ಕಾಪು: ದಿನಾಂಕ:26-08-2024(ಹಾಯ್ ಉಡುಪಿ ನ್ಯೂಸ್) ಕಾಪು ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ ಹೆಜಮಾಡಿ (55) ಅವರನ್ನು ಕೊಲೆ ನಡೆಸುವ ಉದ್ದೇಶ ದಿಂದ ಮೂವರು ಅಪರಿಚಿತರು ಕಾರಿನಲ್ಲಿ ಬೆನ್ನಟ್ಟಿ ಬಂದಿದ್ದಾರೆ ಎಂದು ಗುಲಾಂ ಮೊಹಮ್ಮದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಪು ತಾಲೂಕು ಹೆಜಮಾಡಿ ನಿವಾಸಿ ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ (55) ಎಂಬವರು ದಿನಾಂಕ: 24-08-2024 ರಂದು ತನ್ನ ಕಾರಿನಲ್ಲಿ ಚಾಲಕ ಆಸೀಫ್ ಹಾಗೂ ಸೂಪರ್ ವೈಸರ್ ಅಬೂಬಕ್ಕರ್ ಎಂಬವರೊಂದಿಗೆ ಮಣಿಪಾಲದಿಂದ ಹೆಜಮಾಡಿಗೆ ಹೋಗಲು ಮಣಿಪಾಲದಿಂದ ಹೊರಟು ರಾ.ಹೆ 66 ಉಡುಪಿ –ಮಂಗಳೂರು ರಸ್ತೆಯಲ್ಲಿ ಹೆಜಮಾಡಿ ಕಡೆಗೆ ಹೋಗುತ್ತಾ ಸಂಜೆ 6:00 ಗಂಟೆಯ ಸುಮಾರಿಗೆ ಉದ್ಯಾವರ ಸೇತುವೆಯ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಗುಲಾಂ ಮೊಹಮ್ಮದ್ ಅವರ ಕಾರಿನ ಹಿಂದಿನಿಂದ ಯಾರೋ 3 ಜನ ಅಪರಿಚಿತರು KA 20… 9010 ನಂಬರಿನ ಬಿಳಿ ಬಣ್ಣದ ಹಳೆಯ ಸೆಲಾರಿಯೋ ಕಾರಿನಲ್ಲಿ ಬೆನ್ನಟ್ಟಿ ಬಂದು ಗುಲಾಂ ಮೊಹಮ್ಮದ್ ರ ಕಾರಿಗೆ ಡಿಕ್ಕಿಪಡಿಸುವ ರೀತಿಯಲ್ಲಿ ಕಾರನ್ನು ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ, ಗುಲಾಂ ಮೊಹಮ್ಮದ್ ರು ಕಟಪಾಡಿ ಜಂಕ್ಷನ್ ತಲುಪಿ ಪೊಲೀಸರ ಸೂಚನೆಯಂತೆ ಕಾರನ್ನು ನಿಲ್ಲಿಸಿದಾಗ 3 ಜನ ಅಪರಿಚಿತರು ತಮ್ಮ ಕಾರಿನ ಕಿಟಕಿಯ ಮೂಲಕ ಗುಲಾಂ ಮೊಹಮ್ಮದ್ ರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದು ಗುಲಾಂ ಮೊಹಮ್ಮದ್ ಅವರು ಭಯದಿಂದ ಕಾರನ್ನು ಮುಂದಕ್ಕೆ ಹೋಗುವ ರೀತಿಯಲ್ಲಿ ಜೋರಾಗಿ ಚಲಾಯಿಸಿ ಓಮ್ಮೇಲೆ ಶಿರ್ವಾ ರಸ್ತೆ ಕಡೆಗೆ ಚಲಾಯಿಸಿದ್ದು, ಅಪರಿಚಿತ ಕಾರಿನವರು ಮಂಗಳೂರು ಕಡೆಗೆ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಯಾರೋ 3 ಜನ ಅಪರಿಚಿತರು ಉದ್ದೇಶ ಪೂರ್ವಕವಾಗಿಯೇ ಗುಲಾಂ ಮೊಹಮ್ಮದ್ ಅವರನ್ನು ಕೊಲ್ಲುವ ಉದ್ದೇಶದಿಂದ ಭಯ ಹುಟ್ಟಿಸಲು ಈ ಕೃತ್ಯ ಎಸಗಿದ್ದಾರೆ ಎಂದು ದೂರಿದ್ದಾರೆ. ಗುಲಾಂ ಮೊಹಮ್ಮದ್ ಅವರಿಗೆ ಅಪರಿಚಿತರು ಬಂದ ಕಾರಿನ ನೋಂದಣಿ ನಂಬ್ರದ ಮಧ್ಯದ ಸಿರಿಯಲ್ ಯಾವುದು ಎಂದು ತಿಳಿದಿಲ್ಲ ಆ ವ್ಯಕ್ತಿಗಳನ್ನು ಹಾಗೂ ಕಾರನ್ನು ಮುಂದಕ್ಕೆ ನೋಡಿದಲ್ಲಿ ಗುರುತಿಸುತ್ತೇನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 281, 351(2) BNS ನಂತೆ ಪ್ರಕರಣ ದಾಖಲಾಗಿದೆ.