ಕುಂದಾಪುರ: ದಿನಾಂಕ:08-10-2024(ಹಾಯ್ ಉಡುಪಿ ನ್ಯೂಸ್ ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ಬೇಡಿಕೆ ಇಟ್ಟು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ , ಕಂದಾವರ ಗ್ರಾಮದ ನಿವಾಸಿ ವಂದನಾ (35) ಎಂಬವರು ದ.ಕ ಜಿಲ್ಲೆಯ ಪುತ್ತೂರಿನ ರಾಘವೇಂದ್ರ ಮಠದ ಹತ್ತಿರ ಕಲ್ಲರೆಯ ಪ್ರದೀಪ ಕಂಪೌಂಡ್ ನ ನಿವಾಸಿಯಾಗಿರುವ ನಾರಾಯಣ ರಾವ್ ಎಂಬವರ ಮಗ ಪ್ರದೀಪ ಎಂಬವರನ್ನು ಗುರುಹಿರಿಯರ ನಿಶ್ಚಯದಂತೆ ದಿನಾಂಕ 11/02/2018 ರಂದು ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಸಮಯ ಪ್ರದೀಪ ಹಾಗೂ ಅವರ ಸಹೋದರಿ ಪ್ರತೀಮಾ ರವರ ಬೇಡಿಕೆಯಂತೆ ವಂದನಾರವರ ತಂದೆ-ತಾಯಿ ಆಪಾದಿತರಿಗೆ 22 ಪವನ್ ತೂಕದ ಚಿನ್ನದ ಒಡವೆ ಹಾಗೂ 3 ಲಕ್ಷ ರೂ ಹಣವನ್ನು ನಗದಾಗಿ ವರದಕ್ಷಿಣೆ ರೂಪದಲ್ಲಿ ನೀಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಸಂಪೂರ್ಣ ವೆಚ್ಚವನ್ನು ವಂದನಾರವರ ತಂದೆ-ತಾಯಿಯವರೇ ಭರಿಸಿರುತ್ತಾರೆ. ವಂದನಾರವರ ಗಂಡ ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಮದುವೆಯ ಬಳಿಕ ಗಂಡನ ಜೊತೆಯಲ್ಲಿ ಬೆಂಗಳೂರಿನಲ್ಲಿ ಸಂಸಾರ ಮಾಡಿಕೊಂಡಿದ್ದರು ಎಂದಿದ್ದಾರೆ .ಸುಮಾರು 1 ತಿಂಗಳ ಬಳಿಕ ವಂದನಾರವರ ಗಂಡ ತನ್ನ ಸಹೋದರಿಯೊಂದಿಗೆ ಸೇರಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ವಂದನಾರವರು ನೊಂದು ಆತ್ಮಹತ್ಯೆಗೂ ಪ್ರಯತ್ನಿಸಿರುತ್ತಾರೆ ಎನ್ನಲಾಗಿದೆ .ನಂತರ ವಂದನಾರವರ ಗಂಡ ಪದೋನ್ನತಿ ಹೊಂದಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಶಿವಮೊಗ್ಗದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು ಎಂದಿದ್ದಾರೆ .ವಂದನಾರವರು ಗರ್ಭಿಣೆಯಾಗಿದ್ದು ಆ ಸಮಯ ಕೂಡಾ ವಂದನಾರವರಿಗೆ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು, ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟು, ಮಾನಸಿಕ ಹಾಗೂ ದೈಹಿಕ ಹಿಂಸೆ ನಿರಂತರವಾಗಿ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂದನಾರವರು ಗಂಡನ ಹಿಂಸೆ ತಾಳಲಾರದೇ ತವರು ಮನೆಗೆ ಬಂದಿದ್ದು, ಗಂಡು ಮಗುವಿಗೆ ಜನ್ಮ ನೀಡಿರುತ್ತಾರೆ ಎಂದಿದ್ದಾರೆ. ಪ್ರಸ್ತುತ ಸುಮಾರು ಒಂದುವರೆ ತಿಂಗಳಿಂದ ಗಂಡನು ವಂದನಾರವರ ತವರು ಮನೆಗೂ ಬಂದು ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಬೆದರಿಕೆ ಹಾಕಿರುತ್ತಾನೆ ಎಂದು ವಂದನಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352, 351(2)(3) ಜೊತೆಗೆ 3(5) BNS AND 3,4,6 D.P ACT ರಂತೆ ಪ್ರಕರಣ ದಾಖಲಾಗಿದೆ.