ಕುಂದಾಪುರ: ದಿನಾಂಕ:28-11-2024 (ಹಾಯ್ ಉಡುಪಿ ನ್ಯೂಸ್) ಜಪ್ತಿ ಪರಿಸರದಲ್ಲಿರುವ ಅಂಬಿಕಾ ಎಂಬವರ ಅಂಗಡಿಗೆ ಬದಿಯ ಅಂಗಡಿಯವರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ಜಪ್ತಿ ಗ್ರಾಮದ ನಿವಾಸಿ ಅಂಬಿಕಾ (35) ಎಂಬವರು ಮತ್ತು ಅವರ ಗಂಡ ಕುಂದಾಪುರ ತಾಲೂಕು ಜಪ್ತಿ ಗ್ರಾಮದ ಜಪ್ತಿ ಎಂಬಲ್ಲಿ ರಸ್ತೆ ಬದಿಯಲ್ಲಿ ತಗಡು ಶೀಟಿನ ಸಣ್ಣ ಅಂಗಡಿಯನ್ನು ನಡೆಸಿಕೊಂಡಿದ್ದು, ಅಂಗಡಿಯಲ್ಲಿ ದಿನಸಿ ಸಾಮಾಗ್ರಿ, ತಿಂಡಿ, ಕೋಲ್ಡ್ ಡ್ರಿಂಕ್ಸ್, ತರಕಾರಿ ಇನ್ನಿತರ ಸೊತ್ತುಗಳನ್ನು ವ್ಯಾಪಾರ ಮಾಡಿ ಕೊಂಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 26/11/2024 ರಂದು ರಾತ್ರಿ 08:40 ಗಂಟೆಗೆ ಅಂಬಿಕಾ ಅವರು ಹಾಗೂ ಅವರ ಗಂಡ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗಿದ್ದು, ನಂತರ ರಾತ್ರಿ ಸುಮಾರು 09:58 ಗಂಟೆ ಸುಮಾರಿಗೆ ಅಂಬಿಕಾರವರ ಅಂಗಡಿಯ ಸಮೀಪದ ಮನೆಯ ಅಭಿ ಎಂಬವರು ಅಂಬಿಕಾ ರವರಿಗೆ ಫೋನ್ ಮಾಡಿ ಅಂಬಿಕಾರವರ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಂಬಿಕಾರವರು ಅವರ ಗಂಡನೊಂದಿಗೆ ಅಂಗಡಿಗೆ ಬಂದು ನೋಡುವಾಗ ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸುತ್ತಿದ್ದರು ಎಂದಿದ್ದಾರೆ. ಅಷ್ಟರಲ್ಲಾಗಲೇ ಅಂಗಡಿಯಲ್ಲಿರುವ ಸ್ವತ್ತು ಸುಟ್ಟು ಹೋಗಿದ್ದು ಅಂಗಡಿಯನ್ನು ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಅಂಗಡಿಯ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿರುತ್ತದೆ ಎಂದು ದೂರಿದ್ದಾರೆ.
ಬೆಂಕಿಯಿಂದ ಅಂಗಡಿಯ ಒಳಗಡೆ ಇದ್ದ ಸೊತ್ತುಗಳಾದ ಪ್ರಿಡ್ಜ್ , ಫಾಮ್ ಆಯಿಲ್ ಬಾಕ್ಸ್, ತೆಂಗಿನ ಎಣ್ಣೆ ಬಾಕ್ಸ್, ಸನ್ ಫ್ಲವರ್ ಬಾಕ್ಸ್ ತುಪ್ಪ ದ ಬಾಕ್ಸ್, ದೀಪದ ಎಣ್ಣೆ ಬಾಕ್ಸ್ ಹಾಗೂ ಕೋಲ್ಡ್ ಡ್ರಿಂಕ್ಸ್ ಬಾಕ್ಸ್, ತಿಂಡಿ ಸಾಮಾಗ್ರಿಗಳಾದ ಬಿಸ್ಕೇಟ್, ಚಾಕಲೇಟ್ಸ್, ಲೇಸ್ ಪ್ಯಾಕೇಟ್ ಅಕ್ಕಿ , ಬೇಳೆ, ಸೋಪು, ತರಕಾರಿ, ಖರ್ಜೂರ, ಬಾದಾಮಿ ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿರುವ ಇನ್ನಿತರ ಸಾಮಾಗ್ರಿಗಳು ಸುಟ್ಟು ಹೋಗಿರುತ್ತದೆ ಎಂದು ದೂರಿದ್ದಾರೆ.
ಇದರಿಂದ ಸುಮಾರು 2 ಲಕ್ಷ ರೂಪಾಯಿ ನಷ್ಟ ಆಗಿದೆ ಎಂದೂ, ಈ ಘಟನೆಯು ಅಂಬಿಕಾ ರವರ ಅಂಗಡಿಯ ಸಮೀಪದಲ್ಲಿ ಸಂದೇಶ ಎಂಬುವವರು 3 ವರ್ಷದ ಹಿಂದೆ ತಗಡಿನ ಅಂಗಡಿ ಇಟ್ಟಿದ್ದು, ಇನ್ನೂ ವ್ಯಾಪಾರ ಶುರು ಮಾಡದೇ ಇರುವುದರಿಂದ ಅಂಬಿಕಾರವರ ಅಂಗಡಿಯ ಬಳಿ ಬಂದು ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಡಲು ಎಷ್ಟು ಧೈರ್ಯ ನಿಮಗೆ,ನೀವು ಅಂಗಡಿ ಹೇಗೆ ನಡೆಸುತ್ತೀರಿ ಎಂದು ನೋಡುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ಒಂದು ತಿಂಗಳ ಹಿಂದೆ ಅಂಬಿಕಾರವರ ಅಂಗಡಿಯ ಬಳಿ ಬಂದು ತನಗೆ ಯಾರೋ ಹಣ ಕೊಡಲು ಇದ್ದು ಅವರು ಕೊಟ್ಟ ಹಣವನ್ನು ತೆಗೆದಿಡುವಂತೆ ತಿಳಿಸಿದ್ದು ಅಂಬಿಕಾ ರವರು ಇದಕ್ಕೆ ನಿರಾಕರಿಸಿದ್ದಕ್ಕೆ ಅಂಬಿಕಾ ರವರ ಅಂಗಡಿಗೆ ಬೆಂಕಿ ಹಾಕುವುದಾಗಿ ಹೇಳಿದ್ದರು ಎಂದು ದೂರಿದ್ದಾರೆ. ರಾತ್ರಿ ಅಂಗಡಿಗೆ ಬೆಂಕಿ ಬಿದ್ದ ಸಮಯ ಸಂದೇಶ ಮತ್ತು ಶಿವಪ್ರಸಾದ ರವರು ಅಂಗಡಿಯ ಬಳಿ ಆ ಕಡೆ ಈಕಡೆ ತಿರುಗಾಡಿ ಕೊಂಡಿದ್ದು, ಅಂಬಿಕಾ ರವರು ಹಾಗೂ ಅವರ ಗಂಡ ಅಂಗಡಿಯ ಬೆಂಕಿ ನಂದಿಸಿ ಹೋಗುವಾಗ ಅಂಗಡಿ ಬಾಗಿಲು ತೆಗೆದು ಕೋಲ್ಡ್ ಕೊಡುವಂತೆ ತಮಾಷೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಂಬಿಕಾ ರವರ ಅಂಗಡಿಗೆ ಯಾವುದೇ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದು ಅಂಬಿಕಾರವರ ಅಂಗಡಿಗೆ ಸಂದೇಶ ಹಾಗೂ ಶಿವಪ್ರಸಾದ ಬೆಂಕಿ ಹಾಕಿರುವ ಸಂಶಯ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಬಿಕಾ ರವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ :326(f) BNS ರಂತೆ ಪ್ರಕರಣ ದಾಖಲಾಗಿದೆ.