Spread the love

ನಾವು ಚುನಾಯಿಸಿರುವ 224 ಜನಪ್ರತಿನಿಧಿಗಳು ಏಳು ಕೋಟಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ ನಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ, ಆಡಳಿತ ಪಕ್ಷ ವಿರೋಧ ಪಕ್ಷ ಎನ್ನದೆ ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಹಗರಣಗಳ ತನಿಖೆ, ಒಬ್ಬರು ಅಧಿಕಾರದಿಂದ ಇಳಿಯುವುದು ಮತ್ತೊಬ್ಬರು ಅಧಿಕಾರಕ್ಕೆ ಏರುವುದು ಇದೇ ವಿಷಯಗಳ ಮೇಲೆ ತಂತ್ರ ಪ್ರತಿ ತಂತ್ರ ರಚಿಸುತ್ತಾ, ಮಾಧ್ಯಮಗಳು ಕೂಡ ಅದನ್ನೇ ಪ್ರಮುಖ ವಿಷಯವಾಗಿ ಚರ್ಚಿಸುತ್ತಾ, ಜನರು ಸಹ ಅದರ ಸುತ್ತಲೂ ತಮ್ಮ ಯೋಚನೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಒಟ್ಟಾರೆಯಾಗಿ ಸುಮಾರು ನಾಲ್ಕು ಲಕ್ಷ ಕೋಟಿ ಬಜೆಟ್ ನ, ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವ ಕರ್ನಾಟಕದ ರಾಜ್ಯವನ್ನು ಎತ್ತ ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿದ್ದಾರೋ ಅರ್ಥವಾಗುತ್ತಿಲ್ಲ……

ಇರುವ ಕೆಲವು ವರ್ಷಗಳ ಅವಧಿಯಲ್ಲಿ ಜನರಿಗೆ ಉಪಯುಕ್ತವಾದ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಹೀಗೆ ಕಚ್ಚಾಡುತ್ತಾ ಇದ್ದರೆ, ಇದನ್ನು ಸುಗಮವಾಗಿ ನಿರ್ವಹಿಸಬೇಕಾಗಿದ್ದ ಕಾರ್ಯಾಂಗ ಇವರ ಎಲ್ಲಾ ಭ್ರಷ್ಟಾಚಾರಗಳಿಗೆ ಮೂಕ ಸಾಕ್ಷಿಯಾಗಿ ಅಥವಾ ಕೆಲವೊಮ್ಮೆ ಅದರಲ್ಲಿ ಭಾಗಿಯಾಗಿ ನೋಡುತ್ತಾ ಕುಳಿತಿದ್ದರೆ, ಇನ್ನು ನ್ಯಾಯಾಂಗ ತನಗೆ ತೋಚಿದಂತೆ ಕಾನೂನಿನಡಿಯಲ್ಲಿ ತೀರ್ಪು ನೀಡುತ್ತಾ, ಹೀಗೆ ಹೆಚ್ಚು ಕಡಿಮೆ ನಾಲ್ಕು ಪ್ರಮುಖ ಅಂಗಗಳು ಅಧಿಕಾರ, ಭ್ರಷ್ಟಾಚಾರ, ತನಿಖೆಗಳ ಸುತ್ತಲೇ ಸುತ್ತುತ್ತಿದ್ದರೆ ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನಾಗಬಹುದು…..

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಅಪರಾಧಗಳು, ಕೊಲೆಗಳು ಅಂದರೆ ಕ್ರೈಮ್ ರೇಟ್ ತುಂಬಾ ಹೆಚ್ಚಾಗುತ್ತಿದೆ. ಜನರಿಗೆ ಶಿಕ್ಷೆಯ ಅಥವಾ ಕಾನೂನಿನ ಭಯವೇ ಇಲ್ಲ. ತಮ್ಮ ನಿಗ್ರಹಿಸಲಾರದ ಅಸಮಾಧಾನಗಳು ಹಿಂಸಾತ್ಮಕ ರೂಪ ಪಡೆಯುತ್ತಿರುವುದು ಈ ಆಡಳಿತದ ವೈಫಲ್ಯಕ್ಕೆ ಒಂದು ದೊಡ್ಡ ಸಾಕ್ಷಿ. ಅದೇ ರೀತಿ ಅಪಘಾತಗಳು ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಮನೆಯಿಂದ ಹೊರಹೋದ ವ್ಯಕ್ತಿ ಮತ್ತೆ ಮನೆಗೆ ವಾಪಸ್ ಆಗುವ ಗ್ಯಾರಂಟಿ ಇಲ್ಲ ಎನ್ನುವ ಮನಸ್ಥಿತಿ ಬಹಳ ಜನರಲ್ಲಿ ಉದ್ಭವಿಸುತ್ತಿದೆ. ಆರೋಗ್ಯ ಪ್ರತಿ ಮನೆಯ ಬಹುದೊಡ್ಡ ಸಮಸ್ಯೆಯಾಗಿ ತಲೆಯೆತ್ತಿ ನಿಂತಿದೆ. ಯಾರನ್ನು ಕೇಳಿದರು ಅನಾರೋಗ್ಯ ಮತ್ತು ಅದಕ್ಕಾಗಿ ಅವರು ಖರ್ಚು ಮಾಡುತ್ತಿರುವ ಹಣ, ಸಾಲಸೋಲಗಳೇ ಅವರ ಬದುಕನ್ನು ಹಿಂಡಿ ಹಿಪ್ಪೇ ಮಾಡುತ್ತಿದೆ. ದೊಡ್ಡ ಪ್ರಸಿದ್ಧ ವ್ಯಕ್ತಿಗಳೇ ಎಲ್ಲವೂ ಇದ್ದಾಗಲೂ ಆತ್ಮಹತ್ಯೆಯ ಘಟನೆಗಳು ನಡೆಯುವಾಗ ಇನ್ನು ಸಾಮಾನ್ಯ ಜನರು ರೈತರು ಆತ್ಮಹತ್ಯೆ ಎಂಬುದು ಸಹಜವೇನೋ ಎಂಬಂತೆ ತೆಗೆದುಕೊಳ್ಳುತ್ತಿದ್ದಾರೆ……

ಇದನ್ನೆಲ್ಲಾ ನಿಗ್ರಹಿಸಿ, ಕನಿಷ್ಠ ನಿಯಂತ್ರಿಸಿ ನಮ್ಮೆಲ್ಲರ ಬದುಕಲ್ಲಿ ಒಂದಷ್ಟು ನೆಮ್ಮದಿಯನ್ನು ಕಾಣಿಸಬೇಕಾದ ಸರ್ಕಾರಗಳು ಯಾವನೋ ಒಬ್ಬ ವ್ಯಕ್ತಿಯ ಅಥವಾ ಕೆಲವೇ ವ್ಯಕ್ತಿಗಳ ಅಧಿಕಾರದಾಹಕ್ಕೆ ನಮ್ಮನ್ನೆಲ್ಲ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಮ್ಮ ದೌರ್ಭಾಗ್ಯವೋ ಅಥವಾ ನಮ್ಮ ಅಜ್ಞಾನವೋ ಅಥವಾ ನಮ್ಮಲ್ಲಿ ಒಗ್ಗಟ್ಟಿಲ್ಲದಿರುವಿಕೆಯೋ ಅಥವಾ ನಮ್ಮ ಗುಲಾಮಿ ಮನೋಭಾವವೋ ಒಂದೂ ಅರ್ಥವಾಗುತ್ತಿಲ್ಲ…….

ಮೊದಲಿಗೆ ಸಮಾಜವನ್ನು ಜಾತಿ, ಧರ್ಮ, ಪ್ರದೇಶ, ಹಣ, ಭಾಷೆ, ಅಧಿಕಾರಗಳ ಮೂಲಕ ವಿಭಜಿಸಿ, ಈಗ ಆ ವಿಭಜನೆಯ ಲಾಭ ಪಡೆದು ಇವರು ಮಜಾ ಉಡಾಯಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾಗುವುದು, ಮಂತ್ರಿಯಾಗುವುದು ಅಥವಾ ವಿರೋಧ ಪಕ್ಷದ ನಾಯಕನಾಗುವುದು ಮುಖ್ಯವಾಗಲೇಬಾರದು. ಇವತ್ತು ಒಬ್ಬರು ಇದ್ದರೆ ಮತ್ತೆ ಮುಂದೆ ಇನ್ನೊಬ್ಬರು ಸಹಜವಾಗಿಯೇ ಅಧಿಕಾರಕ್ಕೆ ಬರಲಿ. ಅದಕ್ಕೆ ಹೆಚ್ಚಿನ ಮಹತ್ವವೇ ಬೇಕಿರಲಿಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಜನರ ಕಲ್ಯಾಣವೇ ಮುಖ್ಯ ಉದ್ದೇಶವಾಗಿರಬೇಕಿತ್ತು……

ಇದನ್ನೆಲ್ಲ ನೋಡುತ್ತಿದ್ದರೆ ನಿಜಕ್ಕೂ ಹುಚ್ಚರ ಸಂತೆ ಎನಿಸುತ್ತದೆ. ಕೇವಲ ಕೆಲವೇ ಕೆಲವು ಜನರು ಒಳ್ಳೆಯ ಸ್ಥಾನದಲ್ಲಿದ್ದು ಸುಖವಾಗಿರಬಹುದು, ಇನ್ನೊಂದಿಷ್ಟು ಜನ ಹೇಗೋ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಉಳಿದವರ ಪರಿಸ್ಥಿತಿ ನಿಜಕ್ಕೂ ಅಧೋಗತಿ. ಬದುಕಿದರೆ ಸಾಕು ಎಂಬ ಮನಸ್ಥಿತಿಯಲ್ಲಿಯೇ ಈ ಆಧುನಿಕ ಕಾಲದಲ್ಲೂ ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದಾರೆ……

ಸಮಸ್ಯೆ ಏನು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಪರಿಹಾರ ಮಾತ್ರ ಸಾಧ್ಯವಾಗುತ್ತಿಲ್ಲ. ಮಾತನಾಡುವವರೇ ಬೇರೆ, ಬರೆಯುವವರೇ ಬೇರೆ, ಆಡಳಿತ ಮಾಡುವವರೇ ಬೇರೆ. ಒಂದಕ್ಕೊಂದು ಸಮನ್ವಯವೇ ಸಾಧ್ಯವಾಗುತ್ತಿಲ್ಲ. ಜನರು ಸಹ ತಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜಮುಖಿ ಚಿಂತನೆಗಳ ಜನರು ಮೂಕ ರೋಧನೆಯಲ್ಲಿದ್ದಾರೆ. ಏನನ್ನಾದರೂ ಮಾಡಬೇಕೆನ್ನುವ ಹಂಬಲ ಮಾತ್ರ ಬಹುತೇಕ ಜನರಲ್ಲಿ ಜಾಗೃತವಾಗಿದೆ. ಅದು ಕಾರ್ಯರೂಪಕ್ಕೆ ಬರುವ ಐತಿಹಾಸಿಕ ಕ್ಷಣಕ್ಕಾಗಿ ತಾಳ್ಮೆಯಿಂದ ಕಾಯುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..

error: No Copying!