ಕುಂದಾಪುರ: ದಿನಾಂಕ: 26.10.2024 ( ಹಾಯ್ ಉಡುಪಿ ನ್ಯೂಸ್) ಸಂಗಮ್ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ವಿನಯ್ ಎಂ ಕೊರ್ಲಹಳ್ಳಿ ಯವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪಿಎಸ್ಐ ವಿನಯ್ ಎಂ ಕೊರ್ಲಹಳ್ಳಿ ಅವರು ದಿನಾಂಕ :25-10-2024 ರಂದು ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನ ಕುಂದಾಪುರ ಕಸಬಾ ಗ್ರಾಮದ ಸಂಗಮ್ ಜಂಕ್ಷನ್ ಬಳಿ ರೌಂಡ್ಸ್ ನಲ್ಲಿರುವಾಗ ಇಬ್ಬರು ವ್ಯಕ್ತಿಗಳು ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಅವರನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆ ಈರ್ವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಅವರ ಹೆಸರು 1) ಸುಮಂತ 2) ಶ್ರೀಶಾಂತ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅವರೀರ್ವರನ್ನು ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ ಆಸ್ಪತ್ರೆ ಕುಂದಾಪುರದ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಅವರೀರ್ವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ನಂತೆ ಪ್ರಕರಣ ದಾಖಲಾಗಿದೆ.