Spread the love

ಈ ಸಂದರ್ಭದಲ್ಲಿ ನಮ್ಮ ಸಮಾಜದ ವ್ಯಾವಹಾರಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಪಕ್ಷಿನೋಟ…….

ಖರ್ಚು ಮಾಡುವ ಸುಲಭ ಮಾರ್ಗಗಳು,
ಸಂಪಾದನೆ ಮಾಡಲು ಕಠಿಣ ಹಾದಿಗಳು……

ಆಧುನಿಕತೆ – ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ – ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರೂ, ಯಾರು ಬೇಕಾದರೂ ಹಣ ಖರ್ಚು ಮಾಡಬಹುದು. ನಮಗೆ ಬೇಕಾದ ವಸ್ತುಗಳನ್ನು, ಹೂಡಿಕೆಯನ್ನು, ಪಾವತಿಗಳನ್ನು, ವರ್ಗಾವಣೆಯನ್ನು ಮಾಡಬಹುದು ಮತ್ತು ಕೊಳ್ಳಬಹುದು. ಇದಕ್ಕೆ ಯಾವುದೇ ಶ್ರಮ ಬೇಕಿಲ್ಲ…..

ಒಂದು ಮೊಬೈಲಿನ ಮೂಲಕವೇ ಕೋಟ್ಯಾಂತರ ಹಣ ಖರ್ಚು ಮಾಡಬಹುದು. ಅದಕ್ಕಾಗಿ ಎಲ್ಲಾ ಬಗೆಯ ವೇದಿಕೆ – ಅವಕಾಶ – ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ. ಹಣ ನಿಮ್ಮ ಬಳಿ ಇರಬೇಕಷ್ಟೇ…

ಆದರೆ ಅದಕ್ಕೆ ವಿರುದ್ಧವಾಗಿ ಹಣ ಸಂಪಾದನೆಯ ಮಾರ್ಗಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಇಷ್ಟು ಸುಲಭವಾಗಿ, ಸರಳವಾಗಿ, ಯಾವುದೇ ಒತ್ತಡವಿಲ್ಲದೇ ಹಣವನ್ನು ಸಂಪಾದನೆ ಮಾಡಲು ಸಾಧ್ಯವೇ. ಹೌದು ಕೆಲವು ಅಪರೂಪದ ಜೂಜಿನಂತ ಸ್ವಲ್ಪ ಅಪಾಯಕಾರಿ ಟ್ರೇಡಿಂಗ್ ನಂತಹ ವ್ಯವಹಾರ ಹೊರತುಪಡಿಸಿ ಇತರೇ ವ್ಯಾಪಾರ ವಹಿವಾಟು ಮಾಡಲು ಸಾಧ್ಯವೇ…..

ಬಹುಶಃ ಇಂದು ನಮ್ಮೆಲ್ಲರ ಬಹುದೊಡ್ಡ ಸವಾಲು ಇದೇ ಆಗಿದೆ. ಸಂಪಾದನೆ ಮತ್ತು ಲಾಭಗಳು ಕಡಿಮೆಯಾಗುತ್ತಾ, ಖರ್ಚುಗಳು ಹೆಚ್ಚಾಗುತ್ತಾ ಅವುಗಳ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಇದು ದಿನೇ ದಿನೇ ಅಧಿಕವಾಗುತ್ತಿದೆ…..

ಹಾಗೇ ಒಮ್ಮೆ 30 ವರ್ಷಗಳ ಹಿಂದಿನ ಜನಜೀವನದ ಬಗ್ಗೆ ಯೋಚಿಸಿ. ಮೊಬೈಲ್ ಇರಲಿಲ್ಲ. ಅದರ ಖರ್ಚು ಸಂಪೂರ್ಣ ಉಳಿತಾಯ. ಇಂದು ಅದು ಅನಿವಾರ್ಯ. ಟಿವಿ ಪ್ರಸಾರ ಉಚಿತವಾಗಿತ್ತು. ಬಟ್ಟೆಗಳು ಹಬ್ಬದ ಸಂದರ್ಭದಲ್ಲಿ ಮಾತ್ರ. ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ದುಡ್ಡು. ಸಾಮಾನ್ಯ ಖಾಯಿಲೆಗೆ ಸರ್ಕಾರಿ ಆಸ್ಪತ್ರೆಗಳೇ ಸಾಕಾಗಿದ್ದವು. ನೀರಿಗೆ ಬಿಲ್ ಇರಲಿಲ್ಲ. ಹುಟ್ಟಿದ ಹಬ್ಬ, ಮದುವೆ ವಾರ್ಷಿಕೋತ್ಸವದ ನೆನಪುಗಳೇ ಇರುತ್ತಿರಲಿಲ್ಲ. ಮನೆಯ ಊಟವೇ ಹೆಚ್ಚು. ಹೋಟೆಲ್ ಮತ್ತು ಇತರ ಬೀದಿ ಬದಿಯ ತಿಂಡಿಗಳು ಅಪರೂಪ. ಫ್ರಿಡ್ಜ್, ವಾಶಿಂಗ್ ಮಿಷಿನ್, ವ್ಯಾಕ್ಯೂಮ್ ಕ್ಲೀನರ್ ಮುಂತಾದವುಗಳ ಅವಶ್ಯಕತೆಯೇ ಇರಲಿಲ್ಲ. ಹೀಗೇ ದಿನೇ ದಿನೇ ನಮ್ಮ ಅವಶ್ಯಕತೆಗಳು ಹೆಚ್ಚಾಗುತ್ತಲೇ ಇವೆ ಮತ್ತು ಅದನ್ನು ಮನೆ ಬಾಗಿಲಿಗೆ ಸಾಲದ ರೂಪದಲ್ಲಿ ಬಡ್ಡಿಗೆ ಪೂರೈಸಲಾಗುತ್ತದೆ……

ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಕೆಲವೇ ನಿರ್ದಿಷ್ಟ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಮಧ್ಯಮ ವರ್ಗದ ಜನರ ವ್ಯಾಪಾರ ವಹಿವಾಟುಗಳ ಲಾಭದ ಪ್ರಮಾಣದಲ್ಲಿ, ಸ್ಪರ್ಧೆಯ ಕಾರಣದಿಂದಾಗಿ ಕಡಿಮೆ ಆಗುತ್ತಲೇ ಇದೆ. ಜೊತೆಗೆ ಬೇರೆ ಬೇರೆ ಅನಿವಾರ್ಯ ಖರ್ಚುಗಳು ಅದಕ್ಕೆ ಜೊತೆಯಾಗುತ್ತಿದೆ…..

ಹೊರ ಹೋಗುವುದು ದೊಡ್ಡ ಪ್ರಮಾಣದ ಹಣ – ಒಳ ಬರುವುದು ಚಿಲ್ಲರೆ ಹಣ ಎಂಬಂತಾಗಿದೆ. ಆದರೆ ಬೃಹತ್ ಉದ್ದಿಮೆಗಳಿಗೆ ಇದು ತದ್ವಿರುದ್ಧವಾಗಿ ಅಪಾರ ಲಾಭವನ್ನು ತಂದುಕೊಡುತ್ತಿದೆ…….

ಅಂದರೆ ಖರ್ಚುಗಳನ್ನು ಹೆಚ್ಚು ಮಾಡಿ ಆ ಹಣವನ್ನು ಕೆಲವೇ ವ್ಯಕ್ತಿಗಳು ಮತ್ತು ಕಂಪನಿಗಳು ಕೇಂದ್ರೀಕೃತ ಮಾಡಿಕೊಂಡು ಜನರ ಆರ್ಥಿಕ ಅಸಮಾನತೆಗೆ ಕಾರಣವಾಗಿ, ಅದೇ ಅಂಶಗಳು ಅವರ ಒಟ್ಟು ಜೀವನಮಟ್ಟ ಕುಸಿಯುವಂತೆ ಮಾಡಿವೆ. ಮಾನಸಿಕ ಮತ್ತು ದೈಹಿಕ ಅಸಹಿಷ್ಣತೆ ಉಂಟಾಗಿ ರೋಗಗಳ ಗೂಡಾಗುವಂತೆ ಮಾಡಿದೆ…..

ಒಂದು ಅಧ್ಯಯನದ ಪ್ರಕಾರ ಕುಟುಂಬವೊಂದು ಭಾರತದಲ್ಲಿ ಅತಿಹೆಚ್ಚು ಹಣ ಖರ್ಚು ಮಾಡುವುದು ಶಿಕ್ಷಣ ಮತ್ತು ಆರೋಗ್ಯಕ್ಕೆ…..

ನೋಡಿ ಇದು ನಮ್ಮ ನೇರ ಅರಿವಿಗೆ ಬಾರದೆ ಪರೋಕ್ಷವಾಗಿ ನಮ್ಮ ಜೇಬುಗಳಿಗೆ ಕತ್ತರಿ ಬೀಳುತ್ತಿದೆ……

ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜನರ ವಿವಿಧ ರೀತಿಯ ಪರದಾಟಗಳನ್ನು ನೋಡಿದಾಗ ಇದೆಲ್ಲಾ ಮನದ ಮೂಲೆಯಲ್ಲಿ ನೆನಪಾಗುತ್ತಿದೆ….

ಅಭಿವೃದ್ಧಿ ಎಂಬುದು ನಮ್ಮ ಬದುಕಿನ ನೆಮ್ಮದಿಯನ್ನು ನಾಶ ಮಾಡುತ್ತಾ, ಮೇಲ್ನೋಟಕ್ಕೆ ನಮ್ಮನ್ನು ವಸ್ತು ಸಂಸ್ಕೃತಿಯ ಶ್ರೀಮಂತರಂತೆ ಬಿಂಬಿಸುತ್ತಾ, ಕೊನೆಗೆ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡುವಂತೆ ಮಾಡುತ್ತಿದೆ…..

ನಮ್ಮೆಲ್ಲರ ಕ್ರಿಯಾತ್ಮಕ ಚಟುವಟಿಕೆಗಳನ್ನು ನಾಶ ಮಾಡಿ ಪರೋಕ್ಷ ಆರ್ಥಿಕ ಗುಲಾಮಿ ಸಂಸ್ಕೃತಿಗೆ ದಾಸರನ್ನಾಗಿ ಮಾಡುತ್ತಿದೆ….

ಬಹುತೇಕ ವಿದ್ಯಾವಂತ ಯುವ ಜನಾಂಗ ಸ್ವಿಗ್ಗಿ, ಅಮೆಜಾನ್, ಫ್ಲಿಪ್ ಕಾರ್ಟ್, ಜೊಮ್ಯಾಟೋ, ಕಾಲ್ ಸೆಂಟರ್ ಮುಂತಾದ ಕಂಪನಿಗಳಲ್ಲಿ ಪೋಸ್ಟ್ ಮ್ಯಾನ್ ಗಳ ರೀತಿಯ ಉದ್ಯೋಗಗಳಲ್ಲಿ ಕೇವಲ ಬದುಕುವ ಏಕೈಕ ಉದ್ದೇಶದಿಂದ ತಮ್ಮ ಅಪೂರ್ವ ಶಕ್ತಿಯನ್ನು ವಿನಿಯೋಗಿಸಿದರೆ ಅವರ ಬದುಕಿನ ಸಾರ್ಥಕತೆ ಮತ್ತು ದೇಶದ ಭವಿಷ್ಯದ ಉತ್ಪಾದನಾ ಸಾಮರ್ಥ್ಯ ಏನಾಗಬಹುದು…..

ಆದ್ದರಿಂದ ಕೇವಲ ಹೊಟ್ಟೆಪಾಡಿನ ಉದ್ಯೋಗ ಮಾತ್ರ ಅಭಿವೃದ್ಧಿಯಲ್ಲ. ಮನುಷ್ಯನ ಆಸೆ ಕನಸುಗಳು ಕ್ರಿಯಾತ್ಮಕ ಸಾಧನೆಗಳು ಮತ್ತು ನೆಮ್ಮದಿಯ ಮಟ್ಟ ಹೆಚ್ಚಿ ತೃಪ್ತಿದಾಯಕ ಬದುಕು ನಮ್ಮದಾಗುವಂತಹ ಸಮಾಜ ನಮ್ಮದಾಗಲಿ ಎಂದು ಈ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……

error: No Copying!