ಬಹುಶಃ ದೂರವಾಣಿಯ ಸಂಶೋಧನೆ, ಮೊಬೈಲ್ ಸಂಶೋಧನೆ, ಇಂಟರ್ನೆಟ್ ಸಂಶೋಧನೆ, ಟೆಲಿವಿಷನ್ ಸಂಶೋಧನೆ, ವೈದ್ಯಕೀಯ ಕ್ಷೇತ್ರದ ಹಲವಾರು ಸಂಶೋಧನೆ, ಇಂಜಿನಿಯರಿಂಗ್ ತಂತ್ರಜ್ಞಾನದ ಕೆಲವು ಸಂಶೋಧನೆ, ಬಾಂಬು – ಬಂದೂಕುಗಳ ಸಂಶೋಧನೆ, ಸಾಮಾಜಿಕ ಜಾಲತಾಣಗಳ ಸಂಶೋಧನೆ ಮುಂತಾದ ಕೆಲವು ಹೊಸ ಅನ್ವೇಷಣೆಯಂತೆ ಮನುಷ್ಯರ ಬದುಕಿನ ಮೇಲೆ ಅತ್ಯಂತ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡುವ ಮತ್ತೊಂದು ಹೊಸ ತಂತ್ರಜ್ಞಾನವೆಂದರೆ ಇತ್ತೀಚಿನ ವರ್ಷಗಳ ಕೃತಕ ಬುದ್ಧಿಮತ್ತೆಯ ಸಂಶೋಧನೆ……..
ನಮ್ಮೆಲ್ಲರಿಗೂ ಬಹುದೊಡ್ಡ ಲಾಭ, ನಷ್ಟ, ಸಂಭ್ರಮ, ದುರಂತ, ಸವಾಲುಗಳನ್ನು ಮುಂದಿನ ದಿನಗಳಲ್ಲಿ ತಂದೊಡ್ಡಬಹುದಾದದ್ದು ಕೃತಕ ಬುದ್ಧಿಮತ್ತೆ. ಏನೇ ಮಾಡಿದರೂ ಇಂದಿನ ಆಧುನಿಕ, ಸ್ಪರ್ಧಾತ್ಮಕ, ಕಾರ್ಪೊರೇಟ್ ಜಗತ್ತಿನಲ್ಲಿ ಅದನ್ನು ತಡೆಹಿಡಿಯುವುದು ಸಾಧ್ಯವಿಲ್ಲ. ಆದಷ್ಟು ಬೇಗ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತದೆ. ಗ್ರಾಹಕ ಸಂಸ್ಕೃತಿಯ ಇಂದಿನ ಕೊಳ್ಳುಬಾಕ ಮನಸ್ಥಿತಿ ಅದನ್ನು ಅತ್ಯಂತ ಶೀಘ್ರವಾಗಿ ನಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ. ನೀವು ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು ಮತ್ತು ಸ್ವೀಕರಿಸಲೇಬೇಕಾದ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿ ಮಾಡಲಾಗುತ್ತದೆ……
ಈಗ ಆಧುನಿಕ ತಂತ್ರಜ್ಞಾನ ನಮಗೆ ಅನೇಕ ಒಳ್ಳೆಯ, ಸಾಕಷ್ಟು ಕೆಟ್ಟ, ದುಷ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆಯಲ್ಲವೇ, ಹಾಗೆಯೇ ಇದರ ಲಾಭ ನಷ್ಟಗಳಿಗೂ ನಾವು ಮುಕ್ತವಾಗಿ ತೆರೆದುಕೊಳ್ಳಬೇಕು. ಆದರೆ ಹಿಂದಿನ ಒಂದಷ್ಟು ಈ ತಂತ್ರಜ್ಞಾನದ ಅನುಭವಗಳು, ಅದರ ಉಪಯೋಗ ಮತ್ತು ದುರುಪಯೋಗ ನಮ್ಮ ಕಣ್ಣ ಮುಂದೆ ಇರುವಾಗ ನಾವು ಅತ್ಯಂತ ಜಾಗರೂಕವಾಗಿ ಈ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಳ್ಳಬೇಕು ಎಂಬ ಪ್ರಜ್ಞೆ ಜಾಗೃತವಾಗಲು ಈಗ ಅವಕಾಶವಿದೆ…..
ಇದು ಬಹುತೇಕ ಎರಡು ಅಲಗಿನ ಕತ್ತಿಯಂತೆ. ತುಂಬಾ ಸೂಕ್ಷ್ಮ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅನೇಕ ವೈದ್ಯಕೀಯ, ಹಣಕಾಸಿನ ವ್ಯವಹಾರ, ಆರ್ಥಿಕ ಸುರಕ್ಷತೆ, ವಾಹನ ಚಾಲನೆ ಮುಂತಾದ ಕ್ಷೇತ್ರಗಳಲ್ಲಿ ಈ ಕೃತಕ ಬುದ್ಧಿಮತ್ತೆ ಅತ್ಯಂತ ಉಪಯುಕ್ತವಾದ, ಪ್ರಾಮಾಣಿಕವಾದ, ದಕ್ಷವಾದ ಕೆಲಸಗಳನ್ನು ನಿರ್ವಹಿಸಬಹುದು. ತಪ್ಪುಗಳು, ಅಪಘಾತಗಳು, ಆಕಸ್ಮಿಕಗಳು ತುಂಬಾ ಕಡಿಮೆಯಾಗಬಹುದು. ಹಾಗೆಯೇ ಅದು ತಂದೊಡ್ಡಬಹುದಾದ ಅಪಾಯಗಳು, ವಂಚನೆಗಳು, ಗೊಂದಲಗಳು ಪ್ರಾಣಾಂತಿಕವೂ ಆಗಬಹುದು…..
ಎಷ್ಟರಮಟ್ಟಿಗೆ ಅದು ನಮ್ಮನ್ನು ಆಕ್ರಮಿಸಬಹುದು, ಮಾನವ ಜನಾಂಗವನ್ನು ಅಭಿವೃದ್ಧಿ ಅಥವಾ ವಿನಾಶದ ಅಂಚಿಗೆ ತೆಗೆದುಕೊಂಡು ಹೋಗಬಹುದು ಎಂಬ ಬಗ್ಗೆ ಈಗಲೇ ಊಹಿಸುವುದು ಕಷ್ಟ. ಅದು ಪ್ರವೇಶಿಸುವ ಕ್ಷೇತ್ರಗಳು, ಆ ಕ್ಷೇತ್ರಗಳ ಮೇಲೆ ಅದು ಸಾಧಿಸಬಹುದಾದ ನಿಯಂತ್ರಣ ಎಲ್ಲವೂ ಪ್ರಾಯೋಗಿಕವಾಗಿ ಆಚರಣೆಗೆ ಬಂದ ನಂತರವೇ ಅರ್ಥವಾಗುತ್ತದೆ……
ಈ ಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯಲ್ಲಿ ಚೀನಾ ತುಂಬಾ ಮುಂದೆ ಸಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಇದು ಇಡೀ ವಿಶ್ವವನ್ನೇ ವ್ಯಾಪಿಸುವ ಸಾಧ್ಯತೆಯೂ ಇದೆ. ಸಹಜವಾಗಿಯೇ ಅದಕ್ಕೆ ಪ್ರತಿರೋಧವೂ ಅಷ್ಟೇ ತೀವ್ರವಾಗಿ ಉಂಟಾಗಬಹುದು…..
ಸಾಮಾನ್ಯವಾಗಿ ಬುದ್ಧಿಮತ್ತೆ ಅಥವಾ ಇಂಟಲಿಜೆನ್ಸ್ ಎಂಬುದು ಮಾನವ ಅತ್ಯಂತ ಇಷ್ಟಪಡುವ ಒಂದು ಭಾವನಾತ್ಮಕ, ಪ್ರಾಯೋಗಿಕ, ವ್ಯವಹಾರಿಕ ಪ್ರತಿಭೆ. ಅದನ್ನು ಕೃತಕ ಬುದ್ಧಿಮತ್ತೆ ಎಂದು ಕರೆಯುವುದು ಸಂಪ್ರದಾಯವಾದಿಗಳಿಗೆ, ವಿಚಾರವಾದಿಗಳಿಗೆ ಒಂದಷ್ಟು ಹಿಂಸೆಯಾಗಬಹುದು. ಏಕೆಂದರೆ ಯಾವುದೇ ಶ್ರಮವಿಲ್ಲದೆ, ಎಲ್ಲವನ್ನು ಕೃತಕ ಬುದ್ಧಿಮತ್ತೆಯೇ ಕೃತಕವಾಗಿ ನಿರ್ವಹಿಸುವುದನ್ನು ಜೀವವಿಲ್ಲದ ದೇಹಕ್ಕೆ ಹೋಲಿಕೆ ಮಾಡಿದಂತಾಗಿ ಖಂಡಿತವಾಗಲೂ ಆ ಬಗ್ಗೆ ಬೇಸರವಾಗುತ್ತದೆ, ಹಿಂಸೆಯಾಗುತ್ತದೆ. ಬುದ್ಧಿ ಮತ್ತೆ ಕೃತಕವಾದರೆ ಮನುಷ್ಯನಿಗೆ, ಆತನ ಅಸ್ತಿತ್ವಕ್ಕೆ ಬೆಲೆ ಎಲ್ಲಿರುತ್ತದೆ…..
ಹಾಗೆಂದು ಅದನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿಯೂ ನಾವಿಲ್ಲ. ಆಯ್ಕೆ ಮತ್ತು ಅವಕಾಶಗಳಿದ್ದರೂ ಕಾರ್ಪೊರೇಟ್ ಸಂಸ್ಕೃತಿ ಒತ್ತಾಯಪೂರ್ವಕವಾಗಿ ಕೃತಕ ಬುದ್ಧಿಮತ್ತೆಯನ್ನು ನಮ್ಮ ಮೇಲೆ ವ್ಯವಹಾರಿಕವಾಗಿ ಹೇರದೆ ಬಿಡುವುದಿಲ್ಲ. ಈಗಲೂ ಸಹ ದೊಡ್ಡ ದೊಡ್ಡ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು, ತಂತ್ರಜ್ಞಾನಿಗಳು, ಆಡಳಿತಗಾರರು, ಸಾಹಿತಿಗಳು, ಬುದ್ದಿಜೀವಿಗಳು, ಜನಸಾಮಾನ್ಯರು ಈ ಕೃತಕ ಬುದ್ಧಿಮತ್ತೆಯ ಮುಂದಿನ
ಕಬಂಧ ಬಾಹುಗಳ ಬಗ್ಗೆ ಕುತೂಹಲದಿಂದ, ಕೆಲವರು ಆತಂಕದಿಂದ ಕಾಯುತ್ತಿದ್ದಾರೆ…..
ಒಂದಂತೂ ಸತ್ಯ, ಕೃತಕ ಬುದ್ಧಿಮತ್ತೆ ಸಂಪೂರ್ಣ ಪ್ರಾಯೋಗಿಕವಾಗಿ ಈ ವ್ಯವಹಾರಿಕ ಜಗತ್ತನ್ನು ಪ್ರವೇಶಿಸಿದ ಮೇಲೆ ಅದರ ಉಪಯೋಗ ಪಡೆಯುವ ಕೆಲವರ ಬದುಕು ದಿಢೀರನೆ ಶ್ರೀಮಂತಿಕೆಯತ್ತ ಸಾಗಿದರೆ, ಮತ್ತೊಂದಷ್ಟು ಜನ ನಿರುದ್ಯೋಗದಿಂದಲೋ, ಅಜ್ಞಾನದಿಂದಲೋ ಆ ಕೃತಕ ಬುದ್ಧಿಮತ್ತೆಗೆ ಹೊಂದಾಣಿಕೆ ಮಾಡಿಕೊಳ್ಳದೆಯೋ ನಷ್ಟ ಅನುಭವಿಸುವುದು ಸಹ ಅಷ್ಟೇ ವಾಸ್ತವ…..
ಆದ್ದರಿಂದ ಎಲ್ಲಾ ಗೆಳೆಯ, ಗೆಳತಿಯರೇ, ಕೃತಕ ಬುದ್ಧಿಮತ್ತೆಯ ಬೆಳವಣಿಗೆ ನಮ್ಮ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸೂಕ್ಷ್ಮವಾಗಿ, ದೂರ ದೃಷ್ಟಿಯಿಂದ ಅವಲೋಕಿಸುತ್ತಿರಿ. ಯಾರಿಗಾದರೂ ನಿಜಕ್ಕೂ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕರೆ ಸಾಮಾಜಿಕ ಜಾಲತಾಣಗಳ ಮುಖಾಂತರ ಹಂಚಿಕೊಳ್ಳುತ್ತೀರಿ. ಏಕೆಂದರೆ ಯಾರಿಗೂ ಇನ್ನೂ ತುಂಬಾ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಒಂದು ಅಂದಾಜು ಮಾಡಬಹುದಷ್ಟೇ….
ಮುಂದೆ ನೋಡೋಣ, ಕನಿಷ್ಠ ಈ ವರ್ಷದ ಕೊನೆಯ ಹೊತ್ತಿಗೆ ಯಾವ ರೀತಿಯ ತಿರುವುಗಳನ್ನು ಕೃತಕ ಬುದ್ಧಿಮತ್ತೆ ಪಡೆಯುತ್ತದೆ, ಅದನ್ನು ಕಾಲಕಾಲಕ್ಕೆ ವಿಮರ್ಶಗೊಳಪಡಿಸುತ್ತಾ ಮುಂದುವರಿಯೋಣ. ಈಗಾಗಲೇ ವಾಹನ ಚಾಲನೆ, ಸಾಹಿತ್ಯ ರಚನೆ, ವೈದ್ಯಕೀಯ ಶಸ್ತ್ರ ಚಿಕಿತ್ಸೆ, ಸಂಗೀತ ಮುಂತಾದ ಲಲಿತ ಕಲೆಗಳಲ್ಲೂ, ಹಣಕಾಸು ನಿರ್ವಹಣೆಯಲ್ಲೂ ಈ ಕೃತಕ ಬುದ್ಧಿಮತ್ತೆ ತನ್ನ ಪ್ರಭಾವ ಬೀರಲು ಪ್ರಾರಂಭಿಸಿದೆ. ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಗಣನೀಯ ಯಶಸ್ಸು ಸಾಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು…..
ಭಾರತದ ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಇದರ ಪಾತ್ರ ಏನಾಗಬಹುದು, ಮಾನವೀಯ ಮೌಲ್ಯಗಳ ಅಂತಃಕರಣ ಅಥವಾ ವಿನಾಶದ ವಿಷಯದಲ್ಲಿ ಕೃತಕ ಬುದ್ಧಿಮತ್ತೆಯ ಕೊಡುಗೆ ಏನಿರಬಹುದು ಹೀಗೆ ಒಂದಕ್ಕೊಂದು ಕುತೂಹಲ ಹೆಚ್ಚಿಸುತ್ತದೆ. ಯುದ್ಧ, ಕಳ್ಳತನ, ದ್ವೇಷ, ಅಸೂಯೆ, ವಂಚನೆಗಳಲ್ಲಿ ಕೃತಕ ಬುದ್ಧಿಮತ್ತೆ ಅಪಾಯಕಾರಿಯೋ, ಉಪಕಾರಿಯೋ ಅದು ಇನ್ನೂ ಸ್ಪಷ್ಟವಾಗುತ್ತಿಲ್ಲ….
ಭಾರತ ಉದಾರೀಕರಣ ನೀತಿಯ ಅನ್ವಯ ಮುಕ್ತ ಮಾರುಕಟ್ಟೆಗೆ ಪ್ರವೇಶಿಸಿದ ಮೇಲೆ ಲಕ್ಷಾಂತರ ರೈತರು ಅದಕ್ಕೆ ಒಗ್ಗಿಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡರು. ಹಾಗೆಯೇ ಅದರಿಂದಲೇ ಭಾರತದಲ್ಲಿ ಮಹಿಳಾ ಉದ್ಯೋಗ, ಸ್ವಾವಲಂಬನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಆನ್ಲೈನ್ ಗೇಮಿಂಗ್ ನಿಂದ ಎಷ್ಟೋ ಕುಟುಂಬಗಳು ನಾಶವಾದವು, ಮೊಬೈಲ್ ತಂತ್ರಜ್ಞಾನದಿಂದ ಎಷ್ಟೋ ವ್ಯವಹಾರಗಳು ಅಭಿವೃದ್ಧಿ ಹೊಂದಿದವು…..
ಒಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಭವಿಷ್ಯದ ಬಹುದೊಡ್ಡ ಸವಾಲು ಎಂಬುದಂತೂ ನಿಜ. ಎಲ್ಲವನ್ನು ಸ್ವೀಕರಿಸುತ್ತಾ, ಅನುಭವಿಸುತ್ತಾ,
“ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ……”
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….