Spread the love

ಸುಮಾರು 60 ವರ್ಷಗಳ ನಂತರ ಸರ್ಕಾರಿ ನೌಕರರು ಆರ್ ಎಸ್ ಎಸ್ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಭಾಗವಹಿಸಬಹುದು. ಅದನ್ನು ನಿಷೇಧಿಸಿ ಆಗಿನ ಸರ್ಕಾರ ಹೊರಡಿಸಿದ್ದ ಆಜ್ಞೆಯನ್ನು ರದ್ದುಪಡಿಸಲಾಗಿದೆ……

ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಒಂದು ನಿರ್ದಿಷ್ಟ ಉದ್ದೇಶದ ಸಂಘಟನೆಗೂ, ಇಡೀ ಸಾರ್ವಜನಿಕ ಹಿತಾಸಕ್ತಿಯ ಸಾಂವಿಧಾನಿಕ ಆಡಳಿತ ವ್ಯವಸ್ಥೆಗೂ ಇರುವ ವ್ಯತ್ಯಾಸಗಳು, ಇದರಿಂದ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ….

ಎಲ್ಲಾ ವಿಷಯಗಳಿಗೂ ಇರುವಂತೆ ಈ ವಿಷಯಕ್ಕೂ ಸಹಜವಾಗಿಯೇ ಎರಡು ಮುಖಗಳಿರುತ್ತದೆ. ಆರ್ ಎಸ್ ಎಸ್ ಅನ್ನು ಬೆಂಬಲಿಸುವವರು ಅದಕ್ಕೆ ಪೂರಕ ಅಂಶಗಳನ್ನು ಹೇಳಿದರೆ, ಅದನ್ನು ವಿರೋಧಿಸುವವರು ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುತ್ತಾರೆ. ಆ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಒಂದು ಸರಳ ವಿವರಣೆ…….

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS )


ಇಂದಿನ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಅತಿಹೆಚ್ಚು ಪರ ವಿರೋಧಗಳ ಚರ್ಚೆಗೆ ಒಳಪಡುತ್ತಿರುವ ಮತ್ತು ವಿಶ್ವದ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ. ಭಾರತದ ಯುವ ಪೀಳಿಗೆ ಇದರ ಬಗೆಗೆ ಕುತೂಹಲ ಹೊಂದಿದೆ. ಅದಕ್ಕೆ ತಕ್ಕಂತೆ ಸರಳವಾಗಿ ಮತ್ತು ಸ್ಪಷ್ಟವಾಗಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ ಸಾಕಷ್ಟು ಗೊಂದಲಗಳಿವೆ…..

ಎಂದಿನಂತೆ ತೀವ್ರ ಅಭಿಮಾನ ಅಥವಾ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದನ್ನು ವಾಸ್ತವ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನ…..

ಅದರ ಸ್ಥಾಪಕರು, ಅದರ ಉದ್ದೇಶ, ಬೆಳೆದು ಬಂದ ಬಗೆ ಎಲ್ಲವೂ ಈಗಾಗಲೇ ದಾಖಲಾಗಿದೆ. ಈಗ ಮುಖ್ಯವಾಗಿ ಚರ್ಚೆ ಮಾಡಬೇಕಿರುವುದು ಅದರ ಪ್ರಸ್ತುತತೆ ಮತ್ತು ಕಾರ್ಯಚಟುವಟಿಕೆಗಳನ್ನು…..

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸನಾತನ ಧರ್ಮದ, ಮನುಸ್ಮೃತಿಗಳು, ವೇದ ಉಪನಿಷತ್ತು ರಾಮಾಯಣ ಮಹಾಭಾರತ, ಅದರೊಳಗಿನ ಭಗವದ್ಗೀತೆ ಮುಂತಾದ ಗ್ರಂಥಗಳ ಆಧಾರದ ಮೇಲೆ ರೂಪಗೊಂಡ ಹಿಂದೂ ಜೀವನಶೈಲಿಯ ಆಶಯಗಳನ್ನು ಪ್ರತಿಪಾದಿಸುವ ಒಂದು ಶಿಸ್ತಿನ ಸಂಸ್ಥೆ. ಮುಂದೆ ಕಾಲಕ್ಕೆ ತಕ್ಕಂತೆ ಇದರಲ್ಲಿ ಒಂದಷ್ಟು ಬದಲಾವಣೆ ಸಹ ಮಾಡಿಕೊಂಡಿದೆ…..

ಇದರ ಸದಸ್ಯರು ಮತ್ತು ಇದರ ಬಗ್ಗೆ ಅಭಿಮಾನ ಹೊಂದಿದವರ ದೃಷ್ಟಿಯಲ್ಲಿ ಇದೊಂದು ಪವಿತ್ರ ಧಾರ್ಮಿಕ – ಸ್ವಯಂ ಸಮಾಜ ಸೇವಾ ಸಂಸ್ಥೆ. ಭಾರತದ ರಾಷ್ಟ್ರೀಯತೆ, ಹಿಂದೂ ಧರ್ಮ, ಇಲ್ಲಿನ ಸಾಮಾಜಿಕ ಮೌಲ್ಯಗಳ ರಕ್ಷಣೆ, ಇತರ ಧರ್ಮಗಳ ಆಕ್ರಮಣದ ವಿರುದ್ಧ ಹೋರಾಟದ ಮುಖ್ಯ ಉದ್ದೇಶಗಳಿಗಾಗಿ ಶ್ರಮಿಸುವ ಸಂಸ್ಥೆ. ಪ್ರಾಕೃತಿಕ ವಿಕೋಪಗಳೇ ಆಗಿರಲಿ, ರಾಷ್ಟ್ರೀಯ ಭದ್ರತೆಯ ವಿಷಯವೇ ಆಗಿರಲಿ ಸರ್ಕಾರಗಳ ನಂತರ ತಾನೇ ಗೆಮುಂದೆ ನಿಂತು ಜನರ ಕಷ್ಟಗಳಿಗೆ ಸದಾ ನೆರವಾಗುತ್ತದೆ. ಸ್ವಾತಂತ್ರ್ಯ ನಂತರ ಹಿಂದುತ್ವ ಮತ್ತು ಹಿಂದುಗಳು ತಲೆ ಎತ್ತಿ ನಡೆಯುಲು ಆರೆಸ್ಸೆಸ್ ಪ್ರಮುಖ ಕಾರಣ ಎಂದು ಪ್ರತಿಪಾದಿಸುತ್ತಾರೆ. ಭಾರತದ ಹಿಂದುತ್ವವಾದಿಗಳು ಮತ್ತು ಆರೆಸ್ಸೆಸ್ ಒಂದೇ ನಿಲುವನ್ನು ಹೊಂದಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ…..

ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರಭಕ್ತಿ ಮತ್ತು ರಾಷ್ಟ್ರ ಕಟ್ಟುವಿಕೆಯ ಧ್ಯೇಯವನ್ನು ಹೊಂದಿದೆ ಎನ್ನುತ್ತಾರೆ….

ಹಾಗಾದರೆ ಇಷ್ಟು ಒಳ್ಳೆಯ ಸಂಸ್ಥೆಯ ಬಗ್ಗೆ ಟೀಕೆ ವಿರೋಧಗಳು ಏಕೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಮುಖ್ಯವಾಗಿ ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾದವರು, ಕಮ್ಯೂನಿಸಂ ಸಿದ್ದಾಂತದವರು, ಪ್ರಗತಿಪರ ಚಿಂತಕರು ಈ ಸಂಸ್ಥೆಯನ್ನು ಅತ್ಯಂತ ಕಠಿಣವಾಗಿ ವಿರೋಧಿಸುತ್ತಾರೆ. ಅದಕ್ಕೆ ಅವರು ಕೊಡುವ ಮುಖ್ಯ ಕಾರಣಗಳು……

ಆರೆಸ್ಸೆಸ್ ಮೇಲ್ನೋಟದ ಆಶಯಕ್ಕಿಂತ ಮುಖವಾಡ ಅಥವಾ ಹಿಡನ್ ಅಜೆಂಡಾ ಹೊಂದಿದೆ. ಅದನ್ನು ಬಹಿರಂಗವಾಗಿ ಹೇಳುವುದಿಲ್ಲ. ಪರೋಕ್ಷವಾಗಿ ಜನರಲ್ಲಿ ಅದನ್ನು ಹರಡುತ್ತದೆ. ಅದರ ರಾಷ್ಟ್ರೀಯತೆ ಭಾರತದ ಸಂವಿಧಾನ ಆಶಯದ ರಾಷ್ಟ್ರೀಯತೆಯಲ್ಲ. ಅದು ಹಿಂದುತ್ವದ ರಾಷ್ಟ್ರೀಯತೆ. ಜೊತೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ವಿರುದ್ಧದ ಕಾರ್ಯಯೋಜನೆ ಹೊಂದಿದೆ. ಅದು ಬ್ರಾಹ್ಮಣ್ಯದ ಪ್ರತಿಪಾದನೆ ಅಂದರೆ ಅಸಮಾನತೆಯ ಸಮಾಜದ ಸಮರ್ಥನೆ ಮಾಡುತ್ತದೆ…..

ಅದರ ದ್ವಂದ್ವ ಇಷ್ಟಕ್ಕೇ ನಿಲ್ಲುವುದಿಲ್ಲ. ಸಂವಿಧಾನದ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿದೆ. ಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸದಿದ್ದರೂ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಸದಾ ಮಾಡುತ್ತದೆ. ಹಿಂದು ನಾವೆಲ್ಲ ಒಂದು ಎಂಬುದು ಕೇವಲ ಘೋಷಣೆ ಮಾತ್ರ. ಅಸ್ಪೃಶ್ಯತೆ ಮತ್ತು ಜಾತೀಯತೆಯ ನಿರ್ಮೂಲನೆಗೆ ಸಾಕಷ್ಟು ಕೆಲಸ ಮಾಡಲಿಲ್ಲ. ಬದಲಾಗಿ ಅದನ್ನು ಇನ್ನಷ್ಟು ಆಳಕ್ಕೆ ಬೇರಿಗಿಳಿಸುವ ಕೆಲಸ ಪರೋಕ್ಷವಾಗಿ ಮಾಡುತ್ತಿದೆ. ಗಾಂಧಿಯವರನ್ನು ವಿರೋಧಿಸಲು, ಹಿಂಸೆಯನ್ನು ಉಂಟು ಮಾಡಲು ತನ್ನದೇ ಸಂಘ ಪರಿವಾರವನ್ನು ಹುಟ್ಟುಹಾಕಿ ಕುತಂತ್ರ ಮೆರೆಯುತ್ತಿದೆ. ರಾಜಕೀಯವಾಗಿ ಒಂದು ಪಕ್ಷವನ್ನು ಬೆಂಬಲಿಸಿ ಆಡಳಿತವನ್ನು ನಿಯಂತ್ರಿಸುತ್ತದೆ. ನಿಜವಾದ ಸೇವಾ ಮನೋಭಾವಕ್ಕಿಂತ ತಂತ್ರಗಳೇ ಅದರ ಕಾರ್ಯವಿಧಾನ, ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸಿ ವಾಸ್ತವವನ್ನು ಮರೆ ಮಾಚುತ್ತದೆ, ಕೆಳ ಜಾತಿಯ ಜನರ ಬಗ್ಗೆ ಅದರದು ಮೊಸಳೆ ಕಣ್ಣೀರು ಮಾತ್ರ. ನೆಪ ಮಾತ್ರಕ್ಕೆ ಅವರನ್ನು ಸೇರಿಸಿಕೊಳ್ಳಲಾಗುತ್ತದೆ, ಮೇಲ್ವರ್ಗದ ಹಿತಕಾಯುವುದು ಇದರ ಮುಖ್ಯ ಉದ್ದೇಶ ಎಂದು ಆರೋಪಿಸುತ್ತಾರೆ…..

ಹಾಗಾದರೆ ಈಗ ಇದರ ಸತ್ಯಾಸತ್ಯತೆ ನಿರ್ಧರಿಸುವುದು ಹೇಗೆ ?

ಸಾಮಾನ್ಯವಾಗಿ ಧಾರ್ಮಿಕ ಸಂಸ್ಥೆಗಳು ಅಥವಾ ಸಮಾಜ ಸೇವಾ ಸಂಸ್ಥೆಗಳು ಒಳ್ಳೆಯ ಕೆಲಸಗಳು ಮಾಡುವುದನ್ನು ಎಲ್ಲರೂ ಬೆಂಬಲಿಸುತ್ತಾರೆ. ಅದರ ಉದ್ದೇಶಗಳ ಪ್ರಾಮಾಣಿಕತೆ ಮತ್ತು ಅದಕ್ಕೆ ಅನುಸರಿಸುವ ಮಾರ್ಗಗಳು ಹಾಗು ನಿಸ್ವಾರ್ಥತೆ ಪಾರದರ್ಶಕವಾಗಿರಬೇಕು. ಯಾವುದೇ ಅನುಮಾನಗಳಿಗೆ ಆಸ್ಪದ ಕೊಡುವಂತಿರಬಾರದು‌. ಯಾವುದೇ ಪಕ್ಷಪಾತದ ಧೋರಣೆ ಹೊಂದಿರಬಾರದು. ರಾಜಕೀಯ ಚಟುವಟಿಕೆಗಳಲ್ಲಿ ಒಂದು ಪಕ್ಷದ ಪರವಾಗಿ ಭಾಗವಹಿಸಬಾರದು….

ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಸ್ವಲ್ಪ ಮಟ್ಟಿನ ಅನುಮಾನ ಮೂಡಿಸುತ್ತದೆ. ಬಹುಮುಖ್ಯವಾಗಿ ಅಸಮಾನತೆ ಮತ್ತು ಅಮಾನವೀಯ ಜಾತಿ ವ್ಯವಸ್ಥೆಯ ಹಿಂದುತ್ವವನ್ನು ಪ್ರಾಮಾಣಿಕವಾಗಿ ಹೋಗಲಾಡಿಸಲು ಪ್ರಯತ್ನಿಸಬೇಕಿದೆ. ವಸುದೈವ ಕುಟುಂಬಂ ಎಂದು ಹೇಳುತ್ತಾ ಕೆಲವು ಸಮುದಾಯಗಳನ್ನು ಊರ ಹೊರಗೆ, ದೇವಸ್ಥಾನದ ಹೊರಗೆ ಇಡುವ ಪದ್ದತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿವಾರಣೆ ಮಾಡಲು ಪ್ರಯತ್ನಿಸಬೇಕು. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕೇವಲ ಮಾತಿನಲ್ಲಿ ಖಂಡಿಸುವ ಕಪಟತೆ ತೋರಬಾರದು. ಮೂಢನಂಬಿಕೆಗಳಿಗಿಂತ ವೈಚಾರಿಕ ಪ್ರಜ್ಞೆ ಮೂಡಿಸಬೇಕು. ಇಲ್ಲದಿದ್ದರೆ ಹಿಂದುತ್ವಕ್ಕೆ ಅರ್ಥವೇ ಇರುವುದಿಲ್ಲ…..

ಆರೆಸ್ಸೆಸ್ ನಮ್ಮದೇ ದೇಶದ ನಮ್ಮದೇ ಜನರ ಒಂದು ಸಂಘಟನೆ. ಶಕ್ತಿಶಾಲಿಯಾಗಿ ಬೆಳೆದಿದೆ. ಅದನ್ನು ಒಪ್ಪಬೇಕು. ಅದರಲ್ಲಿನ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಆದರೆ ಅದರ ದುರುದ್ದೇಶಗಳನ್ನು ಖಂಡಿಸಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧ ನಿಲುವುಗಳನ್ನು ಟೀಕಿಸಬೇಕು…..

ಅನೇಕ ಯುವಕರು ಮುಸ್ಲಿಂ ದ್ವೇಷ, ಪಾಕಿಸ್ತಾನದ ದ್ವೇಷವನ್ನೇ ಮುಖ್ಯ ವಿಷಯವಾಗಿ ಅರ್ಥಮಾಡಿಕೊಂಡು ಆಳವಾಗಿ ಯೋಚಿಸದೆ ಆರೆಸ್ಸೆಸ್ ಬೆಂಬಲಿಸಬಾರದು. ದೇಶಭಕ್ತಿಯನ್ನು ಮಾರಾಟದ ಸರಕಾಗಿಸಬಾರದು. ನಡೆ ನುಡಿಗಳಲ್ಲಿ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಬೇಕು. ದೇಶದ ಸಮಗ್ರತೆ ಮತ್ತು ಐಕ್ಯತೆಯೇ ನಮಗೆ ಮುಖ್ಯವಾಗಬೇಕು. ಅದನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ಎಲ್ಲರೂ ಭಾರತೀಯರೆ. ನಕಲಿಗಳು ಯಾವಾಗಲೂ ಅಪಾಯಕಾರಿ….

ಹಾಗೆಂದು ಇತರ ಅನೇಕ ಸಂಘಟನೆಗಳು ಅತ್ಯಂತ ಪ್ರಾಮಾಣಿಕರು ಎಂದು ಹೇಳುತ್ತಿಲ್ಲ. ಅದರ ಬಗ್ಗೆ ನ್ಯಾಯದ ದಂಡ ಏಕ ಪ್ರಕಾರವಾಗಿರಲಿ. ಮುಸ್ಲಿಂ ಸಂಘಟನೆಗಳೇ ಆಗಿರಲಿ, ಕ್ರಿಶ್ಚಿಯನ್ ಮಿಷನರಿಗಳೇ ಆಗಿರಲಿ ಅಥವಾ ಯಾವುದೇ ಜಾತಿಯ ಸಂಘಟನೆಗಳೇ ಆಗಿರಲಿ ಅದರ‌ ಮುಖವಾಡಗಳನ್ನು ಬಯಲು ಮಾಡಲೇ ಬೇಕು. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿಸುವ ಯಾವುದೇ ಜಾತಿ ಧರ್ಮದ ಸಂಘಟನೆಗಳನ್ನು ಸಂಪೂರ್ಣ ನಾಶಪಡಿಸಬೇಕು. ಈ ವಿಷಯದಲ್ಲಿ ಕಾನೂನು ಮತ್ತು ನಮ್ಮ ಅಭಿಪ್ರಾಯ ಒಂದೇ ಆಗಿರಬೇಕು…..

ಮುಸ್ಲಿಮರಿಗೆ ಒಂದು ನ್ಯಾಯ, ಕ್ರಿಶ್ಚಿಯನ್ನರಿಗೆ ಒಂದು ನ್ಯಾಯ, ಹಿಂದುಗಳಿಗೆ ಒಂದು ನ್ಯಾಯ ಇರಲೇಬಾರದು. ನಮ್ಮ ನಿಲುವುಗಳಲ್ಲಿ ಆತ್ಮವಂಚನೆ ಇರಬಾರದು. ತಬ್ಲೀಕಿಗಳೇ ಇರಲಿ, ಮದರಸಾಗಳೇ ಇರಲಿ, ಆರೆಸ್ಸೆಸ್ ಇರಲಿ ನಮಗೇನು. ಎಲ್ಲವನ್ನೂ ನೇರವಾಗಿ ದಿಟ್ಟವಾಗಿ ಖಂಡಿಸೋಣ ಮತ್ತು ಒಳ್ಳೆಯ ಅಂಶಗಳನ್ನು ಪ್ರೋತ್ಸಾಹಿಸೋಣ. ನಿಜ ಭಾರತೀಯರಾಗೋಣ…..

ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಯಾವುದೇ ಸಂಘಟನೆಗಳ ಚೌಕಟ್ಟಿನಲ್ಲಿ ಸೇರದೆ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ, ಸೇವಾ ಮನೋಭಾವದಿಂದ ಸಾರ್ವಜನಿಕ ಕೆಲಸ ಮಾಡಿದರೆ ಉತ್ತಮ. ಹಾಗೊಂದು ವೇಳೆ ಯಾವುದಾದರೂ ಸಂಘಟನೆಗೆ ಸೇರಿಸಿಕೊಳ್ಳಲು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಹೊರಬರಬಹುದು. ದೇಶದ ಶಾಂತಿ ಸುವ್ಯವಸ್ಥೆ ಅಭಿವೃದ್ಧಿಯ ದೃಷ್ಟಿಯಿಂದ ಈ ನಿಲುವು ಖಂಡಿತ ಒಳ್ಳೆಯ ಆಶಯ ಹೊಂದಿದೆ. ಇನ್ನುಳಿದಂತೆ ನಿಮ್ಮ ವಿವೇಚನೆಗೆ ಬಿಡುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

error: No Copying!