ಸುಮಾರು ವರ್ಷಗಳ ಹಿಂದೆ, ಅಂದರೆ ಸುಮಾರು 80/90 ರ ದಶಕದ ಆಸುಪಾಸಿನಲ್ಲಿ ನಿಧಾನವಾಗಿ ಒಳಗೊಳಗೆ ಗುಸು-ಗುಸು ಪ್ರಾರಂಭವಾದ ಒಳ ಮೀಸಲಾತಿ ಚರ್ಚೆ ಮುಂದೆ ಬೃಹತ್ ಸಮಾವೇಶ, ಪ್ರತಿಭಟನೆ, ಒತ್ತಾಯ, ಒಂದು ಕ್ರಮಬದ್ಧ ಬೇಡಿಕೆಯಾಗಿ, ತದನಂತರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಈಗ ಒಳ
ಮೀಸಲಾತಿಯ ಪರವಾಗಿಯೇ ತೀರ್ಪು ಪ್ರಕಟವಾಗಿದೆ. ಅದನ್ನು ಅನುಷ್ಠಾನಗೊಳಿಸಲು ರಾಜ್ಯಗಳ ವಿವೇಚನೆಗೆ ಅಧಿಕಾರ ನೀಡಲಾಗಿದೆ…..
ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಹೊರಗಿನ ಜನಕ್ಕಿಂತ ಮೀಸಲಾತಿಯ ಫಲಾನುಭವಿಗಳೇ ಈ ಬಗ್ಗೆ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಹೆಕ್ಕಿ ತೆಗೆದು ಒಳ ಮೀಸಲಾತಿಯ ಪರ ಮತ್ತು ವಿರೋಧವಾಗಿ ಒಂದಷ್ಟು ಚರ್ಚೆಗಳನ್ನು ಮಾಡುತ್ತಲೇ ಇದ್ದಾರೆ. ಅನೇಕ ಪತ್ರಿಕೆಗಳಲ್ಲಿ ಸಂಪಾದಕೀಯಗಳು, ಅಂಕಣಗಳು ಈ ಬಗ್ಗೆ ಮೂಡಿ ಬರುತ್ತಿದೆ…..
ಮೂಲತಃ ಮೀಸಲಾತಿ ಎಂಬ ಪದದ ಸರಳ ಅರ್ಥ, ದುರ್ಬಲರಿಗೆ ಸಬಲರಾಗಲು ಒದಗಿಸಬಹುದಾದ ಒಂದು ಅವಕಾಶ, ಸಹಾಯ, ಸಹಾನುಭೂತಿ, ಹಕ್ಕು, ಕರ್ತವ್ಯ ಮತ್ತು ಸಾಮಾಜಿಕ ನ್ಯಾಯ. ಅದು ಯಾವುದೇ ವಿಷಯದ ದುರ್ಬಲತೆಯೇ ಆಗಿರಲಿ, ಉದಾಹರಣೆಗೆ ಲಿಂಗ ತಾರತಮ್ಯ ಹೋಗಲಾಡಿಸಲು, ದೈಹಿಕ ನೂನ್ಯತೆಯನ್ನು ಸರಿಪಡಿಸಿ ಮುಖ್ಯವಾಹಿನಿಗೆ ಕರೆತರಲು, ಗ್ರಾಮೀಣ ಪ್ರದೇಶದ ಮೂಲಭೂತ ಅವಶ್ಯಕತೆಗಳ ಕೊರತೆಯಿಂದ ಉಂಟಾಗುವ ತಾರತಮ್ಯ ಹೋಗಲಾಡಿಸಲು, ಕ್ರೀಡೆ, ಸೈನಿಕರು ಮುಂತಾದ ವಿಶೇಷ ಸಾಧಕರನ್ನು ಪ್ರೋತ್ಸಾಹಿಸಲು, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನರನ್ನು ಮೇಲೆತ್ತಲು ಹೀಗೆ ನಾನಾ ರೀತಿಯ ಕಾರಣಗಳಿಂದ ಮೀಸಲಾತಿಯನ್ನು ನೀಡಲಾಗುತ್ತದೆ. ಹಾಗೆಯೇ ಜಾತಿ ವ್ಯವಸ್ಥೆಯ ಅತ್ಯಂತ ಕೆಳಸ್ತರದ, ನಿರ್ಲಕ್ಷ ಕೊಳಗಾದ ಜನರನ್ನು ಮುಖ್ಯ ವಾಹಿನಿಗೆ ಕರೆ ತರಲು ಮೀಸಲಾತಿ ನೀಡಲಾಗಿದೆ…..
ಮೀಸಲಾತಿ ಎಂಬುದು ಅಸಮಾನತೆಯನ್ನು ನಿವಾರಿಸಿ ಸಮಾನತೆಯೆಡೆಗೆ ತರುವ ಒಂದು ಸಾಧನ ಮತ್ತು ಮಾರ್ಗ, ಜೊತೆಗೆ ಈ ವ್ಯವಸ್ಥೆ ತಾತ್ಕಾಲಿಕವೂ ಸಹ. ಅಂದರೆ ಶಾಶ್ವತವಾಗಿ ಸಮಾನತೆ ನೆಲಸುವವರೆಗೂ ಮೀಸಲಾತಿ ಅವಶ್ಯಕತೆ ಇದ್ದೇ ಇರುತ್ತದೆ. ಸಮಾನತೆ ಬಂದ ನಂತರ ಸ್ವಾಭಾವಿಕವಾಗಿಯೇ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ….
ಈಗ ವಿವಾದವಾಗಿರುವುದು ಮತ್ತು ತೀರ್ಪು ಬಂದಿರುವುದು ಜಾತಿ ಮೀಸಲಾತಿಯ ವಿಷಯದಲ್ಲಿ. ಅಂದರೆ ಸಂವಿಧಾನಿಕವಾಗಿ ಅನೇಕ ಹಿಂದುಳಿದ, ಅಸ್ಪೃಶ್ಯ ಜಾತಿಗಳನ್ನು ಗುರುತಿಸಿ ಅವರಿಗಾಗಿ ಒಂದಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಸ್ವಾತಂತ್ರ್ಯದ ಸುಮಾರು 75 ವರ್ಷಗಳ ನಂತರ ಈ ಮೀಸಲಾತಿಯಲ್ಲಿಯೂ ಕೂಡ ಅದರೊಳಗೆ ಸೇರಿರುವ ಅನೇಕ ಸಮುದಾಯಗಳ ನಡುವೆ ಒಂದಷ್ಟು ಅನುಕೂಲ ಮತ್ತು ಪ್ರಯೋಜನಗಳ ಹಾಗೂ ಫಲಿತಾಂಶಗಳ ಆಧಾರದ ಮೇಲೆ ಅಂಕಿಸಂಖ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಮೀಸಲಾತಿಯನ್ನು ಕೆಲವೇ ಸಮುದಾಯಗಳು ಹೆಚ್ಚು ಪ್ರಯೋಜನ ಪಡೆದು, ಅದರಲ್ಲೂ ಕೂಡ ಇನ್ನಷ್ಟು ಇತರ ಸಮುದಾಯಗಳು ನಾನಾ ಕಾರಣಗಳಿಂದ ಮೀಸಲಾತಿಯ ಲಾಭ ಪಡೆಯದೆ ವಂಚಿತವಾಗಿವೆ ಮತ್ತು ಆ ಮೀಸಲಾತಿಯ ಲಾಭ ಪಡೆಯುವ ಸ್ಥಿತಿಯಲ್ಲಿಯೂ ಇಲ್ಲ.
ಲಾಭ ಪಡೆದ ಕೆಲವು ಸಮುದಾಯಗಳೇ ಮತ್ತೆ ಮತ್ತೆ ಮೀಸಲಾತಿಯನ್ನು ಪಡೆಯುತ್ತಾ ಎಲ್ಲೋ ಒಂದು ಕಡೆ ಮೀಸಲಾತಿಯ ಲಾಭದ ಅಂಕಿ ಅಂಶಗಳು ಕೇಂದ್ರೀಕೃತವಾಗಿ, ಪುನಃ ಪುನಃ ಅದೇ ಸಮುದಾಯ ಮತ್ತು ಕುಟುಂಬಗಳು ಪಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ…..
ಅದನ್ನು ಕಸ್ಟಮೈಸ್ಡ್ ಮತ್ತು ದುರ್ಬಲ ಸಮುದಾಯಗಳಿಗೆ ವಿಸ್ತರಿಸುವ ಪ್ರಯತ್ನವೇ ಒಳ ಮೀಸಲಾತಿ. ಇದೊಂದು ಸಹಜ ನ್ಯಾಯ. ಆ ದುರ್ಬಲ ಸಮುದಾಯಗಳಿಗೆ ಮೀಸಲಾತಿ ವಿಸ್ತರಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾದದ್ದು. ಹಾಗೆಯೇ ಇದರ ಅನುಷ್ಠಾನದಲ್ಲಿ ಪ್ರಾಯೋಗಿಕವಾಗಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಿ, ಕೆಟ್ಟ ರಾಜಕಾರಣ ಮಾಡಿ ಈ ಸಮುದಾಯಗಳ ನಡುವೆ ದ್ವೇಷ ಉಕ್ಕಿಸುವ, ಆ ಮೂಲಕ ಮೀಸಲಾತಿಯ ಪ್ರಾಮುಖ್ಯತೆಯನ್ನೇ ತಿರಸ್ಕರಿಸುವಂತೆ ಸಮಾಜದಲ್ಲಿ ದ್ವೇಷ ಸೃಷ್ಟಿಸುವ ಎಲ್ಲ ಸಾಧ್ಯತೆಗಳು ಇದೆ ಎಂಬ ಅನುಮಾನ ಸಹ ಕೆಲವರಲ್ಲಿ ಇದೆ…..
ಈ ಬೃಹತ್ ದೇಶದಲ್ಲಿ ನೀತಿ ನಿಯಮಗಳ ಅನುಷ್ಠಾನ ಸರಳವಾಗಿ, ಸುಲಭವಾಗಿ, ನ್ಯಾಯಯುತವಾಗಿ ಆಗುವುದು ತುಂಬಾ ಕಷ್ಟ. ಆದರೆ ಹಾಗೆಂದು ಅವಶ್ಯಕತೆ ಇರುವ ನ್ಯಾಯಯುತ ತೀರ್ಮಾನಗಳನ್ನು ತಡೆಹಿಡಿಯುವುದೂ ಒಳ್ಳೆಯ ಲಕ್ಷಣವಲ್ಲ. ಆದ್ದರಿಂದ ಸುಪ್ರೀಂಕೋರ್ಟಿನ ನಿರ್ದೇಶನ ಹಾಗೂ ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಒಳಮಿಸಲಾತಿಯನ್ನು ಅನುಷ್ಠಾನಕ್ಕೆ ತರುವುದು ಉತ್ತಮ ಪ್ರಯೋಗವಾಗುತ್ತದೆ…..
ಮೊದಲೇ ಹೇಳಿದಂತೆ ಎಲ್ಲಾ ಮೀಸಲಾತಿಗಳು ತಾತ್ಕಾಲಿಕ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಹೊಂದಾಣಿಕೆ, ಅಂದರೆ ಮೂಲಭೂತವಾಗಿ ಸಮಾಜದ ಎಲ್ಲಾ ನ್ಯೂನ್ಯತೆಗಳನ್ನು ಅರ್ಥ ಮಾಡಿಕೊಂಡು ಅದು ಆರ್ಥಿಕವಾಗಿಯೇ ಇರಲಿ, ಸಾಮಾಜಿಕವಾಗಿಯೇ ಇರಲಿ, ಶೈಕ್ಷಣಿಕವಾಗಿಯೇ ಇರಲಿ, ಪ್ರಾದೇಶಿಕವಾಗಿಯೇ ಇರಲಿ ಅದನ್ನು ಸಾಧ್ಯವಾದಷ್ಟು ನಿವಾರಣೆ ಮಾಡಿ, ಸಮ ಸಮಾಜದ ನಿರ್ಮಾಣದತ್ತ ಹೆಜ್ಜೆ ಇಡಬೇಕಾಗಿರುವುದು ಸಮಾಜ ಹಾಗು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ. ನಾವು ಜಾತಿ ವ್ಯವಸ್ಥೆಯನ್ನು ರಕ್ಷಿಸಲು ಪಡುವ ಶ್ರಮಕ್ಕಿಂತ ಜಾತಿ ನಿರ್ಮೂಲನೆಗಾಗಿ ಶ್ರಮಿಸಿದರೆ ಈ ಸಮಾಜ, ಈ ದೇಶ ಎಲ್ಲ ರೀತಿಯಲ್ಲೂ ಸಾಕಷ್ಟು ಮುಂದುವರೆಯುತ್ತದೆ. ಆದರೆ ನಾವು ಅದಕ್ಕೆ ವಿರುದ್ಧವಾಗಿ ನಮ್ಮ ನಡವಳಿಕೆಗಳನ್ನು ಅಳವಡಿಸಿಕೊಂಡಿರುವುದರಿಂದ ಅದರ ದುಷ್ಪರಿಣಾಮಗಳು ನಿರಂತರವಾಗಿ ನಮ್ಮನ್ನು ಕಾಡುತ್ತಿದೆ. ಅನೇಕ ಅನುಮಾನಾಸ್ಪದ ವಿಷಯಗಳಿಂದ, ನ್ಯಾಯಯುತ ಬೇಡಿಕೆಗಳನ್ನು ಸಹ ನಾವು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಈ ದೇಶದ ದುರಂತ…
ಆದ್ದರಿಂದ ಈಗಲಾದರೂ ಅಸೂಯೆ, ದ್ವೇಷ, ಅನುಮಾನಗಳನ್ನ ಕಡಿಮೆ ಮಾಡಿಕೊಂಡು, ಇನ್ನೊಬ್ಬರ ಏಳಿಗೆಯನ್ನು ಸಹಿಸುವ, ಇನ್ನೊಬ್ಬರಿಗೆ ಅವಕಾಶ ಕಲ್ಪಿಸುವ, ವಿಶಾಲ ಹೃದಯವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ.
ಮೀಸಲಾತಿ ಪಡೆಯುವವರು ನಮ್ಮದೇ ಜನಗಳು. ಆ ಬಗ್ಗೆ ಯಾವುದೇ ಅಸೂಯೆ, ಕೋಪ ಬೇಡ. ಅದಕ್ಕೆ ಬದಲಾಗಿ ಹೆಚ್ಚು ಹೆಚ್ಚು ಅವಕಾಶಗಳನ್ನು, ಬೇಡಿಕೆಗೆ ತಕ್ಕ ಪೂರೈಕೆಯನ್ನು ಸೃಷ್ಟಿಸಲು ಶ್ರಮ ಪಡೋಣ ಆಗ ಖಂಡಿತವಾಗಿ ನಮ್ಮ ವೈಯಕ್ತಿಕ ಮತ್ತು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್. ಕೆ. 9844013068…..