Spread the love

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ಬಗ್ಗೆ, ಮುಖ್ಯವಾಗಿ ಮಹಿಳೆಯರ ಮೇಲಿನ ಅತ್ಯಂತ ಅಮಾನವೀಯ ದೌರ್ಜನ್ಯದ ಬಗ್ಗೆ ವಿಶ್ವದ ಎಲ್ಲಾ ಸಂವೇದನಾಶೀಲ ನಾಗರಿಕರು ಧ್ವನಿ ಎತ್ತಬೇಕಾಗಿದೆ…..

ಇಲ್ಲಿ ಧಾರ್ಮಿಕ ನಂಬಿಕೆಗಳು ಅಥವಾ ಧರ್ಮಗಳ ಆಚರಣೆಗಳು ಏನೇ ಇರಲಿ, ಮಹಿಳೆ ಎನ್ನುವುದು ಒಂದು ಭೋಗದ ವಸ್ತುವಲ್ಲ, ಕಾಡು ಪ್ರಾಣಿಯಲ್ಲ, ಆಹಾರದ ಪದಾರ್ಥವಲ್ಲ, ಆಕೆ ಯಾರ ಗುಲಾಮಳೂ ಅಲ್ಲ. ಆಕೆಯೂ ಈ ನಾಗರೀಕತೆಯಲ್ಲಿ ಬದುಕಲು ಪುರುಷರಷ್ಟೇ ಸಮ ಸ್ವಾತಂತ್ರ್ಯ, ಹಕ್ಕು ಹೊಂದಿರುವವರು ಎಂಬುದನ್ನು ಜೀವಜಗತ್ತು ಮರೆಯಬಾರದು…..

ಈ ನಾಗರಿಕ ಜೀವಸಂಕುಲ ಎಂಬ ಮಾನವ ಜನಾಂಗ ಮುಂದುವರಿಕೆಯಲ್ಲಿ ಹೆಣ್ಣಿನ ಪಾತ್ರ ಗಂಡಿಗಿಂತ ಮುಖ್ಯವಾಗಿದೆ. ಹಾಗೆಯೇ ಗಂಡು ಮಕ್ಕಳ ಜನನದಲ್ಲೂ ಮಹಿಳೆಯ ಪಾತ್ರವಿದೆ. ಗಂಡು ಮಕ್ಕಳ ಲಾಲನೆ, ಪಾಲನೆ, ಘೋಷಣೆ, ಬೆಳವಣಿಗೆ ಎಲ್ಲದರಲ್ಲೂ ಹೆಣ್ಣಿನ ಪಾಲಿದೆ. ಆ ತಾಲಿಬಾನ್ ಯೋಧರು ಹುಟ್ಟಿರುವುದೂ ಹೆಣ್ಣಿನಿಂದಲೇ, ಅವರು ಬೆಳೆದಿರುವುದೂ ಹೆಣ್ಣಿನ ಎದೆಹಾಲು ಮತ್ತು ಕೈ ತುತ್ತಿನಿಂದಲೇ……

ಹೆಣ್ಣಿಗೆ ತಾಯಿ, ತಂಗಿ, ಅಕ್ಕ, ಅತ್ತಿಗೆ, ಸೊಸೆ, ನಾದಿನಿ, ಮಗಳು, ಹೆಂಡತಿ, ಪ್ರೇಯಸಿ ಮುಂತಾದ ಪಾತ್ರಗಳು ಇರಬಹುದು. ಹಾಗೆಂದು ಹೆಣ್ಣನ್ನು ಆಕೆಯ ಸ್ವಾತಂತ್ರ್ಯದಿಂದ, ಸ್ವಾವಲಂಬನೆಯಿಂದ ದೂರವಿಡುವುದು ಮಾನವ ಜನಾಂಗ ತನಗೆ ತಾನೇ ದ್ರೋಹ ಮಾಡಿಕೊಂಡಂತೆ, ತಾವು ನಂಬಿದ ಧರ್ಮಗಳಿಗೂ ದ್ರೋಹ ಬಗೆದಂತೆ……..

ಹೌದು, ವಿಶ್ವದ ಇನ್ನೂ ಅನೇಕ ದೇಶಗಳಲ್ಲಿ ಈ ಕ್ಷಣಕ್ಕೂ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವುದು ನಿಜ. ಅದರ ವಿರುದ್ಧವೂ ಆಕ್ರೋಶವಿದೆ. ಆದರೆ ಅದೆಲ್ಲವನ್ನೂ ಮೀರಿ ಇತ್ತೀಚಿನ ವರದಿಗಳ ಪ್ರಕಾರ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಅವರ ಶಿಕ್ಷಣ, ಉದ್ಯೋಗ, ಉಡುಪು, ಬದುಕು ಎಲ್ಲವನ್ನು ಕಿತ್ತುಕೊಳ್ಳುವುದರ ಜೊತೆಗೆ ಬುರ್ಖಾ ಪದ್ಧತಿ ಇದ್ದರೂ ಅತ್ಯಂತ ಅಮಾನವೀಯವಾದ ಮನೆಗಳ ಕಿಟಕಿಯ ರಂಧ್ರಗಳನ್ನು ಸಹ ಮುಚ್ಚಿಸಲಾಗುತ್ತಿದೆಯಂತೆ. ಅಂದರೆ ಕಿಟಕಿಗಳ ಮೂಲಕವೂ ಹೆಣ್ಣು ಹೊರ ಜಗತ್ತನ್ನು ಅಥವಾ ಪರ ಪುರುಷರನ್ನು ನೋಡಬಾರದು ಎಂಬ ಉದ್ದೇಶ ಈ ಫತ್ವಾ ಹಿಂದಿದೆ……

ನಿಜಕ್ಕೂ ಗಾಬರಿ ಹುಟ್ಟಿಸುವುದು ಇಂತಹ ವಿಷಯಗಳು. ಏಕೆಂದರೆ ನಮ್ಮ ನೆರೆಹೊರೆಯ ಸಮಕಾಲಿನ ಸಮಾಜ ಇಷ್ಟೊಂದು ಅನಾಗರಿಕವಾಗಲು ನಾವು ಬಿಡಬಾರದು. ಮುಖ್ಯವಾಗಿ ಇಡೀ ಮುಸ್ಲಿಂ ಸಮುದಾಯ ವಿಶ್ವಮಟ್ಟದಲ್ಲಿ ಇದರ ವಿರುದ್ಧ ಮಾತನಾಡಬೇಕು. ಆಗ ಮುಸ್ಲಿಂ ಸಮುದಾಯದ ಮೇಲೆ ಇತರ ಸಮುದಾಯಗಳು ದೌರ್ಜನ್ಯ ಮಾಡಿದಾಗ ವಿಶ್ವ ಅವರ ನೆರವಿಗೆ ಬರುತ್ತದೆ. ಈಗಲೂ ಎಷ್ಟೋ ದೇಶಗಳು ಇಸ್ರೇಲ್ ನ ಹಮಾಸ್ ಮೇಲಿನ ಅಕ್ರಮಣವನ್ನು ಖಂಡಿಸುತ್ತಿವೆ. ಅದಕ್ಕೆಲ್ಲ ಕಾರಣ ನಾಗರಿಕ ಸಮಾಜದಲ್ಲಿ ಎಲ್ಲರಿಗೂ ಬದುಕುವ ಸಮಾನ ಹಕ್ಕಿದೆ……

ಆಫ್ಘಾನಿಸ್ತಾನ ಒಂದು ಅದ್ಭುತ ದೇಶ. ಗುಡ್ಡಗಾಡು ಪ್ರದೇಶಗಳೇ ಹೆಚ್ಚಾಗಿರುವ ಕಾರಣ ಅಲ್ಲಿನ ಆಹಾರ, ಪರಿಸರ, ದೈಹಿಕ ಬಲಾಢ್ಯತೆ ತುಂಬಾ ಆರೋಗ್ಯಕರವಾಗಿದೆ. ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ ಮುಂತಾದ ವಿಷಯಗಳಲ್ಲಿ ವಿಶ್ವದರ್ಜೆಯ ಸಾಧನೆ ಮಾಡುವ ಎಲ್ಲಾ ಅವಕಾಶಗಳು ಆ ದೇಶಕ್ಕೆ ಇದೆ…..

ಅನೇಕ ಇಸ್ಲಾಮಿಕ್ ದೇಶಗಳು ಇವತ್ತು ಅತ್ಯಂತ ಶ್ರೀಮಂತಿಕೆಯ ಜೀವನಶೈಲಿ ರೂಪಿಸಿಕೊಂಡು ನೆಮ್ಮದಿಯಿಂದ ಜೀವಿಸುತ್ತಿರಬೇಕಾದರೆ ಅಫ್ಘಾನಿಸ್ತಾನದ ಮಹಿಳೆಯರು ಮಾಡಿದ ಪಾಪವಾದರೂ ಏನು. ಇತ್ತೀಚಿನ ವರ್ಷಗಳಲ್ಲಿ ಇರಾನ್ ಮಹಿಳೆಯರು ಚಡ್ಡಿ ತೊಟ್ಟು ವಿಶ್ವ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಭಾರತದ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ನರಾಗಿದ್ದಾರೆ. ಯುಎಇ ಸೇರಿದಂತೆ ಕೆಲವು ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಾಲನೆಯ ಅನುಮತಿ ನೀಡಲಾಗಿದೆ. ಪಾಕಿಸ್ತಾನದ ಅನೇಕ ಟಿವಿಗಳಲ್ಲಿ ಮಹಿಳೆಯರು ನಿರೂಪಕಿಯರಾಗಿದ್ದಾರೆ. ಆಡಳಿತದಲ್ಲಿಯೂ ಸಹ ಮುಸ್ಲಿಂ ದೇಶಗಳ ಮಹಿಳೆಯರದು ಮುಖ್ಯ ಪಾತ್ರವಿದೆ……

ಇಂತಹ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಮುಸ್ಲಿಂ ಮಹಿಳೆಯರ ಸಾಮಾನ್ಯ, ಸಹಜ ಹಕ್ಕುಗಳನ್ನು ಅಲ್ಲಿನ ತಾಲಿಬಾನ್ ಸರ್ಕಾರ ಅತ್ಯಂತ ಕೆಟ್ಟ ರೀತಿಯಲ್ಲಿ ತುಳಿಯುತ್ತಿರುವುದು ನೋಡುತ್ತಾ ಸಹಿಸಬಾರದು. ವಿಶ್ವಸಂಸ್ಥೆ ಮತ್ತು ವಿಶ್ವದ ಎಲ್ಲಾ ಸರ್ಕಾರಗಳು ಅದಕ್ಕೆ ಒಂದು ಎಚ್ಚರಿಕೆಯನ್ನು ನೀಡಬೇಕು. ಅವರ ಧಾರ್ಮಿಕ ನೀತಿ ಅನುಸಾರ ಮತ್ತು ಈಗಿನ ಆಧುನಿಕ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳೊಂದಿಗೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ನಾಗರಿಕ ಮೌಲ್ಯಗಳನ್ನು ಕಾಪಾಡಲು ಒತ್ತಾಯಿಸಬೇಕು……

ಕೆಟ್ಟ, ದುಷ್ಟ, ಅನೈತಿಕ ವ್ಯವಹಾರಗಳನ್ನು ನಿಗ್ರಹಿಸಲಿ. ಅದರ ಬಗ್ಗೆ ಯಾರದೇ ವಿರೋಧ ಇರುವುದಿಲ್ಲ. ಆದರೆ ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು, ಅವರ ಆಹಾರ, ಉಡುಪು, ನೋಟ, ಬದುಕನ್ನೇ ಗುಲಾಮಿತನಕ್ಕೆ ದೂಡುವುದು, ಎರಡನೆಯ ದರ್ಜೆಯ ನಾಗರಿಕರಂತೆ ಕಾಣುವುದು ತುಂಬಾ ಅಮಾನವೀಯ. ಇದು ಕೇವಲ ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲ, ವಿಶ್ವದ ಎಲ್ಲ ಧರ್ಮದ, ಎಲ್ಲಾ ದೇಶಗಳಿಗೂ ಅನ್ವಯವಾಗುತ್ತದೆ…….

ತಾಲಿಬಾನ್ ಗಳು ಭಯೋತ್ಪಾದಕ ಕೃತ್ಯಗಳಿಗೆ ಹೆಸರಾಗಿದ್ದರು. ಈಗ ಒಂದು ಬೃಹತ್ ದೇಶದ ನಾಗರಿಕ ಸರ್ಕಾರದ ಜವಾಬ್ದಾರಿ ನಿರ್ವಹಿಸುತ್ತಿರುವವರು. ವಿಶ್ವದ 200 ಕ್ಕೂ ಹೆಚ್ಚು ದೇಶಗಳ ಆಡಳಿತ ಕಾನೂನು ಬದ್ಧವಾಗಿಯೇ ಅಂದರೆ ಅವರವರ ನೀತಿ ನಿಯಮಗಳಿಗೆ ಅನುಸಾರವಾಗಿಯೇ ನಡೆಯಬೇಕು. ಆದರೆ ಅದರ ಮೀತಿ ಮೀರಿ ಭಯೋತ್ಪಾದಕರಂತೆ, ಅನಾಗರಿಕರಂತೆ ಹುಚ್ಚುಚ್ಚಾಗಿ ಇಡೀ ದೇಶವನ್ನು ನಡೆಸುವುದು ಅತ್ಯಂತ ಕಠೋರ ದೃಶ್ಯವಾಗುತ್ತದೆ. ಅದನ್ನು ವಿಶ್ವ ಸಹಿಸಬಾರದು…..

ಆಡಳಿತದ ನೀತಿ ನಿಯಮಗಳನ್ನು ಒಂದು ಹಂತದವರೆಗೆ ಹೇಗೆ ಬೇಕಾದರೂ ಜಾರಿ ಮಾಡಲಿ, ಆದರೆ ಜನರ ಮೂಲಭೂತ ಹಕ್ಕುಗಳ ದಮನ ಮಾಡಿದಲ್ಲಿ ವಿಶ್ವ ಅದರ ವಿರುದ್ಧ ಒಂದಾಗಲೇಬೇಕು. ಇಲ್ಲದಿದ್ದರೆ ಈ ಸಂತತಿ ಮತ್ತಷ್ಟು ವ್ಯಾಪಕವಾಗಿ ಜಗತ್ತಿನ ನಾಗರಿಕತೆ ತನ್ನ ನಿಯಂತ್ರಣ ಕಳೆದುಕೊಳ್ಳಬಹುದು…..

ಇಷ್ಟು ಬೃಹತ್ ಸೈನಿಕ ಶಕ್ತಿಯನ್ನು ಹೊಂದಿರುವ ವಿಶ್ವದ ದೇಶಗಳು ಇಂತಹ ಅನಾಗರಿಕ ಸಮಾಜವನ್ನು ಸಹಿಸುವುದಾದರೂ ಹೇಗೆ. ವಿಶ್ವಸಂಸ್ಥೆ ಕೂಡ ಈ ನಿಟ್ಟಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಫ್ಘಾನಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಮಹಿಳೆಯರನ್ನು ಗೌರವದಿಂದ, ಘನತೆಯಿಂದ ನೋಡಿಕೊಳ್ಳದಿದ್ದರೆ ವಿಶ್ವ ಆ ದೇಶದ ವಿರುದ್ಧ ಕ್ರಮ ಕೈಗೊಳ್ಳಲೇಬೇಕು……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..

error: No Copying!