Spread the love

ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ…….

ಸರಳ ಧ್ಯಾನ……….

ಧ್ಯಾನದ ಸಾಮಾನ್ಯ ಅರ್ಥ,
ಧ್ಯಾನದ ಸಹಜ ಸರಳ ಅಭ್ಯಾಸ,
ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ,
ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು,…….
ಒಂದು ಸಣ್ಣ ವಿವರಣೆ……

ಇದು ಆಧ್ಯಾತ್ಮಿಕ ಚಿಂತನೆಯಲ್ಲ. ಆಧುನಿಕ ಒತ್ತಡದ ಬದುಕಿನಲ್ಲಿ ಧ್ಯಾನ ಎಂಬ ಕ್ರಿಯೆಯಿಂದ ವಾಸ್ತವವಾಗಿ ಸ್ವಲ್ಪಮಟ್ಟಿನ ಲಾಭ ಪಡೆದು ನೆಮ್ಮದಿ ಅಥವಾ ಮನಸ್ಸಿನ ಶಾಂತಿಯ ಮಟ್ಟ ಹೆಚ್ಚಿಸುವ ಪ್ರಯತ್ನ ಮಾತ್ರ….

ಧ್ಯಾನದ ಆಳವಾದ ಅರ್ಥ ಏನೇ ಇರಲಿ ಅಥವಾ ನಿಮಗೆ ಅರ್ಥವಾಗದೇ ಇರಲಿ ಆದರೆ ಧ್ಯಾನದಿಂದ ನಿಜವಾಗಿಯೂ ಕನಿಷ್ಠ ಮಟ್ಟದ ಸ್ವಯಂ ನಿಯಂತ್ರಣ ಸಾಧ್ಯ……

ಧ್ಯಾನಕ್ಕೆ ಹಲವಾರು ವ್ಯಾಖ್ಯಾನಗಳು ಇದ್ದರೂ ಸರಳವಾಗಿ ಹೇಳುವುದಾದರೆ ದೇಹ ಹಾಗು ಮನಸ್ಸಿನ ಮೇಲೆ ಪ್ರಭಾವ ಬೀರುವ ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವ ಯೋಗದ ಒಂದು ವಿಧಾನ.
ಆತ್ಮಾವಲೋಕನದ, ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗವೂ ಹೌದು…..

ಸಾಮಾನ್ಯ ಜನ ಸಾಮಾನ್ಯ ರೀತಿಯಲ್ಲಿ ಎಲ್ಲರೂ ಧ್ಯಾನ ಮಾಡಬಹುದು. ಯಾವುದೇ ನಿರ್ಬಂಧವಿಲ್ಲ………

1) ಜ್ಞಾನ ಯೋಗ – ಭಕ್ತಿ ಯೋಗ – ಕರ್ಮ ಯೋಗ – ರಾಜ ಯೋಗ ಎಂಬ ನಾಲ್ಕು ಮಾರ್ಗಗಳಲ್ಲಿ ರಾಜಯೋಗದ ಉಪ ಮಾರ್ಗ ಈ ಧ್ಯಾನ. ಈ ನಾಲ್ಕೂ ಮಾರ್ಗಗಳ ಉದ್ದೀಪನ ವಿಧಾನವೂ ಸಹ. ಇದು ಉಳಿದ ಮೂರು ಮಾರ್ಗಗಳಿಗೆ ಪೂರಕ ಸಹ ಆಗಿದೆ…..

2 ) ನೀವು ಯಾವುದೇ ಜಾತಿ ಧರ್ಮ ಭಾಷೆ ಪ್ರದೇಶ ಲಿಂಗ ಹಣ ಅಂತಸ್ತು ಶಿಕ್ಷಣ ಏನೇ ಆಗಿದ್ದರೂ ಧ್ಯಾನ ಮಾಡಬಹುದು…..

3) ಧ್ಯಾನವನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದಾದರು ಬೆಳಗಿನ ಸಮಯ ಹೆಚ್ಚು ಸೂಕ್ತ….

4) ಪ್ರಾರಂಭದಲ್ಲಿ ಕನಿಷ್ಠ 15 ನಿಮಿಷದಿಂದ ಆರಂಭಸಿ ಒಂದು ಗಂಟೆ ಅಥವಾ ಸಮಯಾವಕಾಶವಿದ್ದರೆ ಅದಕ್ಕಿಂತ ಹೆಚ್ಚು ವಿಸ್ತರಿಸಬಹುದು…..

5 ) ಇದಕ್ಕೆ ಯಾವುದೇ ಒತ್ತಡ ಅಥವಾ ಪೂರ್ವ ತಯಾರಿ ಬೇಕಾಗಿಲ್ಲ. ನೀವಿರುವ ಜಾಗದಲ್ಲಿ ಅಂದರೆ ಹಾಸಿಗೆಯೋ, ಚಾಪೆಯೋ, ನೆಲವೋ ಅಥವಾ ಮೊಣಕಾಲು ನೋವಿದ್ದರೆ ಕುರ್ಚಿಯಾದರೂ ಚಿಂತೆ ಇಲ್ಲ, ಒಂದು ಸ್ಥಳದಲ್ಲಿ ಕಣ್ಣು ಮುಚ್ಚಿ ಮೌನವಾಗಿ ಕುಳಿತುಕೊಳ್ಳಿ….

6) ಒಂದು ವಾರ 15 ನಿಮಿಷ,
ನಂತರದ ವಾರಗಳಲ್ಲಿ 20/25/30 ರ ಅನುಪಾತದಲ್ಲಿ ಹೆಚ್ಚಿಸುತ್ತಾ ಹೋಗಿ. ಇದಕ್ಕಾಗಿ ಅಲಾರಾಂ ಉಪಯೋಗಿಸಿ…..

7) ಮನಸ್ಸನ್ನು ಯಾವುದೇ ಕಾರಣಕ್ಕೂ ನಿಯಂತ್ರಿಸಲು ಹೋಗಬೇಡಿ. ಒಳ್ಳೆಯದೋ ಕೆಟ್ಟದ್ದೋ ಒಟ್ಟಿನಲ್ಲಿ ಸ್ವತಂತ್ರವಾಗಿ ಹರಿಯಲು ಬಿಡಿ. ಏನೇ ವಿಚಾರ ಬಂದರೂ ತಲೆಕೆಡಿಸಿಕೊಳ್ಳಬೇಡಿ…..

8) ಸುಮಾರು 100 ದಿನಗಳ ಅವಧಿಯಲ್ಲಿ ನೀವು ‌45/60 ನಿಮಿಷ ಕಣ್ಣು ಮುಚ್ಚಿಕೊಂಡು ಒಂದು ಸ್ಥಳದಲ್ಲಿ ಯಾವುದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಭ್ಯಾಸ ಮಾಡಿದರೆ ಅಥವಾ ಅದು‌ ಸಾಧ್ಯವಾದರೆ ನೀವು ಧ್ಯಾನದ ಮೊದಲ ಮೆಟ್ಟಿಲು ಹತ್ತಿದಂತಾಗುತ್ತದೆ. ವಜ್ರಾಸನ, ಪದ್ಮಾಸನ, ಸುಖಾಸನ ಯಾವುದಾದರೂ ಆಗಬಹುದು……

9) ಎರಡನೇ ಹಂತದಲ್ಲಿ ಮನಸ್ಸನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು 1 2 3 4 5…….. ಅಂಕಿಗಳ ಮೊರೆ ಹೋಗಿ. 1 ರಿಂದ 100…. ಮತ್ತೆ ಮತ್ತೆ ಹೀಗೆ ಮನಸ್ಸಿನಲ್ಲಿ ಎಣಿಸುತ್ತಾ ಇರಬೇಕು. ಆಗಲೂ ಮನಸ್ಸು ಎಲ್ಲೆಲ್ಲೂ ಅಲೆಯುತ್ತಿರುತ್ತದೆ. ಆದರೆ ಸಂಖ್ಯೆಗಳು ತಪ್ಪಾಗದಂತೆ ಎಚ್ಚರಿಕೆ ವಹಿಸಿದರೆ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ…..

10) ಸುಮಾರು 45 ದಿನಗಳ ಈ ಅಭ್ಯಾಸದ ನಂತರ ಮೂರನೇ ಹಂತ ಓಂ ಪಠಿಸುವುದು. ದೀರ್ಘ ಮತ್ತು ನಿಧಾನಗತಿಯ ಉಚ್ವಾಸ ಮತ್ತು ನಿಶ್ವಾಸ ಮಾಡುವುದರಿಂದ ಮನಸ್ಸು ಮತ್ತಷ್ಟು ನಿಯಂತ್ರಣಕ್ಕೆ ಬರುತ್ತದೆ. ಓಂ ಯಾವುದೇ ಧರ್ಮದ ಮಂತ್ರವಲ್ಲ. ಉಚ್ವಾಸ ನಿಶ್ವಾಸಗಳ ಸರಾಗ ಚಲನೆಗೆ ಅನುಸರಿಸುವ ಧ್ವನಿಯ ವಿಧಾನ. ಭಾರತೀಯರು ಇದನ್ನು ಹೆಚ್ಚಾಗಿ ಬಳಸುತ್ತಾರೆ…..

11) ನಂತರ ಉಸಿರಿನ ಏರಿಳಿತ ಗಮನಿಸುವ ಮುಖಾಂತರ ಮತ್ತು ಒಂದು ಗಂಟೆಯಷ್ಟು ದೀರ್ಘಕಾಲ ಧ್ಯಾನ ಮಾಡಿದರೆ ಖಂಡಿತ ಧ್ಯಾನದ ಪ್ರಯೋಜನ ಪಡೆಯಬಹುದು. ಮನಸ್ಸನ್ನು ನಿಯಂತ್ರಿಸಬಹುದು. ಪ್ರಾರಂಭದಲ್ಲಿ ಕಷ್ಟವಾದರು ಅಭ್ಯಾಸವಾದ ನಂತರ ನಮ್ಮಲ್ಲಿ ಚೇತೋಹಾರಿ ಮನಸ್ಥಿತಿ ಸೃಷ್ಟಿಸುತ್ತದೆ. ನಿರಾಶೆಯನ್ನು ಕಡಿಮೆ ಮಾಡುತ್ತದೆ……

ಧ್ಯಾನ ಒಂದು ನಿಯಂತ್ರಣಕ್ಕೆ ಬಂದಮೇಲೆ ಧ್ಯಾನದ ನಂತರ ಕೆಲವು ಕ್ಷಣ ನಮ್ಮ ಇರುವಿಕೆಯೇ ಅರಿವಾಗುವುದಿಲ್ಲ ಅಷ್ಟು ಮೈ ಮರೆಸುತ್ತದೆ……

ಕೆಲವು ಸಲಹೆಗಳು

ಧ್ಯಾನ ಮಾಡುವಾಗ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಅದರಿಂದ ಏನೂ ತೊಂದರೆ ಇಲ್ಲ. ಕೆಲವು ಕ್ಷಣ ಚೇತರಿಕೊಂಡು ಮತ್ತೆ ಧ್ಯಾನ ಮುಂದುವರಿಸಿ…..

ಧ್ಯಾನದ ಅಭ್ಯಾಸ ಮಾಡುವಾಗ ಅದರ ನಿರಂತರತೆ ಕಾಪಾಡುವುದು ಕಷ್ಟ. ಆಗಾಗ ವಿಫಲವಾಗುತ್ತಲೇ ಇರುತ್ತೇವೆ. ಇದನ್ನು ಸೋಲು ಎಂದು ಭಾವಿಸಬೇಡಿ. ಜೀವನದ ಕೊನೆಯ ಉಸಿರಿನವರೆಗೂ ಇದೊಂದು ಅನಿವಾರ್ಯ ಕ್ರಿಯೆ ಎಂದು ಭಾವಿಸಿ ಅಭ್ಯಾಸ ಮಾಡುತ್ತಲೇ ಇರಿ. ಇಲ್ಲಿ ಸೋಲೂ ಗೆಲುವೂ ಇಲ್ಲವೇ ಇಲ್ಲ.. ಇದೊಂದು ಭಾವ ಅಷ್ಟೇ….

ಮತ್ತೊಂದು ಅತ್ಯಂತ ಪ್ರಮುಖ ವಿಷಯವೆಂದರೆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಧ್ಯಾನ ಮಾಡುವುದು ತುಂಬಾ ಕಷ್ಟ. ವಾಸ್ತವವಾಗಿ ನಮಗೆ ಧ್ಯಾನದ ಅವಶ್ಯಕತೆ ಇರುವುದೇ ಮನಸ್ಸಿನ ಪ್ರಕ್ಷುಬ್ಧ ಸ್ಥಿತಿಯಲ್ಲಿ. ಇದು ಆಗಲೇ ಕೈ ಕೊಡುತ್ತದೆ. ಶಾಂತ ಮತ್ತು ಸಾಮಾನ್ಯ ಮನಸ್ಸಿನ ಸ್ಥಿತಿಯಲ್ಲಿ ಧ್ಯಾನ ಸುಲಭ. ಋಷಿ ಮುನಿಗಳು ಇದನ್ನೇ ಮಾಡುವುದು. ಅವರಿಗೆ ಇದೊಂದು ರೀತಿ ಅನಿವಾರ್ಯ ಕ್ರಿಯೆ…..

ಆದರೆ ನಾವು ಧ್ಯಾನವನ್ನು ಋಷಿ ಮುನಿಗಳ ರೀತಿಯಲ್ಲಿ ನೋಡಬಾರದು ಅಥವಾ ಹೋಲಿಕೆ ಮಾಡಬಾರದು. ಅವರ ಉದ್ದೇಶವೇ ಬೇರೆ ಮತ್ತು ಆಳವಾದದ್ದು. ನಮಗೆ ಬೇಕಿರುವುದು ಇರುವ ವ್ಯವಸ್ಥೆಯಲ್ಲಿ ಅದರ ಪ್ರಯೋಜನ ಮಾತ್ರ. ಅದೇ ನಮ್ಮ ನಿರೀಕ್ಷೆಯಾಗಿರಬೇಕು. ಅಗ ಪ್ರಕ್ಷುಬ್ಧ ಸ್ಥಿತಿಯ ಧ್ಯಾನ ಕನಿಷ್ಠ ನಮ್ಮಿಂದ ಬಹುದೊಡ್ಡ ತಪ್ಪುಗಳನ್ನು ಆಗುವುದು ತಪ್ಪಿಸುತ್ತದೆ…..

ಜೊತೆಗೆ ಧ್ಯಾನ ಒಂದರಿಂದಲೇ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ ಎಂಬ ಭ್ರಮೆಗೆ ಒಳಗಾಗಬೇಡಿ. ಜ್ಞಾನಕ್ಕೆ ಇರುವ ಶಕ್ತಿ ಧ್ಯಾನಕ್ಕೆ ಇಲ್ಲ. ಬುದ್ಧ, ಮಹಾವೀರ, ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದವರು ಧ್ಯಾನವನ್ನು ಅತಿ ಹೆಚ್ಚು ಅನುಭವಿಸಿದವರು. ಆದರೆ ಅದು ಅವರ ಜ್ಞಾನ ಮತ್ತು ಶ್ರಮಕ್ಕೆ ಪೂರಕವಾಗಿ ಮಾತ್ರ……

ಆದ್ದರಿಂದ ಮನಸ್ಸಿನ ನಿಯಂತ್ರಣಕ್ಕೆ ಜ್ಞಾನವೇ ಅತಿಮುಖ್ಯ. ಅದರ ಸ್ವಲ್ಪ ಕೊರತೆಯನ್ನು ಸರಿದೂಗಿಸುವ ಶಕ್ತಿ ಧ್ಯಾನಕ್ಕೆ ಇದೆ ಎಂದು ಮಾತ್ರ ಹೇಳಬಹುದು. ಬಿಪಿ ಶುಗರ್ ಸಹ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ….

ನನ್ನ ಈ ಅಭಿಪ್ರಾಯಕ್ಕೆ ಯಾವುದೇ ದಾಖಲೆ ಅಥವಾ ಸಾಕ್ಷ್ಯ ನನ್ನ ಬಳಿ ಇಲ್ಲ. ಕೇವಲ ನನ್ನ ಅನುಭವದ ಅನಿಸಿಕೆ ಮಾತ್ರ. ಒಪ್ಪುವ ಅಥವಾ ತಿರಸ್ಕರಿಸುವ ಸಂಪೂರ್ಣ ಸ್ವಾತಂತ್ರ್ಯ ನಿಮಗಿದೆ…….

ಆದರೆ ಇದರಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ. ಜೊತೆಗೆ ಜೀವನದ ಸಂಕಷ್ಟ ಸಮಯದಲ್ಲಿ ಅತಿದೊಡ್ಡ ಅನಾಹುತಕ್ಕೆ ಕೈ ಹಾಕುವ ಮನಸ್ಥಿತಿಯನ್ನು ತಡೆದು ಬದುಕನ್ನು ಎದುರಿಸುವ ಆತ್ಮವಿಶ್ವಾಸ ಖಂಡಿತ ನೀಡುತ್ತದೆ……..

ಪ್ರಯಾಣ ಧ್ಯಾನ……

ಸಾಮಾನ್ಯವಾಗಿ ಬಹಳಷ್ಟು ಜನ ದಿನನಿತ್ಯ ಉದ್ಯೋಗ ವ್ಯಾಪಾರ ವೃತ್ತಿ ವಿದ್ಯಾಭ್ಯಾಸ ಮಾರಾಟ ಮುಂತಾದ ನಾನಾ ಕಾರಣಗಳಿಗಾಗಿ ಬಸ್ಸು ರೈಲು ಮುಂತಾದ ವಾಹನಗಳಲ್ಲಿ 20/30/50/100 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಅದಕ್ಕೆ ಅವರದೇ ಆದ ಅನಿವಾರ್ಯ ಕಾರಣ ಇರಬಹುದು. ಆದರೆ ಆ ಅನಿವಾರ್ಯ ಸಮಯದಲ್ಲಿ ಒಂದು ಧ್ಯಾನಸ್ಥ ಮನಸ್ಥಿತಿ ಬೆಳೆಸಿಕೊಂಡು ಸಾಧ್ಯವಾದಷ್ಟು ಧ್ಯಾನಸ್ಥ ಸ್ಥಿತಿ ತಲುಪಲು ಪ್ರಯತ್ನಿಸುವ ಒಂದು ವಿಧಾನವೇ ಪ್ರಯಾಣ ಧ್ಯಾನ.

ಈ ಪ್ರಯಾಣಗಳು ಸಹ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆಯೇ ಇರುತ್ತದೆ. ಇತರೆ ಅಪರೂಪದ ಸಂದರ್ಭಗಳಲ್ಲಿ ಇಡೀ ದಿನ ಇರಬಹುದು. ಆಗ ನಾವು ಬಹುತೇಕರು ನಿದ್ದೆ ಅಥವಾ ಪುಸ್ತಕ ಓದು ಅಥವಾ ಮಾತುಕತೆ ಇದರಲ್ಲಿಯೇ ಸಮಯ ಕಳೆಯುತ್ತೇವೆ. ಇದರ ಜೊತೆಗೆ ಮತ್ತೊಂದು ಪರ್ಯಾಯ ಹವ್ಯಾಸವೇ ಪ್ರಯಾಣ ಧ್ಯಾನ.

ಅಂದರೆ ಪ್ರಯಾಣ ಮಾಡುವಾಗ ಆ ಎಲ್ಲಾ ಶಬ್ದ ಮಾಲಿನ್ಯದ ನಡುವೆಯೂ ಕುಳಿತ ಭಂಗಿಯಲ್ಲಿ ಕಣ್ಣು ಮುಚ್ಚಿ ಧ್ಯಾನ ಮಾಡುವ ಒಂದು ಪ್ರಯತ್ನ.

ಇದು ಹೇಗಿರಬೇಕು…..

ಮೊದಲ ಹಂತದಲ್ಲಿ…..

ಪ್ರಯಾಣದ ನಿಲ್ದಾಣ ಸಮಯವನ್ನು ಖಚಿತಪಡಿಸಿಕೊಂಡು ಗಡಿಯಾರ ಅಥವಾ ಮೊಬೈಲ್‌ ನಲ್ಲಿ ಅದಕ್ಕೆ ಐದು ನಿಮಿಷದ ಮೊದಲಿನ ಸಮಯಕ್ಕೆ ಅಲಾರಾಂ ನಿಗದಿಪಡಿಸಿಕೊಳ್ಳಬೇಕು ಅಥವಾ ಪಕ್ಕದಲ್ಲಿರುವವರಿಗೆ ಆ ಸ್ಥಳ ಬಂದಾಗ ನೆನಪಿಸುವಂತೆ ಮನವಿ ಮಾಡಿಕೊಳ್ಳಬೇಕು. ಪ್ರಾರಂಭದ ದಿನಗಳಲ್ಲಿ ಇದು ಬಹಳ ಮುಖ್ಯ. ನಂತರ ಅದೇ ಅಭ್ಯಾಸವಾಗುತ್ತದೆ. ಅಷ್ಟೂ ಸಮಯ ಕಣ್ಣು ಮುಚ್ಚಿ ಸುಂದರ ಕನಸುಗಳನ್ನು ಕಾಣಬೇಕು. ಅದು ಯಾವುದೇ ವಿಷಯವಾಗಿರಲಿ ನಿಮಗೆ ಸಂತೋಷವನ್ನು ಉಂಟುಮಾಡುವಂತಿರಬೇಕು. ಕೆಲವೊಮ್ಮೆ ಅನೇಕ ಒತ್ತಡಗಳ ಕಾರಣದಿಂದ ಸಂತೋಷದ ದೃಶ್ಯಗಳು ಮನದಲ್ಲಿ ಮೂಡುವುದಿಲ್ಲ. ಆಗ ಹಳೆಯ ಬಾಲ್ಯದ ಸವಿ ನೆನಪುಗಳನ್ನು ಪ್ರಯತ್ನಿಸಬೇಕು. ಅದೂ ಸಾಧ್ಯವಾಗದೆ ದುಃಖದ, ಕಷ್ಟದ, ನೋವಿನ, ಕೆಟ್ಟ ಘಟನೆಗಳು ನೆನಪಾಗಬಹುದು. ಚಿಂತೆ ಬೇಡ. ಅದನ್ನು ಅನುಭವಿಸಿ. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ. ಕೆಲವು ತಿಂಗಳ ಸತತ ಅಭ್ಯಾಸದ ನಂತರ ಒಳ್ಳೆಯ ಕನಸುಗಳು ಖಂಡಿತ ಮೂಡುತ್ತವೆ. ಇಲ್ಲಿ ನಿರಾಸೆ ಬೇಡ.

ಎರಡನೇ ಹಂತದಲ್ಲಿ…..

ಪ್ರಯಾಣ ಧ್ಯಾನದ ದೊಡ್ಡ ಸವಾಲು ಎರಡನೇ ಹಂತ ದಾಟುವುದು. ಅಂದರೆ ‌ಸಾಮಾನ್ಯವಾಗಿ ಬೆಳಗ್ಗೆ ಮತ್ತು ‌ಸಂಜೆ ಈ ರೀತಿಯ ಪ್ರಯಾಣದಲ್ಲಿ ಸಹಜವಾಗಿ ನಿದ್ದೆ ಆವರಿಸುತ್ತದೆ. ರಾತ್ರಿಯ ಮಂಪರು ಅಥವಾ ದಿನದ ದುಡಿತ ಇದಕ್ಕೆ ಕಾರಣ. ಅದಕ್ಕೂ ಚಿಂತೆ ಬೇಡ. ಆರಾಮವಾಗಿ ನಿದ್ರಿಸಿ. ಧ್ಯಾನಸ್ಥ ಸ್ಥಿತಿಯ ನಿದ್ರೆ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಇದು ಸಹ ಕೆಲವು ‌ತಿಂಗಳ ಪ್ರಯತ್ನದ ನಂತರ ನಿದ್ರೆ ಕಡಿಮೆಯಾಗುತ್ತದೆ. ಇದನ್ನು ಗೆಲ್ಲಲು ಆಹಾರದಲ್ಲಿ ಒಂದಷ್ಟು ಒಳ್ಳೆಯ ಪಥ್ಯವನ್ನು ಅನುಸರಿಸಬೇಕು. ಜಿಡ್ಡಿಲ್ಲದ ಊಟ, ಹಣ್ಣು ತರಕಾರಿ ಮೊಳಕೆ ಕಾಳುಗಳು ಉತ್ತಮ.

ಮೂರನೆಯ ಹಂತದಲ್ಲಿ….

ಭವಿಷ್ಯದ ಸಾಧನೆ ಅಥವಾ ಸಾಮಾಜಿಕ ಸೇವೆ ಅಥವಾ ಅರಿವಿನ ವಿಶಾಲತೆ ಹೆಚ್ಚಿಸುವ ವಿವಿಧ ಮಾರ್ಗೋಪಾಯಗಳ ಕುರಿತು ಹೆಚ್ಚು ಚಿಂತಿಸಲು ಪ್ರಯತ್ನಿಸಬೇಕು. ಇದು ಸಹ ಉತ್ತಮ ಪರಿಣಾಮ ಬೀರುತ್ತದೆ.

ನಾಲ್ಕನೆಯ ಹಂತದಲ್ಲಿ……

ನಮ್ಮ ನಡುವಿನ ಮಾನವೀಯ ಸಂಬಂಧಗಳನ್ನು ಹೆಚ್ಚು ಆಪ್ತವಾಗಿಸಲು ನಮ್ಮ ನೆಲೆಯಲ್ಲಿ ಮಾಡಬಹುದಾದ ಪ್ರಯತ್ನಗಳು ಮತ್ತು ನಮ್ಮ ನಡವಳಿಕೆಗಳಲ್ಲಿ ಮಾಡಿಕೊಳ್ಳಬಹುದಾದ ಸಾಧ್ಯವಿರುವ ಬದಲಾವಣೆಗಳನ್ನು ಕುರಿತು ಧ್ಯಾನಿಸಬೇಕು. ಇದು ನಮ್ಮ ಒಟ್ಟು ಜೀವನಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ.

ಐದನೆಯ ಹಂತದಲ್ಲಿ….

ನಿಧಾನವಾಗಿ ಉಸಿರಾಟದ ಉಚ್ವಾಸ ನಿಶ್ವಾಸಗಳ ಮೇಲೆ ಗಮನ ಕೇಂದ್ರೀಕರಿಸಿ ದೇಹ ಮತ್ತು ಮನಸ್ಸುಗಳ ನಿಯಂತ್ರಣ ಸಾಧಿಸಿ ಧ್ಯಾನದ ಮೂಲ ಆಶಯವನ್ನು ತಲುಪಲು ಪ್ರಯತ್ನಿಸಬೇಕು.

ಜೊತೆಗೆ ಇದಕ್ಕಿಂತ ಉತ್ತಮ ವಿಚಾರಗಳು ಹೊಳೆದರೆ ಅದನ್ನು ಸಹ ಅಳವಡಿಸಿಕೊಳ್ಳಬಹುದು.

ಈ ಪ್ರಯಾಣ ಧ್ಯಾನದ ನಿರಂತರತೆಯಿಂದ ಸ್ವಕಾರ್ಯ ಮತ್ತು ಸ್ವಾಮಿಕಾರ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ವಿಶೇಷ ಸಮಯದ ಅವಶ್ಯಕತೆಯೂ ಇಲ್ಲ. ಇದರಿಂದ ನಾವು ಮಾಡುವ ಕೆಲಸದಲ್ಲಿ ಒಂದಷ್ಟು ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. ಜಗಳ ಕೋಪ ಅಸಹನೆ ತಪ್ಪುಗಳು ಕಡಿಮೆಯಾಗಬಹುದು.

ಸಾಧ್ಯವಿರುವವರು,
ಅವಕಾಶವಿರುವವರು,
ಅವಶ್ಯಕತೆ ಇರುವವರು,
ಆಸಕ್ತಿ ಇರುವವರು,
ಪ್ರಯತ್ನಿಸಬಹುದು……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068……..

error: No Copying!