ನ್ಯಾಯಾಂಗದ ನಿಷ್ಕ್ರಿಯತೆ, ನ್ಯಾಯಾಂಗದ ಕ್ರಿಯಾಶೀಲತೆ,
ನ್ಯಾಯಾಂಗದ ಭರವಸೆ, ನ್ಯಾಯಾಂಗದ ವಿಶ್ವಾಸಾರ್ಹತೆಯ ಕುಸಿತ……
ಸ್ವಾತಂತ್ರ ನಂತರದ ನ್ಯಾಯಾಂಗದ ಮೇಲೆ ಜನಸಾಮಾನ್ಯರ ಅಭಿಪ್ರಾಯಗಳು ರೂಪಗೊಂಡ ವಿವಿಧ ಹಂತಗಳಿವು. ಪ್ರಾರಂಭದ ದಿನಗಳಲ್ಲಿ ನ್ಯಾಯಾಂಗ ಬಹುತೇಕ ನಿಷ್ಕ್ರಿಯವಾಗಿತ್ತು. ತುಂಬಾ ನಿಧಾನದ ತೀರ್ಮಾನಗಳಿಗೆ ಹೆಸರಾಗಿತ್ತು. ಸ್ವಲ್ಪ ಪ್ರಾಮಾಣಿಕತೆಯು ಇತ್ತು. ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಕ್ರಿಯಾತ್ಮಕವಾಗಿ, ಅತ್ಯಂತ ಚಟುವಟಿಕೆಯಿಂದ, ನಿದ್ದೆಯಿಂದ ಎದ್ದಂತೆ ಸಾಕಷ್ಟು ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳನ್ನು ನ್ಯಾಯಾಂಗ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಿರುವಷ್ಟು ಚಾಟಿ ಬೀಸಿ, ಶಿಕ್ಷಿಸಿ ಒಳ್ಳೆಯ ತೀರ್ಪುಗಳನ್ನು ನೀಡಿತು ಮತ್ತು ಕೆಲವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟಿತು.
ಆದರೆ ಇತ್ತೀಚೆಗೆ ಮತ್ತೆ ನ್ಯಾಯಾಂಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಸಾಮಾನ್ಯ ಜನ ನ್ಯಾಯಾಂಗದ ಬಗ್ಗೆ ಗುಸು-ಗುಸು ಮಾತನಾಡಿಕೊಳ್ಳತೊಡಗಿದ್ದಾರೆ. ನ್ಯಾಯಾಧೀಶರು ವಿವೇಚನೆಯಿಂದ ವರ್ತಿಸುತ್ತಿಲ್ಲ, ಎಲ್ಲೋ ನ್ಯಾಯ ಎಂಬುದು ಉಳ್ಳವರ ಪಾಲಾಗುತ್ತಿದೆ ಎಂಬ ಅನುಮಾನ ಸಾಮಾನ್ಯ ಜನರಲ್ಲಿ ಮೂಡುತ್ತಿದೆ.
ಏಕೆಂದರೆ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಆ ವ್ಯಕ್ತಿ ಬರ್ಬರವಾಗಿ ಕೊಲೆ ನಡೆದಿರುವುದು ಸತ್ಯ. ಅದನ್ನು ದರ್ಶನ್ ಮತ್ತು ತಂಡ ಮಾಡಿದೆ ಎಂದು ಪೊಲೀಸರು ತನಿಖೆ ಮಾಡಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಪೊಲೀಸರು ಸಾಧ್ಯವಿರುವಷ್ಟು ಲಭ್ಯವಿರುವ ಸಾಕ್ಷಿ ಆಧಾರಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ.
ಯಾವುದೇ ಅಪರಾಧಿಗಳಲ್ಲಿ ಸಂಪೂರ್ಣ ಖಚಿತವಾಗಿ ಸಾಕ್ಷಿಗಳೇನು ಸಿಗುವುದಿಲ್ಲ. ಏಕೆಂದರೆ ಅಪರಾಧ ನಡೆದ ನಂತರ ದಾಖಲೆಗಳನ್ನು ಸಂಗ್ರಹಿಸಬೇಕಾಗಿರುವುದರಿಂದ, ಅದನ್ನು ಆರೋಪ ಪಟ್ಟಿ ರೀತಿ ಕ್ರಮಬದ್ಧವಾಗಿ ಮಾಡಬೇಕಾಗಿರುವುದರಿಂದ, ಈ ಒತ್ತಡದ ಬದುಕಿನಲ್ಲಿ ಒಂದಷ್ಟು ಲೋಪಗಳು ನಡೆಯುವುದು ಸಹಜ. ಏಕೆಂದರೆ ಪೊಲೀಸರಿಗೆ ಇದೊಂದೇ ಕೆಲಸವಲ್ಲ. ಇನ್ನೂ ಅನೇಕ ಒತ್ತಡಗಳಿರುತ್ತವೆ.
ಅಂತಹ ಸಂದರ್ಭದಲ್ಲಿ ಕೊಲೆಯಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಧೀಶರು ಒಟ್ಟು ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ಜಾಮೀನು ಅಥವಾ ತೀರ್ಪನ್ನು ನೀಡಬೇಕಾಗುತ್ತದೆ. ಕೆಲವು ದಾಖಲೆಗಳ ಕೊರತೆ ಅಥವಾ ಆರೋಪ ಪಟ್ಟಿಯ ತಪ್ಪುಗಳನ್ನೇ ದೊಡ್ಡದು ಮಾಡಿ ಅಪರಾಧಿಗಳಿಗೆ ಅಥವಾ ಆರೋಪಿಗಳಿಗೆ ಅನುಕೂಲಕರವಾದ ತೀರ್ಪು ನೀಡುವುದು ಈ ಸಮಾಜದ ಕ್ರಮಬದ್ಧತೆಯ ದೃಷ್ಟಿಯಿಂದ, ಮೌಲ್ಯಗಳ ರಕ್ಸಣೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನಗಳಲ್ಲ. ಜನಕ್ಕೆ ಅತ್ಯಂತ ಕೆಟ್ಟ ಸಂದೇಶ ನೀಡಿದಂತಾಗುತ್ತದೆ.
ಬೆನ್ನುನೋವೆಂಬ ಸಾಮಾನ್ಯ ಖಾಯಿಲೆಗೆ ತೀರಾ ಗಂಭೀರತೆಯ ಲೇಪನ ನೀಡಿ, ವೈದ್ಯರು ಸಹ ಅತಿರೇಕದ ವರದಿ ನೀಡಿ, ಅದರ ಆಧಾರದ ಮೇಲೆ ಚಿಕಿತ್ಸೆಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡುವುದು ಎಲ್ಲವೂ ಬಲಿಷ್ಠರು ನ್ಯಾಯವನ್ನು ಖರೀದಿ ಮಾಡಿದ್ದಾರೆ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಇದು ಮೊದಲೇನು ಅಲ್ಲ. ಹಿಂದೆಯೂ ಸಾಕಷ್ಟು ಈ ರೀತಿಯ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನು ದೊರೆತಿದೆ. ಆದರೆ ದರ್ಶನ್ ಎಂಬ ಅತ್ಯಂತ ಜನಪ್ರಿಯ ವ್ಯಕ್ತಿಯ ಕೇಸಿನಲ್ಲಿ ಸಾರ್ವಜನಿಕರು, ಮಾಧ್ಯಮಗಳು, ಸೂಕ್ಷ್ಮವಾಗಿ ಗಮನಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ತೀರ್ಮಾನಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಏಕೆಂದರೆ ಜನ ಇದರ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುತ್ತಿರುತ್ತಾರೆ. ಅದು ಮುಂದಿನ ದಿನಗಳಲ್ಲಿ ಮಾರಕವಾಗಬಹುದು ಎಂಬ ಕಾಳಜಿ ಅಷ್ಟೇ….
ನ್ಯಾಯಾಂಗ ವ್ಯವಸ್ಥೆಯ ಒಂದು ನೋಟ…….
” ನ್ಯಾಯಾಲಯಗಳು ಕಾನೂನನ್ನು ಎತ್ತಿ ಹಿಡಿಯುತ್ತವೆಯೇ ಹೊರತು ನ್ಯಾಯವನ್ನೇ ಕೊಡುತ್ತವೆ ಎಂಬುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ ನ್ಯಾಯಾಲಯಗಳ ದೃಷ್ಟಿಯಲ್ಲಿ ಕಾನೂನೇ ನ್ಯಾಯ “
( Courts will delivered the law not the justice )
ಎಂಬ ಅಭಿಪ್ರಾಯ ಪ್ರಚಲಿತವಾಗಿದೆ.
ಭಾರತದ ನ್ಯಾಯಾಂಗ ವ್ಯವಸ್ಥೆಗೆ ಇದು ಬಹುತೇಕ ಅನ್ವಯಿಸುತ್ತದೆ.
ಭಾರತೀಯ ಸಮಾಜವನ್ನು ಬಹುತೇಕ ಭಯ ಭಕ್ತಿ ನಂಬಿಕೆ ಸಂಸ್ಕೃತಿ ಸಂಪ್ರದಾಯ ಭ್ರಮೆ ಮತ್ತು ಅಸಮಾನತೆಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಅಂತಹ ಸಮಾಜಕ್ಕೆ 1950 ರ ನಂತರ ಸಂವಿಧಾನವೆಂಬ ಒಂದು ಕ್ರಮಬದ್ಧ ನೀತಿ ನಿಯಮಗಳನ್ನು ಅಳವಡಿಸಲಾಯಿತು.
ಬಹುಶಃ ಅದಕ್ಕೆ ಬೇಕಾದ ಮಾನಸಿಕ ಸಿದ್ದತೆ ಅನೇಕ ಭಾರತೀಯರಿಗೆ ಇರಲಿಲ್ಲ. ಒಂದು ರೀತಿಯ ವೈಯಕ್ತಿಕ ಮತ್ತು ಸಾಮಾಜಿಕ ಘರ್ಷಣೆ ಪ್ರಾರಂಭವಾಯಿತು.
ಬಡತನ ಅಜ್ಞಾನ ಅನಕ್ಷರತೆ ಶೋಷಣೆ ಈ ಸಮಾಜದ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕೆಲವೇ ಕುಟುಂಬಗಳು ಹಿಡಿತದಲ್ಲಿ ಇಟ್ಟುಕೊಂಡಿದ್ದವು.
ಸುಮಾರು 1977 ರವರೆಗೆ ಈ ಸ್ಥಿತಿ ಹಾಗೆಯೇ ಮುಂದುವರೆಯಿತು. ಅಲ್ಲಿಂದ ನಿಧಾನವಾಗಿ ಒಂದಷ್ಟು ಬದಲಾವಣೆಗಳು ಆಗತೊಡಗಿದವು. ಜನಜಾಗೃತಿ ಮೂಡತೊಡಗಿತು. 1995 ರ ನಂತರ ಅದು ಮತ್ತಷ್ಟು ವೇಗ ಪಡೆಯಿತು.
ಸಾಮಾಜಿಕ ಬದಲಾವಣೆಯ ಜೊತೆಗೆ ಆರ್ಥಿಕ ಬದಲಾವಣೆಯು ಸಹ ಮತ್ತಷ್ಟು ವೇಗ ಪಡೆಯಿತು. ಅಲ್ಲಿಂದ ಮುಂದೆ ಮಾನವೀಯ ಮತ್ತು ನೈತಿಕ ಮೌಲ್ಯಗಳ ಕುಸಿತವೂ ವೇಗ ಪಡೆಯಿತು.
ನಾಗರಿಕ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ರೂಪಿಸಿಕೊಂಡಿದ್ದ ವಿದೇಶಿ ವ್ಯಾಪಾರಗಾರರು ದೇಶದೊಳಗೆ ಪ್ರವೇಶಿಸಿದ ನಂತರ ಭಾರತೀಯ ಮನಸ್ಸುಗಳು ಚಂಚಲವಾಗಿದ್ದು ನೇರವಾಗಿಯೇ ಗಮನಿಸಬಹುದಾಗಿದೆ. ವಿದೇಶಿ ಬಂಡವಾಳಗಾರರು ಹಣವನ್ನೇ ಕೇಂದ್ರೀಕರಿಸಿ ಭಾರತದ ಮಾರುಕಟ್ಟೆ ಪ್ರವೇಶಿಸಿ ಇಲ್ಲಿನ ನೈತಿಕ ಮೌಲ್ಯಗಳು ಕುಸಿಯಲು ಪ್ರೇರೇಪಿಸಿದರು.
ಸಮಾಜ – ಮಾನವೀಯ ಮೌಲ್ಯಗಳು – ಸರ್ಕಾರ ಎಲ್ಲದರ ಆಧಾರದ ಸ್ತಂಭವಾಗಿದ್ದ ನೈತಿಕತೆಯ ಜಾಗದಲ್ಲಿ ಕಾನೂನು ಆಶ್ರಯ ಪಡೆಯತೊಡಗಿತು. ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಇವು ನಂತರ ವ್ಯಾಪಕವಾಗಿ ಬದಲಾಯಿತು.
ಹಣದಿಂದಲೇ ಕಾನೂನನ್ನು ಸಹ ಪಡೆಯಬಹುದು ಎಂಬ ಮನೋಭಾವ ಬಲವಾಯಿತು. ಕೊಲೆ ಅತ್ಯಾಚಾರ ಹಲ್ಲೆ ಭ್ರಷ್ಟಾಚಾರ ಮಾಡಿಯೂ ಕಾನೂನಿನ ಮೂಲಕವೇ ತಪ್ಪಿಸಿಕೊಳ್ಳಬಹುದು ಎಂದು ಸಮಾಜದ ಬಹುತೇಕ ಜನರಿಗೆ ಮನವರಿಕೆಯಾಯಿತು.
ನ್ಯಾಯಾಲಯ ಅಥವಾ ಕಾನೂನುಗಳು ಅಪರಾಧಿಗಳ ಆಶ್ರಯ ತಾಣವಾಯಿತು. ನ್ಯಾಯವನ್ನು ಅಥವಾ ಪರೋಕ್ಷವಾಗಿ ಕಾನೂನನ್ನು ಹಣ ಅಧಿಕಾರದಿಂದ ಪಡೆಯಬಹುದು ಎಂದು ಅಪರಾಧಿ ಮನೋಭಾವದವರಿಗೆ ಅರಿವಾಯಿತು. ಅದರ ದುಷ್ಪರಿಣಾಮಗಳೇ ರೇಣುಕಾ ಸ್ವಾಮಿಯಂತ ಹತ್ಯಾ ಪ್ರಕರಣಗಳು.
ಇದನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರಗಳು ಚುನಾವಣಾ ರಾಜಕೀಯದಲ್ಲಿ ಮುಳುಗಿ ಹೋಗಿ ಮಾನವೀಯ ಮೌಲ್ಯಗಳಿಗಿಂತ ಓಟುಗಳ ಮೌಲ್ಯವನ್ನೇ ಹೆಚ್ಚು ಅಳೆಯುವುದರಿಂದ ಕಾನೂನುಗಳು ನಿಷ್ಪ್ರಯೋಜಕವಾಗುವ ಹಂತ ತಲುಪಿದೆ.
ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ದೈವತ್ವದ ಮೇಲೆಯೂ ನಂಬಿಕೆ ಶಿಥಿಲವಾಗಿದೆ. ಹಾಗಾದರೆ ಪರ್ಯಾಯ ಏನು ಎಂಬ ಪ್ರಶ್ನೆ ಕಾಡತೊಡಗಿದೆ.
ಒಂದು ದೇಶದ ಸಂವಿಧಾನದ ಯಶಸ್ಸಿಗೆ ನೈತಿಕ ಮೌಲ್ಯಗಳು ಮುಖ್ಯವೇ ಹೊರತು ಕಾನೂನಿನ ನೀತಿ ನಿಯಮಗಳಲ್ಲ. ಇದು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಇದೇ ಅರ್ಥದ ಮಾತುಗಳನ್ನು ಹೇಳಿದ್ದರು.
ನೈತಿಕತೆಯೇ ಕಾನೂನು – ಕಾನೂನೇ ನೈತಿಕತೆ ಎಂಬುದು ಜನರಿಗೆ ಮನವರಿಕೆಯಾಗದೆ ಈ ಪರಿಸ್ಥಿತಿ ಬದಲಾಗುವುದಿಲ್ಲ. ವಿಶ್ವದ ಬಹುದೊಡ್ಡ ಮತ್ತು ಅತ್ಯುತ್ತಮ ಸಂವಿಧಾನ ಹೊಂದಿರುವ ಭಾರತದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಭಾವನಾತ್ಮಕ ನೆಲೆಯಲ್ಲಿ ಮಾತನಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಹರಡುತ್ತಾ ಆಡಳಿತಾತ್ಮಕ ವಿಫಲತೆಯನ್ನು ಮುಚ್ಚಿಕೊಳ್ಳುವ ರಾಜಕೀಯ ವ್ಯವಸ್ಥೆ ದೇಶವನ್ನು ಹಿನ್ನಡೆಸುತ್ತಿದೆ.
ಇದನ್ನು ತುಂಬಾ ಗಂಭೀರವಾಗಿ ನಾವುಗಳು ಪರಿಗಣಿಸಬೇಕಾಗಿದೆ. ಮಾನವೀಯ ಮತ್ತು ನೈತಿಕ ಮೌಲ್ಯಗಳು ಕುಸಿಯದಂತೆ ತಡೆಯುವ ಜವಾಬ್ದಾರಿ ನಾವು ಹೊರಬೇಕಾಗಿದೆ. ಇಲ್ಲದಿದ್ದರೆ ಈಗಾಗಲೇ ಪ್ರಾರಂಭವಾಗಿರುವ ಅನೈತಿಕ ಮತ್ತು ಅಮಾನವೀಯ ಮೌಲ್ಯಗಳೇ ಸಮಾಜದಲ್ಲಿ ಮಾನ್ಯತೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಎಚ್ಚರಿಸುತ್ತಾ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….