ಉಡುಪಿ: ದಿನಾಂಕ:18-12-2024(ಹಾಯ್ ಉಡುಪಿ ನ್ಯೂಸ್)
ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾರಂಭವಾಗಿರುವ ಫ್ಲೈ ಓವರ್ ಕಾಮಗಾರಿಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆ ಎಂಬ ತಪ್ಪು ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತ ಪಡಿಸಲಾಗುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದೆ, ಕಾಂಗ್ರೆಸ್ ಪಕ್ಷದಿಂದ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಯಾವುದೇ ವಿರೋಧವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಕೀರ್ತಿ ಶೆಟ್ಟಿ ಅಂಬಲಪಾಡಿ ಸ್ಪಷ್ಟ ಪಡಿಸಿದ್ದಾರೆ.
ಅಂಬಲಪಾಡಿ ಫ್ಲೈ ಓವರ್ ಕಾಮಗಾರಿ ಎಂಬುದು ಈ ರಸ್ತೆಯಲ್ಲಿ ದಿನನಿತ್ಯ ಓಡಾಡುವ ಜನರ ಹಲವಾರು ವರ್ಷಗಳ ಕನಸಾಗಿದೆ. ಈ ಕನಸು ನನಸಾಗುವ ಈ ಸಮಯದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕೆ ಕಾಮಗಾರಿಗೆ ಸುಳ್ಳು ನೆಪ ಹೇಳಿ ತಡೆ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಳೆದ 8ವರ್ಷಗಳ ಹಿಂದೆಯೇ ಚಾಲನೆಗೆ ಸಿದ್ಧತೆಯಾಗಿದ್ದು ಆಗ ಕೆಲವರು ಕಾಮಗಾರಿ ತಡೆಯಲು ಸಫಲರಾಗಿದ್ದರು.
ಆಗಿನಿಂದ ಇಂದಿನವರೆಗೆ ಇಲ್ಲಿ ಹಲವಾರು ಅಪಘಾತಗಳಾಗಿದ್ದು ಹಲವರು ಪ್ರಾಣ ಕಳೆದುಕೊಂಡು ,ಹಲವರು ಅಪಘಾತದಿಂದ ಅಂಗವಿಕಲರಾಗಿದ್ದಾರೆ.ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವವರು ಟ್ರಾಫಿಕ್ ಜಾಮ್ ನಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ , ಇದನ್ನೆಲ್ಲಾ ದಿನನಿತ್ಯ ಕಣ್ಣಾರೆ ಕಂಡಿರುವ ನಾವು ಇದಕ್ಕೊಂದು ಪರಿಹಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಮೂಲಕ ಫ್ಲೈ ಓವರ್ ನಿರ್ಮಾಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ ಎಂದಿದ್ದಾರೆ .
ಇದೀಗ ಸಾರ್ವಜನಿಕರ ಪ್ರಾಣದ ಬಗ್ಗೆಯೂ ಚಿಂತಿಸದೆ ಕಾಮಗಾರಿಗೆ ತಡೆ ಒಡ್ಡುವ ಪ್ರಯತ್ನ ನಡೆದಿದೆ, ಆದರೆ ಯಾವುದೇ ಕಾರಣಕ್ಕೂ ಫ್ಲೈ ಓವರ್ ಕಾಮಗಾರಿಗೆ ತಡೆ ಒಡ್ಡಲು ಬಿಡುವುದಿಲ್ಲ ಎಂದು ಕೀರ್ತಿ ಶೆಟ್ಟಿ ಅಂಬಲಪಾಡಿ ಅವರು ತಿಳಿಸಿದ್ದಾರೆ.