Spread the love

ಮಾಧ್ಯಮಗಳು ವರ್ಣಿಸಿದ ವರ್ಣರಂಜಿತ ರಾಜಕಾರಣಿಯ ಬದುಕು ನನ್ನಲ್ಲಿ ಮೂಡಿಸಿದ ಭಾವ ಲಹರಿ……..

ಕೆಲವರ ಬದುಕಿನಲ್ಲಿ ಆಯಸ್ಸು, ಅಂತಸ್ತು, ಅಧಿಕಾರ, ಅದೃಷ್ಟ, ಹಣ, ಯಶಸ್ಸು ಎಲ್ಲವೂ ಒಟ್ಟಿಗೇ ಸಿಗುತ್ತದೆ ಎಂಬುದನ್ನು ಅವರ ಬದುಕಿನ ಇತಿಹಾಸವನ್ನು ನೋಡಿದಾಗ ಅನಿಸುತ್ತದೆ. ಅಂತಹವರಲ್ಲಿ ಒಬ್ಬರು ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ
ಎಸ್ ಎಂ ಕೃಷ್ಣ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಜನಿಸಿ, ಆಗಿನ ಕಾಲಕ್ಕೆ ಅತ್ಯಂತ ಶ್ರೀಮಂತರು, ವಿದ್ಯಾವಂತರು, ಪ್ರಭಾವಶಾಲಿಗಳಿಗೆ ಮಾತ್ರ ಸಾಧ್ಯವಾಗಬಹುದಾಗಿದ್ದ ವಿದೇಶದ ಪ್ರತಿಷ್ಠಿತ ಕಾಲೇಜುಗಳ ಶಿಕ್ಷಣವನ್ನು ಪಡೆದು, 1962ರಲ್ಲಿಯೇ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಅಲ್ಲಿಂದ ಬದುಕಿನ ಅಂತಿಮ ಕ್ಷಣದವರೆಗೂ ಸುಮಾರು 92 ವರ್ಷಗಳನ್ನು ಅತ್ಯಂತ ಶ್ರೀಮಂತವಾಗಿ, ಅಧಿಕಾರಯುತವಾಗಿ,
ಪ್ರಭಾವಶಾಲಿಯಾಗಿ ಜೀವನ ಅನುಭವಿಸಿದವರು. ಅದಕ್ಕಾಗಿ ಅವರ ಶ್ರಮ, ಪ್ರತಿಭೆ, ಅವಕಾಶ, ಶಿಸ್ತು, ಬುದ್ಧಿವಂತಿಕೆ ಇರುತ್ತದೆ ಎಂಬುದು ನಿಜ.

ಅದನ್ನು ಮೀರಿ ಸಾಮಾನ್ಯವಾಗಿ ಮತ್ತು ಸಹಜವಾಗಿ ಒಬ್ಬ ‌ಸಾಧಾರಣ ವ್ಯಕ್ತಿಯಾಗಿ ಯೋಚಿಸಿದಾಗ….

ಸಾಮಾನ್ಯರಾದ ನಮ್ಮಂತಹವರ ಬದುಕನ್ನು ಒಮ್ಮೆ ಅವಲೋಕಿಸಿಕೊಂಡು, ಅವರ ಬದುಕಿನೊಂದಿಗೆ ಸಣ್ಣದಾಗಿ ಹೋಲಿಕೆ ಮಾಡಿಕೊಂಡಾಗ, ಸಾರ್ವಜನಿಕ ಯಶಸ್ಸಿನ ದೃಷ್ಟಿಯಿಂದ ನಮ್ಮ ಬದುಕು ಎಷ್ಟೊಂದು
ನತದೃಷ್ಟವಾಗಿರುತ್ತದೆ ಎಂಬ ವಿಷಾದದ ಛಾಯೆಯೊಂದು ಹಾಗೇ ಮಿಂಚಿ ಮರೆಯಾಗಿ ಹೋಯಿತು…..

ಬಹುತೇಕ ಕೆಳ ಮಧ್ಯಮದ ವರ್ಗದ ಬದುಕು ನಮ್ಮೆಲ್ಲರದು. ಅದರಲ್ಲೂ 70/80/90 ರ ದಶಕದಲ್ಲಿ ಶೇಕಡಾ 80%ಕ್ಕೂ ಹೆಚ್ಚು ಜನ ಬಡತನದಲ್ಲಿಯೇ ಬೆಳೆದವರು. ಊಟ, ಬಟ್ಟೆ, ವಸತಿ ನಮಗೆ ನಮ್ಮದೇ ಆಯ್ಕೆಯಾಗಿರಲಿಲ್ಲ. ಸಿಕ್ಕಷ್ಟು, ಕೊಟ್ಟಷ್ಟು, ಪಡೆದಷ್ಟು ಮಾತ್ರವೇ ಆಗ
ನಮ್ಮದಾಗಿತ್ತು.

ಆದರೆ ಕನಸುಗಳಿಗೇನು ಬರವಿರಲಿಲ್ಲ. ಅದೊಂದೇ ಸಮೃದ್ಧವಾಗಿ ಕಾಣಬಹುದಾಗಿದ್ದ ಮತ್ತು ಅನುಭವಿಸಬಹುದಾಗಿದ್ದ ಸಹಜ ಭಾವನೆಗಳ ಸಂಪತ್ತಾಗಿತ್ತು.

ನಮ್ಮ ಬಾಲ್ಯದಲ್ಲಿ ಸಣ್ಣ ವಿಷಯಗಳಿಗೆ ಅಪ್ಪ-ಅಮ್ಮನ ಭಯಂಕರ ಜಗಳ, ಇನ್ಯಾವುದೋ ವಿಷಯಕ್ಕೆ ಊರಿನ ಜಾತಿ ಜಾತಿಗಳ ನಡುವೆ ಜಗಳ, ಮತ್ಯಾವುದೋ ಜಮೀನಿನ ವಿಷಯಕ್ಕೆ ಅಣ್ಣ ತಮ್ಮಂದಿರ ಜಗಳ, ಇನ್ಯಾರೋ ಮನೆಯಲ್ಲಿ ಕಳ್ಳತನ, ಮತ್ತೆಲ್ಲೋ ವರದಕ್ಷಿಣೆ ಸಾವು, ಇನ್ನೆಲ್ಲೋ ಅತ್ಯಾಚಾರ ಹೀಗೆ ನಮ್ಮಗಳ ನಡುವೆಯೇ ಏನೇನೋ ಘಟನೆಗಳು ನಡೆಯುತ್ತಿದ್ದವು.

ಆಗಾಗ ಬರುವ ಹಬ್ಬಗಳು ಒಂದಷ್ಟು ಸಂಭ್ರಮವನ್ನು, ವಿಷಾದವನ್ನೂ ಮೂಡಿಸುತ್ತಿದ್ದರೆ, ಮತ್ತೆಂದೋ ಬರುವ ಮದುವೆಗಳು ಒಂದಷ್ಟು ಖುಷಿ ನೀಡುತ್ತಿದ್ದವು.

ಮನೆಗೆ ಬರುವ ಸಾಲಗಾರರ ವಿಧವಿಧವಾದ ಮಾತುಗಳು, ಸಣ್ಣ ಕಾರಣಕ್ಕೆ ಅಪ್ಪ ಅಮ್ಮನನ್ನು ಪೀಡಿಸುತ್ತಿದ್ದುದು, ಅವರು ಅಸಹಾಯಕತೆಯಿಂದ ಇನ್ನೊಂದು ಮಾತನಾಡುತ್ತಿದ್ದುದು ಹೀಗೆ ಏನೇನೋ ನೆನಪು…

ನಮ್ಮ ಬಡವರ ಬದುಕೇ ಒಂದು ರೀತಿ ಯುದ್ಧಭೂಮಿಯಂತೆ, ಅದರಲ್ಲೂ ಪ್ರಬಲ ಸೈನ್ಯದ ಎದುರು ದುರ್ಬಲ, ಅಸಹಾಯಕ ಸೈನ್ಯ ಹೋರಾಡುವಂತೆ ಈ ಬದುಕನ್ನು ನಾವು ಹೋರಾಡಬೇಕಾಗುತ್ತದೆ ಅಥವಾ ಸವೆಸಬೇಕಾಗುತ್ತದೆ.

ಕೇವಲ ಆರ್ಥಿಕ ಬಡತನವಷ್ಟೇ ಅಲ್ಲ, ನಮ್ಮೆಲ್ಲರ ಸಂಬಂಧಗಳು, ಸಂಪರ್ಕಗಳು, ಎಲ್ಲವೂ ಕೆಳಮಟ್ಟದಲ್ಲಿಯೇ ಇರುತ್ತದೆ. ಅವರೂ ನಮ್ಮಂತೆ ಬಡವರೇ ಆಗಿರುತ್ತಾರೆ. ಅವರಿಗೂ ನಮ್ಮಂತೆ ಯಾವುದೇ ದೊಡ್ಡ ಪ್ರಭಾವವೇನು ಇರುವುದಿಲ್ಲ.

ಆ ಹಂತದಲ್ಲೇ ಅನೇಕ ಜಗಳಗಳು, ಸಣ್ಣತನ ಕೆಲವೊಮ್ಮೆ ಒಳ್ಳೆಯತನ, ತ್ಯಾಗ ಹೀಗೆ ನಡೆಯುತ್ತಲೇ ಇರುತ್ತದೆ. ದೊಡ್ಡವರು ದೊಡ್ಡ ದೊಡ್ಡ ವಿಷಯಗಳೊಂದಿಗೆ, ದೊಡ್ಡ ದೊಡ್ಡ ಸಂಪರ್ಕಗಳೊಂದಿಗೆ, ದೊಡ್ಡ ದೊಡ್ಡ ಎದುರಾಳಿಗಳೊಂದಿಗೆ ವ್ಯವಹಾರ ಮಾಡುತ್ತಾರೆ. ಆದರೆ ಸಾಮಾನ್ಯ ಜನರು ಹಾಗಲ್ಲ. ತುಂಬಾ ಕೆಳ ಹಂತದಲ್ಲಿ ಕೋರ್ಟು, ಕಚೇರಿ, ಪೊಲೀಸ್ ಹೀಗೆ ಅನೇಕ ಕೆಟ್ಟ ಪರಿಸ್ಥಿತಿಯಲ್ಲಿ, ಸಂಘರ್ಷಗಳಿಂದಲೇ ಬದುಕಬೇಕಾಗಿರುತ್ತದೆ.

ದೊಡ್ಡವರು ಅಧಿಕಾರಕ್ಕೋ,
ದೊಡ್ಡ ಆಸ್ತಿಗೋ ಹೊಡೆದಾಟ, ಬಡಿದಾಟ ಮಾಡುತ್ತಿದ್ದರೆ, ಕಡುಬಡವರು ಊಟಕ್ಕೋ, ಬಟ್ಟೆಗೋ, ಚಿಲ್ಲರೆ ಕಾಸಿಗೋ ಹೊಡೆದಾಡುತ್ತಾ, ಒಂದು ರೀತಿಯಲ್ಲಿ ನರಕಾಯಾತನೆಯನ್ನೇ ಅನುಭವಿಸುತ್ತಿರುತ್ತಾರೆ.

ಶ್ರಮದಲ್ಲೂ ಸಾಕಷ್ಟು ವ್ಯತ್ಯಾಸಗಳಿದೆ. ಒಂದು ದೊಡ್ಡ ಸಾಧನೆಗಾಗಿ, ಅಧಿಕಾರಕ್ಕಾಗಿ, ಹಣಕ್ಕಾಗಿ ಹೋರಾಡುವುದು ಬೇರೆ. ಇಲ್ಲಿ ಅದಕ್ಕಿಂತ ಬದುಕಲೇ, ಸಾಮಾನ್ಯ ಜೀವನ ಸಾಗಿಸಲೇ ಹೊಡೆದಾಡುವುದು ತುಂಬಾ ತುಂಬಾ ಕಠೋರ.

ದೊಡ್ಡವರಿಗೆ ಅಷ್ಟೇ ದೊಡ್ಡ ಪ್ರಮಾಣದ ಪರ್ಯಾಯಗಳಿರುತ್ತವೆ, ಆದರೆ ಚಿಕ್ಕವರಿಗೆ ಬಹುತೇಕ ಪ್ರಪಾತವೇ ಪರ್ಯಾಯ. ಹಾಗೆಂದು ದೊಡ್ಡವರಿಗೆ ಸಮಸ್ಯೆಗಳೇ ಇರುವುದಿಲ್ಲ, ಕಷ್ಟಗಳೇ ಬರುವುದಿಲ್ಲ ಎಂದೇನು ಇಲ್ಲ. ಆದರೆ ಅವರ ಸಮಸ್ಯೆಗಳು, ಕಷ್ಟಗಳು ದೊಡ್ಡಮಟ್ಟದಲ್ಲಿರುವುದಲ್ಲದೆ, ಅದನ್ನು ಎದುರಿಸುವ ಸಂಪನ್ಮೂಲಗಳು, ಸಂಪರ್ಕಗಳು ಸಾಕಷ್ಟು ಇರುತ್ತದೆ. ಉದಾರಣೆಗೆ ದರ್ಶನ್ ಒಂದು ಕೊಲೆ ಮಾಡಿ ಅದನ್ನು ಎದುರಿಸುವ ಎಲ್ಲಾ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ. ನಮ್ಮಂತವರು ಒಂದು ಸಣ್ಣ ಹೊಡೆದಾಟಕ್ಕಾಗಿ ಪೊಲೀಸ್, ಕೋರ್ಟ್ ಮೆಟ್ಟಿಲು ಹತ್ತಿದರೆ ಅದು ನಮ್ಮ ಇಡೀ ಬದುಕನ್ನೇ ನಾಶ ಮಾಡಿಬಿಡುತ್ತದೆ.

ತಾವು ಅಂದುಕೊಂಡಿದ್ದನ್ನೆಲ್ಲ ಮಾಡುವ ಅವಕಾಶ ದೊಡ್ಡವರಿಗೆ ಇರುತ್ತದೆ ಆದರೆ ತಾವು ಬಯಸಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿ ಏನು ಆಗದ ಸ್ಥಿತಿಯಲ್ಲಿ ನಾವಿರುತ್ತೇವೆ.

ಮಾಜಿ ಕೇಂದ್ರ ಸಚಿವರಾಗಿದ್ದ
ಎಸ್ ಎಂ ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ, ಮಾಧ್ಯಮಗಳಲ್ಲಿ ಅವರ ವೇಷ ಭೂಷಣ, ಸಾಧನೆ, ಅಧಿಕಾರದ ವಿವಿಧ ಹಂತಗಳು ಎಲ್ಲವನ್ನು ವರ್ಣ ರಂಜಿತವಾಗಿ ವಿವರಿಸುತ್ತಿದ್ದಾಗ, ಅವರ ಬಗ್ಗೆ ಹೆಮ್ಮೆ ಎನಿಸಿತು. ಹಾಗೆಯೇ ಕೆಳ ಮಧ್ಯಮ ವರ್ಗದ ಜನರ ಬದುಕಿನ ಕಡುಕಷ್ಟಗಳನ್ನು ನೆನೆದು ನನ್ನಲ್ಲಿ ಕೀಳರಿಮೆ ಉಂಟಾಯಿತು.

ಹಾಗೆ ಸುಮ್ಮನೆ ಒಂದು ನೆನಪಿನ ಹಿನ್ನೋಟ ಅಕ್ಷರಗಳಲ್ಲಿ ಮೂಡಿ ಬಂದಿತು.
ಎಷ್ಟಾದರೂ ನಾವೂ ಆಸೆ ಕಣ್ಣುಗಳ ಬಡವರಲ್ಲವೇ,
ಬೇಡಬೇಡವೆಂದರೂ ಮತ್ತೆ ಮತ್ತೆ ಅದೇ ನೆನಪಾಗುತ್ತದೆ,
ನಮ್ಮ ಇಡೀ ಬದುಕು ಹೋರಾಟದಲ್ಲೇ ಮುಗಿದು ಹೋಗುತ್ತದೆ. ಇನ್ನು ಸಾಧನೆ ಎಲ್ಲಿ. ಬದುಕಿರುವುದೇ ಒಂದು ಸಾಧನೆ……

ಕ್ಷಮಿಸಿ…….

ಮುಂದಿನ ಪೀಳಿಗೆಗಾದರು ಎಲ್ಲರಿಗೂ ಸಮನಾದ ಅವಕಾಶಗಳ ಬಾಗಿಲು ತೆರೆಯಲಿ ಎಂದು ಆಶಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

error: No Copying!