ಬೈಂದೂರು: ದಿನಾಂಕ:01-12-2024(ಹಾಯ್ ಉಡುಪಿ ನ್ಯೂಸ್) ಅತಿಯಾದ ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಇಡುತ್ತಾ ಗಂಡ ಹಾಗೂ ಗಂಡನ ಮನೆಯವರು ಮಹಿಳೆ ಯನ್ನು ಪೀಡಿಸಿ, ಹಿಂಸೆ ನೀಡಿ ಇದೀಗ ಮನೆ ಯಿಂದ ಹೊರ ಹಾಕಿದ್ದಾರೆಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪುಂದ ಗ್ರಾಮದ ನಿವಾಸಿ ಶ್ರದ್ಧಾ ನಾಗರಾಜ್ (29) ಎಂಬವರು ನಾಗರಾಜ ಎಂಬವರನ್ನು ಹಿಂದೂ ಜಾತಿ ಪದ್ದತಿಯಂತೆ ದಿನಾಂಕ 30/12/2015 ರಂದು ಬೈಂದೂರು ತಾಲೂಕು ಯಡ್ತರೆ ಗ್ರಾಮದ ಜೆ.ಎನ್.ಆರ್ ಕಲಾಮಂದಿರದಲ್ಲಿ ಮದುವೆಯಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಪೂರ್ವದಲ್ಲಿ ಆರೋಪಿ ನಾಗರಾಜ್ ತಮ್ಮ ಸಂಬಂಧಿಕರೊಂದಿಗೆ ದಿನಾಂಕ 16 ಜೂನ್ 2015 ರಂದು ಶ್ರದ್ಧಾ ರವರ ಮನೆಯಾದ ಉಪ್ಪುಂದ ಕಂಚಿಕಾನ್‌ಗೆ ಬಂದು ಮದುವೆ ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸೂಚಿಸಿ ಹೋದವರು ನಂತರ 2 ದಿನ ಬಿಟ್ಟು ಅಂದರೆ ದಿನಾಂಕ 18/06/2015 ರಂದು ಆರೋಪಿ ನಾಗರಾಜ ಮತ್ತು ರೇಖಾದಾಸ ಎಂಬವರು ಶ್ರದ್ಧಾ ರವರ ಮನೆಗೆ ಬಂದು ಈ ಮದುವೆ ನಡೆಯಬೇಕಾದರೆ ವರದಕ್ಷಿಣೆಯಾಗಿ 5 ಲಕ್ಷ ಹಣ ಹಾಗೂ 30 ಪವನ್ ಚಿನ್ನವನ್ನು ನೀಡಬೇಕು ಇಲ್ಲವಾದಲ್ಲಿ ಈ ಸಂಬಂದ ಬೇಡ ಎಂದು ವರದಕ್ಷಿಣೆ ಬೇಡಿಕೆ ಇರಿಸಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶ್ರದ್ಧಾ ರವರು ತಿಳಿಸಿದ್ದಾರೆ.
ಇದರಿಂದ ದಿಕ್ಕು ತೋಚದ ಶ್ರದ್ಧಾ ರವರ ಮನೆಯವರು ಆರೋಪಿಗಳ ಬೇಡಿಕೆಗೆ ಮಣಿದು ರೂ 2 ಲಕ್ಷ ಹಣ ಮತ್ತು 20 ಪವನ್ ಚಿನ್ನವನ್ನು ಹಾಕಲು ಒಪ್ಪಿಗೆ ಸೂಚಿಸಿದ್ದು ನಂತರದಲ್ಲಿ ಮದುವೆಗೆ 15 ದಿನವಿರುವಾಗ ನಾಗರಾಜ್ ಮತ್ತು ರೇಖಾ ದಾಸ್ ರವರು ಶ್ರದ್ಧಾ ರವರ ಮನೆಗೆ ಬಂದು 2 ಲಕ್ಷ ಹಣವನ್ನು ಪಡೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ದಿನ 15 ಪವನ್ ಚಿನ್ನವನ್ನು ಶ್ರದ್ಧಾರವರಿಗೆ ಮತ್ತು 5 ಪವನ್ ಚಿನ್ನವನ್ನು ಆರೋಪಿ ನಾಗರಾಜ್ ನಿಗೆ ಆರೋಪಿಗಳ ಬೇಡಿಕೆಯಂತೆ ಹಾಕಿದ್ದರು ಎಂದಿದ್ದಾರೆ.
ಮದುವೆಯ ಬಳಿಕ ಮೊದಲು ಶ್ರದ್ಧಾರವರನ್ನು ಆರೋಪಿಗಳು ವೈವಾಹಿಕ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ನೋಡಿಕೊಂಡವರು ಕ್ರಮೇಣ ಆರೋಪಿ ನಾಗರಾಜ್ ನು ಆರೋಪಿ ರೇಖಾ ದಾಸ್ ರೊಂದಿಗೆ ಸೇರಿಕೊಂಡು ಶ್ರದ್ಧಾ ರವರಿಗೆ ಮಾಡಿರುವ ಮನೆಯ ಕೆಲಸ ಸರಿಯಾಗಿಲ್ಲವೆಂದು ಹಂಗಿಸುವುದು. ಅವಾಚ್ಯ ಶಬ್ದಗಳಿಂದ ಬೈಯುವುದು ವಿನಾಕಾರಣ ಜಗಳ ಮಾಡುವುದು ಅಲ್ಲದೇ ಆರೋಪಿ ನಾಗರಾಜ್ ನು ಶ್ರದ್ಧಾ ರವರಿಗೆ ಆರೋಪಿ ರೇಖಾ ದಾಸ್ ರೊಂದಿಗೆ ಸೇರಿ ಕೈಯಿಂದ ಹಲ್ಲೆ ಮಾಡಿದ್ದಲ್ಲದೇ ನೀನು ಮದುವೆಯ ಸಮಯ ತಂದಿರುವ ಹಣ ಕಮ್ಮಿಯಾಯಿತು ಇನ್ನೂ 7 ಲಕ್ಷ ಹಣವನ್ನು ವರದಕ್ಷಿಣೆಯಾಗಿ ತರಬೇಕು ಎಂದು ಪೀಡಿಸುತ್ತಿದ್ದರು ಎಂದು ದೂರಿದ್ದಾರೆ.
ಈ ಹಣವನ್ನು ಪಡೆದುಕೊಂಡ ಬಳಿಕವೂ ಕೂಡಾ ಆರೋಪಿ ನಾಗರಾಜ್ ನು ಇನ್ನೂ ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಇರಿಸಿದ್ದಲ್ಲದೇ ಅಪಾದಿತನು ವರದಕ್ಷಿಣೆಯಾಗಿ ಪಡೆದ ಹಣವನ್ನು ಶ್ರದ್ಧಾ ರವರಿಗೆ ವ್ಯಯ ಮಾಡದೇ ಶ್ರದ್ಧಾ ರವರಿಗೂ ನೀಡದೇ ವೈವಾಹಿಕ ಮನೆಯಲ್ಲಿ ಶ್ರದ್ಧಾರವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿ ವೈವಾಹಿಕ ಮನೆಯಿಂದ ಹೊರಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರದ್ಧಾ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 85,351(2), 115(2),352 ಜೊತೆಗೆ 3 (5) BNS & 3, 4, & 6 DP Act ರಂತೆ ಪ್ರಕರಣ ದಾಖಲಾಗಿದೆ.