ಮನಸ್ಸುಗಳ ನಡುವಿನ ತಳಮಳ……
ಜನರ ನಡುವಿನ ಅಭಿರುಚಿ ಮತ್ತು ಆಯ್ಕೆ…….
ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ…..,
ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ…………
ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ ಕುಟುಂಬ. ಮಗ ಚೆನ್ನಾಗಿ ಓದಿ ದೊಡ್ಡವನಾಗುತ್ತಾನೆ. ಬೆಂಗಳೂರು ನಗರದಲ್ಲಿ ಒಳ್ಳೆಯ ಕೆಲಸ ಸಿಗುತ್ತದೆ.
ಸ್ವಲ್ಪ ದಿನಗಳ ನಂತರ ಒಂದು ಸಂಪ್ರದಾಯಸ್ಥ ಹೆಣ್ಣನ್ನು ನೋಡಿ ಮದುವೆ ಮಾಡಲಾಗುತ್ತದೆ. ಮಗ ಸೊಸೆ ಬೆಂಗಳೂರಿನಲ್ಲಿ ವಾಸ ಮಾಡುತ್ತಾರೆ. ಅಪ್ಪ ಅಮ್ಮ ಎಂದಿನಂತೆ ಹಳ್ಳಿಯಲ್ಲಿ ಕೃಷಿ……
ಹೀಗೆ ಸ್ವಲ್ಪ ಕಾಲ ಉರುಳುತ್ತದೆ. ಮಗ ಬೆಂಗಳೂರಿನಲ್ಲಿ ತಾನು ದುಡಿದು ಉಳಿಸಿದ ಹಣದಲ್ಲಿ ಒಂದು ಸೈಟು ಕೊಂಡು ಸ್ವಲ್ಪ ಸಾಲ ಮಾಡಿ ಮನೆ ನಿರ್ಮಿಸುತ್ತಿರುತ್ತಾನೆ.
ಮನೆ ಒಂದು ಹಂತಕ್ಕೆ ಬಂದಾಗ ಕಿಟಕಿ ಬಾಗಿಲು ಮಾಡಿಸಲು ಮರದ ಅವಶ್ಯಕತೆ ಇರುತ್ತದೆ. ಆಗ ಮಗನಿಗೆ ಒಂದು ಯೋಚನೆ ಹೊಳೆಯುತ್ತದೆ.
ಹಳ್ಳಿಯಲ್ಲಿ ಅವರ ಕೃಷಿ ಭೂಮಿಯಲ್ಲಿ ತಾತನ ಕಾಲಕ್ಕೂ ಹಳೆಯದಾದ ಒಂದು ಬೃಹತ್ ಮರ ಇರುತ್ತದೆ. ಅದು ಅವನ ಮನೆಯ ಮರದ ಅವಶ್ಯಕತೆ ಪೂರೈಸಲು ಸಾಕಾಗುತ್ತದೆ.
ತಕ್ಷಣ ಆತ ಹೊರಟು ಹಳ್ಳಿಯ ಅಪ್ಪನ ಮನೆಗೆ ಬರುತ್ತಾನೆ. ಮನೆ ಕಟ್ಟುತ್ತಿರುವ ವಿಷಯ ಅಪ್ಪನಿಗೂ ತಿಳಿದಿರುತ್ತದೆ. ಅವರೂ ಸಹ ತಮ್ಮಲ್ಲಿರುವ ಹಣ ನೀಡಿರುತ್ತಾರೆ.
ಮಗ ಆ ಹಳೆಯ ಕಾಲದ ಮರ ಕತ್ತರಿಸುವ ವಿಷಯ ಪ್ರಸ್ತಾಪಿಸುತ್ತಾನೆ. ಅಪ್ಪನಿಗೆ ಶಾಕ್ ಆಗುತ್ತದೆ.
” ಇಲ್ಲ ಕಂದ, ಅದು ನೂರಾರು ವರ್ಷ ಇಡೀ ಊರಿನ ಜನರಿಗೆ ನೆರಳಾಗಿದೆ. ನಮ್ಮ ಊರಿಗೆ ಮತ್ತು ನನಗೆ ಅದು ಒಂದು ಹೆಮ್ಮೆ. ಎಷ್ಟೋ ಬಾರಿ ನಾನು ಅದರ ಕೆಳಗೆ ಮಲಗಿ ಸುಖ ನಿದ್ದೆ ಮಾಡಿದ್ದೇನೆ. ನೀನು ಮಗುವಾಗಿರುವಾಗ ನಿಮ್ಮಮ್ಮ ಅದರ ಕೊಂಬೆಗೆ ಸೀರೆ ಕಟ್ಟಿ ತೊಟ್ಟಿಲು ಮಾಡಿ ನಿನ್ನನ್ನು ಮಲಗಿಸುತ್ತಿದ್ದಳು. ಆ ಮರದೊಂದಿಗೆ ನನ್ನ ದೇಹ ಮತ್ತು ಮನಸ್ಸು ಬೆಳೆದುಕೊಂಡಿದೆ ” ಎಂದು ಹೇಳುತ್ತಾರೆ.
ಆಧುನಿಕ ನಗರ ಜೀವನಕ್ಕೆ ಹೊಂದಿಕೊಂಡ ಮಗನಿಗೆ ಅಪ್ಪನ ಮಾತುಗಳು ಅರ್ಥವಾಗುವುದಿಲ್ಲ. ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಹಣ ಉಳಿದು EMI ಕಡಿಮೆಯಾಗಿ ಒಂದು ಸ್ವಂತ ಮನೆಯಾದರೆ ಸಾಕು ಎಂಬುದೇ ತಲೆಯಲ್ಲಿ ತುಂಬಿರುತ್ತದೆ. ಮಗ ಹೇಳುತ್ತಾನೆ….
” ಏನಪ್ಪ ನೀನು ಯಾವುದೋ ಕಿತ್ತೋದ್ ಮರದ ಬಗ್ಗೆ ಅಷ್ಟೊಂದು ಪ್ರೀತಿ ತೋರಿಸುವೆ. ನನಗಿಂತ ಆ ಮರಾನೇ ಹೆಚ್ಚ ನಿನಗೆ. ಕಿಟಕಿ ಬಾಗಿಲುಗಳಿಗೆ ಮರ ಆಚೆ ಖರೀದಿಸಿದರೆ ತುಂಬಾ ಹಣ ಬೇಕಾಗುತ್ತದೆ. ಈಗಾಗಲೇ ನೀನು ಕೊಟ್ಟಿದ್ದು ಮುಗಿದು ಸಿಕ್ಕಾಪಟ್ಟೆ ಸಾಲ ಆಗಿದೆ. ಮಗನಿಗೆ ಶಾಲೆ ಫೀಜ್ ಕಟ್ಟೋದೆ ಕಷ್ಟ ಆಗಿದೆ. ಈ ಸೆಂಟಿಮೆಂಟ್ ಎಲ್ಲಾ ಬೇಡ. ಮುಂದಿನ ವಾರ ಕಾರ್ಪೆಂಟರ್ ಜೊತೆ ಬರ್ತೇನೆ. ಮರ ಕಡಿಸಿ ನನಗೆ ಬೇಕಾದಷ್ಟು ತಗೊಂಡು ಹೋಗ್ತೀನಿ. ಉಳಿದರೆ ಯಾರಿಗಾದರೂ ಮಾರಿ ಬಿಡೋಣ ” ಎಂದು ಜೋರಾಗಿಯೇ ಹೇಳುತ್ತಾನೆ.
ಅಪ್ಪನಿಗೆ ತುಂಬಾ ನೋವಾಗುತ್ತದೆ. ಪರಿಪರಿಯಾಗಿ ಮರ ಕಡಿಯುವುದು ಬೇಡ ಎಂದು ಅಳುತ್ತಾರೆ. ಅಮ್ಮ ಸಹ ಮಗನಿಗೆ ” ಬೇಡ ಮಗನೇ ನಿಮ್ಮಪ್ಪ ತುಂಬಾ ನೊಂದುಕೊಳ್ಳುತ್ತಾರೆ. ಅವರಿಗೆ ಹಣಕ್ಕಿಂತ ಮರವೇ ಮುಖ್ಯ. ಈ ವಯಸ್ಸಿನಲ್ಲಿ ಅದನ್ನು ಸಹಿಸಿಕೊಳ್ಳುವ ಶಕ್ತಿ ಇಲ್ಲ. ಬೇಕಾದರೆ ನನ್ನ ಬಳಿ ಇರುವ ಒಡವೆ ಮಾರಿ ಹಣ ಹೊಂದಿಸಿಕೋ ” ಎಂದು ಗೋಳಾಡುತ್ತಾರೆ.
ಮಗನ ಮನಸ್ಸು ಕರಗುವುದಿಲ್ಲ. ಒಡವೆ ಹೇಗಿದ್ದರೂ ಮುಂದೆ ನನಗೇ ಸಿಗುತ್ತದೆ. ಅಲ್ಲದೆ ಒಡವೆ ಮಾರಿದರೆ ಅಷ್ಟು ಹಣ ಸಾಕಾಗುವುದಿಲ್ಲ. ಆದರೆ ಈ ಕ್ಷಣದ ಅವಶ್ಯಕತೆ ಮನೆ ಪೂರ್ತಿಗೊಳಿಸುವುದು. ಆ ಮರ ಸಹ ನಿಷ್ಪ್ರಯೋಜಕ ಎಂದು ಭಾವಿಸಿ ಕೆಲವೇ ದಿನಗಳಲ್ಲಿ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗುತ್ತಾನೆ. ಅಪ್ಪನ ಮೂಕ ರೋಧನೆ…….
ಮನೆ ಮುಗಿಯುತ್ತದೆ. ಅಪ್ಪ ಗೃಹ ಪ್ರವೇಶಕ್ಕೂ ಹೋಗುವುದಿಲ್ಲ. ಮಗನೊಂದಿಗೆ ಮಾತು ಸಹ ನಿಲ್ಲಿಸುತ್ತಾರೆ. ಕೆಲ ವರ್ಷಗಳ ನಂತರ ಇದೇ ಕೊರಗಿನಲ್ಲಿ ಒಮ್ಮೆ ರಾತ್ರಿ ಮನೆಗೆ ಬರುವಾಗ ಅದೇ ಮರದ ಕತ್ತರಿಸದೇ ಉಳಿದಿದ್ದ ಒಂದು ಒಣಗಿದ ಬೇರಿಗೆ ಕಾಲು ತೊಡರಿಕೊಂಡು ಬಿದ್ದು ಪ್ರಾಣ ಬಿಡುತ್ತಾರೆ.
ಅಮ್ಮ ಸಹ ಮುಂದಿನ ಕೆಲವೇ ವರ್ಷಗಳಲ್ಲಿ ತೀರಿ ಹೋಗುತ್ತಾರೆ. ಮಗ ಇದ್ದ ಮನೆ – ಜಮೀನು ಮಾರುತ್ತಾನೆ……
ಹೀಗೆ ವರ್ಷಗಳು ಉರುಳುತ್ತದೆ. ಆತನ ಮಗ ಮುಂದೆ ಚೆನ್ನಾಗಿ ಓದಿ ಪ್ರತಿಷ್ಠಿತ ಸಾಪ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಸೇರುತ್ತಾನೆ. ದೆಹಲಿಯಲ್ಲಿ ಅವನ ವಾಸ…..
ಸ್ವಲ್ಪ ಸಮಯದ ನಂತರ ಅವನು ಅಲ್ಲಿಯೇ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಅವನು ದೆಹಲಿಯಲ್ಲಿ, ಇವರು ಬೆಂಗಳೂರಿನಲ್ಲಿ.
ಒಂದು ದಿನ ಇದ್ದಕ್ಕಿದ್ದಂತೆ ಮಗ ಅಪ್ಪನ ಬಳಿ ಮಾತನಾಡಲು ಬೆಂಗಳೂರಿಗೆ ಬರುತ್ತಾನೆ. ಅಪ್ಪ ಮಕ್ಕಳ ಭೇಟಿ ತೀರಾ ಅಪರೂಪ. ಎಷ್ಟೋ ಬಾರಿ ಮಗ ಕೆಲಸದ ಮೇಲೆ ಬೆಂಗಳೂರಿಗೆ ಬಂದರು ಮನೆಗೆ ಬರದೇ ಹಾಗೇ ಹೋಗಿದ್ದಿದೆ.
ಮಗ ಬಂದವನೇ ಅಪ್ಪನ ಬಳಿ ಒಂದು ಪ್ರಸ್ತಾವನೆ ಇಡುತ್ತಾನೆ…..
” ಅಪ್ಪ ನಾನು ದೆಹಲಿಯ ಪ್ರತಿಷ್ಠಿತ ಏರಿಯಾದಲ್ಲಿ ಒಂದು ಬೃಹತ್ ಸುಸಜ್ಜಿತ ವಿಲ್ಲಾ ತೆಗೆದುಕೊಳ್ಳುತ್ತಿದ್ದೇನೆ. ಅದು ತುಂಬಾ ದುಬಾರಿ. ನನ್ನ ಉಳಿತಾಯದ ಎಲ್ಲಾ ಹಣ ಸೇರಿಸಿದರೂ ಸಾಕಾಗುತ್ತಿಲ್ಲ. ಆದ್ದರಿಂದ ಈಗ ಈ ಮನೆಯನ್ನು ಮಾರಿ ಬಿಡೋಣ. ಇದಕ್ಕೆ ಈಗ ಬಾರಿ ಬೆಲೆ ಇದೆ. ಹೇಗಿದ್ದರೂ ನಿಮಗೆ ವಯಸ್ಸಾಯಿತು. ನೀನು ಅಮ್ಮ ನನ್ನ ಜೊತೆ ದೆಹಲಿಗೆ ಬಂದು ಬಿಡಿ “
ಅಪ್ಪನಿಗೆ ಶಾಕ್…….
” ಇಲ್ಲ ಕಂದ, ಸಾಧ್ಯವಿಲ್ಲ. ಇದು ಕೇವಲ ಮನೆಯಲ್ಲ. ನನ್ನ ಅಪ್ಪ ತಾತ ನನ್ನ ವಂಶದ ವಾಸಸ್ಥಾನ. ಇಲ್ಲಿನ ಪ್ರತಿ ಬಾಗಿಲು ಕಿಟಕಿಗಳಲ್ಲಿ ನನ್ನಪ್ಪ ಇದ್ದಾನೆ. ಅಪ್ಪನ ಮನ ನೋಯಿಸಿ ಅಂದು ನಮ್ಮ ಹಳ್ಳಿಯ ನೂರಾರು ವರ್ಷಗಳ ಮರ ಕಡಿದು ಮನೆಯನ್ನು ನಿರ್ಮಿಸಿದ್ದೇನೆ. ಆ ತಪ್ಪಿಗೆ ಈಗಲೂ ಪಶ್ಚಾತ್ತಾಪ ಪಡುತ್ತಿದ್ದೇನೆ. ಇದನ್ನು ಮಾರಿದರೆ ಅಪ್ಪನನ್ನೇ ಮಾರಿದಂತೆ. ನನ್ನಪ್ಪನ ನೆನಪಿನ ಈ ಮನೆಯನ್ನು ಎಷ್ಟು ಕೋಟಿ ಕೊಟ್ಟರೂ ಮಾರುವುದಿಲ್ಲ ” ಎಂದು ಕಣ್ಣೀರಾಗುತ್ತಾನೆ.
ಮಗ ” ಏನಪ್ಪ ಈ ತಗಡು ನಿರ್ಜೀವ ಮನೆಯನ್ನು ಇಷ್ಟೊಂದು ಪ್ರೀತಿಸುತ್ತೀಯ. ಆ ದೆಹಲಿಯ ಸುಂದರ ಐಷಾರಾಮಿ ವಿಲ್ಲಾದ ಕೂದಲಿಗೂ ಸಮವಿಲ್ಲ ಈ ಪುಟಗೋಸಿ ಮನೆ. ನನಗಿಂತ ಈ ಮನೆಯೇ ನಿನಗೆ ಹೆಚ್ಚಾಯಿತೆ, ವಯಸ್ಸಾದರೂ ಇನ್ನೂ ನಿನಗೆ ಮೋಹ ಹೋಗಿಲ್ಲ. ಹೇಗೆ ಮಾರಬೇಕು ಎಂದು ನನಗೆ ಗೊತ್ತು. ಏನೋ ಗೌರವಪೂರ್ವಕವಾಗಿ ಒಂದು ಮಾತು ಕೇಳಿದೆ ಅಷ್ಟೇ ” ಎಂದು ಕೋಪದಿಂದ ಗದರುತ್ತಾನೆ.
ಮುಂದೆ ಅಪ್ಪ ಒಂದೂ ಮಾತನಾಡುವುದಿಲ್ಲ. ಏನೋ ಹೇಳಲು ಹೊರಟ ತನ್ನ ಹೆಂಡತಿಯನ್ನೂ ತಡೆಯುತ್ತಾನೆ…..
ತನ್ನ ಅಪ್ಪ ಆ ಮರದ ಬಗ್ಗೆ ಹೊಂದಿದ್ದ ಭಾವನಾತ್ಮಕ ಸಂಬಂಧವನ್ನು ನಾನು ಹೇಗೆ ದಿಕ್ಕರಿಸಿ ಹಣಕ್ಕಾಗಿ ಅವರ ಆತ್ಮವನ್ನೇ ಕೊಂದೆ. ಈಗ ನನ್ನ ಮಗ ಅದೇ ಹಣಕ್ಕಾಗಿ ನನ್ನ ಭಾವನೆಗಳಿಗೆ ಬೆಲೆ ಕೊಡದೆ ನನ್ನ ಆತ್ಮವನ್ನೂ ಕೊಲ್ಲುತ್ತಿದ್ದಾನೆ. ಇದನ್ನು ತಡೆಯಲು ನನಗೆ ಯಾವುದೇ ನೈತಿಕತೆ ಇಲ್ಲ.
ಹೀಗೆ ಯೋಚಿಸಿ ಆ ಕ್ಷಣವೇ
” ಮಗನೇ ಕ್ಷಮಿಸು ನಿನ್ನ ಮನಸ್ಸು ನೋಯಿಸಿದ್ದಕ್ಕೆ, ಈ ಮನೆ ಮಾರಲು ನಿನಗೆ ಸಂಪೂರ್ಣ ಸ್ವತಂತ್ರ ಇದೆ. ಯಾರಿಗೆ, ಎಷ್ಟು ಹಣಕ್ಕೆ, ಯಾವಾಗ ಮಾರಬೇಕು ಎಂಬುದನ್ನು ನೀನೇ ನಿರ್ಧರಿಸು. ನಾನು ನಿಮ್ಮ ಅಮ್ಮ ಎಲ್ಲಿ ಹೇಳಿದರೂ ಯಾವ ಪತ್ರಕ್ಕೆ ಬೇಕಾದರೂ ಸಹಿ ಮಾಡುತ್ತೇವೆ. ಆದರೆ ಒಂದೇ ಷರತ್ತು. ನಾವು ದೆಹಲಿಗೆ ಬರುವುದಿಲ್ಲ. ನಾವು ಮುಂದೆ ಹೇಗೋ ಬದುಕುತ್ತೇವೆ. ಆ ಸ್ವಾತಂತ್ರ್ಯ ಮಾತ್ರ ನಮಗಿರಲಿ. ನಿನ್ನ ಪ್ರತಿಷ್ಠೆಗೆ ನಾವೆಂದೂ ಧಕ್ಕೆ ತರುವುದಿಲ್ಲ. ನಿನಗೆ ಒಳ್ಳೆಯದಾಗಲಿ…………..
ಮುಂದೆ……
ಯೋಚಿಸುವ, ಅರ್ಥಮಾಡಿಕೊಳ್ಳುವ, ನಡವಳಿಕೆಯಾಗಿ ರೂಪಿಸಿಕೊಳ್ಳುವ ಎಲ್ಲಾ ವಿವೇಚನೆ ನಿಮಗೆ ಬಿಡುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……….