ನೂರು ವರ್ಷಗಳ ನಂತರ 1924/2024…….
1924 ರ ಡಿಸೆಂಬರ್ 26/27 ರಂದು ಬೆಳಗಾವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಮಹಾತ್ಮ ಗಾಂಧಿಯವರ ಆ ಸಮಾರಂಭದ ನೂರು ವರ್ಷಗಳ ನಂತರದ ಭಾರತ……
ಸ್ವಾತಂತ್ರ್ಯ ಹೋರಾಟದ ಮಹತ್ವದ ಘಟ್ಟವಿದು. ಈ ಅಧಿವೇಶನದ 23 ವರ್ಷಗಳ ನಂತರ ಅನೇಕರ ತ್ಯಾಗ ಬಲಿದಾನ ನಿಸ್ವಾರ್ಥ ಸೇವೆಯಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಯಶಸ್ವಿಯಾಯಿತು. ಅದು ಈಗ ಹೇಗಿದೆ…….
ಭ್ರಷ್ಟಾಚಾರಿಗಳ ಭಾರತ, ಜಾತಿವಾದಿಗಳ ಭಾರತ, ಕೋಮುವಾದಿಗಳ ಭಾರತ,
ವಂಶಾಡಳಿತದ ಭಾರತ, ಹಣಬಲ ತೋಳ್ಬಲದ ಭಾರತ,
ಚುನಾವಣಾ ಅಕ್ರಮಗಳ ಭಾರತ,
ಕಾರ್ಪೊರೇಟ್ ವ್ಯಾಪಾರಿಗಳ ಭಾರತ,………
ಜನಸಂಖ್ಯೆಯಲ್ಲಿ ವಿಶ್ವದ ಮೊದಲನೇ ಸ್ಥಾನದ ಭಾರತ, ಆರ್ಥಿಕತೆಯಲ್ಲಿ ಐದನೇ ಸ್ಥಾನದ ಭಾರತ,
ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಲ್ಲಿ ಅಮೋಘ ಯಶಸ್ಸು ಪಡೆದ ಭಾರತ,
ಬಲಿಷ್ಠ ಸೈನಿಕ ಪಡೆಯಲ್ಲಿ ಸ್ಥಾನ ಪಡೆದ ಭಾರತ,
ಹಸಿವು, ಬಡತನ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮುಂತಾದವುಗಳಲ್ಲಿ ನೂರರ ಸಮೀಪದಲ್ಲಿ ಸ್ಥಾನ ಪಡೆದಿರುವ ಭಾರತ,…..
ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಟ್ಟ ಭಾರತ,
ಐಟಿ ಬಿಟಿ ತಂತ್ರಜ್ಞಾನದಲ್ಲಿ ಬಲಿಷ್ಠ ಭಾರತ,
ರಿಯಲ್ ಎಸ್ಟೇಟ್, ಗ್ರಾಹಕ ಸಂಸ್ಕೃತಿಯಲ್ಲಿ ತೀವ್ರವಾಗಿ ಮುಂದುವರಿಯುತ್ತಿರುವ ಭಾರತ,
ಪರಿಸರ ನಾಶ, ಮಾನವೀಯ ಮೌಲ್ಯಗಳ ವಿನಾಶದತ್ತ ಸರಿಯುತ್ತಿರುವ ಭಾರತ, ಯುವಶಕ್ತಿ ನಿರ್ವೀರ್ಯಗೊಂಡು ಹಾದಿ ತಪ್ಪುತ್ತಿರುವ ಭಾರತ…..
ವೈಚಾರಿಕ, ವೈಜ್ಞಾನಿಕ, ಪ್ರಗತಿಪರ ಚಿಂತನೆಗಳತ್ತ ವಾಲುತ್ತಿರುವ ಭಾರತ, ಮೌಡ್ಯಗಳಿಗೆ ಶರಣಾಗುತ್ತಿರುವ ಭಾರತ,
ವಿಶ್ವಗುರುವಾಗುತ್ತ ಭಾರತ,
ಮೂಲ ಸಂಸ್ಕೃತಿ ಮರೆತ ಭಾರತ,
ಬೌದ್ಧ ಭಾರತ,
ಸ್ವಾಮಿ ವಿವೇಕಾನಂದರ ಭಾರತ,
ಬಾಬಾ ಸಾಹೇಬ್ ಅಂಬೇಡ್ಕರ್ ಭಾರತ, ಗೋಡ್ಸೆಯ ಭಾರತ, ರಾಮ – ಕೃಷ್ಣರ ಭಾರತ,
ಮೋದಿ ಭಾರತ,
ಅಪಘಾತ, ಆತ್ಮಹತ್ಯೆ,
ಅನಾರೋಗ್ಯ, ಅಪರಾಧಗಳ ಭಾರತ,…
ನೆಮ್ಮದಿಯ, ಸುರಕ್ಷತೆಯ, ವ್ಯಕ್ತಿ ಸ್ವಾತಂತ್ರ್ಯದ ಘನತೆ ಎತ್ತಿ ಹಿಡಿಯುವ ಭಾರತ,
ಆಧ್ಯಾತ್ಮದ ತವರೂರು ಭಾರತ,
ರಾಜಕೀಯ ಪಕ್ಷಗಳ ದಾಳವಾದ ಭಾರತ, ಮತದಾರರ ಸಾರ್ವಭೌಮತ್ವದ ಭಾರತ……..
ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರು ಬಿಹಾರದಲ್ಲಿ ಇದ್ದಾರೆ…..
ತನ್ನ ಕುಟುಂಬದವರ ಎರಡೊತ್ತಿನ ಊಟಕ್ಕಾಗಿ 5/6 ಜನ ವಿಟಪುರುಷರಿಗೆ ತನ್ನ ಮುದಿ ದೇಹವನ್ನು ಮಾರಿಕೊಳ್ಳುವ ಹೆಣ್ಣುಗಳು ಅಸ್ಸಾಮಿನಲ್ಲಿದ್ದಾರೆ…..
ಇನ್ನೂ ಟಿವಿ ಎಂದರೆ ಏನೆಂದು ತಿಳಿಯದ ಸಾಕಷ್ಟು ಜನರು ನಾಗಾಲ್ಯಾಂಡ್ ನಲ್ಲಿದ್ದಾರೆ….
ಹಣಕ್ಕಾಗಿ ತಮ್ಮ ಕಿಡ್ನಿಯನ್ನೇ ಬೇಗ ಮಾರಿಸಿಕೊಡಲು ದಲ್ಲಾಳಿಗಳಿಗೆ ದಂಬಾಲು ಬಿದ್ದು ಲಂಚ ಕೊಡುವ ಹಳ್ಳಿಗಳು
ಜಾರ್ಖಂಡ್ ನಲ್ಲಿವೆ……
ಹಣಕ್ಕಾಗಿ ಮಕ್ಕಳನ್ನು ಹೆತ್ತು ಮಾರುವ ಬಾಡಿಗೆ ತಾಯಂದಿರ ಒಂದು ವರ್ಗವೇ ಒರಿಸ್ಸಾದಲ್ಲಿದೆ…….
ತಮ್ಮ ಮನೆಯಲ್ಲಿಯೇ ತಾಯಿ, ಹೆಂಡತಿ, ಅಕ್ಕ ತಂಗಿಯರನ್ನು ಇಟ್ಟುಕೊಂಡು ವೇಶ್ಯಾಗೃಹ ನಡೆಸುವ ಅನೇಕ ಊರುಗಳು ಆಂಧ್ರ ಪ್ರದೇಶದಲ್ಲಿ ಇವೆ……
ಮಕ್ಕಳನ್ನು ಕದ್ದು ಅವರ ಕಣ್ಣುಕಿತ್ತು ಅಥವಾ ಅಂಗವಿಕಲರನ್ನಾಗಿ ಮಾಡಿ ಅವರಿಂದ ಭಿಕ್ಷೆ ಬೇಡಿಸಿ ಜೀವಿಸುವ ಕೆಲವು ಕುಟುಂಬಗಳು
ಛತ್ತೀಸ್ ಗಡದಲ್ಲಿವೆ…….
ಇಡೀ ಜೀವನವನ್ನೇ ಕುಟುಂಬ ಸಮೇತ ರಸ್ತೆಯ ಬದಿಯಲ್ಲಿಯೇ ಕಳೆಯುವ ಅನೇಕ ಸಂಸಾರಗಳು ಮುಂಬಯಿಯಲ್ಲಿವೆ……
ಹುಟ್ಟಿಸಿದ ತಂದೆ ತಾಯಿಯನ್ನೇ ಅನುಕೂಲಸ್ಥ ಮಗನೊಬ್ಬ ಹೆಂಡತಿಯ ಮಾತು ಕೇಳಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭಿಕ್ಷಾಟನೆ ಮಾಡುತ್ತಿದ್ದ ಅಪರಾಧಿಗಳೆಂದು ಸುಳ್ಳು ಹೇಳಿ ಸೇರಿಸಿದ ಪ್ರಕರಣಕ್ಕೆ ಕರ್ನಾಟಕದಲ್ಲಿ ನಾನೇ ಖುದ್ದು ಸಾಕ್ಷೀದಾರ…….
ಪ್ರಧಾನಿ, ಮುಖ್ಯಮಂತ್ರಿ ಇರಲಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವೇ ಇರದ ಬಹಳಷ್ಟು ಜನರು ಉತ್ತರ ಪ್ರದೇಶದಲ್ಲಿದ್ದಾರೆ…..
ಇದು ಕೆಲವು ಸಾಂಕೇತಿಕ ಉದಾಹರಣೆಗಳು ಅಷ್ಟೆ. ಇನ್ನೂ ಭ್ರಷ್ಟಾಚಾರ, ಸುಳ್ಳು, ವಂಚನೆಗಳನ್ನೇ ವೃತ್ತಿ ಮಾಡಿಕೊಂಡಿರುವ ಅನೇಕರನ್ನು ದೇಶದ ಎಲ್ಲಾ ವಿಧಾನ ಮಂಡಲಗಳು ಮತ್ತು ಸಂಸತ್ತಿನಲ್ಲೂ ಕಾಣಬಹುದು
ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ…….
ಹಾಗೆಯೇ ಪ್ರೀತಿ, ತ್ಯಾಗ, ಕ್ಷಮೆ, ಕರುಣೆ ಮುಂತಾದ ಮಾನವೀಯ ಗುಣಗಳ, ಬಲಿದಾನಗಳ, ಬಹುದೊಡ್ಡ ಸಾಧನೆಗಳ ದೊಡ್ಡ ಪರಂಪರೆ ಭಾರತದಲ್ಲಿದೆ. ಈಗ ನಮ್ಮ ಮುಂದಿನದು ಯಾವ ಭಾರತ ಎಂಬುದರ ಆಯ್ಕೆ ಮಾತ್ರ ನಾವು ಮಾಡಬೇಕಾಗಿದೆ…..
ವಿಶ್ವಗುರು ಭಾರತ ಎನ್ನುವ ನಾವು ಇದನ್ನೂ ಗಮನಿಸಬೇಕಲ್ಲವೇ.
ಸಂವೇದನೆಗಳೇ ಇಲ್ಲದ ಈ ವ್ಯವಸ್ಥೆಯ ಬಗ್ಗೆ ಆಕ್ರೋಶ ಉಂಟಾಗುತ್ತದೆ.
ಬದಲಾವಣೆ ಕೆಳ ಮಟ್ಟದಿಂದ ಆಗಬೇಕಿದೆ.
ಇದರಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಇದೆ.
ಅದನ್ನು ನಿಭಾಯಿಸಲು ಸಿದ್ದರಾಗೋಣ……..
ಮಹಾತ್ಮರಿದ್ದ ನಾಡಿನಲ್ಲಿ ನಾವು ಮಹಾತ್ಮರ ಹಾದಿಯಲ್ಲಿ ಸಾಗಲು ಪ್ರಯತ್ನಿಸೋಣ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..