೆಗಳು ಎಷ್ಟು ಸತ್ಯ – ಎಷ್ಟು ಮಿಥ್ಯ……..
ಸಾಮಾನ್ಯ ಜನರ ಸಾಮಾನ್ಯ ಅಭಿಪ್ರಾಯದ ದೇವರು ಇರುವುದು ಎಲ್ಲಿ…….
ವೆಂಕಟೇಶ್ವರನನ್ನು ಕಾಣಲು ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಹೋಗಿದ್ದೆ. ಆ ಜನರಾಶಿಯಲ್ಲಿ ವಿಗ್ರಹಕ್ಕೆ ಕೈಮುಗಿದು ವಾಪಸ್ಸು ಬಂದೆ. ದೇವರು ಕಾಣಲಿಲ್ಲ…..
ಅಯ್ಯಪ್ಪನನ್ನು ನೋಡಲು ಕಪ್ಪುಬಟ್ಟೆ ತೊಟ್ಟು ನೀತಿ ನಿಯಮದಂತೆ ಶಬರಿಮಲೆಗೆ ಹೋಗಿದ್ದೆ. ಅಲ್ಲಿಯೂ ದೇವರು ಸಿಗಲಿಲ್ಲ…….
ಮಂಜುನಾಥನನ್ನು ಮಾತನಾಡಿಸಲು ಧರ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿಯೂ ಆತನ ಮೂರ್ತಿಗೆ ಕೈಮುಗಿದೆ. ಅಲ್ಲಿ ಆತನೂ ಗೋಚರಿಸಲಿಲ್ಲ…..
ಅನಂತ ಪದ್ಮನಾಭನನ್ನು ಭೇಟೆಯಾಗಲು ತಿರುವನಂತಪುರಕ್ಕೆ ಹೋಗಿದ್ದೆ. ಬಿಳಿಬಟ್ಟೆ ತೊಟ್ಟು ಸಂದರ್ಶಿಸಿದೆ. ವಿಗ್ರಹ ಬಿಟ್ಟರೆ ಮತ್ಯಾರು ಪ್ರತ್ಯಕ್ಷವಾಗಲಿಲ್ಲ…..
ವೈಷ್ಣವೋದೇವಿಯನ್ನು ನೋಡಲು ಜಮ್ಮುವಿಗೂ ಹೋಗಿದ್ದೆ. ಅಲ್ಲಿಯೂ ಶಿಲೆ ಬಿಟ್ಟರೆ ಬೇರೇನೂ ಇರಲಿಲ್ಲ…..
ಕಾಶಿ ವಿಶ್ವನಾಥನನ್ನು ಮಾತನಾಡಿಸಲು ವಾರಣಾಸಿಗೂ ಭೇಟಿಕೊಟ್ಟೆ. ಅಲ್ಲಿಯೂ ನಿರಾಸೆಯೇ ಆಯಿತು……
ಮಧುರೆ ಮೀನಾಕ್ಷಿ – ಕಂಚಿ ಕಾಮಾಕ್ಷಿ – ಕಟೀಲು ದುರ್ಗಾಪರಮೇಶ್ವರಿ – ಕುಕ್ಕೆ ಸುಬ್ರಹ್ಮಣ್ಯ – ಮೈಸೂರು ಚಾಮುಂಡೇಶ್ವರಿ – ಎಲ್ಲಾ ಕಡೆ ಇರುವ ಜ್ಯೋತಿರ್ಲಿಂಗಗಳು – ಕೈಲಾಸ ಪರ್ವತ – ಮಾನಸ ಸರೋವರ – ಶಿರಡಿ ಸಾಯಿಬಾಬ – ಮಂತ್ರಾಲಯ ರಾಘವೇಂದ್ರ ಸೇರಿ ಅಸಂಖ್ಯಾತ ಪ್ರಸಿದ್ಧ ದೇವರು ದೇವಸ್ಥಾನಗಳಲ್ಲಿಯೂ ಹುಡುಕಾಡಿದೆ. ಎಲ್ಲಿಯೂ ಕಾಣಲಿಲ್ಲ……
ಮೆಕ್ಕಾ – ವ್ಯಾಟಿಕನ್ ಮುಂತಾದ ಸ್ಥಳಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ,……
ಗೌತಮ ಬುದ್ಧ, ಮಹಾವೀರ, ಗುರುನಾನಕ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಚೈತನ್ಯ, ರಾಮದಾಸ, ಕಬೀರ, ಮೀರಾಬಾಯಿ, ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ಕನಕ, ಪುರಂದರ, ರಮಣ, ನಾರಾಯಣಗುರು, ಜೊತೆಗೆ ವೇದ, ಉಪನಿಷತ್, ಭಗವದ್ಗೀತೆ, ಖುರಾನ್, ಬೈಬಲ್, ಗ್ರಂಥಾಸಾಹೇಬ್ ಮುಂತಾದ ಎಲ್ಲರನ್ನೂ, ಎಲ್ಲಾ ಪವಿತ್ರ ಗ್ರಂಥಗಳನ್ನು ಓದಿ, ಕೇಳಿ, ತಿಳಿದು ಅರಿಯಲು ಪ್ರಯತ್ನಿಸಿದೆ. ಹೂ ಹೂಂ, ಅವರೆಲ್ಲಾ ಸಿಕ್ಕರು ಆದರೆ ದೇವರು ಸಿಗಲೇ ಇಲ್ಲ…..
ಬಸವ – ಗಾಂಧಿ – ಅಂಬೇಡ್ಕರ್ ಪೆರಿಯಾರ್, ಲೋಹಿಯಾ ಎಲ್ಲರನ್ನೂ ಓದಿ ಅರಿಯಲು ಪ್ರಯತ್ನಿಸಿದೆ. ಅವರು ಅರ್ಥವಾದರು. ದೇವರು ಮಾತ್ರ ಕಾಣಲೇ ಇಲ್ಲ…..
ಪ್ರಖಾಂಡ ಪಂಡಿತರು, ತತ್ವಜ್ಞಾನಿಗಳು, ಮಹರ್ಷಿಗಳು, ವಿಚಾರವಾದಿಗಳು, ವಿಜ್ಞಾನಿಗಳು, ಡಾಕ್ಟರುಗಳು ಎಲ್ಲರ ಬಳಿಯೂ ಕೇಳಿದೆ. ಅವರು ತುಂಬಾ ಒಳ್ಳೆಯ ಉತ್ತರ ಕೊಟ್ಟು ಅರ್ಥ ಮಾಡಿಸಿದರು. ಆದರೆ ದೇವರನ್ನು ಮಾತ್ರ ಭೇಟಿ ಮಾಡಿಸಲಿಲ್ಲ……
ಕೊನೆಗೊಬ್ಬ ಹೇಳಿದ ” ಅಯ್ಯಾ ಹುಚ್ಚ. ದೇವರು ಎಲ್ಲೆಲ್ಲಿಯೋ ಇಲ್ಲ. ಆತ ನಿನ್ನೊಳಗೇ ಅಡಗಿದ್ದಾನೆ. ” ನಾನು ನನ್ನೊಳಗೂ ಹುಡುಕಿದೆ. ಅಲ್ಲಿಯೂ ಸಿಗಲೇ ಇಲ್ಲ……
ನೋಡಲು ಹೇಗಿದ್ದಾನೋ ಎಂಬ ಕುತೂಹಲ ನನಗೆ,…..
ನಮ್ಮಲ್ಲಿ ಅನೇಕ ದೇವಸ್ಥಾನಗಳಿವೆ, ಆತ ಎಲ್ಲಿಗೆ ಬರುತ್ತಾನೆ,
ಯಾವ ದೇವಸ್ಥಾನಕ್ಕೆ ಹೋಗಲಿ, ಅಥವಾ
ನಮ್ಮ ಮನೆಗೇ ಬರುತ್ತಾನೆಯೇ, ಸ್ವಲ್ಪ ಗೊಂದಲವಿದೆ,…..
ಒಂದು ವೇಳೆ ಆತ ಕಾಣಲು ಸಿಕ್ಕರೆ….
ಅವನನ್ನು ಮೊದಲು ಕಣ್ತುಂಬ ನೋಡುತ್ತೇನೆ,
ಆಮೇಲೆ ಕೇಳುತ್ತೇನೆ,…
ಇಷ್ಟುದಿನ ಎಲ್ಲಿದ್ದೆ ?
ಏನು ಮಾಡುತ್ತಿದ್ದೆ ?
ನೀನು ಯಾರು ?
ನಿನ್ನ ಶಕ್ತಿ ಏನು ?
ನಿನ್ನ ವ್ಯಾಪ್ತಿ ಏನು ?
ನನ್ನ ಮೇಲೆ ನಿನ್ನ ನಿಯಂತ್ರಣವೇನು ?
ಜೀವ – ಪ್ರಾಣ – ಆತ್ಮ ಎಂದರೇನು ?
ಬದುಕು ಎಂದರೇನು ?
ಒಳ್ಳೆಯದು ಯಾವುದು ? ಕೆಟ್ಟದು ಯಾವುದು ?….
ನಾನು ಯಾರು ?
ನಾನೇಕೆ ಇಲ್ಲಿದ್ದೇನೆ ? ನಾನೇನು ಮಾಡಬೇಕು ?
ನಾನು ಸ್ವತಂತ್ರನೇ ?
ಅಥವಾ
ನಾನು ನಿನ್ನ ಆಜ್ಞಾಪಾಲಕನೇ ?
ನನ್ನ ಪಾಡಿಗೆ ನಾನಿರಬೇಕೇ ? ಅಥವಾ
ನೀನು ಹೇಳಿದಂತೆ ಕೇಳಬೇಕೆ ?…
ನಿನ್ನ ಪ್ರತಿನಿಧಿಗಳೇನಾದರೂ ಇದ್ದಾರೆಯೇ ?
ಅಥವಾ
ಯಾವುದಾದರೂ ಗ್ರಂಥಗಳನ್ನೇನಾದರೂ ಬರೆದಿರುವೆಯಾ ?
ಅಥವಾ
ಅವರ್ಯಾರು ಮತ್ತು ಅದು ಯಾವುದು ?
ಅವರನ್ನು ಹೇಗೆ ಗುರುತಿಸುವುದು ?….
ಈ ಕಾನೂನು ಯಾವುದು ?
ಈ ಪೋಲೀಸರು ಯಾರು ?
ಈ ಡಾಕ್ಟರುಗಳು ಯಾರು ?
ಈ ನ್ಯಾಯಾಧೀಶರು ಯಾರು ?
ಈ ಅತ್ಯಾಚಾರಿಗಳು ಯಾರು ?
ಈ ಮಂತ್ರಿಗಳು ಯಾರು ?
ಈ ಕಳ್ಳರು ಯಾರು ?
ಈ ಜ್ಯೋತಿಷಿ – ಮಹರ್ಷಿಗಳು ಯಾರು ?…..
ನಿನ್ನ ಧರ್ಮ ಯಾವುದು ? ನಿನ್ನ ಜಾತಿ ಯಾವುದು ?
ನಿನ್ನ ಭಾಷೆ ಯಾವುದು ? ನೀನಿರುವ ಸ್ಥಳ ಯಾವುದು ?
ನೀನು ಒಬ್ಬನೇ ? ಅಥವಾ ನಿನ್ನಂತೆ ಹಲವರಿದ್ದಾರೆಯೇ ?…..
ನೀನು ನಮ್ಮ ದೇಶಕ್ಕೆ ಮಾತ್ರ ಸೀಮಿತವೇ ?
ಅಮೆರಿಕಾ ನಿನ್ನದೇ ?
ಆಫ್ರಿಕಾ ನಿನ್ನದೇ ?
ಆಸ್ಟ್ರೇಲಿಯಾ ನಿನ್ನದೇ ? ಯೂರೋಪ್ ನಿನ್ನದೇ ? ಪಾಕಿಸ್ತಾನ ನಿನ್ನದೇ ?
ಜಪಾನ್ ನಿನ್ನದೇ ?
ಏಷ್ಯಾ ನಿನ್ನದೇ ?
ಈ ಭೂಮಿ ನಿನ್ನದೇ ?
ಸೂರ್ಯ ಚಂದ್ರ ನಕ್ಷತ್ರಗಳು ನಿನ್ನದೇ ?……
ಯಾವ ವೇದ ಮಂತ್ರ ತಂತ್ರ ತರ್ಕಗಳು ಬೇಡ, ನೇರವಾಗಿ ನೀನೇ ಉತ್ತರಿಸು ………
ಏಕೆಂದರೆ ಎಲ್ಲರೂ ಹೇಳುತ್ತಾರೆ, ನಿನ್ನನ್ನು ನೋಡಲು ಮಹಾ ಜ್ಞಾನ ಬೇಕಂತೆ,
ಆದರೆ ನಾನೊಬ್ಬ ಅಜ್ಞಾನಿ ,
ನಿನ್ನ ಅವಶ್ಯಕತೆ ಇರುವುದು ನಮ್ಮಂಥವರಿಗೆ,…..
ಆದ್ದರಿಂದ ಆತ ಬಂದು ಕಾಣಿಸಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವವರೆಗೂ,
ಈಗ ಒಂದು ತೀರ್ಮಾನಕ್ಕೆ ಬಂದಿದ್ದೇನೆ…….
ದೇವರೆಂಬ ವ್ಯಕ್ತಿಯೂ ಇಲ್ಲ. ಶಕ್ತಿಯೂ ಇಲ್ಲ. ಅತಿಮಾನುಷ ಕ್ರಿಯೆಯೂ ಇಲ್ಲ.
ಅದೊಂದು ಕಲ್ಪನೆ – ಭಾವನೆ – ಗ್ರಹಿಕೆ……
ನಿಸ್ಸಹಾಯಕರಿಗೆ ಆಶಾಕಿರಣ, ದುರ್ಬಲರಿಗೆ ಆತ್ಮವಿಶ್ವಾಸ, ಕುತಂತ್ರಿಗಳಿಗೆ ಶೋಷಣೆಯ ಅಸ್ತ್ರ,
ಕಿಲಾಡಿಗಳಿಗೆ ಹೊಟ್ಟೆಪಾಡು, ಸಮಾಜಕ್ಕೆ ಭಯ ಭಕ್ತಿಯ ಭ್ರಮೆ,
ಬಹುತೇಕರಿಗೆ ನಂಬಿಕೆ ಇತ್ಯಾದಿ ಇತ್ಯಾದಿ……..
ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸುವ ಒಂದು ಅಮೂರ್ತ ಸ್ವರೂಪ,
ಅದಕ್ಕೆ ಮೂರ್ತರೂಪ ಕೊಟ್ಟು ತನಗೆ ಬೇಕಾದಂತೆ ಬಳಸುವ ಸಾಧನ, ಇದೇ ಸದ್ಯದ ಸತ್ಯ ಮತ್ತು ವಾಸ್ತವ ಮತ್ತು ಎಂದೆಂದೂ ಮುಗಿಯದ
ಕಾಲದ ಆಟ…………
ನಿಮ್ಮ ನಿಮ್ಮ ಅರಿವಿನಲ್ಲಿ, ನಿಮ್ಮ ನಿಮ್ಮ ಅನುಭವದಲ್ಲಿ,
ಧೈರ್ಯವಾಗಿ, ಆತ್ಮಸಾಕ್ಷಿಗೆ ಅನುಗುಣವಾಗಿ ಯೋಚಿಸಿ,
ಇದು ಸಾಧ್ಯವೆ ?…..
ಕೆಲವರು ಹೇಳುತ್ತಾರೆ,
ಇದು ನಮ್ಮ ನಂಬಿಕೆ, ಆ ಸ್ಥಳಗಳಿಗೆ ಹೋದಾಗ
ನಮಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಇದು ಸ್ವಲ್ಪಮಟ್ಟಿಗೆ ನಿಜವಿರಬಹುದು,…..
ನನಗೆ ಗೊತ್ತು, ಈ ಕಾರಣಕ್ಕಾಗಿ ನೀವು ನನ್ನನ್ನು ದ್ವೇಷಿಸಬಹುದು, ಮೂರ್ಖನೆನ್ನಬಹುದು,
ಆದರೂ ನನ್ನ ಅನಿಸಿಕೆ ವ್ಯಕ್ತಪಡಿಸುತ್ತೇನೆ,…..
ಮೌಢ್ಯದಿಂದ ಬರುವ/ಸಿಗುವ ಮಾನಸಿಕ ನೆಮ್ಮದಿ,
ನಂಬಿಕೆ ಎನ್ನುವ ಭ್ರಮೆ ತಾತ್ಕಾಲಿಕ ಮತ್ತು ವಿನಾಶಕಾರಿ,
ಅದೇ ನಿಮ್ಮ ಜ್ಞಾನದಿಂದ, ಧ್ಯಾನದಿಂದ, ಯೋಗದಿಂದ ಸಿಗುವ, ನೆಮ್ಮದಿ ಶಾಶ್ವತ, ಸ್ವಾಭಾವಿಕ ಮತ್ತು ನ್ಯೆಜವಾದದ್ದು…….
ಈ ವಿಷಯದಲ್ಲಿ ಇತರರ ಪ್ರವಚನಗಳಿಗೆ, ಹೇಳಿಕೆಗಳಿಗೆ ಕಿವಿಗೊಡದೆ ನಿಮ್ಮ ಅರಿವಿನಲ್ಲೇ ನಿರ್ಧಾರ ತೆಗೆದುಕೊಳ್ಳಿ…..
ಹೇಗಿದ್ದರೂ ಆ ಸ್ವಾತಂತ್ರ್ಯ ನಿಮಗಿದ್ದೇ ಇದೆ.
ಜ್ಞಾನ ಯಾರ ಆಸ್ತಿಯೂ ಅಲ್ಲ ಅದು ನಿಮ್ಮದೇ ಸಂಪತ್ತು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………