Spread the love

ಮರಕುಂಬಿ……

ನ್ಯಾಯಾಲಯದ ಜೀವಾವಧಿ ಶಿಕ್ಷೆಯ ತೀರ್ಪು….

ಸನಾತನ ಧರ್ಮದ ತತ್ವಗಳಲ್ಲಿ,
ಬುದ್ಧ ಪ್ರಜ್ಞೆಯ ಬೆಳಕಿನಲ್ಲಿ,
ಬಸವ ತತ್ವದ ಅಡಿಯಲ್ಲಿ, ಸ್ವಾಮಿ ವಿವೇಕಾನಂದರ ನೆಲೆಯಲ್ಲಿ,
ಮಹಾತ್ಮ ಗಾಂಧಿಯವರ ನೈತಿಕತೆಯಲ್ಲಿ,
ಬಾಬಾ ಸಾಹೇಬರ ಸಂವಿಧಾನದ ಹಿನ್ನೆಲೆಯಲ್ಲಿ,
ಮಾನವೀಯ ಮೌಲ್ಯಗಳ ಚಿಂತನೆಯಲ್ಲಿ,
2024 ರ ಈ ಕ್ಷಣದ ವಾಸ್ತವ ಗ್ರಹಿಕೆಯಲ್ಲಿ,
ಹೇಗೆ ನೋಡಬಹುದು,
ಹೇಗೆ ಯೋಚಿಸಬಹುದು, ಯಾವ ಅಭಿಪ್ರಾಯ ರೂಪಿಸಿಕೊಳ್ಳಬಹುದು ಒಂದು ಚಿಂತನೆ……

ಕೊಪ್ಪಳ ಜಿಲ್ಲೆಯ ಮರಕುಂಬಿ ಎಂಬ ಊರಿನಲ್ಲಿ 2014 ರಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ದಲಿತ ಕುಟುಂಬದ ಗುಡಿಸಲುಗಳನ್ನು ಸುಟ್ಟುಹಾಕಲಾಗುತ್ತದೆ. ಆ ಘಟನೆ ನಡೆದು ಹತ್ತು ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದೆ. ಅದರಲ್ಲಿ ಭಾಗಿಯಾದ ಸುಮಾರು 100 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನು ಈ ನೆಲದ ಮಹಾನ್ ಚಿಂತಕರ ವಿಚಾರಗಳ ಹಿನ್ನೆಲೆಯಲ್ಲಿ ಹೇಗೆ ನೋಡಬಹುದು…..

ಏಕೆಂದರೆ ಈ ನೆಲದಲ್ಲೇ ಹುಟ್ಟಿದ ಇಂತಹವರ ಅನೇಕ ವಿಚಾರಗಳೇ ಸಂವಿಧಾನದ ಅಡಿಯಲ್ಲಿ ಇಂದು ನಮ್ಮನ್ನೆಲ್ಲ ರೂಪಿಸಿರುವುದು. ಈ ಧರ್ಮ, ಸಂವಿಧಾನಗಳ ಆಶಯದ ನುಡಿಗಳೇ ಬಹುತೇಕ ನಮ್ಮೆಲ್ಲರ ಜೀವನದ ಒಂದು ಮಾರ್ಗದರ್ಶಕ ಅಂಶವಾಗಿದೆ. ಈ ರೀತಿ ನಮ್ಮದೇ ಜನ, ನಮ್ಮದೇ ಜನರ ಮೇಲೆ ಹಲ್ಲೆ ಮಾಡಿ, ಇದೀಗ ನಮ್ಮದೇ ಜನ ಶಿಕ್ಷೆಗೆ ಗುರಿಯಾಗಿರುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದು ಇಂದಿನ ದಿನದ ತುರ್ತು ಅಗತ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಬಹಳ ಪ್ರಮುಖವಾದದ್ದು…..

ಮೊದಲಿಗೆ,
ಸನಾತನ ಧರ್ಮ ಈ ಘಟನೆಯನ್ನು ಹೇಗೆ ನೋಡಬಹುದು. ಉದ್ಯೋಗ ಆಧಾರಿತ ವರ್ಣಾಶ್ರಮ ವ್ಯವಸ್ಥೆಯನ್ನು ಸೃಷ್ಟಿಸಿರುವುದೇ ಸನಾತನ ಧರ್ಮ. ಆದರೆ ತದನಂತರದಲ್ಲಿ ಅದು ಹುಟ್ಟು ಆಧಾರಿತ ಜಾತಿಗಳಾಗಿ ಮಾರ್ಪಟ್ಟಿತು. ನಾಲ್ಕು ವರ್ಣಗಳ ಜೊತೆ ಅಸ್ಪೃಶ್ಯರು ಅಥವಾ ಪಂಚಮರೆಂಬ ಒಂದು ಊರ ಹೊರಗಿನ ಸಮುದಾಯವನ್ನೇ ಹುಟ್ಟು ಹಾಕಲಾಯಿತು. ಅವರ ಎಲ್ಲಾ ಸ್ವಾತಂತ್ರ್ಯವನ್ನು ಕಸಿದುಕೊಂಡು ಪ್ರಾಣಿ ಪಕ್ಷಿಗಳಿಗಿಂತ ಕೀಳಾಗಿ ಕಾಣಲಾಯಿತು. ತದನಂತರದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಈ ಕ್ಷಣದಲ್ಲಿ ಸನಾತನ ಧರ್ಮ ಆ ರೀತಿಯ ಜಾತಿಭೇದವನ್ನು ಮೇಲ್ನೋಟಕ್ಕೆ ಒಪ್ಪುವುದಿಲ್ಲ. ಎಲ್ಲರೂ ಸಮಾನರು. ಅವರವರ ಉದ್ಯೋಗ ಅವರಿಗೆ ಶ್ರೇಷ್ಠ ಎನ್ನುವ ತೇಪೆ ಹಾಕುವ ಮಾತುಗಳನ್ನು ಹೇಳುತ್ತದೆ. ಆದರೆ ಆ ಮನೋಭಾವವೇ ಈ ರೀತಿ ಧೈರ್ಯದಿಂದ ಒಗ್ಗಟ್ಟಾಗಿ ದಲಿತರ ಮನೆಗಳನ್ನು ಸುಟ್ಟು ಹಾಕುವ ಹಂತಕ್ಕೆ ಒಯ್ದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ದಲಿತರು ಸ್ವತಂತ್ರವಾಗಿ ಧ್ವನಿ ಎತ್ತುವ, ಸ್ವಾಭಿಮಾನದಿಂದ ಬದುಕುವ ಸ್ಥಿತಿಯನ್ನು ಸನಾತನ ಧರ್ಮದ ಅವಲಂಬಿತರು ಅರಗಿಸಿಕೊಳ್ಳಲು ಇನ್ನು ಸಾಧ್ಯವಾಗುತ್ತಿಲ್ಲ. ಅದರಿಂದಾಗಿಯೇ ಈ ರೀತಿ ಒಂದು ಸಮುದಾಯದ ಮೇಲೆ ಸವರ್ಣೀಯರು ಗುಂಪು ಕಟ್ಟಿಕೊಂಡು ಹೋಗಿ ಹಲ್ಲೆ ಮಾಡುವುದು. ಇದು ಈ ದೇಶದಲ್ಲಿ ಬಹಳ ಹಿಂದಿನಿಂದಲೂ ನಡೆದಿದೆ. ಸ್ವಾತಂತ್ರ್ಯ ಭಾರತದಲ್ಲಿ ಕರಮಚೇಡು, ಕಂಬಾಲಪಲ್ಲಿ, ಬದನವಾಳು ಹೀಗೆ ಅನೇಕ ಘಟನೆಗಳು ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಜೊತೆಗೆ ಇಡೀ ದೇಶಾದ್ಯಂತ ನಡೆಯುತ್ತಲೇ ಇದೆ. ಆದ್ದರಿಂದ ಈ ಘಟನೆಯಲ್ಲಿ ಅವರು ಶಿಕ್ಷೆಯಾದವರ ಬಗ್ಗೆ ಸ್ವಲ್ಪ ಸಹಾನುಭೂತಿ ವ್ಯಕ್ತಪಡಿಸಬಹುದು. ಆದರೆ ಸನಾತನ ಧರ್ಮದ ಮೂಲ ಆಶಯದಲ್ಲಿ ಯಾರಾದರೂ ಹಿಂಸೆಯಲ್ಲಿ, ಅಪರಾಧದಲ್ಲಿ ತೊಡಗಿದರೆ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು, ಅವರನ್ನು ಶಿಕ್ಷಿಸಲೇಬೇಕು. ಆಗ ಮಾತ್ರ ಸಮಾಜ ಹೆದರಿಕೊಂಡು ತಪ್ಪುಗಳು ಕಡಿಮೆಯಾಗುತ್ತದೆ ಎನ್ನುವ ನಿಲುವು ಹೊಂದಿದೆ…..

ಎರಡನೆಯದಾಗಿ, ಸನಾತನ ಧರ್ಮಕ್ಕೆ ಬಂಡಾಯವೋ, ಪರ್ಯಾಯವೋ, ಮರು ವ್ಯಾಖ್ಯಾನವೋ ಆಗಿ ಗೌತಮ ಬುದ್ದರ ಚಿಂತನೆಗಳು ನಮ್ಮ ನಡುವೆ ಹರಡಿಕೊಂಡಿದೆ. ಒಂದು ವೇಳೆ ಈ ರೀತಿಯ ಹಲ್ಲೆ ಮತ್ತು ಅದಕ್ಕೆ ಶಿಕ್ಷೆ ಗೌತಮ ಬುದ್ಧರ ಗಮನಕ್ಕೆ ಬಂದಿದ್ದಲ್ಲಿ, ಬಹುಶಃ ಅವರು ಈ ದುರ್ಘಟನೆ ನಡೆಯಲೇ ಬಾರದಿತ್ತು. ಈಗ ಘಟಿಸಿ ಹೋಗಿದೆ. ಈಗ ನಮ್ಮ ಮುಂದೆ ಇರುವುದು ಈಗಿನ ವರ್ತಮಾನ. ಶಿಕ್ಷೆಗೆ ಒಳಪಟ್ಟಿರುವ ಆ ಜನರಿಗೆ, ಅವರ ಮನಃಪರಿವರ್ತನೆಗೆ ಎಲ್ಲರೂ ಪ್ರಯತ್ನಿಸಬೇಕು. ಜ್ಞಾನದಿಂದ, ಧ್ಯಾನದಿಂದ ಅವರಲ್ಲಿ ತಮ್ಮ ತಪ್ಪಿನ ಅರಿವನ್ನು ಮೂಡಿಸಿ ಪರಿವರ್ತನೆಯ ಹಾದಿಗೆ ನಾಂದಿ ಹಾಡಬೇಕು. ಹಾಗೆಯೇ ಸಂತ್ರಸ್ತ ದಲಿತರಿಗೆ ಇಡೀ ಸಮಾಜ ಸಂಪೂರ್ಣ ಸಹಾಯ ಹಸ್ತ ನೀಡಬೇಕು. ಅವರ ದುಃಖದಲ್ಲಿ ನಾವು ಭಾಗಿಯಾಗಬೇಕು ಎಂದು ಹೇಳುತ್ತಿದ್ದರು ಎಂದೆನಿಸುತ್ತದೆ……

ಹಾಗೆಯೇ ಮತ್ತೊಬ್ಬ ಸಮಾಜ ಸುಧಾರಕರಾದ 12 ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದರೆ, ಬಹುಶಃ ಅವರು ದಲಿತರು ಮತ್ತು ಸವರ್ಣೀಯರ ನಡುವೆ ಸಂಧಾನ ಏರ್ಪಡಿಸಿ ಅವರ ನಡುವಿನ ಸಂಬಂಧಗಳನ್ನು ಸಮ ಸಮಾಜದ ಹೆಸರಿನಲ್ಲಿ ಬೆಸೆಯುವ ರೀತಿಯಲ್ಲಿ ಅಧಿಕಾರಯುತವಾಗಿ ತಮ್ಮ ಕಾರ್ಯ ಕೈಗೊಂಡಿರುತ್ತಿದ್ದರು. ದಲಿತರು, ಬ್ರಾಹ್ಮಣರು ಅಥವಾ ಸವರ್ಣಿಯರಿಗೆ ಮದುವೆ ಸಂಬಂಧಗಳನ್ನು ಏರ್ಪಡಿಸಿ ಅವರ ಮನೆಯಲ್ಲಿಯೇ ವಾಸಿಸುವಂತೆ ಮಾಡಿ ಒಟ್ಟಿನಲ್ಲಿ ಶಿಕ್ಷೆಗಿಂತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಸುಧಾರಣೆಗೆ ಪ್ರಯತ್ನಿಸುತ್ತಿದ್ದರು…..

ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಈ ಘಟನೆಯ ಬಗ್ಗೆ ತಿಳಿದಿದ್ದರೆ ತುಂಬಾ ನೊಂದುಕೊಂಡಿರುತ್ತಿದ್ದರು ಮತ್ತು ಅಷ್ಟೇ ಆಕ್ರೋಶ ಭರಿತವಾಗಿ ಖಂಡಿಸುತ್ತಿದ್ದರು. ಯಾವ ಕಾರಣಕ್ಕೂ ಈ ಜಾತಿ ಪದ್ಧತಿ ಅಥವಾ ವರ್ಣಾಶ್ರಮ ವ್ಯವಸ್ಥೆ ಈ ದೇಶದಲ್ಲಿ ಇರಲೇಬಾರದು, ಅದರಿಂದಲೇ ನಮ್ಮ ದೇಶ ಒಗ್ಗಟ್ಟಾಗದೆ ಪದೇಪದೇ ವಿದೇಶಿಯರ ಆಕ್ರಮಣಕ್ಕೆ ಒಳಗಾಗುತ್ತಿದೆ. ಆದ್ದರಿಂದ ಈ ರೀತಿಯ ದುಷ್ಟತನದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಹಾಗೆಯೇ ಅವರ ಸುಧಾರಣೆಗೆ ಅದೇ ಸಮಯದಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು. ಸಂತ್ರಸ್ತ ದಲಿತರನ್ನು ಇಡೀ ಸರ್ಕಾರವೇ ದತ್ತು ತೆಗೆದುಕೊಂಡು ಮುನ್ನಡೆಸಬೇಕು. ಇನ್ನೆಂದೂ ಈ ರೀತಿಯ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದರು ಎನಿಸುತ್ತದೆ….

ಜಗತ್ತಿಗೆ ಸತ್ಯ, ಅಹಿಂಸೆ, ಕ್ಷಮೆ, ತ್ಯಾಗ, ಪ್ರೀತಿ ಎಲ್ಲಕ್ಕಿಂತ ಮುಖ್ಯವಾಗಿ ನೈತಿಕತೆಯನ್ನು ಬೋಧಿಸಿದ ಮಹಾತ್ಮ ಗಾಂಧಿಯವರದು ಇನ್ನೊಂದು ರೀತಿಯ ಚಿಂತನೆಯಾಗಿರಬಹುದು. ದಲಿತರ ಮೇಲಿನ ಈ ಅಮಾನುಷ ಕೃತ್ಯವನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸುತ್ತಿದ್ದರು ಮತ್ತು ಅವರ ಪರವಾಗಿ ಉಪವಾಸ ಸತ್ಯಾಗ್ರಹವನ್ನೂ ಮಾಡಿ ಆ ಸುಟ್ಟುಹೋದ ಗುಡಿಸಲಿನ ಜಾಗದಲ್ಲಿ ತಾವೇ ಸ್ವತಃ ನಿಂತು ಅವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು, ಅವರ ಪುನರ್ವಸತಿಗೆ ಶ್ರಮಿಸುತ್ತಿದ್ದರು. ಹಾಗೆಯೇ ಇಡೀ ಈ ಪ್ರಕ್ರಿಯೆಯಲ್ಲಿ ಹಿಂಸೆಯಲ್ಲಿ ಭಾಗವಹಿಸಿದ್ದ ಆರೋಪಿಗಳೇ ಸ್ವತಃ ಬಂದು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ತಮ್ಮನ್ನೇ ಶಿಕ್ಷೆಗೆ ಒಳಪಡಿಸಿಕೊಳ್ಳುವ ರೀತಿ ವಾತಾವರಣ ಸೃಷ್ಟಿಸುತ್ತಿದ್ದರು ಎಂದೆನಿಸುತ್ತದೆ…..

ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಈ ಘಟನೆಯಲ್ಲಿ ತುಂಬಾ ಪ್ರಸ್ತುತವಾಗುತ್ತದೆ. ಏಕೆಂದರೆ ಈ ವ್ಯವಸ್ಥೆಯ ಬಗ್ಗೆ ಈ ದೇಶದಲ್ಲಿ ನಿಜವಾದ ಚಿಂತನೆ ನಡೆಸಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದು ಬಾಬಾ ಸಾಹೇಬರು. ಅವರು ಹೇಳುವುದೇನು ಇಲ್ಲ. ಎಲ್ಲವನ್ನೂ ಸ್ವತಃ ಮಾಡಿದ್ದಾರೆ. ಇದನ್ನು ನಿಯಂತ್ರಿಸಲೇ ಸಂವಿಧಾನ ಕಾನೂನುಗಳನ್ನು ರಚಿಸಲಾಗಿದೆ. ಇದರ ನಡುವೆಯೂ ಈ ರೀತಿಯ ಘಟನೆಯನ್ನು ಕಂಡು ತುಂಬಾ ನೊಂದುಕೊಳ್ಳುತ್ತಿದ್ದರು. ಜೊತೆಗೆ ಈ ದಲಿತರು ಮಾತ್ರವಲ್ಲ, ಈ ವಿದ್ಯಮಾನವನ್ನು ಇಡೀ ರಾಷ್ಟ್ರಾದ್ಯಂತ ಪ್ರಚಾರ ನೀಡಿ, ಇದನ್ನು ಶಾಶ್ವತವಾಗಿ ಇಲ್ಲವಾಗಿಸಲು ಮತ್ತಷ್ಟು ಸುಧಾರಣಾತ್ಮಕ ಕಾನೂನುಗಳನ್ನು ತರುತ್ತಿದ್ದರು ಎಂದೆನಿಸುತ್ತದೆ…..

ಇನ್ನು ಈ ದೇಶದ ಕಾನೂನು ಈಗ ಯಾವ ರೀತಿ ಶಿಕ್ಷೆ ನೀಡಿದೆಯೋ ಅದು ಸರಿಯಾಗಿಯೇ ಇದೆ. ಒಂದು ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಈ ರೀತಿಯ ಶಿಕ್ಷೆಗಳು ತೀರಾ ಅವಶ್ಯಕ. ಆದ್ದರಿಂದ ಅದರಲ್ಲಿ ನಾವು ಹೆಚ್ಚು ಹೇಳುವಂತದ್ದೇನು ಇಲ್ಲ…..

ಜೊತೆಗೆ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಶಿಕ್ಷೆ, ಶಿಕ್ಷಣ, ಕ್ಷಮೆ, ಕರುಣೆ, ಅಮಾನವೀಯತೆ, ಅಸಮಾನತೆ, ಅಸಹನೆ, ಈ ಎಲ್ಲವನ್ನೂ ವಿಮರ್ಶಿಸಿಬೇಕಾಗುತ್ತದೆ. ಅಮಾನವೀಯವಾಗಿ, ಅಮಾನುಷವಾಗಿ ಆ ಗುಡಿಸಲನ್ನು ನಾಶಪಡಿಸಿದವರನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ನಿಂದಿಸಬೇಕಾಗುತ್ತದೆ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.. ಜೊತೆಗೆ ಅವರಿಗೆ ಪರಿವರ್ತನೆಯ ಅವಕಾಶವನ್ನೂ ನೀಡಬೇಕಾಗುತ್ತದೆ. ಅದಿಲ್ಲದೆ ಮಾನವೀಯ ಮೌಲ್ಯಗಳಿಗೆ ಅರ್ಥವಿರುವುದಿಲ್ಲ…..

ಹಾಗೆಯೇ ಕೆಲವು ರಾಜಕೀಯ ಪಕ್ಷಗಳು ಪರ ವಿರೋಧದ, ಕೆಲವು ಸಮುದಾಯಗಳು ಇದನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಏಟು ತಿಂದವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವೂ ಶಿಕ್ಷೆಯಾದವರಿಗೆ ಒಂದಷ್ಟು ನೋವು ಸಹಜವಾಗಿಯೇ ಇರುತ್ತದೆ…..

ಈ ಎಲ್ಲವನ್ನು ಪರಿಶೀಲಿಸಿ ಸಾಮಾನ್ಯರಾದ ನಾವು ತೆಗೆದುಕೊಳ್ಳಬಹುದಾದ ನಿಲುವು ಏನಾಗಿರಬೇಕು ಎಂಬುದು ಅವರವರ ವಿವೇಚನೆಗೆ ಬಿಡುತ್ತಾ……

ಶಿಕ್ಷೆಯನ್ನು ಸಂಭ್ರಮಿಸುವ ಸಮಯವೂ ಅಲ್ಲ, ಶಿಕ್ಷಿತರನ್ನು ಕ್ಷಮಿಸಿ ಬಿಡುಗಡೆ ಮಾಡುವ ಸನ್ನಿವೇಶವೂ ಇಲ್ಲ. ಪಶ್ಚಾತಾಪಕ್ಕೆ ಸಾಕಷ್ಟು ಅವಕಾಶವೂ ಇಲ್ಲ. ಇರುವುದು ಪರಿವರ್ತನೆಯ ಹಾದಿ, ಸಮನ್ವಯದ ಆದಿ, ಭವಿಷ್ಯದ ಸಮ
ಸಮಾಜದ ನಿರ್ಮಾಣದ ಗುರಿ ಮಾತ್ರ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ. ಎಚ್. ಕೆ. 9844013068………

error: No Copying!