ಉಡುಪಿ: ದಿನಾಂಕ:17-11-2024 (ಹಾಯ್ ಉಡುಪಿ ನ್ಯೂಸ್)
ಉಡುಪಿ ನಗರದ ಪಾಲಿಗೆ ಶಾಪವಾಗಿ ಕಾಡುತ್ತಿರುವ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಯನ್ನು ಶೀಘ್ರ ವಾಗಿ ನಡೆಸ ಬೇಕೆಂದು ಆಗ್ರಹಿಸಿ ಉಡುಪಿಯ ನಾಗರಿಕರು ಸೇರಿಕೊಂಡು ರೈಲ್ವೇ ಸೇತುವೆ ಹೋರಾಟ ಸಮಿತಿಯನ್ನು ರಚಿಸಿ ಕೊಂಡು ಈ ಬಗ್ಗೆ ಪ್ರತಿಭಟನೆ ನಡೆಸಿ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಈಗಾಗಲೇ ಮಾಡಿದ್ದಾರೆ.
ಇದೀಗ ನೆನೆಗುದಿಗೆ ಬಿದ್ದಿರುವ ರೈಲ್ವೇ ಸೇತುವೆಯ ಸುತ್ತಲೂ ಬೆಳೆದಿರುವ ಪೊದೆಗಳು ಹಾಗೂ ಕಸದಿಂದಾಗಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಡೆದಾಡಲು ಕಷ್ಟ ವಾಗುತ್ತಿರುವುದನ್ನು ಗಮನಿಸಿ ರೈಲ್ವೇ ಸೇತುವೆ ಹೋರಾಟ ಸಮಿತಿಯ ಕಾರ್ಯಕರ್ತರು ಶ್ರಮದಾನ ಮಾಡುವ ಮೂಲಕ ಇಂದು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.
ನಗರಸಭೆ ತಾನು ಮಾಡಬೇಕಾದ ಸ್ವಚ್ಚತಾ ಕೆಲಸವನ್ನು ಮಾಡದೆ ವಿಫಲವಾಗಿರುವಾಗ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಡೆಸದೆ ಇದ್ದಾಗ ಇಂತಹ ಜನಪರ ಸಂಘಟನೆಗಳು ಕಾಳಜಿಯಿಂದ ನಡೆಸುವ ಇಂತಹ ಕೆಲಸಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇಂದ್ರಾಳಿ ರೈಲ್ವೇ ಸೇತುವೆ ಹೋರಾಟ ಸಮಿತಿಯಿಂದ ಇನ್ನಷ್ಟು ಜನಪರ ಕಾಳಜಿಯ ಕೆಲಸಗಳು ನಡೆಯುವಂತಾಗಲಿ ಎಂದು ಹಾರೈಸೋಣ.