Spread the love


ಹೀಗೊಂದು ಪುಸ್ತಕ ಈಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಪರ ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ…..

ಈ ವಚನ ದರ್ಶನ ಪುಸ್ತಕ ವಚನಗಳನ್ನು ಸನಾತನ ಧರ್ಮದ ವೇದ ಉಪನಿಷತ್ತುಗಳು, ಮನಸ್ಮೃತಿಗಳು, ಸಂಪ್ರದಾಯಗಳು, ಆಚರಣೆಗಳ ಆಧಾರದ ಮೇಲೆ ಮತ್ತೆ ಪುನರ್ ಅರ್ಥೈಸಿ, ಪರೋಕ್ಷವಾಗಿ ಭಕ್ತಿ ಪಂಥದ ಮುಂದುವರಿದ ಭಾಗವಾಗಿ ಚಿತ್ರಿಸಲಾಗಿದೆ. ಇದು ಬಸವ ತತ್ವದ ಅಥವಾ ವಚನ ಸಾಹಿತ್ಯದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇದನ್ನು ಒಂದು ಹಿಡನ್ ಅಜೆಂಡಾ ಆಗಿ ಶರಣ ಸಂಸ್ಕೃತಿಗೆ ಧಕ್ಕೆ ತರಲು, ಅಪಚಾರವೆಸಗಲು, ಅದನ್ನು ಗೊಂದಲಗೊಳಿಸಿ ಜನರಲ್ಲಿ ಅದರ ಬಗ್ಗೆ ನಿರಾಸಕ್ತಿ ಮೂಡಿಸಲು ಈ ಪುಸ್ತಕವನ್ನು ಉದ್ದೇಶಪೂರ್ವಕವಾಗಿಯೇ ರಚಿಸಲಾಗಿದೆ. ಇದು ಬಲಪಂಥೀಯ ಚಳವಳಿಯ ಒಂದು ಭಾಗ ಎಂಬುದಾಗಿ ಕೆಲವರು ಆರೋಪ ಮಾಡುತ್ತಿದ್ದಾರೆ…….

ಹಾಗೆಯೇ,
ವಚನ ಸಾಹಿತ್ಯವನ್ನು, ಬಸವ ತತ್ವವನ್ನು, ಶ್ರಮ ಸಂಸ್ಕೃತಿಯನ್ನು, ಲಿಂಗಾಯತ ಧರ್ಮವನ್ನು ಗುತ್ತಿಗೆ ಪಡೆದಂತೆ ಆಡುತ್ತಿರುವ ಕೆಲವರು, ಬಸವಣ್ಣನವರ ನಿಜವಾದ ಆಶಯಗಳನ್ನು ಮರೆಮಾಚಿ ತಮ್ಮ ಹಠಮಾರಿ ಧೋರಣೆಗೆ ಅವರನ್ನು ಉಪಯೋಗಿಸಿಕೊಂಡು, ಸನಾತನ ಧರ್ಮದ ವಿರುದ್ಧ ಮತ್ತೊಂದು ಲಿಂಗಾಯತ ಧರ್ಮ ಸ್ಥಾಪಿಸಿ ಹಿಂದೂ ಧರ್ಮವನ್ನು ವಿಭಜಿಸಲು, ತಮ್ಮ ಸ್ವಾರ್ಥಕ್ಕಾಗಿ ಕೆಲವು ಜನರು ವಚನಗಳನ್ನೇ ತಿರುಚಿ ಈಗ ಈ ಪುಸ್ತಕದ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜವಾದ ವಚನ ದರ್ಶನ ಎಂಬುದೇ ಇದು ಎಂದು ಅದರ ಪರವಾದ ಸಮರ್ಥಕರು ಹೇಳುತ್ತಿದ್ದಾರೆ….

ಈ ವಾದಗಳನ್ನು ಹೊರತುಪಡಿಸಿದ ವಚನ ದರ್ಶನ ಏನಿರಬಹುದು ನಾವು ಈಗಿನ ಕಾಲಘಟ್ಟದಲ್ಲಿ ವಚನಗಳ ದರ್ಶನವನ್ನು ಹೇಗೆ ಪಡೆಯಬೇಕು. ಟೀಕೆ ಪ್ರತಿ ಟೀಕೆ ಹೊರತಾದ ಸಮಗ್ರ ಚಿಂತನೆಯಲ್ಲಿ ವಚನ ದರ್ಶನ ಯಾವ ಮಾದರಿಯಲ್ಲಿ ಗ್ರಹಿಸಬೇಕು ಎಂಬುದೇ ಇವತ್ತಿನ ಬಹುಮುಖ್ಯ ಪ್ರಶ್ನೆ…..

12 ನೆಯ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯ ಮೂಲತಃ ಶ್ರಮ ಸಂಸ್ಕೃತಿಯನ್ನು ಆಧರಿಸಿದ ಅನುಭವಿಗಳ ಅನುಭಾವ ಸಾಹಿತ್ಯ. ಅಲ್ಲಿಯವರೆಗಿನ ಸಾಮಾಜಿಕ ವ್ಯವಸ್ಥೆಗೆ ಒಂದು ರೀತಿಯಲ್ಲಿ ಹೊಸ ವ್ಯಾಖ್ಯಾನ, ಹೊಸ ಅಧ್ಯಾಯ, ಹೊಸ ರೂಪ ನೀಡಿದ್ದು ವಚನ ಸಾಹಿತ್ಯ ಮತ್ತು ಸಂಸ್ಕೃತಿ. ಬಹುತೇಕ ಅದನ್ನು ಸನಾತನ ಸಂಸ್ಕೃತಿಯ ಬಂಡಾಯ ಚಿಂತನೆ ಎಂತಲೂ ಸಹ ಗುರುತಿಸಲಾಗುತ್ತದೆ…….

ಏಕೆಂದರೆ ಋಷಿ ಸಂಸ್ಕೃತಿ, ಭಕ್ತಿ ಸಂಸ್ಕೃತಿ, ಭಾವನಾತ್ಮಕ ಸಂಸ್ಕೃತಿ, ಬ್ರಾಹ್ಮಣ್ಯ ಸಂಸ್ಕೃತಿ, ಅತಿಮಾನುಷ ಸಂಸ್ಕೃತಿ, ದಿವ್ಯ ಜ್ಞಾನ ಸಂಸ್ಕೃತಿ, ಕಾಲ್ಪನಿಕ ಸಂಸ್ಕೃತಿ, ಪೌರಾಣಿಕ ಸಂಸ್ಕೃತಿ ಹೀಗೆ ಒಂದು ರೀತಿ ವಿಶೇಷ ಶಕ್ತಿಯ ಆರಾಧನಾ ಸಂಸ್ಕೃತಿ ಅಲ್ಲಿಯವರೆಗೂ ಅಸ್ತಿತ್ವದಲ್ಲಿತ್ತು ಮತ್ತು ಈ ಸಮಾಜ ಅದನ್ನು ಒಪ್ಪಿಕೊಂಡಿತ್ತು. ಆದರೆ ಯಾವ ಕಾರಣವೋ ಏನೋ 12 ನೇ ಶತಮಾನದಲ್ಲಿ ಈ ಶ್ರಮ ಸಂಸ್ಕೃತಿ ಇದಕ್ಕೆ ಪರ್ಯಾಯವಾಗಿ ಮೂಡಿಬಂದಿತು…..

ಶ್ರಮ ಸಂಸ್ಕೃತಿ ಎಂದರೆ ಕೇವಲ ದೈಹಿಕ ಶ್ರಮ, ಬೆವರು ಸುರಿಸುವ ದುಡಿತ ಮಾತ್ರ ಪ್ರತಿನಿಧಿಸುವುದಿಲ್ಲ. ಶ್ರಮ ಸಂಸ್ಕೃತಿ ಎಂದರೆ ಪ್ರಾಮಾಣಿಕ ಕಾಯಕ, ಕರ್ತವ್ಯ ನಿಷ್ಠೆ, ವೃತ್ತಿ ಶ್ರದ್ಧೆ, ಸರಳ ಬದುಕು, ತನ್ನ ತಾನು ಅರಿಯುವ ಕ್ರಿಯೆ, ಇತರರನ್ನು ‌ಸಮಾನವಾಗಿ ಗೌರವಿಸುವ ಎಲ್ಲವನ್ನೂ ಒಳಗೊಂಡಿರುತ್ತದೆ ಮತ್ತು ಪ್ರತಿಪಾದಿಸುತ್ತದೆ. ಆ ಮೂಲಕ ಎಲ್ಲಾ ಪ್ರಾಣಿ ಪಕ್ಷಿಗಳು, ಮನುಷ್ಯರು ಸೇರಿ ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸುವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ…….

ವಚನ ದರ್ಶನವೆಂದರೆ, ಈ ಎಲ್ಲವನ್ನು ಒಳಗೊಂಡ ಶ್ರಮ ಸಂಸ್ಕೃತಿ. ಸಮ ಸಮಾಜ, ಮಾನವೀಯ ಮೌಲ್ಯಗಳ ಸಮಾಜ, ಮನುಷ್ಯರನ್ನು ಪ್ರೀತಿಸುವ ಗೌರವಿಸುವ ಸಮಾಜ, ಭ್ರಷ್ಟತೆ ಇಲ್ಲದ ಜಾತಿ ಬೇಧವೆಣಿಸದ ಸಮಾಜ, ವರ್ಗರಹಿತ ಸಮಾಜ, ಪ್ರಕೃತಿಯ ಸಹಜ ಸ್ವಾಭಾವಿಕ ಮೌಲ್ಯಗಳ ಸಮಾಜ. ಇದನ್ನೇ ವಚನ ಸಂಸ್ಕೃತಿ ಸಾಹಿತ್ಯ ರೂಪದಲ್ಲಿ ಹೇಳುವುದು…..

ಅತಿಮಾನುಷ ಶಕ್ತಿಗಳ ಮೇಲಿನ ನಂಬಿಕೆ ಮತ್ತು ಭರವಸೆಯನ್ನು ವಚನ ಸಾಹಿತ್ಯ ಮೂಲದಲ್ಲಿ ತಿರಸ್ಕರಿಸುತ್ತದೆ. ನಮ್ಮೊಳಗಿನ ಆಂತರಿಕ ಶಕ್ತಿಗೆ ಮಹತ್ವ ನೀಡುತ್ತದೆ. ಆದರೂ ಆಗಿನ ವಚನಕಾರರಲ್ಲೂ ಸಾಕಷ್ಟು ದೈವ ಭಕ್ತಿ ಇತ್ತು. ದೇವರ ಮೇಲೆ ನಂಬಿಕೆಗಳು ಇದ್ದವು. ಅದನ್ನು ಸಹ ಕೆಲವು ವಚನಗಳಲ್ಲಿ ವ್ಯಕ್ತಪಡಿಸಿರುವುದು ನಿಜ. ಏಕೆಂದರೆ ಈ ದೈವ ಭಕ್ತಿ ಎಂಬುದು ಆಗಿನ ಕಾಲದಲ್ಲಿ ಎಲ್ಲರ ದೇಹ ಮನಸ್ಸುಗಳಲ್ಲಿ ಸೇರಿ ಹೋಗಿತ್ತು……

ಆದರೆ ಬಸವಣ್ಣನವರು ಅನುಭವ ಮಂಟಪ ಪ್ರಾರಂಭಿಸಿ, ಅದರಲ್ಲಿ ಪ್ರಜಾಪ್ರಭುತ್ವದ ರೀತಿಯ ಚರ್ಚೆಗಳನ್ನು, ಮಂಥನಗಳನ್ನು ಮಾಡಿ ಅಲ್ಲಿಯವರೆಗಿನ ದೈವ ಸ್ವರೂಪದ ಶಕ್ತಿಗಳನ್ನು ನಿರಾಕರಿಸಿ, ಮನುಷ್ಯ ಆತ್ಮ ಶಕ್ತಿಯ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ, ಕಾಯಕ ಸಂಸ್ಕೃತಿಯಾಗಿ ಮನುಷ್ಯ ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆ ರೂಪದಲ್ಲಿ ನೀಡಿದ್ದಾರೆ……

ಈಗ ನಿಜಕ್ಕೂ ನಮಗೆ ವಚನ ದರ್ಶನ ಆಗಬೇಕಾಗಿರುವುದು ಈ ನಿಟ್ಟಿನಲ್ಲಿ. ಅಂದರೆ ಶ್ರಮ ಸಂಸ್ಕೃತಿಯ ಹುಡುಕಾಟ ವಚನ ದರ್ಶನದ ಮುಖ್ಯ ಉದ್ದೇಶ ಆಗಿರಬೇಕು. ಅದನ್ನು ಹೊರತುಪಡಿಸಿ ಅನಾವಶ್ಯಕವಾಗಿ, ಇಲ್ಲ ಸಲ್ಲದ ರಾಜಕೀಯ ದುರುದ್ದೇಶದ, ಧಾರ್ಮಿಕ ಅಂಧತ್ವದ, ಪ್ರಚಾರ ಪ್ರಶಸ್ತಿಯ, ದ್ವೇಷ ಅಸೂಯೆಯ ರೀತಿಯಲ್ಲಿ ವಚನ ದರ್ಶನವನ್ನು ವಿವಾದಾತ್ಮಕವಾಗಿಸಿ ಗ್ರಹಿಸುವುದು ತೀರ ನಾಚಿಕೆಗೇಡಿನ ವಿಷಯ…..

ಕಾಲ ಯಾವುದಾದರೂ ಇರಲಿ, ಹೇಗಾದರೂ ಇರಲಿ, ಮನುಷ್ಯನನ್ನು ಪ್ರೀತಿಸುವ, ಮನುಷ್ಯರ ಆಂತರ್ಯದ ಶಕ್ತಿಯನ್ನು ಹೆಚ್ಚಿಸುವ, ಮನುಷ್ಯನ ಕಷ್ಟಗಳಿಗೆ ಮನುಷ್ಯನೇ ಪರಿಹಾರವಾಗುವ ನಿಟ್ಟಿನಲ್ಲಿ ಈ ಸಮಾಜವನ್ನು ಪುನರ್ ರಚಿಸಬೇಕಾಗಿದೆ. ಅದಕ್ಕೆ ಯಾವುದೇ ಧರ್ಮದ, ಯಾವುದೇ ವ್ಯಕ್ತಿಯ, ಯಾವುದೇ ಸಿದ್ಧಾಂತದ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಕೆಟ್ಟ ಅಂಶಗಳನ್ನು ತಿರಸ್ಕರಿಸಬೇಕಾಗುತ್ತದೆ…..

ಮನಸ್ಸಿನೊಳಗೆ ಅಸಮಾನತೆಯ, ಅಮಾನವೀಯತೆಯ ವಿಷವಿಟ್ಟುಕೊಂಡು ಹೊರಗೆ ವಚನ ಸಾಹಿತ್ಯ, ವಚನ ಸಂಸ್ಕೃತಿ, ಬಸವ ತತ್ವಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉದಾಹರಣೆಯಾಗಿ ಬಳಸಿಕೊಂಡು ಎಷ್ಟೇ ವಚನ ಯಾತ್ರೆ ಮಾಡಿದರೂ, ವಚನ ದರ್ಶನ ಮಾಡಿದರೂ, ಪುಸ್ತಕಗಳನ್ನು ಬರೆದರೂ, ವಿಚಾರ ಸಂಕಿರಣಗಳನ್ನು ಮಾಡಿದರೂ, ಒಳಾರ್ಥಗಳನ್ನು ಬಿಡಿಸಿ ಹೇಳಿದರೂ ಯಾವುದೇ ಪ್ರಯೋಜನವಿಲ್ಲ…….

ನಮ್ಮ ತಿಳುವಳಿಕೆ, ನಮ್ಮ ಆತ್ಮ ಸಾಕ್ಷಿಯನ್ನು ಬಡಿದೆಬ್ಬಿಸಿ ನಡವಳಿಕೆಯಾಗಿ ರೂಪಗೊಂಡಾಗ ಮಾತ್ರ ಯಾವುದೇ ಜೀವನ ಶೈಲಿಯ ದರ್ಶನಕ್ಕೆ ಒಂದು ಅರ್ಥವಿರುತ್ತದೆ. ಇಲ್ಲದಿದ್ದರೆ ಎಲ್ಲವೂ ವಿಷಪೂರಿತ ಆಹಾರದ ರೀತಿ ಇಡೀ ಸಮಾಜಕ್ಕೆ ಮಾರಕವೇ ಹೊರತು ಒಳ್ಳೆಯದಲ್ಲ…..

ಆದ್ದರಿಂದ ವಚನ ದರ್ಶನ ಪುಸ್ತಕದ ಬಗ್ಗೆ ಎಚ್ಚರಿಕೆಯ, ವಿವೇಚನೆಯ, ಪ್ರಬುದ್ಧ ಪ್ರತಿಕ್ರಿಯೆ ನಮ್ಮದಾಗಿರಲಿ. ವಚನಗಳು ಕೇವಲ ಕನ್ನಡ ನಾಡಿನ ಆಸ್ತಿಯಲ್ಲ. ವಿಶ್ವ ಮಾನವತೆಯ ಮಾದರಿಗಳು ಮತ್ತು ನಿಜ ಜೀವನ ದರ್ಶನಗಳು ಎಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿರಲಿ ಎಂದು ನೆನಪಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ 9844013068………..

error: No Copying!