Spread the love

ಕನ್ನಡ ಸಾಹಿತ್ಯ ಸಮ್ಮೇಳನ…..
ಮಂಡ್ಯ………

ಇದು,
ಒಂದು ನುಡಿ ಹಬ್ಬ
ಒಂದು ನಾಡ ಹಬ್ಬ
ಒಂದು ಅಕ್ಷರದ ಹಬ್ಬ
ಒಂದು ಮಾತುಗಳ ಹಬ್ಬ
ಒಂದು ಭಾಷಾ ಹಬ್ಬ
ಒಂದು ತಾಯಿ ಹಬ್ಬ
ಒಂದು ಸಂಸ್ಕೃತಿ ಹಬ್ಬ
ಒಂದು ಮನೆಯ ಹಬ್ಬ
ಒಂದು ಸಾಹಿತ್ಯ ಹಬ್ಬ
ಒಂದು ಸಂದೇಶದ ಹಬ್ಬ
ಒಂದು ಕಲಾ ಹಬ್ಬ
ಒಂದು ಬದುಕಿನ ಹಬ್ಬ
ಒಂದು ಭಾವನಾ ಹಬ್ಬ
ಒಂದು ರಾಜ್ಯ ಹಬ್ಬ
ಒಂದು ಮಿಲನದ ಹಬ್ಬ
ಒಂದು ಬೆಳವಣಿಗೆಯ ಹಬ್ಬ
ಒಂದು ಆತ್ಮಾವಲೋಕನದ ಹಬ್ಬ
ಒಂದು ಕಲಿಕೆಯ ಹಬ್ಬ
ಒಂದು ಕನಸಿನ ಹಬ್ಬ
ಒಂದು ಸೊಗಸಿನ ಹಬ್ಬ
ಒಂದು ಸಂಭ್ರಮದ ಹಬ್ಬ
ಒಂದು ಬೆಸೆಯುವ ಹಬ್ಬ
ಹಲವಾರು ಹಬ್ಬಗಳ ಹಬ್ಬ…..

ಏನೇ ಹೇಳಿ,
ಕರ್ನಾಟಕದಲ್ಲಿ ನಡೆಯುವ ಎಲ್ಲಾ ಹಬ್ಬ ಜಾತ್ರೆ ಉತ್ಸವ ಸಭೆ ಸಮಾರಂಭ ಸಮ್ಮೇಳನಗಳಲ್ಲಿ ಅತ್ಯಂತ ಮಹತ್ವದ ಮತ್ತು ಮೊದಲನೆಯ ಸ್ಥಾನ
” ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ” ಇದೆ ಮತ್ತು ಇರಲೇಬೇಕು…………

ನಮ್ಮ ಬದುಕು, ಸಂಸ್ಕೃತಿ, ಜೀವನಶೈಲಿ, ಆಹಾರ, ಉಡುಗೆ, ತೊಡುಗೆ ಎಲ್ಲವನ್ನೂ ಒಳಗೊಂಡ ಸಮಗ್ರತೆಯ ಸಂಕೇತವೇ ತಾಯಿ ಭಾಷೆ.

ಹೌದು,
ಇಲ್ಲಿ ಒಂದಷ್ಟು ರಾಜಕೀಯ, ಜಾತೀಯತೆ, ಹಣಕಾಸಿನ ಅವ್ಯವಹಾರ, ಅವ್ಯವಸ್ಥೆ, ಮೂಢನಂಬಿಕೆ, ಆಹಾರದ ತಾರತಮ್ಯ, ಸ್ವಹಿತಾಸಕ್ತಿ ಮುಂತಾದ ಕೆಲವು ಲೋಪದೋಷಗಳು ಖಂಡಿತ ಇರುತ್ತದೆ. ಇದು ಸದ್ಯದ ನಮ್ಮ ವ್ಯವಸ್ಥೆಯ ಭಾಗ. ಎಲ್ಲಾ ಕ್ಷೇತ್ರಗಳನ್ನೂ ಇದು ವ್ಯಾಪಿಸಿದೆ. ಅದನ್ನು ನೆಪವಾಗಿಟ್ಟುಕೊಂಡು ಇದನ್ನು ನಿರ್ಲಕ್ಷಿಸಬಾರದು.

ಸಾಹಿತ್ಯ ಸಮ್ಮೇಳನದ ಉದ್ದೇಶ ಅವಶ್ಯಕತೆ ಪ್ರತ್ಯಕ್ಷ ಮತ್ತು ಪರೋಕ್ಷ ಉಪಯೋಗಗಳನ್ನು ಗಮನಿಸಬೇಕು.

ತಾಯಿ ಭಾಷೆಯ ವಿಷಯದಲ್ಲಿ ಒಂದಾಗುವುದೇ ಒಂದು ರೋಮಾಂಚನ. ಹಳೆ ಬೇರು ಹೊಸ ಚಿಗುರುಗಳ ಸಂಧಿಸುವಿಕೆ, ವಿಚಾರ ವಿನಿಮಯ ಇವುಗಳಲ್ಲಿ ಬಹುಮುಖ್ಯವಾದುದು.

ಹಾಗೆಯೇ ಅದರಿಂದಾಗುವ ಪ್ರಯೋಜನವೇನು ಎಂಬ ಪ್ರಶ್ನೆಯೂ ಏಳುತ್ತದೆ. ನೇರವಾಗಿ ಜನಸಾಮಾನ್ಯರಿಗೆ ಯಾವುದೇ ತಕ್ಷಣದ ಉಪಯೋಗ ಕಾಣುವುದಿಲ್ಲ. ಕೆಲವು ಸಾವಿರದಷ್ಟು ಜನರು ಮಾತ್ರ ಸೇರಿ ಇದರ ಲಾಭ ಪಡೆಯುತ್ತಾರೆ. ಸರ್ಕಾರದ ನೆರಳಿನಲ್ಲಿ ಕೇವಲ ಭಾಷಣಗಳ ಪಾಂಡಿತ್ಯ ಮತ್ತು ಘೋಷಣೆಗಳಿಗೆ ಮಾತ್ರ ಸೀಮಿತ ಎಂಬ ಆರೋಪವೂ ಇದೆ.

ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಇದರ ಮಹತ್ವ ಮನವರಿಕೆಯಾಗುತ್ತದೆ.

ಧರ್ಮದ ಅಡಿಯಲ್ಲಿ ಧಾರ್ಮಿಕ ಆಚರಣೆಗಳಾದ ಯುಗಾದಿ, ರಂಜಾನ್, ಕ್ರಿಸ್ ಮಸ್ ಮುಂತಾದ ಹಬ್ಬಗಳನ್ನು, ಪ್ರಾಂತ್ಯಗಳ ನೆನಪಿಗಾಗಿ ಕೆಂಪೇಗೌಡ ಉತ್ಸವ, ಕಿತೂರು ಉತ್ಸವ, ಹಂಪಿ ಉತ್ಸವ ಇತ್ಯಾದಿಗಳನ್ನು, ವ್ಯಕ್ತಿ ಸಿದ್ದಾಂತಗಳ ಜಾಗೃತಿಗಾಗಿ ಗಾಂಧಿ ಬುದ್ಧ ಬಸವ ಅಂಬೇಡ್ಕರ್ ವಿವೇಕಾನಂದ ಟಿಪ್ಪು ಶಂಕರಾಚಾರ್ಯ ಗುರುನಾನಕ್ ಮಹಾವೀರ ಮುಂತಾದವರ ಜಯಂತಿಗಳನ್ನು ಆಚರಿಸಲಾಗುತ್ತದೆ.

ಆದರೆ ನಮ್ಮ ಉಸಿರೇ ಆದ ತಾಯಿ ಭಾಷೆಯ ಹಬ್ಬ ಇರುವುದು ಇದೊಂದೇ.

ಕರ್ನಾಟಕ ಏಕೀಕರಣ ನೆನಪಿನ ದಿನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರೂ ಅದು ಕೇವಲ ಸಾಂಕೇತಿಕವಾಗಿ ಉಳಿದಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನವೇ ನಮ್ಮ ನಿಮ್ಮೆಲ್ಲರ, ಜಾತಿ ಧರ್ಮ ಪ್ರಾಂತ್ಯ ಪಂಗಡಗಳನ್ನು ಮೀರಿದ ತಾಯಿ ಭಾಷೆಯ ಅಕ್ಷರ ಜಾತ್ರೆ.

ನಿಮ್ಮ ಮನಸ್ಸು ಎಲ್ಲೇ ಅಲೆಯುತ್ತಿರಲಿ….

ವೈಯಕ್ತಿಕ ಬದುಕಿನ ಜಂಜಾಟದಲ್ಲಿ,
ಕೌಟುಂಬಿಕ ಜೀವನದ ಸಂಭ್ರಮದಲ್ಲಿ,
ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ,
ರಾಜಕೀಯ ಮನಸ್ಸಿನ ಪ್ರಕ್ಷುಬ್ಧತೆಯಲಿ,
ಶೈಕ್ಷಣಿಕ ಕ್ಷೇತ್ರದ ಸಾಧನೆಯಲ್ಲಿ,
ಕಲಾ ರಂಗದ ಕ್ರಿಯಾತ್ಮಕತೆಯಲ್ಲಿ,
ವೈಜ್ಞಾನಿಕ ಲೋಕದ ಸಂಶೋಧನೆಯಲ್ಲಿ,
ಕ್ರೀಡಾ ಋತುವಿನ ಅಭ್ಯಾಸದಲ್ಲಿ,
ಆಧ್ಯಾತ್ಮಿಕ ಆಳದ ಧ್ಯಾನದಲ್ಲಿ….

ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಹಬ್ಬದ ಸಂಭ್ರಮದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೀವಿರುವ ಸ್ಥಳದಿಂದಲೇ ಒಂದು ಪಾತ್ರವಾಗಿ. ಅದರಲ್ಲೂ ತಾಯಿ ಭಾಷೆಯ ಎಲ್ಲರೂ ಮತ್ತು ಸಾಧ್ಯವಾದರೆ, ಇಷ್ಟವಿದ್ದರೆ, ಕರ್ನಾಟಕದಲ್ಲಿ ವಾಸಿಸುತ್ತಿರುವ ಇತರ ಭಾಷೆಯ ಜನರು ಭಾಗವಹಿಸಿ.

ಇದನ್ನು ಇನ್ನಷ್ಟು ವೈಚಾರಿಕ ವೈಜ್ಞಾನಿಕ, ಸಾಂಸ್ಕೃತಿಕ ಆಧುನಿಕ ಮತ್ತು ಉಪಯುಕ್ತ ಮಾಡುವ ನಿಟ್ಟಿನಲ್ಲಿ ಸುಧಾರಣೆ ಮಾಡಬೇಕಿರುವುದು ಅವಶ್ಯವಾದರೂ ಕನ್ನಡದ ಈ ಜಾತ್ರೆಯನ್ನು ಬೆಂಬಲಿಸುವುದು ಮತ್ತು ಸಂಭ್ರಮಿಸುವುದು ನಮ್ಮ ಕರ್ತವ್ಯಗಳಲ್ಲಿ ಒಂದು ಎಂಬುದು ಸರಿ ಎನಿಸುತ್ತದೆ.

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ……..

ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು – ಗೊಂದಲ…..

ಒಂದಷ್ಟು ಪ್ರೀತಿ ವಿಶ್ವಾಸ ವಿಶಾಲ ಮನೋಭಾವ ಕರುಣೆ ಕ್ಷಮಾಗುಣ ಎಲ್ಲವನ್ನೂ ಒಳಗೊಂಡ ಬುದ್ಧತ್ವದಲ್ಲಿ ಎಲ್ಲವೂ ಸಹನೀಯ. ಯಾವುದೂ ವಿವಾದವೇ ಅಲ್ಲ. ಎಲ್ಲವೂ ಸಹಜ ಸ್ವಾಭಾವಿಕ……

ಆದರೆ, ಅಧಿಕಾರವೆಂಬುದು, ಹಣವೆಂಬುದು, ಪ್ರಶಸ್ತಿಯೆಂಬುದು, ಪ್ರಚಾರವೆಂಬುದು, ಜನಪ್ರಿಯತೆ ಎಂಬುದು ನೆತ್ತಿಗೇರಿ ಅಹಂಕಾರ ಮೀರಿ ದುರಹಂಕಾರವಾಗಿ ಪರಿವರ್ತನೆ ಹೊಂದಿದಾಗ ದ್ವೇಷ ಅಸೂಯೆಗಳು ಸುಲಭವಾಗಿ ನಮ್ಮನ್ನು ಆಕ್ರಮಿಸುತ್ತದೆ. ಆಗ ದೇವರೂ ಒಂದು ವಿವಾದ, ಧರ್ಮವೂ ಒಂದು ವಿವಾದ, ಭಾಷೆಯು ಒಂದು ವಿವಾದ, ಆಹಾರವೂ ಒಂದು ವಿವಾದ, ಸಮ್ಮೇಳನವೂ ವಿವಾದವೇ…….

ಈ ರೀತಿಯ ಬೃಹತ್ ಪ್ರಮಾಣದ ಸಮ್ಮೇಳನದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವುದು ಸಾಧ್ಯವಿಲ್ಲ. ಅಸಮಾಧಾನಗಳು ಸದಾ ಇರುತ್ತವೆ. ಆದರೆ ಉದ್ದೇಶ ಪೂರ್ವಕ ಪಕ್ಷಪಾತದ ನಿಲುವುಗಳನ್ನು ಪ್ರಶ್ನಿಸುವುದು ಮತ್ತು ವಿರೋಧಿಸುವುದು ಸಹ ಸ್ವೀಕಾರಾರ್ಹ…..

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದೆಯಂತೆ. ಕಾರಣ ತಾನು ಯಾರಿಗೂ ಕಾಣಬಾರದೆಂದು. ಆದರೆ ಈಗಿನ ಮನುಷ್ಯ ಸ್ವಭಾವಗಳು ಹೆಚ್ಚು ಸೂಕ್ಷ್ಮವಾಗಿದೆ. ಎಲ್ಲವನ್ನೂ ಅತಿಯಾಗಿಯೇ ಗಮನಿಸುತ್ತಾರೆ….

ಸರಿ ತಪ್ಪುಗಳ ಹುಡುಕಾಟ ಸರಿಯೇ ಅಥವಾ ಎಲ್ಲವನ್ನೂ ಮೌನವಾಗಿ ಸಹಿಸಬೇಕೇ ಅಥವಾ ಎಲ್ಲರ ಸ್ವಾತಂತ್ರ್ಯ ಗೌರವಿಸುತ್ತಾ ಸಮನ್ವಯ ‌ಸಾಧಿಸಬೇಕೇ ಅಥವಾ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕೇ……

ಒಂದು ಕಡೆ ಅತ್ಯಂತ ಮಹತ್ವದ ಐತಿಹಾಸಿಕ ಕನ್ನಡದ ನುಡಿ ಹಬ್ಬ, ಇನ್ನೊಂದು ಕಡೆ ಅಷ್ಟೇ ಮಹತ್ವದ ಸಾಂಸ್ಕೃತಿಕ ಪ್ರತಿರೋಧ…..

ಪ್ರಗತಿಪರರು – ಬದಲಾವಣೆ ಬಯಸುವವರು – ಸಾಮರಸ್ಯ ಸೌಹಾರ್ದ ಇಷ್ಟ ಪಡುವವರು – ಪ್ರವಾಹದ ವಿರುದ್ಧ ಈಜುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಆದ ಕಾರಣ ಸಾಂಪ್ರದಾಯಿಕ ಶಕ್ತಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ತಾಳ್ಮೆ, ವಿವೇಚನೆ, ಪ್ರಬುದ್ದತೆ ಮತ್ತು ಪ್ರೀತಿ ಇರಬೇಕಾಗುತ್ತದೆ. ಪರ್ಯಾಯ ಹುಡುಕುವಾಗ ಸಂಘರ್ಷಕ್ಕಿಂತ ಹೆಚ್ಚು ಅಪ್ಪಿಕೊಳ್ಳುವ ಮತ್ತು ಪರಿವರ್ತಿಸುವ ಗುಣ ಇರಬೇಕಾಗುತ್ತದೆ..

ಯಾರದೋ ಒಬ್ಬ ವ್ಯಕ್ತಿಯ ಸೈದ್ಧಾಂತಿಕ ವಿರೋಧಕ್ಕಾಗಿ ಅಥವಾ ಅಸಮರ್ಪಕ ನಿರ್ವಹಣೆಗಾಗಿ ಆತನನ್ನು ಟೀಕಿಸುವುದು ಸರಿ ಇದೆ.
ಆದರೆ ಪರ್ಯಾಯ ಮಾರ್ಗಗಳು ಸೇಡಿನ ರೂಪದಲ್ಲಿರದೆ ಸಹಬಾಳ್ವೆಯ ರೂಪ ಪಡೆದರೆ ಹೆಚ್ಚು ಆದರ್ಶ ಮತ್ತು ಅನುಕರಣೀಯವಾಗಿರುತ್ತದೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಯೋಚಿಸುವಂತಿರಬೇಕು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆರೋಪಗಳನ್ನು ಸಹಿಸಿಕೊಳ್ಳಬೇಕು. ಪ್ರತ್ಯಾರೋಪಗಳು ವೈಯಕ್ತಿಕ ಸಂಬಂಧಗಳನ್ನು ಘಾಸಿಗೊಳಿಸುವಂತಿರಬಾರದು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಚಿಂತನಾ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆ ಹೊರತು ರಾಜಕೀಯ ಪ್ರೇರಿತ ಸಂಕುಚಿತ ಮನೋಭಾವ ಬೆಳೆಸಬಾರದು……..

ತಪ್ಪುಗಳು ನಡೆಯುತ್ತಲೇ ಇರುತ್ತದೆ. ಕಸ ಬೀಳುತ್ತಲೇ ಇರುತ್ತದೆ. ಕೆಲವರಾದರೂ ಪೊರಕೆ ಹಿಡಿದು ಗುಡಿಸುತ್ತಾ ಸಾಗೋಣ ಮತ್ತೆ ಮತ್ತೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

error: No Copying!