ಪಡುಬಿದ್ರಿ: ದಿನಾಂಕ: 09-07-2024(ಹಾಯ್ ಉಡುಪಿ ನ್ಯೂಸ್) ಪ್ರಯಾಣಿಕರನ್ನು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಬಸ್ಸೊಂದನ್ನು ಇನ್ನೊಂದು ಬಸ್ಸಿನ ಮಾಲೀಕ ಅಡ್ಡಗಟ್ಟಿ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಉಡುಪಿ, ಚರ್ಚ್ ಹಿಂದುಗಡೆ ಚಾಣಕ್ಯ ರಸ್ತೆ ನಿವಾಸಿ ಅಬ್ದುಲ್ ರಜಾಕ್ (63) ಎಂಬವರು KA-20-AA-7353 ನೇ ನಂಬ್ರದ ಬಸ್‌ನ ಮಾಲೀಕರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಸ್ಸು ಉಡುಪಿ-ಮಂಗಳೂರು ರೂಟ್‌ನಲ್ಲಿ ಸಂಚರಿಸುತ್ತಿದ್ದು, ಬಸ್ಸಿನಲ್ಲಿ ಚಾಲಕರಾಗಿ ಶೌಕತ್ ಅಲಿ ಹಾಗೂ ರಝಾನ್ ಎಂಬವರು ಕಂಡಕ್ಟರ್ ಆಗಿರುತ್ತಾರೆ ಎಂದಿದ್ದಾರೆ. ಎಂದಿನಂತೆ ದಿನಾಂಕ: 24.06.2024 ರಂದು ಸಂಜೆ ಉಡುಪಿಯಿಂದ ಮಂಗಳೂರಿಗೆ ಬಸ್ ಹೋಗುತ್ತಾ ಸಂಜೆ ಐದು ಘಂಟೆ ಸಮಯ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲ ಪೇಟೆಯ ಡಿವೈಡರ್ ಬಳಿ ತಲುಪುತ್ತಿದ್ದಂತೆ KA-20-MC-6070 ನೇ ನಂಬ್ರದ ಬಿಳಿ ಬಣ್ಣದ ಫಾರ್ಚೂನರ್ ಕಾರಿನಲ್ಲಿ ಎ.ಕೆ.ಎಮ್.ಎಸ್ ಎಂಬ ಬಸ್ಸಿನ ಮಾಲಕ ಸೈಫುದ್ದೀನ್, ಮೊಹಮ್ಮದ್ ಅಕ್ರಂ ಎಂಬವರು ಅಬ್ದುಲ್ ರಜಾಕ್ ರವರ ಬಸ್ಸನ್ನು ಓವರ್‌ಟೇಕ್ ಮಾಡಿ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ನಂತರ ಆರೋಪಿಗಳಾದ ಶರೀಫ್, ಸಾರನ್, ಅದ್ದು ಎಂಬವರು ಕಾರಿನಿಂದ ಇಳಿದು, ನಂತರ ಬಸ್ಸಿನೊಳಗೆ ಬಂದು ಬಸ್ಸು ಚಾಲಕ ಮತ್ತು ಕಂಡಕ್ಟರ ನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಒಂದು ವೇಳೆ ದೂರು ನೀಡಿದಲ್ಲಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 341, 504, 506 ಜೊತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.