Spread the love

ನಂಬಿಕೆ, ಭಕ್ತಿ, ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಹಬ್ಬಗಳಿಗೆ ಬಹಳ ಮಹತ್ವವಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕ ಮತ್ತು ವೈಚಾರಿಕ ಅನುಭವದ ಸಾರವೂ ಅಡಗಿದೆ.‌……..

ಆಚರಣೆಗಳಲ್ಲಿ ಮೌಢ್ಯ ಮತ್ತು ಶೋಷಣೆಯ ಅಂಶಗಳನ್ನು ಹೊರತುಪಡಿಸಿದರೆ ನಿಜಕ್ಕೂ ಹಬ್ಬಗಳು ನಮ್ಮ ಬದುಕಿನ ಪುನಶ್ಚೇತನದ ಶಿಬಿರಗಳಂತೆ ಕೆಲಸ ಮಾಡುತ್ತವೆ……

ಆಧುನಿಕ ಬದುಕಿನ ವೇಗ ಮತ್ತು ಒತ್ತಡದ ನಡುವೆ ಹಬ್ಬಗಳನ್ನು ಮರು ವ್ಯಾಖ್ಯಾನ ಮಾಡಿ ಮತ್ತೊಮ್ಮೆ ಅದನ್ನು ಪುನರ್ ಸ್ಥಾಪಿಸಬೇಕು ಎಂದೆನಿಸುತ್ತದೆ……

ಸಂಕ್ರಾಂತಿ,…….

ರೂಪಾಂತರಿ ವೈರಸ್‌ಗಳು ಮನುಷ್ಯ ಜನಾಂಗವನ್ನು ಇನ್ನಿಲ್ಲದಂತೆ ಕಾಡುತ್ತಿರುವಾಗ, ಮಾಧ್ಯಮಗಳು ಅದಕ್ಕಿಂತ ಹೆಚ್ಚು ಬಾಲಿಶ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವಾಗ, ರಾಜಕಾರಣಿಗಳು ಅದಕ್ಕೂ ಮೀರಿ ಭ್ರಷ್ಟರಾಗುತ್ತಿರುವಾಗ,
ಉದ್ಯಮಿಗಳು ಎಲ್ಲವನ್ನೂ ಮೀರಿ ಹಣದಾಹಿಗಳಾಗುತ್ತಿರುವಾಗ ಸಾಮಾನ್ಯ ಜನರ ಪಾಲಿಗೆ ಬದುಕುವುದೇ ಒಂದು ‌ಸಾಧನೆಯಾಗಿ ಜೀವ ಜೀವನದ ಆಯ್ಕೆಯ ಗೊಂದಲದಲ್ಲಿರುವಾಗ…….

ಹೊಸ ವರುವಷ ಮೊದಲ ಹಬ್ಬ ನಮ್ಮ ಬಾಗಿಲ ಬಳಿ ನಿಂತಿದೆ.

ಈ ಸಂದರ್ಭದಲ್ಲಿ………..

ಆಗಲಿ ಮನಸುಗಳ ಕ್ರಾಂತಿ,
ಭಾರತೀಯತೆ – ಮಾನವೀಯತೆಯ ಕ್ರಾಂತಿ,
ತೊಲಗಲಿ ಮೌಢ್ಯಗಳ ಭ್ರಾಂತಿ,
ತುಡಿಯಲಿ ಸಹಜೀವಿಗಳೆಡಗೆ ಶಾಂತಿ,
ಮುಗಿಲೆತ್ತರಕ್ಕೇರಲಿ ಚಿಂತನೆಯ ಕ್ರಾಂತಿ,
ಪಾತಾಳಕ್ಕಿಳಿಯಲಿ ಕಲ್ಮಶದ ಭ್ರಾಂತಿ…….

ಹಬ್ಬದ ಸಂಭ್ರಮಗಳು ನಮ್ಮ ಮೈ ಮನಸ್ಸಿಗೆ ವಿಶ್ರಾಂತಿ ನೀಡಲಿ, ನಮ್ಮ ಆತ್ಮಾವಲೋಕನಕ್ಕೆ ಸಮಯಾವಕಾಶ ಕಲ್ಪಿಸಲಿ…..,

ಯೋಚಿಸೋಣ – ಮತ್ತೆ ಮತ್ತೆ,
ಸರಿ ತಪ್ಪುಗಳ ವಿಮರ್ಶೆಗೆ ಒಳಪಡೋಣ,
ಇತಿಹಾಸದ ಬೆಳಕಲ್ಲಿ ವರ್ತಮಾನದ ಕತ್ತಲನ್ನು ಓಡಿಸೋಣ,
ನಮ್ಮ ನೋವು, ಯಾತನೆಗಳನ್ನು ಕಡಿಮೆ ಮಾಡಿಕೊಳ್ಳೋಣ,
ನಮ್ಮ ಕಷ್ಟಗಳನ್ನು ಎದುರಿಸುವ ಛಲ ಬೆಳೆಸಿಕೊಳ್ಳೋಣ,……

ನಮ್ಮ ನಂಬಿಕೆ ಏನೇ ಇರಲಿ,
ನಿಯತ್ತು ಮಾತ್ರ ಸೃಷ್ಟಿಗೇ ಇರಲಿ,
ಏಕೆಂದರೆ ಗಾಳಿ ನೀರು ಆಹಾರ ಮಲಿನವಾಗುತ್ತಿದೆ,
ಇತ್ತೀಚಿನ ಅಧ್ಯಯನದ ವರದಿ ಪ್ರಕಾರ,
ವಾಯುಮಾಲಿನ್ಯದಿಂದ ಭಾರತದಲ್ಲಿ ವರ್ಷಕ್ಕೆ 15 ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ,
ನೀರಿನಿಂದ ಇನ್ನೆಷ್ಟು ಜನ ಸಾಯುತ್ತಿದ್ದಾರೋ,
ಕಲಬೆರಕೆ ಆಹಾರದಿಂದ ಮತ್ತೆಷ್ಟೋ ,
ಬಹುಶಃ ಯುದ್ದದಿಂದಲೂ ಇಷ್ಟು ಜನ ಸಾಯುವುದಿಲ್ಲವೆನೋ…..,

ಛೆ..ಇದೇನು ಹುಚ್ಚಾಟ …ಆಸ್ಪತ್ರೆ – ಪೋಲಿಸ್ ಸ್ಟೇಷನ್ ಗಳ ಹೆಚ್ಚಾಟ,……

ಅಭಿವೃದ್ಧಿ ಎಂದರೆ ಇದೇನೇ,
ಆರೋಗ್ಯ ಮತ್ತು ವ್ಯಕ್ತಿತ್ವದ ವಿನಾಶವೇ,
ಬೇಡ, ಇದು ಬೇಡವೇ ಬೇಡ,
ಈ ಸಂಕ್ರಾಂತಿ – ಈ ಹಬ್ಬ ,
ಆಧುನಿಕ ಮನೋಭಾವದವರಿಗೆ ಮತ್ತೆ ಸೃಷ್ಟಿಯತ್ತ ಮುನ್ನಡೆಯುವ ಮನಸ್ಸಾಗಲಿ,
ಬದುಕು ಸುಖಮಯವಾಗಲಿ,
ನಮ್ಮ ನಡೆ – ಪ್ರಕೃತಿಯ ಕಡೆಗೆ ಸಾಗಲಿ.
ಆಗ ನೋಡಿ,
ನಮ್ಮ ಬದುಕು ಈ ಆಧುನಿಕತೆಯ ಒತ್ತಡ ಮೀರಿ ನೆಮ್ಮದಿಯ ತಾಣವಾಗುವುದು ಖಚಿತ…….

ಹಾಗಲ ಕಾಯಿ – ಬೇವಿನ ಸೊಪ್ಪು ತಿಂದರೂ ನಿಮ್ಮ ಮನಸ್ಸು ಶುದ್ದವಾಗಿದ್ದರೆ, ನಿಮ್ಮ ಮಾತು ಮತ್ತು ನಡವಳಿಕೆ ಒಳ್ಳೆಯದೇ ಆಗಿರುತ್ತದೆ…..

ಎಳ್ಳು ಬೆಲ್ಲ ಕಬ್ಬು ತಿಂದರೂ,
ನಿಮ್ಮ ಮನಸ್ಸು ಕೊಳಕಾಗಿದ್ದರೆ, ಸಂಕ್ರಾಂತಿ ಹಬ್ಬದ ದಿನವೂ ನಿಮ್ಮಿಂದ ಒಳ್ಳೆಯ ಮಾತುಗಳು ಬರಲಾರವು. ಅಕಸ್ಮಾತ್ತಾಗಿ ಬಂದರೂ ಅದು ಕೃತಕವಾಗಿರುತ್ತದೆ ಮತ್ತು ಒಳಗಿನ ಅಸೂಯೆ ಗುಣಕ್ಕೆ ಮುಖವಾಡ ತೊಡಿಸಿದಂತಿರುತ್ತದೆ……

ಸಂಕ್ರಾಂತಿ ಹಬ್ಬದ ಜನಪ್ರಿಯ ನುಡಿ
“ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು” ಎಂಬುದು ದುಷ್ಟ ಮನಸ್ಸಿನ ಜನರಿಗೆ ಅವರ ವಿಕೃತಿಯನ್ನು ನೆನಪಿಸುವ ಸಾಂಕೇತಿಕ ಮಾತುಗಳು ಮಾತ್ರ. ಒಳ್ಳೆಯ ಮನಸ್ಸಿನವರಿಗೆ ಇದು ಅನ್ವಯಿಸುವುದೇ ಇಲ್ಲ…..

ಏಕೆಂದರೆ ನಿಮ್ಮ ಆಲೋಚನೆಗಳ ಮೇಲೆ ನೀವು ನಿಯಂತ್ರಣ ಹೊಂದಿ ಸಮಷ್ಟಿ ಪ್ರಜ್ಞೆಯಿಂದ ಸದಾ ಕಾಲ ಯೋಚಿಸುವವರು ನೀವಾಗಿದ್ದರೆ – ನಾಗರಿಕ ಪ್ರಜ್ಞೆ ನಿಮ್ಮದಾಗಿದ್ದರೆ, ಸಂಕ್ರಾಂತಿ ಹಬ್ಬದ ಈ ಹಿತ ನುಡಿಗಳನ್ನು ನಿಮಗೆ ಹೇಳುವ ಅವಶ್ಯಕತೆ ಇರುವುದೇ ಇಲ್ಲ…..

ಶತ ಶತಮಾನಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ‌ಸಂಕ್ರಾತಿಯನ್ನು ವಿವಿಧ ಹೆಸರುಗಳಲ್ಲಿ ಸೂರ್ಯನ ಪಥ ಸಂಚಲನ ಬದಲಾಯಿಸುವ – ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಗಮನಿಸಿ ಆಚರಿಸಲಾಗುತ್ತದೆ . ಅದು ತುಂಬಾ ಸಂತೋಷದ ವಿಷಯ. …..

ಆದರೆ ,
ಅದೇ ಮಾತನ್ನು ಅನೇಕ ಭಾರತೀಯರ ಮನಸ್ಸು ಮತ್ತು ಮಾತುಗಳ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿದೆ…..

ಈ ಕ್ಷಣದಲ್ಲಿ ನಮ್ಮ ರಾಜಕೀಯ ನಾಯಕರು, ಅಧಿಕಾರಿಗಳು, ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರು, ಕೆಲವು ಸಂಘಟನೆಗಳ, ಸಂಸ್ಥೆಗಳ ವಿಕೃತ ಮನಸ್ಸಿನ ಸ್ವಯಂ ಘೋಷಿತ ನಾಯಕರು, ಅಷ್ಟೇ ಏಕೆ, ಮಾಧ್ಯಮಗಳು ಮತ್ತು social media ದ ಕೆಲವು ಸಂಕುಚಿತ ಮನೋಭಾವದವರು ಎಷ್ಟೊಂದು ಅಸಹ್ಯಕರವಾಗಿ ವರ್ತಿಸುತ್ತಾರೆಂದರೆ ಅವರಿಗೆ ನೀವು ಜೇನನ್ನು ತಿನ್ನಿಸಿದರೂ ಅವರ ಮನಸ್ಸಿನಿಂದ ಒಳ್ಳೆಯ ಮಾತುಗಳು ಬರಲಾರದಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ…..

ನಾವು ಸೇವಿಸುವ ಆಹಾರಕ್ಕೂ ನಮ್ಮ ಮಾತು ಮನಸ್ಸು ಭಾವನೆಗಳಿಗೂ ಅಂತಹ ಸಂಬಂಧವೇನೂ ಇಲ್ಲ. ನಾವು ಈ ಸಮಾಜವನ್ನು ಗ್ರಹಿಸಿರುವ ನಮ್ಮ ಅರಿವಿನಿಂದ ಮಾತ್ರ ನಾವು ಶುದ್ಧ ಮನಸ್ಥಿತಿಯವರಾಗಲು ಸಾಧ್ಯ….

ಅಂತಹ ಸಾಧ್ಯತೆ ಈ ಸಂಕ್ರಾಂತಿಯ ಸಂದರ್ಭದಲ್ಲಿ ಆಗಲಿ, ಹಬ್ಬದ ಸಾಂಕೇತಿಕತೆ ಮತ್ತು ಕೃತಕತೆಯನ್ನು ಮೀರಿ ನಾವು – ನೀವು ಇನ್ನು ಮುಂದೆಯಾದರು ಸಾಧ್ಯವಾದಷ್ಟೂ ನಮ್ಮಲ್ಲಿರಬಹುದಾದ ವಿಕೃತ ಮನಸ್ಥಿತಿಯನ್ನು ನಿಯಂತ್ರಿಸಿಕೊಂಡು ಮುಖವಾಡ ಕಳಚಿ ನಿಜ ಸಭ್ಯತೆಯನ್ನು ಆಚರಣೆಗೆ ತರುವ ಸಂಕಲ್ಪದೊಂದಿಗೆ ಈ ಮಣ್ಣಿನ ಋಣವನ್ನು ಸ್ವಲ್ಪವಾದರೂ ತೀರಿಸೋಣ ಎಂಬ ಆಶಯದೊಂದಿಗೆ………

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..

error: No Copying!