Spread the love

ದಿನಾಂಕ:07-01-2025(ಹಾಯ್ ಉಡುಪಿ ನ್ಯೂಸ್)

ನಾಳೆ ರಾಜ್ಯದ ಉಳಿದ ಎಲ್ಲಾ ನಕ್ಸಲರು ತಮ್ಮ ಅಡಗು ತಾಣಗಳಿಂದ ಹೊರಗೆ ಬಂದು ಸಶ್ತಸ್ತ್ರ ಹೋರಾಟ ಬಿಟ್ಟು ಪ್ರಜಾಪ್ರಭುತ್ವ ಮಾರ್ಗದಲ್ಲಿ ಸೇರುತ್ತಿದ್ದಾರೆ .

ಈ ಮೂಲಕ ಇನ್ನಷ್ಟು ಅಮೂಲ್ಯ ನಕ್ಸಲ್ ಮತ್ತು ಪೊಲೀಸ್ ಜೀವಗಳು ವಿನಾಕಾರಣ ನಾಶವಾಗುವುದು ತಪ್ಪುತ್ತದೆ. ಮಲೆನಾಡಿನಲ್ಲಿ ಬಲಿಯಾದ ಮೊದಲ ಮತ್ತು ಎರಡನೆಯ ನಕ್ಸಲರು ಪಾರ್ವತಿ ಮತ್ತು ಹಾಜಿಮಾರವರು. ಅವರಿಬ್ಬರೂ ಅದಾವ ಗಳಿಗೆಯಲ್ಲಿ ಬಂದೂಕು ಹಿಡಿದು ಹೊರಟರೋ ಗೊತ್ತಿಲ್ಲ. ಆದರೆ ಕುದುರೆಮುಖ ಗಣಿಗಾರಿಕೆ ವಿರುದ್ಧದ ಜಾಥಾಗಳಲ್ಲಿ, ಶಿವಮೊಗ್ಗ ಪಂಚವಟಿ ಕಾಲೋನಿ ದಲಿತರ ಹೋರಾಟಗಳಲ್ಲಿ  ಪಾರ್ವತಿ ಮತ್ತು ಹಾಜಿಮಾ ಮುಂಚೂಣಿಯಲ್ಲಿದ್ದರು. ಆ ನಂತರ ಬಲಿಯಾದವರಲ್ಲಿ ಸಹ ಐದಾರು ಯುವಕರು ತಾವು ನಕ್ಸಲರಾಗುವ ಮೊದಲು  ಹೋರಾಟಗಳಲ್ಲಿ ಇದ್ದವರೇ. ನಕ್ಸಲ್ ಮನೋಹರ್ ಅವರು ರಾಯಚೂರಿನಲ್ಲಿ ಬಂಧಿಯಾಗಿ ಆಂಧ್ರದ ಚೆರ್ಲಪಲ್ಲಿ ಜೈಲಿನಲ್ಲಿ ಐದು ವರ್ಷ ಜೈಲುವಾಸ ಮುಗಿಸಿ ಕುಲಾಸೆಯಾಗಿ ಬಂದವ ಯಾರ ಮಾತಿಗೆ ಕಿವಿ ಕೊಡದೇ ಕಾಣೆಯಾದ ಮನುಷ್ಯ ಕೆಲವು ತಿಂಗಳಲ್ಲಿ ಹೆಣವಾಗಿ ಬಿದ್ದಿದ್ದ.

ಈಗ ನಾಳೆ ಹೊರಬರಲಿರುವ ಮುಂಡಗಾರು ಲತಾ ಕೂಡಾ ಹಿಂದೆ ಕಾನೂನುಬದ್ದ ಹೋರಾಟಗಳಲ್ಲಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದಾಕೆ. ಆಕೆಯ ಕೆಚ್ಚು ಬದ್ಧತೆ ಎಷ್ಟಿತ್ತೋ ಅಷ್ಟೇ ಮುಗ್ಧತೆ ಇರುವ ಆದಿವಾಸಿ ಮಹಿಳೆ ಅವರು.

ಈಗ ಹೆಚ್ಚು ಕಡಿಮೆ 20 ವರ್ಷಗಳ ಭೂಗತ ಜೀವನ ಮುಗಿಸಿ ಹೊರಜಗತ್ತಿಗೆ ಬರುತ್ತಿರುವ ಇವರು ಜೀವ ಭಯದಿಂದಲೋ, ಇನ್ನಾವ ಆಸೆಯಿಂದಲೋ ಬರುತ್ತಿರುವ ಜೀವಗಳಲ್ಲ‌‌. ಆದರೆ ತಾವು ಏನನ್ನು ಸಾಧಿಸಬೇಕೆಂದು ಹೀಗೆ ಬಂದೂಕು ಹಿಡಿದಿದ್ದರೋ ಅದು ಎಷ್ಟರಮಟ್ಟಿಗೆ ಸಾಧನೆಯಾಗಿದೆ ಎಂದು ನೋಡಿದಾಗ ನಿರಾಸೆಯಾಗಿರಬಹುದು. ಆದರೆ ಒಂದು ಮಾತು ನಿಜ. ಇವರೆಲ್ಲಾ ಬಂದೂಕುದಾರಿಯಾಗಿ ಯಾವಾಗ ಓಡಾಡಲು ಆರಂಬಿಸಿದ್ದರೋ ತದನಂತರವೇ ಈ ಭಾಗದ ಆದಿವಾಸಿಗಳಿಗೆ ಅರಣ್ಯ ಇಲಾಕೆ ಮತ್ತು ಭೂಮಾಲೀಕರ ಕಿರುಕುಳ ದೌರ್ಜನ್ಯಗಳು ಕಡಿಮೆಯಾಗಿದ್ದು. ಅವರು ಒಕ್ಕಲೇಳುವ ಭೀತಿ ತಪ್ಪಿದ್ದು. ದಲಿತ ಆದಿವಾಸಿ ಹೆಣ್ಣು ಮಕ್ಕಳ ಮೇಲೆ ದಿನವೂ ಅತ್ಯಾಚಾರ ನಡೆಸುತ್ತಿದ್ದ ಕೆಲವು ಭೂಮಾಲೀಕರ ಹುಟ್ಟಡಗಿಸಿದ್ದೂ ಇವರೇ ಆಗಿದ್ದರು.‌

ಏನೇ ಇರಲಿ. ಈಗಾಗಲೇ ದುರ್ಬಲಗೊಂಡಿದ್ದ ನಕ್ಸಲ್ ಹೋರಾಟದ ಕಡೆಯ ಕೊಂಡಿಗಳಾದ ಈ ಆರು ಜನ ನಕ್ಸಲ್ ಕಾರ್ಯಕರ್ತರನ್ನು ಮನವೊಲಿಸಿ ಕರೆತರಲು ಅನೇಕರು‌ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇವರು ನಾಳೆ ಹೊರಗೆ ಬರುವುದು ಎಷ್ಟು ಮುಕ್ಯವೋ ಅದಕ್ಕಿಂತ ಹೆಚ್ಚು ಮುಕ್ಯ ಇವರು ಬಂದು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ದೊರೆಯಬೇಕಾದ ಸಹಕಾರ. ಈ ಹಿಂದೆ ಹೀಗೆ ಹೊರಬಂದವರು ಪಟ್ಟಿರುವ ಪಾಡು ಕೇಳಿದರೆ ಬೇಸರವಾಗುತ್ತದೆ‌. ಹೀಗೆ ಹೊರಗೆ ಬಂದು ಯಾತನೆ ಪಡುವ ಬದಲು ನಾವು ಅಲ್ಲೇ ಇದ್ದಿದ್ದರೆ ನೆಮ್ಮದಿಯಾಗಿ ಇರ್ತಿದ್ದೆವೇನೋ, ನೆಮ್ಮದಿಯಾಗಿ ಸಾಯ್ತಿದ್ದೆವೋ ಎಂದು ಒಮ್ಮೆ ಶರಣಾಗತರಾಗಿದ್ದ ನಕ್ಸಲ್ ಪದ್ಮನಾಭ ನಿಲಗುಳಿ  ನೊಂದು ಹೇಳಿಕೊಂಡಿದ್ದರು. ವಾರಕ್ಕೆ ನಾಲ್ಕು ದಿನ ಕೇಸ್ ವಿಚಾರಣೆ, ಕೈಯಲ್ಲಿ ಹಣವಿರಲ್ಲ, ಪೊಲೀಸರ ವಾರಂಟ್ ನೋಟೀಸು, ಜಾಮೀನು ಪಡೆಯಲು ಹಣವಿಲ್ಲದ ಸ್ಥಿತಿ. ಒಂದು ಕೇಸಲ್ಲಿ ಜಾಮೀನು ಸಿಕ್ಕಿದರೆ ಮತ್ತೊಂದು ಕೇಸಿನಲ್ಲಿ ವಾರಂಟ್, ಮೂರು ತಿಂಗಳ ಕಸ್ಟಡಿ ಆರು ತಿಂಗಳಾಗುವುದು…. ವರ್ಷಕ್ಕೂ ಸರಿಯುವುದು, ಏನಾದರೂ ಒಂದು ಕಸುಬು ಮಾಡುತ್ತಾ ಹೊಸ ಬದುಕು ಕಟ್ಟಿಕೊಳ್ಳೋಣ ಎಂದರೆ ಅದಕ್ಕೆ ಅವಕಾಶವನ್ನೇ ಕೊಡದ ಕಾನೂನು ಪ್ರಕ್ರಿಯೆಗಳು, ಅಂತರ್ಜಾತಿ ಮದುವೆಯಾಗಿದ್ದಕ್ಕೆ ಜೊತೆ ನಿಲ್ಲದ ಕುಟುಂಬಸ್ತರು..

ಸಮಾಜ ಮತ್ತು ಸರ್ಕಾರ ಈ ವಿಷಯದಲ್ಲಿ ಮಾನವೀಯವಾಗಿ ವರ್ತಿಸಲಿ. ಹೀಗೆ ಒಂದು ಕಾನೂನುಬಾಹಿರ ಚಳವಳಿಯಲ್ಲಿ ತೊಡಗಿಕೊಂಡವರು ದುಷ್ಟರಲ್ಲ. ಅವರ ಉದ್ದೇಶಗಳು ಅತ್ಯಂತ ಮಾನವೀಯ ಸಮಾಜ ಕಟ್ಟುವುದೇ ಆಗಿದ್ದರೂ ಅಯ್ಕೆ ಮಾಡಿಕೊಂಡ ದಾರಿಯನ್ನು ನಾವು ಒಪ್ಪದಿರಬಹುದು, ಟೀಕಿಸಬಹುದು. ಕಷ್ಟ ಅಂತ ಕೈಚಾಚಿದರೆ ಹತ್ತು ರೂಪಾಯಿ ಕೊಡಲೂ ಹಿಂದೆ ಮುಂದೆ ನೋಡುವ ಸಮಾಜದಲ್ಲಿ ಸಮಾಜಕ್ಕಾಗಿ, ಬಡವರಿಗಾಗಿ, ಅನ್ಯಾಯ ಶೋಷಣೆಗೆ ಒಳಗಾದವರಿಗಾಗಿ ಪ್ರಾಣವನ್ನೇ ಕೊಡುತ್ತೇವೆ ಎಂದು ಹೋದವರ ಬದ್ಧತೆ, ತ್ಯಾಗದ ಕುರಿತು  ಗೌರವ ಇರಬೇಕಾದ್ದೆ.

ಅವರ ಆತ್ಮಾಬಿಮಾನಕ್ಕೆ ದಕ್ಕೆ ಮಾಡದೇ,  ಪ್ರೀತಿಯಿಂದ ಸಾಮಾಜಿಕ ಚಳವಳಿಯ ದಾರಿಯಲ್ಲಿ ಕರೆದೊಯ್ಯುವ ಹೊಣೆ ಎಲ್ಲರ ಮೇಲಿದೆ.

ತಾವು ಹಿಂದೊಮ್ಮೆ ತೊರೆದು ಹೋಗಿದ್ದ ಸಂವಿದಾನಬದ್ದ ಚಳವಳಿಯ ದಾರಿಗೆ ನಾಳೆ ಬಂದು ಸೇರಲಿರುವ ನಕ್ಸಲರಿಗೆ ಸ್ವಾಗತ  ಮತ್ತು ಇಂತಹದೊಂದನ್ನು ಆಗು ಮಾಡಿದ ಸಿ ಎಂ ಸಿದ್ಧರಾಮಯ್ಯ ಅವರಿಗೂ, ಇದಕ್ಕಾಗಿ ಕಳೆದ ಹಲವಾರು ದಿನಗಳಲ್ಲಿ ನಿದ್ದೆಗೆಟ್ಟು ಓಡಾಡಿರುವ  ಶ್ರೀಪಾಲ್  ಕೆ.ಪಿ, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್, ನೂರ್ ಶ್ರೀಧರ್, ಕೆಲವು ಅತ್ಯಂತ ನಿಸ್ಪೃಹರಾದ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಕೆಯ ಅದಿಕಾರಿಗಳಿಗೆ ವಂದನೆಗಳು, ಶಾಂತಿಗಾಗಿ ನಾಗರಿಕರ ವೇದಿಕೆಯ ಸದಸ್ಯರು ಮುಕ್ಯವಾಗಿ ಆದಿವಾಸಿ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಬೇಕು.

error: No Copying!