ಉಡುಪಿ: ದಿನಾಂಕ:27-11-2024 (ಹಾಯ್ ಉಡುಪಿ ನ್ಯೂಸ್) ನಕ್ಸಲೈಟ್ ಸಿದ್ಧಾಂತದ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನ ಮೇಲೆ ಎಎನ್‌ಎಪ್ ನಡೆಸಿರುವ ಎನ್‌ಕೌಂಟರ್ ಘಟನೆಯನ್ನು ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಮನುಕುಲಕ್ಕೆ ಬದುಕಿನ ಅರ್ಥವನ್ನು ಬೋಧಿಸುವ,ಹೋರಾಟದ ಸ್ಪೂರ್ತಿಗೆ ಸೆಲೆಯಾಗಿರುವ ನಕ್ಸಲ್ ಹೋರಾಟಗಾರರನ್ನು ಬಂಧಿಸುವ ಪ್ರಯತ್ನ ಮಾಡದೆ ನಿರ್ದಯವಾಗಿ ಎನ್‌ಕೌಂಟರ್ ನಡೆಸಿರುವುದು ಖಂಡನೀಯ.ಸ್ವಾರ್ಥವೇನೆಂದು ಅರಿಯದೆ ಸತತವಾಗಿ ಜನತೆಯ ಬದಲಾವಣೆಗಾಗಿ ದುಡಿಯುವ ನಕ್ಸಲೈಟರೆಂದರೆ ಗೂಂಡಾಗಿರಿ ನಡೆಸುವ ಹಿಂಸಾವಾದಿಗಳೆಂದು ಬಿಂಬಿಸುವುದು ಸರಿಯಲ್ಲ.
ಸಶಸ್ರ್ತ ಹೋರಾಟವೊಂದು ಏನನ್ನು ಬಯಸುತ್ತದೆ ಎಂಬುದನ್ನು ಪರಿಗಣಿಸದೇ ಕೇವಲ ಅದರ ರೂಪವನ್ನು ಅಷ್ಟೇ ಪರಿಗಣಿಸಿ ತೀರ್ಮಾನಕ್ಕೆ ಬರುವುದು ಅಪ್ರಬುದ್ದ ನಿಲುವು ಆಗುತ್ತದೆ ಎಂದಿರುವ ಜಯನ್ ಮಲ್ಪೆ ಸಶಸ್ತ್ರ ಹೋರಾಟವು ಸಮಾಜದಲ್ಲಿ ಯಾರನ್ನು ಗುರಿ ಮಾಡಲು ಹೊರಟಿದೆ ಎಂಬುದು ನಿರ್ಣಾಯಕ ವಿಷಯವಾಗಿರುತ್ತದೆ.ಅದು ಸಮಾಜದ ದೊಡ್ಡ ಭೂಮಾಲೀಕರ,ದಲ್ಲಾಳಿ ಬಂಡವಾಳಿಗರ ಮತ್ತು ಅವರ ಸೇವೆ ಮಾಡುವ ಸಾಮ್ರಾಜ್ಯಶಾಹಿಗೆ ಗುರಿ ಮಾಡುವುದಾದರೆ ಅದು ಪ್ರಗತಿಪರ ಮತ್ತು ಪ್ರಜಾತಾಂತ್ರಿಕವಾಗುತ್ತದೆ.
ಪ್ರಭುತ್ವಗಳು ಚರಿತ್ರೆಯುದ್ದಕ್ಕೂ ಮಾಡುತ್ತಾ ಬಂದ ತಪ್ಪನ್ನೇ ನಮ್ಮ ಸಿದ್ಧರಾಮಯ್ಯನವರ ಕರ್ನಾಟಕ ಸರಕಾರ ಮಾಡದೆ ಜನರ ಮುಂದೆ ಸತ್ಯವನ್ನು ಬಿಚ್ಚಿಡುವ ಕೆಲಸಮಾಡುವಲ್ಲಿ ಹೆಬ್ರಿಯ ಈ ಎನ್‌ಕೌಂಟರ್ ಘಟನೆಯನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.