ಈ ರೀತಿಯ ಒಂದು ಭಾವನಾತ್ಮಕ, ವಿವಾದಾತ್ಮಕ, ದೇಶದಾದ್ಯಂತ ಸುದ್ದಿ ಮಾಡುತ್ತಿರುವ ವಿಷಯವನ್ನು ಹೇಗೆ ಗ್ರಹಿಸಬೇಕು ಎನ್ನುವ ಸವಾಲು ಸಾಮಾನ್ಯ ವ್ಯಕ್ತಿಗಳಾದ ನಮ್ಮೆಲ್ಲರನ್ನು ಕಾಡುತ್ತಿದೆ…….
ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಪೈಪೋಟಿಯಲ್ಲಿ, ರಾಜಕಾರಣಿಗಳ ದ್ವೇಷಮಯ ಹೇಳಿಕೆಗಳಲ್ಲಿ, ಧಾರ್ಮಿಕ ಮುಖಂಡರ ಭಕ್ತಿ ಪೂರ್ವಕ ಹೇಳಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಅಭಿಪ್ರಾಯಗಳಲ್ಲಿ, ಸಾಮಾನ್ಯ ಜನರ ಅನಿಸಿಕೆ ರೂಪುಗೊಳ್ಳುವ ಮುನ್ನ ಸಮಗ್ರ ಚಿಂತನೆ ನಡೆಸಿ ಸ್ವತಂತ್ರ ಅಭಿಪ್ರಾಯ ಹೊಂದುವ ಅವಶ್ಯಕತೆ ಇರುತ್ತದೆ…..
ಅದಕ್ಕೆ ಪೂರಕವಾಗಿ ಕೆಲವು ಸಾಧ್ಯತೆಗಳನ್ನು ಒಳಗೊಂಡ ಮಾಹಿತಿ……
ಅವಿಭಜಿತ ಆಂಧ್ರಪ್ರದೇಶದ ಸಾಮಾಜಿಕ ಮತ್ತು ರಾಜಕೀಯ ರಚನೆ ಅತ್ಯಂತ ಸ್ಪರ್ಧಾತ್ಮಕ, ಹಿಂಸಾತ್ಮಕ, ದ್ವೇಷಪೂರಿತ ಸ್ಥಿತಿಯಲ್ಲಿ ಬೆಳೆದು ಬಂದಿದೆ. ಅದರಲ್ಲೂ ಇತ್ತೀಚಿನ 20/25 ವರ್ಷಗಳ ರಾಜಕೀಯ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತೀವ್ರವಾದ ನಕ್ಸಲ್ ಹೋರಾಟ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಹಾಗೆಯೇ ಬಿಹಾರ, ಉತ್ತರ ಪ್ರದೇಶದ ನಂತರ ಸಾಕಷ್ಟು ರಕ್ತಸಿಕ್ತ, ಕೊಲೆಗಡುಕ, ಕ್ರಿಮಿನಲ್ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳು ಆಯ್ಕೆಯಾಗುತ್ತಿರುವುದು ಸಹ ಆಂಧ್ರಪ್ರದೇಶದಲ್ಲಿಯೇ. ಅಂದರೆ ಅಲ್ಲಿನ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಮತ್ತು ರಾಜಕೀಯ ದ್ವೇಷಗಳು ದೊಡ್ಡ ಮಟ್ಟದಲ್ಲಿವೆ. ಆದ್ದರಿಂದ ಮೊದಲಿಗೆ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು….
ಎರಡನೆಯದಾಗಿ,
ಇತ್ತೀಚಿನ ವರ್ಷಗಳಲ್ಲಿ ದಿವಂಗತ ರಾಜಶೇಖರ್ ರೆಡ್ಡಿ ಎಂಬ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಚಂದ್ರಬಾಬು ನಾಯ್ಡು ಎಂಬ ತೆಲುಗು ದೇಶಂ ಪಕ್ಷದ ನಾಯಕರ ನಡುವೆ ಅಧಿಕಾರಕ್ಕಾಗಿ ಜಾತಿ ಆಧಾರಿತ ಬಹುದೊಡ್ಡ ಸಂಘರ್ಷ ನಡೆಯುತ್ತಿದೆ. ಅದರ ಮುಂದುವರಿದ ಭಾಗವಾಗಿ ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಿದ ರಾಜಶೇಖರ ರೆಡ್ಡಿ ಅವರ ಜಗನ್ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದರು. ಈಗ ಜಗನ್ ರೆಡ್ಡಿ ಅವರನ್ನು ಸೋಲಿಸಿದ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದಾರೆ. ಅದು ಈಗಲೂ ಮುಂದುವರಿದು ಈ ವಿವಾದ ಉಂಟಾಗಿದೆ. ಇಬ್ಬರೂ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿಯೇ ಒಬ್ಬರಿಗೊಬ್ಬರು ನೀಚರು, ಪರಮ ಭ್ರಷ್ಟರು ಎಂಬುದಾಗಿ ಹೇಳಿಕೆಗಳನ್ನು ನೀಡಿದ್ದಾರೆ…..
ಇದು ವಿವಾದದ ಪ್ರಥಮ ಮಾಹಿತಿ.
ಮೂರನೆಯದಾಗಿ, ವೆಂಕಟೇಶ್ವರ ದೇವಸ್ಥಾನದ ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಅಲ್ಲಿನ ಟಿಟಿಡಿ ಟ್ರಸ್ಟ್ ನಿರ್ವಹಿಸುತ್ತದೆ. ಆ ಟ್ರಸ್ಟ್ ನ ಸದಸ್ಯರನ್ನು ಸರ್ಕಾರವೇ ನೇಮಿಸುತ್ತದೆ. ಒಟ್ಟಾರೆಯಾಗಿ ಸರ್ಕಾರಿ ವ್ಯವಸ್ಥೆಯೇ ಸೆಮಿ ನಿಯಂತ್ರಣ ಹೊಂದಿದ್ದರೂ ಕಾರ್ಯಚಟುವಟಿಕೆಗಳು ಟ್ರಸ್ಟ್ ನ ನೀತಿ ನಿಯಮಗಳಂತೆಯೇ ನಡೆಯುವುದು…..
ನಾಲ್ಕನೆಯದಾಗಿ,
ಕೊಬ್ಬಿನ ವಿಷಯದ ವಿವಾದಕ್ಕೆ ಮೂಲಭೂತವಾಗಿ ಕಾರಣವಾಗಿರುವುದು ಲಡ್ಡು ತಯಾರಿಕೆಯಲ್ಲಿ ಬಹಳ ವರ್ಷಗಳಿಂದ ತುಪ್ಪ ಪೂರೈಸುತ್ತಿದ್ದ ಕರ್ನಾಟಕ ಸರ್ಕಾರದ ನಂದಿನಿ ಉತ್ಪನ್ನವನ್ನು ಕೇವಲ ಸಣ್ಣ ಮೊತ್ತದ ಬೆಲೆ ವ್ಯತ್ಯಾಸದ ಕಾರಣ ಟೆಂಡರ್ ಪ್ರಕ್ರಿಯೆಯಲ್ಲಿ ತಿರಸ್ಕರಿಸಿ ಅತ್ಯಂತ ಕಡಿಮೆ, ಅಂದರೆ ನಿಜವಾಗಲೂ ಒಂದು ಕೆಜಿ ತುಪ್ಪವನ್ನು ಆ ಬೆಲೆಗೆ ತಯಾರಿಸಿ ಕೊಡಲು ಸಾಧ್ಯವಾಗದ ಹಣಕ್ಕೆ ತಿರುಮಲ ತಿರುಪತಿ ದೇವಸ್ಥಾನ ಗುತ್ತಿಗೆ ನೀಡಿದ್ದೇ ಬಹುದೊಡ್ಡ ತಪ್ಪು ಮತ್ತು ಮೂರ್ಖತನ. ಒಂದು ವಸ್ತುವಿಗೆ ಅದರ ಗುಣಮಟ್ಟದೊಂದಿಗೆ ರಾಜಿಯಾಗದೆ ತಯಾರಿಸಲು ಮತ್ತು ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಒಂದು ಬೆಲೆ ನಿಗದಿಯಾಗಿರುತ್ತದೆ. ಸ್ಪರ್ಧೆ ಇದೆ ಮತ್ತು ಹಣ ಉಳಿಸಬೇಕು ಎಂಬ ಒಂದೇ ಕಾರಣದಿಂದ ಯಾರೋ ಖಾಸಗಿಯವರಿಗೆ ಗುತ್ತಿಗೆಯನ್ನು ನೀಡಿದರೆ ಆ ಹಂತದಲ್ಲಿಯೇ ಮೋಸ, ವಂಚನೆ, ಭ್ರಷ್ಟಾಚಾರದ ವಾಸನೆ, ಅನುಮಾನ ಉಂಟಾಗುತ್ತದೆ. ಅದರಲ್ಲೂ ಒಂದು ನಂಬಿಕಸ್ಥ ಸರ್ಕಾರದ ಜೊತೆಗಿನ ಒಪ್ಪಂದವನ್ನೇ ರದ್ದು ಪಡಿಸುವುದು ಒಂದು ರೀತಿ ಅತ್ಯಂತ ತಪ್ಪು ಮತ್ತು ಕೆಟ್ಟ ನಿರ್ಧಾರ….
ಒಂದು ವೇಳೆ ಯಾವುದೋ ಒತ್ತಡಕ್ಕೆ ಒಳಗಾಗಿ ಇನ್ನೊಂದು ಕಂಪನಿಗೆ ಗುತ್ತಿಗೆ ನೀಡಿದ ನಂತರವಾದರೂ ಆ ಕಂಪನಿಯ ಹಿನ್ನೆಲೆ, ಅದು ಹೇಗೆ ತುಪ್ಪವನ್ನು ತಯಾರಿಸುತ್ತದೆ, ಅದಕ್ಕೆ ಉಪಯೋಗಿಸುವ ಪೂರಕ ವಸ್ತುಗಳೇನು, ತಂತ್ರಜ್ಞಾನವೇನು, ಅದರ ಗುಣಮಟ್ಟ ಎಲ್ಲವನ್ನು ಆಗಾಗ ಪರಿಶೀಲಿಸಬೇಕಾಗಿರುವುದು ಆ ಟಿಟಿಡಿ ದೈವಿಕ ಟ್ರಸ್ಟ್ ನ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಏಕೆಂದರೆ ಇದು ಯಾವುದೋ ಒಂದು ದಿನದ ಸಮಾರಂಭದ ಅಥವಾ ಒಂದು ಸಣ್ಣ ಕಾರ್ಯಕ್ರಮವಲ್ಲ. ಹೆಚ್ಚು ಕಡಿಮೆ ದಿನದ 24 ಗಂಟೆ, ವರ್ಷದ 365 ದಿನ ಅನೇಕ ವರ್ಷಗಳಿಂದ ಜನರು ನಿರಂತರವಾಗಿ ಸೇವಿಸುವ ಲಡ್ಡು ತಯಾರಿಕೆ. ದಿನಕ್ಕೆ ಸುಮಾರು ಸರಾಸರಿ 3.5 ಲಕ್ಷ ಲಾಡು ಖರ್ಚಾಗುತ್ತದೆ ಎಂಬ ಮಾಹಿತಿ ಇದೆ. ಆದ್ದರಿಂದ ಅದರ ಮೇಲೆ ಅಷ್ಟೊಂದು ಸೂಕ್ಷ್ಮವಾದ ನಿಗಾ ವಹಿಸಲೇಬೇಕಾಗುತ್ತದೆ. ಅಲ್ಲದೆ ಟಿಟಿಡಿ ವಿಶ್ವದ ಅತ್ಯಂತ ಶ್ರೀಮಂತ ಧಾರ್ಮಿಕ ಸಂಸ್ಥೆ. ಹಣದ ಕೊರತೆಯೇ ಇಲ್ಲ. ಈಗ ಅಲ್ಲಿ ಸ್ವಲ್ಪ ಎಡವಟ್ಟು ನಡೆದಿದೆ…….
ಈ ತುಪ್ಪ ಪೂರೈಸುವ ಗುತ್ತಿಗೆ ಪಡೆದ ಕಂಪನಿ ಅಷ್ಟೊಂದು ಟನ್ ತುಪ್ಪವನ್ನು ದಿನನಿತ್ಯ ಸರಬರಾಜು ಮಾಡುವ ಸ್ವಂತ ಸಾಮರ್ಥ್ಯ ಹೊಂದಿದೆಯೇ ಅಥವಾ ಅವರು ಇನ್ಯಾವುದಾದರೂ ಖಾಸಗಿ ಹಾಲಿನ ಡೈರಿಗಳಿಗೆ ಸ್ವಲ್ಪ ಭಾಗ ಮರುಗುತ್ತಿಗೆ ನೀಡಿದ್ದಾರೆಯೇ, ಅದರಲ್ಲಿ ಯಾರಾದರೂ ಒಬ್ಬರು ಈ ರೀತಿಯ ಕಲಬೆರಕೆ ಮಾಡಿರುವ ಸಾಧ್ಯತೆ ಇದೆಯೇ, ಆ ಸಾಧ್ಯತೆಯಲ್ಲಿ, ಅದು ಉದ್ದೇಶಪೂರ್ವಕವೇ ಅಥವಾ ಲಾಭದ ಆಸೆಯೋ ಅಥವಾ ಪೂರ್ಣ ಪ್ರಮಾಣದಲ್ಲಿ ಹಾಗೆ ಮಾಡುತ್ತಿದ್ದಾರೋ ಅಥವಾ ಸಮಯ ಸಂದರ್ಭ ನೋಡಿಕೊಂಡು ಆಗಾಗ ಮಾಡುತ್ತಿದ್ದಾರೋ ಇದೆಲ್ಲವನ್ನು ತನಿಖೆ ಮಾಡಿದ ನಂತರ ಸತ್ಯ ಹೊರ ಬರಬಹುದು. ಆ ಎಲ್ಲಾ ಸಾಧ್ಯತೆಗಳು ಇರುತ್ತದೆ…….
ಸಾಮಾನ್ಯವಾಗಿ, ಮಾಂಸಹಾರವೆಂದರೆ ಕುರಿ ಕೋಳಿಗಳನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತದೆ. ಹಸು, ಹಂದಿಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಒಂದು ವೇಳೆ ಹಸುವಿನ ಕೊಬ್ಬನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಪೂರೈಸಬೇಕಾದರೆ ಎಷ್ಟೊಂದು ಹಸುಗಳ ಮಾರಣಹೋಮ ಮಾಡಬೇಕಾಗುತ್ತದೆ ಅಥವಾ ಹಂದಿಗಳ ಪೂರೈಕೆ ಇರಬೇಕಾಗುತ್ತದೆ. ಅದು ಅಷ್ಟು ಸುಲಭವಲ್ಲ. ಕುರಿಗಳು, ಮೇಕೆಗಳು ಸಿಗುವಷ್ಟು ಸಂಖ್ಯೆಯಲ್ಲಿ ಹಸುಗಳ ಮಾಂಸ ಸಿಗುವುದಿಲ್ಲ. ಜೊತೆಗೆ ಅದಕ್ಕೂ ಕೂಡ ಒಂದಷ್ಟು ಹಣ ಖಂಡಿತ ಖರ್ಚಾಗುತ್ತದೆ. ತುಂಬಾ ಏನು ಉಳಿಯುವುದಿಲ್ಲ. ಹಾಗೆಯೇ ಕಲಬೆರಕೆ ಮಾಡಿದರು ಎನ್ನಲಾಗುವ ಮೀನಿನ ಎಣ್ಣೆ ಸಹ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಾಗಿದೆ. ಅದನ್ನು ಉಪಯೋಗಿಸಿದಲ್ಲಿ ವಾಸನೆಯೂ ಸಹ ಹೆಚ್ಚಾಗಿರುತ್ತದೆ. ಆ ಸಾಧ್ಯತೆಯಂದಾಗಿ ನಿರಂತರವಾಗಿ ಲಡ್ಡು ತಯಾರಿಕೆಗೆ ಮಿಶ್ರಣ ಮಾಡಲು ಸಾಧ್ಯವಾಗುವುದಿಲ್ಲ. ಈಗಿನ ವಿವಾದದಂತೆ ಕಳೆದ ಐದು ವರ್ಷವೂ ಇದೇ ಗುಣಮಟ್ಟದ ಪ್ರಾಣಿ ಕೊಬ್ಬು ಬೆರತ ತುಪ್ಪವನ್ನೇ ಸರಬರಾಜು ಮಾಡಲಾಗಿದೆಯೋ ಅಥವಾ ಯಾವುದಾದರೂ ಕೆಲವು ಸಮಯ ಮಾತ್ರ ಹಾಗೆ ಆಗಿದೆಯೋ ಇದನ್ನು ಸಹ ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ…….
ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಮತ್ತು ಬಹಿರಂಗವಾಗಿ ಈ ರೀತಿಯ ಕೊಬ್ಬು ಮಿಶ್ರಿತ ತುಪ್ಪ ಸರಬರಾಜು ಆಗುತ್ತಿದ್ದರೆ ಅದು ಯಾರ ಗಮನಕ್ಕೂ ಬಂದಿಲ್ಲವೇ, ಬಂದಿದ್ದರೆ ಇಲ್ಲಿಯವರೆಗೂ ಅದನ್ನು ಮುಚ್ಚಿಟ್ಟಿದ್ದಿದ್ದು ಏಕೆ, ಅದರಲ್ಲಿ ಇನ್ನೂ ಬಹಳಷ್ಟು ಜನ ಸೇರಿರಬೇಕಲ್ಲವೇ, ಯಾರೋ ಒಬ್ಬರು ಇದನ್ನು ಮಾಡಲು ಸಾಧ್ಯವಿಲ್ಲ. ಹಾಗೆಯೇ ಈಗ ಸರ್ಕಾರ ಬದಲಾದ ನಂತರ ಅಲ್ಲಿನ ಕೆಲವರು ಹೇಳುವ ಧೈರ್ಯ ಮಾಡುತ್ತಿದ್ದಾರೆ. ಇದನ್ನು ಮೊದಲೇ ಹೇಳಲು ಪ್ರಾಣಭಯ ಎನ್ನುವುದಾದರೆ, ಕನಿಷ್ಠ ಸಾಮಾಜಿಕ ಜಾಲತಾಣಗಳನ್ನೋ, ಇನ್ಯಾವುದೋ ಗೌಪ್ಯ ಮಾರ್ಗದಲ್ಲಿ, ಅನಾಮಿಕವಾಗಿ ದೂರು ದಾಖಲಿಸಬಹುದಾಗಿತ್ತಲ್ಲವೇ. ಅಷ್ಟಾದರೂ ಒಳ್ಳೆಯ ಕೆಲಸ ಮಾಡಲು ಅಲ್ಲಿನ ಟ್ರಸ್ಟಿಗಳು ಅಥವಾ ಮಾಹಿತಿ ತಿಳಿದವರು ಪ್ರಯತ್ನಿಸದಿದ್ದರೆ ಅನ್ಯಾಯಗಳು ಬಹಿರಂಗವಾಗುವುದು ಹೇಗೆ ? ಈ ರೀತಿಯ ಪ್ರಶ್ನೆಗಳು ಸಹಜವಾಗಿ ಮೂಡುತ್ತದೆ….
ಯಾವುದೇ ಆಹಾರದ ವಸ್ತುಗಳ ತಯಾರಿಕೆ ಮತ್ತು ಮಾರಾಟದಲ್ಲಿ ಒಂದು ಕಾನೂನು ಇದೆ. ಅದರಂತೆ ಆಹಾರದ ತಯಾರಿಕೆಯಲ್ಲಿ ಉಪಯೋಗಿಸಿರುವ ಎಲ್ಲಾ ವಸ್ತುಗಳು ಮತ್ತು ಅದರಲ್ಲಿ ಅಡಗಿರುವ ವಿಟಮಿನ್ ಗಳು, ಪೌಷ್ಟಿಕಾಂಶಗಳು, ಅವುಗಳ ಪ್ರಮಾಣ, ಸಸ್ಯಹಾರವೇ ಅಥವಾ ಮಾಂಸಹಾರವೇ ಎಲ್ಲವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾಗಿದ್ದು ತಯಾರಕರ ಕರ್ತವ್ಯ. ಅದರಲ್ಲಿ ಟಿಟಿಡಿ ಟ್ರಸ್ಟ್ ಮತ್ತು ತುಪ್ಪ ಸರಬರಾಜುದಾರರು ಸಂಪೂರ್ಣ ಅಪರಾಧವೆಸಗಿದ್ದಾರೆ ಎಂದಾಗುತ್ತದೆ. ಕೊಬ್ಬನ್ನು ಬೆರೆಸಿದ್ದರೆ ಅದನ್ನು ಬಹಿರಂಗಪಡಿಸಬೇಕಿತ್ತು, ಆಯ್ಕೆ ಅದನ್ನು ತಿನ್ನುವವರಿಗೆ ಸಂಬಂಧಿಸಿದ್ದು. ಆದರೆ ಸುಳ್ಳು ಮಾಹಿತಿ ಮಾತ್ರ ಖಂಡಿತ ದೊಡ್ಡ ಅಪರಾಧ…….
ಜೊತೆಗೆ ಯಾವುದೇ ಪ್ರಾಣಿಯ ಆರೋಗ್ಯಕರ ಕೊಬ್ಬು ವಿಷಕಾರಿಯೇನು ಅಲ್ಲ. ಆದರೆ ಒತ್ತಾಯಪೂರ್ವಕವಾಗಿ, ರುಚಿಗಾಗಿ, ಬೆಲೆಗಾಗಿ ಇನ್ನೊಬ್ಬರ ಮೇಲೆ ಹೇರುವುದು ತಪ್ಪಾಗುತ್ತದೆ. ಆಹಾರ ಸೇವಿಸುವ ತನ್ನಿಷ್ಟದ ಆಯ್ಕೆ ಅವರವರಿಗೆ ಸೇರಿರುತ್ತದೆ. ಇದನ್ನು ತಿನ್ನಬೇಡಿ ಎನ್ನುವುದು ಎಷ್ಟು ತಪ್ಪೋ, ಇದನ್ನೇ ತಿನ್ನಿ ಎನ್ನುವುದೂ ಅಷ್ಟೇ ತಪ್ಪು. ಅದು ಅವರವರ ಆಯ್ಕೆ. ಈ ವಿಷಯದಲ್ಲಿ ಮತ್ತೆ ಟಿಟಿಡಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ……
ಅಂತಿಮವಾಗಿ,
ಒಂದು ಧಾರ್ಮಿಕ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ವಿವರಿಸಿ ಹೇಳುವುದಾದರೆ ಕೋಟ್ಯಂತರ ಜನರ ಆರಾಧ್ಯ ದೈವ, ಅನೇಕ ಭಕ್ತರ ಬೇಡಿಕೆ ಈಡೇರಿಸುತ್ತಾನೆ ಎನ್ನುವ ನಂಬಿಕೆಯ ವೆಂಕಟೇಶ್ವರ ಸ್ವಾಮಿ, ತನ್ನ ಲಡ್ಡುವಿನಲ್ಲಿಯೇ ಕಲಬೆರಕೆ ಅಥವಾ ಪ್ರಾಣಿಯ ಕೊಬ್ಬು, ಒಂದು ವೇಳೆ ಆಗಿದ್ದರೆ, ಮಿಶ್ರಣವಾಗಿದೆ ಎಂಬುದನ್ನು ಪತ್ತೆ ಹಚ್ಚಿ ಸಾರ್ವಜನಿಕರಿಗೆ ಮಾಹಿತಿ ನೀಡಲು ವಿಫಲನಾಗುವಷ್ಟು ದುರ್ಬಲನಾದರೆ ಇನ್ನು ನಮ್ಮನ್ನೆಲ್ಲ ಹೇಗೆ ಕಾಪಾಡಿಯಾನು ಎಂಬುದು ಸಹಜವಾಗಿ ಏಳುವ ಪ್ರಶ್ನೆ,….
ಹಾಗೆಯೇ ದೇವರ ಪ್ರಸಾದವೆಂದ ಮೇಲೆ ಅದು ಹೇಗಿದ್ದರೂ ಸ್ವೀಕರಿಸಿದಲ್ಲಿ ಯಾವುದೇ ತಪ್ಪಿಲ್ಲ ಎನ್ನುವ ಮತ್ತೊಂದು ಭಕ್ತಿ ಮತ್ತು ಮೌಢ್ಯದ ನಂಬಿಕೆಯು ಸಾಮಾನ್ಯ ಜನರಲ್ಲಿದೆ……
ಹೀಗೆ ಬಗೆಹರಿಸಲಾಗದ, ಉತ್ತರಕ್ಕೆ ಸಿಗದ ಅನೇಕ ಪ್ರಶ್ನೆಗಳಿವೆ. ಆದರೆ ಈ ಕೊಬ್ಬಿನ ವಿಷಯವನ್ನು ರಾಜಕೀಯಗೊಳಿಸದೆ, ದ್ವೇಷ ಅಸೂಯೆಗಾಗಿ ಉಪಯೋಗಿಸಿಕೊಳ್ಳದೆ, ಸತ್ಯ ಹೊರಬರಲಿ. ನಾವು ಕೂಡ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸೋಣ….
ಹಾಗೆಯೇ ನಮಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಯಾವುದೋ ಒಂದು ನಿರ್ಧಾರ ಮಾಡುವುದು ಬೇಡ. ಸುಳ್ಳು, ವಂಚನೆ ಯಾವ ವಿಷಯದಲ್ಲಿ ಆಗಿದ್ದರೂ ಅದನ್ನು ಖಂಡಿಸಬೇಕು. ಶಿಕ್ಷಿಸಬೇಕು. ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು…..
ಇಲ್ಲಿ ವಿಷಯ ಕೊಬ್ಬು ಅಥವಾ ಲಾಡಿನದಲ್ಲ. ಟಿಟಿಡಿ ಟ್ರಸ್ಟ್ ತೆಗೆದುಕೊಂಡ ತಪ್ಪು ನಿರ್ಧಾರ ಅಥವಾ ವಂಚನೆ ಅಥವಾ ಉದ್ದೇಶಪೂರ್ವಕ ಒತ್ತಾಯದ ತಿನಿಸು ಇವುಗಳು ಬಹು ಮುಖ್ಯವಾಗಬೇಕು. ಆಹಾರದ ಸುರಕ್ಷತೆ, ಅದರ ಗುಣಮಟ್ಟ ಮತ್ತು ಆಹಾರದ ಆಯ್ಕೆ ನಮ್ಮ ಹಕ್ಕು ಮತ್ತು ಸ್ವಾತಂತ್ರ್ಯ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……