ಉಡುಪಿ: ದಿನಾಂಕ:11-01-2025(ಹಾಯ್ ಉಡುಪಿ ನ್ಯೂಸ್) ಮೈಸೂರು ಮೂಲದ ಫೈನಾನ್ಸ್ ಕಂಪನಿಯೊಂದಕ್ಕೆ ಉಡುಪಿಯ ಮೂವರು ವ್ಯಕ್ತಿಗಳು ನಕಲಿ ಚಿನ್ನಾಭರಣ ಬ್ಯಾಂಕ್ ನಲ್ಲಿ ಅಡವಿಟ್ಟು ಬಿಡಿಸಿಕೊಡುವಂತೆ ಒಪ್ಪಿಸಿ 6 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲೆಯ ನಿವಾಸಿ ಕಾರ್ತಿಕ (32) ಎಂಬವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಟ್ & ಡೈಮಂಡ್ ಪೈನಾನ್ಸ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಾರ್ತಿಕ ರವರು ಕೆಲಸ ಮಾಡುವ ಸಂಸ್ಥೆಯು ಸಾರ್ವಜನಿಕರು ಚಿನ್ನದ ಸಾಲಗಳನ್ನು ಪಡೆದು ಚಿನ್ನ ಬಿಡಿಸಿ ಕೊಳ್ಳಲು ಸಾದ್ಯವಾಗದ ಚಿನ್ನವನ್ನು ಗ್ರಾಹಕರ ಪರವಾಗಿ ಬಿಡಿಸಿಕೊಳ್ಳಲು ನೆರವಾಗಿ ಚಿನ್ನವನ್ನು ಖರೀದಿ ಮಾಡುವ ವ್ಯವಹಾರವನ್ನು ಮಾಡುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 02/01/2025 ರಂದು ಕಂಪನಿಯ ಮ್ಯಾನೇಜರ್ ಅಭಿ ಎಂಬವರು ಕಾರ್ತಿಕ ರವರಲ್ಲಿ ಮತ್ತು ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಕೆಲಸ ಮಾಡಿ ಕೊಂಡಿರುವ ಕವನ್ ಎಂಬುವವರಲ್ಲಿ ಉಡುಪಿಯಿಂದ ಅಭ್ಬಾಸ್ ಎಂಬುವವರು ಕಛೇರಿಗೆ ಪೋನ್ ಮಾಡಿ ಉಡುಪಿಯಲ್ಲಿ ಸೊಸೈಟಿಯಲ್ಲಿ ಚಿನ್ನವನ್ನು ಅಡವಿಟ್ಟಿರುತ್ತಾರೆ. ಉಡುಪಿಗೆ ಹೋಗಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸಿಕೊಂಡು ಬರುವಂತೆ ಕಳುಹಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಂಪನಿಯ ಮ್ಯಾನೇಜರ್ ಅವರು ಕಳುಹಿಸಿದಂತೆ ಕಾರ್ತಿಕ್ ಅವರು ಅಬ್ಬಾಸ್ ಎಂಬುವವರನ್ನು 03/01/2025 ರಂದು ಕಾಪು ತಾಲೂಕು ಉಚ್ಚಿಲ ಬಳಿ ಮಧ್ಯಾಹ್ನ ಭೇಟಿ ಮಾಡಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸುವ ಬಗ್ಗೆ ಮಾತನಾಡಿ ಕೊಂಡು ಬೆಳಪು ವ್ಯವಸಾಯ ಸಹಕಾರಿ ಸಂಘ, ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್ ಸೊಸೈಟಿ ಲಿಮಿಡೆಟ್ ಮತ್ತು ಕುಂದಾಪುರ ವ್ಯವಸಾಯ ಸಹಕಾರಿ ಸಂಘ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಈ ಬ್ಯಾಂಕ್ ಗಳಲ್ಲಿ ಚಿನ್ನ ಅಡವಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಅಬ್ಬಾಸ್ ನ ಕುಂದಾಪುರ ಫೆಡರಲ್ ಬ್ಯಾಂಕ್ ನ ಖಾತೆ ಗೆ RTGS ಮೂಲಕ ಮುಂಗಡ ಹಣವನ್ನು 6 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದ್ದಾರೆ ಎಂದಿದ್ದಾರೆ.
ನಂತರ ದಿನಾಂಕ 04/01/2025 ರಂದು ಕಾರ್ತಿಕ ರವರು ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಆರೋಪಿತರಾದ ಮೊಹಮ್ಮದ್ ಹನೀಫ್ ಮತ್ತು ಹೆಸರು ಗೊತ್ತಿಲ್ಲದ ವ್ಯಕ್ತಿಯೊಬ್ಬನ ಹಾಜರಾತಿಯಲ್ಲಿ 44 ಗ್ರಾಮ್ ಮತ್ತು ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್ ಸೊಸೈಟಿ ಲಿಮಿಡೆಟ್ ನಲ್ಲಿ ಆರೋಪಿತರಾದ ಮೊಹಮ್ಮದ್ ಯಾಸೀನ್ ಹಾಜರಾತಿಯಲ್ಲಿ 16 ಗ್ರಾಮ್ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಸಂತೆಕಟ್ಟೆಯಲ್ಲಿ ಆರೋಪಿತರಾದ ಮೊಹಮ್ಮದ್ ಯಾಸೀನ್ ಹಾಜರಾತಿಯಲ್ಲಿ 32 ಗ್ರಾಮ್ ಚಿನ್ನವನ್ನು ಬಿಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಆರೋಪಿ ಅಬ್ಬಾಸ್ ನು ಕುಂದಾಪುರದಲ್ಲಿಯೂ ಚಿನ್ನ ಬಿಡಿಸಲು ಹೋಗುವ ಎಂದು ಕಾರ್ತಿಕ ರವರನ್ನು ಉಡುಪಿ ಬಸ್ ನಿಲ್ದಾಣಕ್ಕೆ ಬರಲು ಹೇಳಿ ಕಾರ್ತಿಕ ಅವರನ್ನು ಕಾಯಿಸಿ ನಂತರ ಯಾವುದೇ ಪ್ರತಿಕ್ರೀಯೆ ನೀಡಲಿಲ್ಲ ಎನ್ನಲಾಗಿದೆ.
ಕಾರ್ತಿಕ್ ರವರು ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ಬ್ಯಾಂಕ್ ಸಿಬ್ಬಂದಿಯವರಲ್ಲಿ ವಿಚಾರಿಸಿದ್ದಾರೆ ಎಂದಿದ್ದು, ಆದರೂ ಈ ಬಗ್ಗೆ ಕಾರ್ತಿಕ ರವರು ಸಂಶಯಗೊಂಡು ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ತಿಳಿದುಕೊಳ್ಳಲು ಉಡುಪಿಯ ಚಿನ್ನ ಟೆಸ್ಟಿಂಗ್ ಅಂಗಡಿಗೆ ಹೋಗಿ ಪರೀಕ್ಷಿಸಿದಾಗ ತಾನು ಬ್ಯಾಂಕ್ ನಿಂದ ಬಿಡಿಸಿದ ಚಿನ್ನದ ಆಭರಣಗಳು ನಕಲಿ ಎಂದು ತಿಳಿದು ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಸೊಸೈಟಿಯಲ್ಲಿ ಚಿನ್ನವನ್ನು ಅಡವಿರಿಸಿರುವುದಾಗಿ ಹೇಳಿ ಚಿನ್ನ ಬಿಡಿಸಲು ಹಣ ವಿಲ್ಲ ಎಂದು ಹೇಳಿ ಕಾರ್ತಿಕ ರವರಿಗೆ ನಕಲಿ ಚಿನ್ನ ನೀಡಿ ಕಾರ್ತಿಕ ರವರ ಸಂಸ್ಥೆಗೆ 6 ಲಕ್ಷ ರೂಪಾಯಿ ವಂಚನೆ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(4), 318(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.