ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ……
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಅಮಾನುಷ ದೌರ್ಜನ್ಯ ಖಂಡಿಸಬೇಕಿರುವುದು ಕೇವಲ ಹಿಂದುಗಳು ಮಾತ್ರವಲ್ಲ, ಭಾರತದ, ವಿಶ್ವದ ಎಲ್ಲ ಧರ್ಮಗಳ, ಪ್ರತಿ ಪ್ರಜೆಯು ಆ ಹಿಂಸಾಕೃತ್ಯವನ್ನು ಖಂಡಿಸಲೇಬೇಕು. ಅದೇ ನಿಜವಾದ ಮಾನವೀಯ ಧರ್ಮ……..
ಮತಾಂಧರ ನಡುವೆ ನಲುಗುತ್ತಿರುವ ಅಮಾಯಕ ಜೀವಗಳು…..
ವಿಶ್ವದಲ್ಲಿ ಸಾಮಾನ್ಯವಾಗಿ ಒಂಬತ್ತು ರೀತಿಯ ದೇಶಗಳು ಅಸ್ತಿತ್ವದಲ್ಲಿವೆ…
ಒಂದು,
ಅತ್ಯಂತ ಬಡತನದ ದೇಶಗಳು. ಉದಾಹರಣೆಗೆ ಇಥಿಯೋಪಿಯಾ, ಸುಡಾನ್, ಸೊಮಾಲಿಯಾ, ಬುರುಂಡಿ ಮುಂತಾದ ದೇಶಗಳು. ಇವು ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದೆ…..
ಎರಡನೆಯದಾಗಿ,
ಮತಾಂಧ ದೇಶಗಳು. ಉದಾಹರಣೆಗೆ
ಸಿರಿಯಾ, ಆಫ್ಘಾನಿಸ್ತಾನ್ ಇಸ್ರೇಲ್, ಪಾಕಿಸ್ತಾನ, ಇರಾನ್ ಮುಂತಾದ ದೇಶಗಳು.
ಮೂರನೆಯದಾಗಿ, ಸರ್ವಾಧಿಕಾರಿ ದೇಶಗಳಾದ ಉತ್ತರ ಕೋರಿಯಾ, ಬರ್ಮಾ ಉಜ್ಬೇಕಿಸ್ತಾನ್ ಮುಂತಾದವು.
ನಾಲ್ಕನೆಯದಾಗಿ, ಉದಾರವಾದಿ ದೇಶಗಳು. ಉದಾಹರಣೆಗೆ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳು.
ಐದನೆಯದಾಗಿ
ಕಮ್ಯುನಿಸಂ ಆಡಳಿತದ ಚೀನಾ, ಕ್ಯೂಬಾ ಇತ್ಯಾದಿ ದೇಶಗಳು.
ಆರನೆಯದಾಗಿ,
ಇವುಗಳ ನಡುವೆ ಮಧ್ಯಮ ಮಾರ್ಗದ ಪ್ರಜಾಪ್ರಭುತ್ವದ ಭಾರತ, ಜಪಾನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಅರ್ಜೆಂಟೇನ ಮುಂತಾದ ದೇಶಗಳು.
ಏಳನೆಯದಾಗಿ, ರಾಜಮನೆತನದ ಕತಾರ್, ಸೌದಿ ಅರೇಬಿಯಾ, ಬ್ರೂನಿ, ಓಮನ್ ಮುಂತಾದ ದೇಶಗಳು.
ಎಂಟನೆಯದಾಗಿ,
ಸಮೃದ್ಧ ದೇಶಗಳು. ಉದಾಹರಣೆಗೆ ನಾರ್ವೆ, ಸ್ವೀಡನ್, ಸ್ವಿಜರ್ಲ್ಯಾಂಡ್, ಬೆಲ್ಜಿಯಂ, ಡೆನ್ಮಾರ್ಕ್ ಮುಂತಾದ ದೇಶಗಳು…..
ಒಂಬತ್ತನೆಯದಾಗಿ,
ಮಿಲಿಟರಿ ಆಡಳಿತದ ದೇಶಗಳು. ಉದಾಹರಣೆಗೆ,
ಮಾಲಿ, ಚಾಡ್, ಗ್ಯಿನಿವಾ ಮುಂತಾದವು.
ಈ ದೇಶಗಳ ವಿಸ್ತೀರ್ಣ, ಜನಸಂಖ್ಯೆ, ವಾರ್ಷಿಕ ಆದಾಯ, ತಲಾ ಆದಾಯ, ನೆಮ್ಮದಿಯ ಗುಣಮಟ್ಟ, ಹಸಿವಿನ ಪ್ರಮಾಣ, ಜೀವನ ಶೈಲಿಯ ಉತ್ಕೃಷ್ಟತೆ, ಅಲ್ಲಿನ ಅಪರಾಧಗಳು, ಅಪಘಾತಗಳು, ಆತ್ಮಹತ್ಯೆಗಳು, ಕೊಲೆಗಳು, ಭಯೋತ್ಪಾದಕರ ಕೃತ್ಯಗಳು, ಕೋಮು ಗಲಭೆಗಳು, ವರ್ಗ ಸಂಘರ್ಷಗಳು ಹೀಗೆ ಎಲ್ಲವನ್ನು ಸಣ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿದರೆ ಆಗ ನಮಗೆ ಕನಿಷ್ಠ ನಾವು ಯಾವ ರೀತಿಯ ರಾಜಕೀಯ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂಬ ಬಗ್ಗೆ ಒಂದು ಅಭಿಪ್ರಾಯ ಮೂಡುತ್ತದೆ…
ಇದನ್ನು ಏಕೆ ಹೇಳಬೇಕಾಯಿತೆಂದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಭಯಭೀತರಾಗಿ ಅಲ್ಲಿನ ಹಿಂದುಗಳು ಭಾರತದ ರಕ್ಷಣೆಗೆ ಮರೆ ಹೋಗಿದ್ದಾರೆ ಎಂಬ ಸುದ್ದಿಗಳು ನಿರಂತರವಾಗಿ ಬರುತ್ತಿದೆ….
ಈ ಸುದ್ದಿಗಳು ಹೊಸದೇನು ಅಲ್ಲ. ದಕ್ಷಿಣ ಆಫ್ರಿಕಾ, ಅಮೆರಿಕಾದ ವರ್ಣಭೇದ, ಭಾರತದ ಜಾತಿ ವ್ಯವಸ್ಥೆ, ದಕ್ಷಿಣ ಅಮೆರಿಕ ದೇಶಗಳ ವರ್ಗ ತಾರತಮ್ಯ, ಆಫ್ರಿಕಾ ದೇಶಗಳ ಹಸಿವಿನ ಘರ್ಷಣೆಗಳು, ಕಾಶ್ಮೀರದ ಹಿಂದೂಗಳ ಹತ್ಯಾಕಾಂಡ, ಮಧ್ಯಪ್ರಾಚ್ಯದ ದೇಶಗಳ ಭಯೋತ್ಪಾದನೆ ಇವೆಲ್ಲವೂ ಇತಿಹಾಸದಲ್ಲಿ ನಿರಂತರವಾಗಿ ನಡೆದುಕೊಂಡೆ ಬರುತ್ತಿದೆ. ಮಧ್ಯಮ ಮಾರ್ಗದ ಭಾರತದಲ್ಲಿ ಸಹ ಇತ್ತೀಚಿನ ಮಣಿಪುರದ ಜನಾಂಗೀಯ ಗಲಭೆಗಳಾಗಲಿ, ಹಿಂದೂ ಮುಸ್ಲಿಂ ಗಲಭೆಗಳಾಗಲಿ, ಭಾಷಾ ಗಲಭೆಗಳು ನಡೆಯುತ್ತಲೇ ಇರುತ್ತವೆ…..
ಮನುಷ್ಯನ ನಾಗರಿಕ ಪ್ರಜ್ಞೆ ವಿಚಿತ್ರ ರೀತಿಯದು. ಕಾರಣಗಳೇನೆ ಇರಲಿ, ಒಂದು ಪ್ರದೇಶದಲ್ಲಿ ಯಾರು ಅಲ್ಪಸಂಖ್ಯಾತರಾಗಿದ್ದಾರೋ ಅವರನ್ನು ಗೌರವಪೂರ್ವಕವಾಗಿ ನೋಡಿಕೊಳ್ಳುವುದು ಅಲ್ಲಿನ ಬಹು ಸಂಖ್ಯಾತರ ಕರ್ತವ್ಯ. ಅದು ಭಾರತವೇ ಆಗಿರಲಿ, ಪಾಕಿಸ್ತಾನವೇ ಆಗಿರಲಿ, ಚೀನಾ ದೇಶದ ಆಗಿರಲಿ, ಬಾಂಗ್ಲಾದೇಶವೇ ಆಗಿರಲಿ ಅಲ್ಪಸಂಖ್ಯಾತರಿಗೆ ಯಾವಾಗಲೂ ಅಭದ್ರತೆ ಕಾಡುತ್ತದೆ. ಅವರು ಸದಾ ಆತಂಕದಲ್ಲಿಯೇ ಬದುಕುತ್ತಾರೆ.
ಆದ್ದರಿಂದ ಧರ್ಮ ಯಾವುದೇ ಇರಲಿ, ಅಲ್ಲಿನ ಜನರನ್ನು ರಕ್ಷಿಸಬೇಕಾಗಿದ್ದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಕರ್ತವ್ಯ ಮಾತ್ರವಲ್ಲ, ಅಲ್ಲಿ ಆಚರಣೆಯಲ್ಲಿರುವ ಧರ್ಮಗಳದು ಸಹ ಬಹು ಮುಖ್ಯ ಪಾತ್ರವಿದೆ. ಒಂದು ವೇಳೆ ಅಲ್ಪಸಂಖ್ಯಾತರನ್ನು ಕೊಂದದ್ದೇ ಆದರೆ ಅದು ಅಲ್ಪಸಂಖ್ಯಾತರ ಹತ್ಯೆಯಲ್ಲ, ಅದನ್ನು ಮಾಡಿದ ಬಹುಸಂಖ್ಯಾತರ, ಧಾರ್ಮಿಕ ಮತಾಂಧರ ಹಾಗೂ ಅಲ್ಲಿನ ನಂಬಿಕೆಯ ದೇವರಿಗೆ ಮಾಡುವ ಅವಮಾನ ಮತ್ತು ದ್ರೋಹ.
ಪ್ರತಿ ಜೀವಿಯ ಜೀವನವು ಅತಿ ಮುಖ್ಯ. ಅನಿವಾರ್ಯವಾದ, ಅನಿರೀಕ್ಷಿತವಾದ ಪ್ರಕೃತಿ ವಿಕೋಪಗಳು ಬೇರೆ ರೀತಿ. ಅದಕ್ಕೆ ಒಂದಷ್ಟು ಕಾರಣವಿರುತ್ತದೆ, ಸಮಾಧಾನ ಮಾಡಿಕೊಳ್ಳಬಹುದು. ಆದರೆ ಯಾವುದೇ ಕಾರಣವಿಲ್ಲದೆ, ಕೇವಲ ಧಾರ್ಮಿಕ ಆಧಾರದ ಮೇಲೆ ಜನರನ್ನು ಕೊಲ್ಲುವುದು ಅತ್ಯಂತ ಹೇಯ ಮತ್ತು ನೀಚ ಕೃತ್ಯ. ನೀವು ದೇವರಲ್ಲಿ ನಂಬಿಕೆಯುಳ್ಳವರಾದರೆ ಅದಕ್ಕಿಂತ ಮಹಾ ವಂಚನೆ, ದೈವ ದ್ರೋಹ ಬೇರೊಂದು ಇಲ್ಲ. ನಿಮಗೆ ಸಾಕಷ್ಟು ಕಾರಣಗಳಿರಬಹುದು. ಆದರೆ ಅಮಾಯಕರನ್ನು ಯಾವತ್ತಿಗೂ ಶಿಕ್ಷಿಸಬಾರದು. ಅದು ಎಲ್ಲಾ ಧರ್ಮಗಳಿಗೂ, ಎಲ್ಲಾ ದೇಶಗಳಿಗೂ, ಎಲ್ಲಾ ಸಮಾಜಗಳಿಗೂ ಏಕಪ್ರಕಾರವಾಗಿ ಅನ್ವಯವಾಗುತ್ತದೆ.
ಆದ್ದರಿಂದಲೇ ಯಾವಾಗಲೂ ಯಾರೇ ಆಗಿರಲಿ ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ, ಸರ್ವಾಧಿಕಾರ ಇವೆಲ್ಲವನ್ನು ವಿಷಯಧಾರಿತವಾಗಿ ತೀರ್ಮಾನಿಸಬೇಕೆ ಹೊರತು ಜಾತಿ, ಧರ್ಮದ ಆಧಾರದ ಮೇಲೆಲ್ಲ. ದಯವಿಟ್ಟು ಬಾಂಗ್ಲಾದೇಶದಲ್ಲಿ ಆಗಿರಲಿ, ಭಾರತದಲ್ಲಿ ಆಗಿರಲಿ, ಅಮಾಯಕ ಜನರು ಯಾರೇ ಆಗಿರಲಿ ಅವರನ್ನು, ಅವರ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡುಅವರ ಮೇಲೆ ದೌರ್ಜನ್ಯ ಮಾಡಬಾರದು. ಅದಕ್ಕೆ ಬದಲಾಗಿ ಅವರಿಗೆ ರಕ್ಷಣೆ ನೀಡಬೇಕು. ಆಗ ಮಾತ್ರ ಮಾನವ ಧರ್ಮದ ಬಗ್ಗೆ ಮಾತನಾಡುವ ನೈತಿಕತೆ ಬರುತ್ತದೆ.
ಇಲ್ಲದಿದ್ದರೆ ನಮಗೆ ಅನ್ಯಾಯವಾದಾಗ ಮಾತ್ರ ಪ್ರತಿಭಟಿಸಿದರೆ ಅದು ಆತ್ಮ ವಂಚನೆಯಾಗುತ್ತದೆ. ಎಲ್ಲರೂ ಒಟ್ಟಾಗಿ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸೋಣ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….